ಬಿ. ಎಸ್. ಗವಿಮಠರು ಓರ್ವ ಶಿಕ್ಷಕರಾಗಿ, ಶಿಕ್ಷಕರ ತರಬೇತಿ ಕಾಲೇಜಿನ ಪ್ರಿನ್ಸಿಪಾಲರಾಗಿ, ಕೆ.ಎಲ್.ಇ. ಇತಿಹಾಸಕಾರರಾಗಿ, ಕೆ.ಎಲ್.ಇ. ಪ್ರಸಾರಾಂಗ ಕಟ್ಟಿಕೊಟ್ಟ ಪ್ರಥಮ ನಿರ್ದೇಶಕರಾಗಿ, ಕೆ.ಎಲ್.ಇ. ಆಡಳಿತ ಮಂಡಳಿ ಭಾಗವಾದ ಆಜೀವ ಸದಸ್ಯರಾಗಿ ಯಾರಿಗೆ ಗೊತ್ತಿಲ್ಲ ಹೇಳಿ, ಸಕಲರಿಗೂ ಪರಿಚಿತರು. 36 ವರ್ಷಗಳ ಸುದೀರ್ಘ ಸೇವೆಯ ನಂತರವೂ ಅವಿಶ್ರಾಂತವಾಗಿ ಕನ್ನಡ ನಾಡು ನುಡಿಗಳ ಸೇವೆಗೆ ಸಮರ್ಪಿಸಿಕೊಂಡಿರುವ ಗವಿಮಠ ಸರ್ ಅವರು 79ರ ಹರೆಯದವರು.
ಅವರನ್ನು ಕಳೆದ 50 ವರ್ಷಗಳಿಂದ ಬಲು ಸಮೀಪದಿಂದ ನೋಡುತ್ತ ಬಂದಿದ್ದೇನೆ. ಅವರು ಕಾಣಲು ಅಂದು ಹೇಗಿದ್ದರೋ ಇಂದಿಗೂ ಹಾಗೇ ಇರುವರು. ಅವರೊಬ್ಬ ಬೆಳ್ಳಿ ಕೂದಲಿನ ಬಂಗಾರದ ಮನುಷ್ಯ. ಅವರ ವ್ಯಕ್ತಿತ್ವ ತುಂಬ ಆದರ್ಶಪ್ರಾಯವಾದುದು. ತಮ್ಮ ಸೀಮಿತ ಆದಾಯ (ವೇತನ)ದಲ್ಲಿಯೇ ತಮ್ಮ ಬದುಕಿನುದ್ದಕ್ಕೂ ಬಡವಿದ್ಯಾರ್ಥಿಗಳನ್ನು ತಂದೆಯೋಪಾದಿಯಲ್ಲಿ ನಿಂತು ನೆರವಾಗುತ್ತ ಬಂದವರು. ನಿವೃತ್ತರಾದ ಮೇಲೂ ತಮ್ಮ ಪಿಂಚಣಿ ಹಣದಲ್ಲಿ ಹತ್ತು ಹಲವು ಸಂಘ-ಸಂಸ್ಥೆಗಳಿಗೆ ಧನಸಹಾಯ ನೀಡುತ್ತ ಬಂದವರು. ಕವಿ ಎಸ್. ಡಿ. ಇಂಚಲರ ನೆನಪಿಗೆ ‘ಸ್ಮಾರಕ ಸಮಿತಿ’ ಸ್ಥಾಪಿಸಿ 1976ರಿಂದ 2025ರವರೆಗೆ ಮುನ್ನಡೆಸಿಕೊಂಡು ಬಂದವರು. ಕವಿ ಇಂಚಲರ ಸಮಗ್ರ ಕಾವ್ಯವನ್ನು ಸಂಪಾದಿಸಿಕೊಟ್ಟವರು.
2012ರಲ್ಲಿ ಬೆಳಗಾವಿಯಲ್ಲಿ ವಿಶ್ವಕನ್ನಡ ಸಮ್ಮೇಳನ ಜರುಗಿದ ಸಂದರ್ಭದಲ್ಲಿ “ಬೆಳಗಾವಿ ಕನ್ನಡ ಕನ್ನಡಿಗ” ಎಂಬ ಅಪರೂಪದ ಪುಸ್ತಕ ಸಂಪಾದಿಸಿಕೊಟ್ಟವರು. ಇವೆರಡೂ ಕೃತಿಗಳನ್ನು ಕರ್ನಾಟಕ ಸರಕಾರ ಮತ್ತು ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಕಟಿಸಿತು.
ಅತ್ಯಂತ ಎಳೆಯ ವಯಸ್ಸಿನಲ್ಲಿ (22) ಪ್ರೌಢಶಾಲಾ ಶಿಕ್ಷಕರಾಗಿ ವಿದ್ಯಾರ್ಥಿ ಪ್ರಿಯರೆನಿಸಿದರು. ವಾರ್ಷಿಕ ಸ್ನೇಹ ಸಮ್ಮೇಳನಗಳಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತ ರಂಗಭೂಮಿಯತ್ತ ಆಕರ್ಷಿತರಾದರು. ನಟಶ್ರೇಷ್ಠ ಏಣಗಿ ಬಾಳಪ್ಪನವರ ನಾಟಕಗಳನ್ನು ನೋಡುತ್ತ ಅವರ ಅಭಿಮಾನಿಯಾಗಿ, ಅವರ ಜೀವನ ಚರಿತ್ರೆ “ಕಲಾವೈಭವ” ಹಾಗೂ ಬಾಳಪ್ಪನವರ ಗುರುಗಳಾದ ಚಿಕ್ಕೋಡಿ ಶಿವಲಿಂಗಸ್ವಾಮಿಗಳ ಜೀವನ ಚರಿತ್ರೆ ಬರೆದ ಮೊದಲಿಗರೆನಿಸಿದರು. 1976ರಲ್ಲಿಯೇ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌ. ಕಾರ್ಯದರ್ಶಿಯಾಗಿ, 1980ರಲ್ಲಿ ಜರುಗಿದ ಅಖಿಲ ಭಾರತ 52ನೇ ಕನ್ನಡ ಸಾಹಿತ್ಯ ಸಮ್ಮೇಳನದ ಗೌ.ಕಾರ್ಯದರ್ಶಿಯಾಗಿ, ಕ.ಸಾ.ಪ.ದ ಆಜೀವ ಸದಸ್ಯರಾಗಿ ಹತ್ತು ಹಲವು ಸಭೆ, ಸಮಾರಂಭ, ಸಮ್ಮೇಳನಗಳನ್ನು ಸಂಘಟಿಸಿ ಸೈ ಎನಿಸಿಕೊಂಡರು. ಇಂದಿಗೂ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಕ್ರಿಯ ನುಡಿ ಸೇವಕರಾಗಿದ್ದಾರೆ. ಕನ್ನಡ ಸಾಹಿತ್ಯ ಭವನ ಮತ್ತು ನೂತನ ಕನ್ನಡ ಭವನಗಳ ಉಸ್ತುವಾರಿಯಲ್ಲಿಯೂ ಅವರ ಸೇವೆ ಸಲ್ಲುತ್ತಿದೆ.
1995-98ರವರೆಗೆ ಕರ್ನಾಟಕ ನಾಟಕ ಅಕೆಡಮಿ ಸದಸ್ಯರಾಗಿ, 1996ರಲ್ಲಿ ಕರ್ನಾಟಕ ರಂಗಭೂಮಿ ಸಹಕಾರಿ ಸಂಘದ ಸಂಸ್ಥಾಪಕ ನಿರ್ದೇಶಕರಾಗಿ, 2001ರಲ್ಲಿ ಕೊಣ್ಣೂರ ನಾಟಕ ಕಂಪನಿ ಶತಮಾನೋತ್ಸವ ಸಮಿತಿ ಕಾರ್ಯದರ್ಶಿಯಾಗಿ ಸಲ್ಲಿಸಿದ ಸೇವೆ ಸ್ಮರಣೀಯವಾಗಿವೆ. ಅದೇ ಸಂದರ್ಭದಲ್ಲಿ ಅವರು ಡಾ. ಎಂ.ಎಂ. ಕಲಬುರ್ಗಿ ಅವರ ಸಂಪಾದಕತ್ವದಲ್ಲಿ ಹೊರತಂದ ಏಣಗಿ ಬಾಳಪ್ಪನವರ “ನಾಟ್ಯಭೂಷಣ” ಅಭಿನಂದನ ಗ್ರಂಥ ಮೌಲಿಕವೆನಿಸಿದೆ. ಅವರು 1992ರಲ್ಲಿ ಸಂಘಟಿಸಿದ ಅಖಿಲಭಾರತ ವೀರಶೈವ ಮಹಾಸಭೆಯ 21ನೇ ಅಧಿವೇಶನದ ಕಾರ‍್ಯದರ್ಶಿಯಾಗಿ, ನಾಗನೂರು ರುದ್ರಾಕ್ಷಿಮಠದ ಲಿಂ. ಶಿವಬಸವ ಮಹಾಸ್ವಾಮಿಗಳ ಶತಮಾನೋತ್ಸವ ಸಮಿತಿಯ ಗೌ. ಕರ‍್ಯದರ್ಶಿಯಾಗಿ ಸೇವೆ ಸಲ್ಲಿಸಿ ಸಮಾಜದ ಋಣಭಾರ ಕಡಿಮೆ ಮಾಡಿಕೊಂಡವರು. 1996ರಿಂದ 2002ರವರೆಗೆ ರಾಷ್ಟ್ರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಕೆ.ಎಲ್.ಇ. ಸೊಸೈಟಿಯ ನೂರು ವರ್ಷಗಳ ಇತಿಹಾಸ ಬರೆಯಲು ಪ್ರಾರಂಭಿಸಿ 6 ವರ್ಷಗಳ ಕಾಲ ದಾಖಲೆಗಳನ್ನು ಸಂಗ್ರಹಿಸಿ, ಕ್ಷೇತ್ರ ಅಧ್ಯಯನ ಮಾಡಿ, ಹಿರಿಯರ ಸಂದರ್ಶನ ಪಡೆದು ಪೂರ್ಣಗೊಳಿಸಿದರು. ಅದೇ ಕಾಲಕ್ಕೆ ಲಿಂ. ಅರಟಾಳ ರುದ್ರಗೌಡರ ಚರಿತ್ರೆಯನ್ನು ಪ್ರಸಾರಾಂಗದಿಂದ ಪ್ರಕಟಿಸುವಲ್ಲಿ ಮಹತ್ವದ ಯೋಗದಾನ ನೀಡಿದವರು.
2016ರಲ್ಲಿ ಜರುಗಿದ ಕೆ.ಎಲ್.ಇ. ಶತಮಾನೋತ್ಸವದಲ್ಲಿ ಏಕಕಾಲಕ್ಕೆ ನೂರು ಪುಸ್ತಕಗಳನ್ನು ಅಲ್ಪಾವಧಿಯಲ್ಲಿ ಸಂಪಾದಿಸಿ, ಪ್ರಕಟಿಸುವ ಹೊಣೆಗಾರಿಕೆಯನ್ನು ಮಿತ್ರರಾದ ಡಾ. ಬಸವರಾಜ ಜಗಜಂಪಿ, ಡಾ. ಗುರುದೇವಿ ಹಾಗೂ ಡಾ. ಮಹೇಶ ಗುರನಗೌಡರ ಜತೆಗೆ ಹಂಚಿಕೊಂಡರು. ಗವಿಮಠರು ವ್ಯಕ್ತಿಚಿತ್ರಣಗಳನ್ನು ಬರೆಯುವಲ್ಲಿ ಸಿದ್ಧಹಸ್ತರು. ಅವರ ಸಶಕ್ತ ಭಾಷೆಯ ಸೊಗಡು ವಿಭಿನ್ನವೆನಿಸುತ್ತದೆ. “ನಿಮ್ಮ ನೆನೆದಾಗಲೇ ಉದಯ” ಕೃತಿಯನ್ನು ಖ್ಯಾತ ಪತ್ರಕರ್ತ ನಾಡೋಜ ಪಾಟೀಲ ಪುಟ್ಟಪ್ಪನವರು ಮತ್ತು ನಾಡೋಜ ಏಣಗಿ ಬಾಳಪ್ಪನವರು 2006ರಲ್ಲಿ ಲೋಕಾರ್ಪಣೆಗೊಳಿಸಿದರು. ಅವರ ಲೇಖನಿಯಿಂದ ಪ್ರಕಟಗೊಂಡ “ಸ್ಪಂದನ-ಅಭಿನಂದನ ಗ್ರಂಥ”, “ಕನ್ನಡ ರತ್ನ ಪ್ರಭಾಕರ ಕೋರೆ”, “ಅನನ್ಯ ಸಾಧಕ”, “ಉತ್ತರಾಯಣ”, “ಪ್ರೊ. ಶಿ.ಶಿ.ಬಸವನಾಳ” ಮುಂತಾದ ಕೃತಿಗಳು ಸಾಧಕರ ದಾಖಲೆಗಳೆನಿಸಿವೆ. ಶ್ರೀ ಗವಿಮಠರು ಯಾರ ಕುರಿತು ಬರೆದರೂ ಸುಮ್ಮನೆ ಹೊಗಳುಭಟ್ಟರಂತೆ ಬಣ್ಣಿಸದೆ ದಾಖಲೆಸಹಿತ ವ್ಯಕ್ತಿತ್ವ ನಿರೂಪಿಸಿಕೊಟ್ಟವರು.
ಅವರೊಬ್ಬ ಚಿಂತಕ, ವಿಚಾರವಾದಿ ಲೇಖಕ. ಅವರ “ಮುಕ್ತ ಮುಕ್ತ”, “ಸಾಹಿತ್ಯ ಕಾರಂಜಿ”, ಗರ್ಭಗುಡಿ (ಮರಾಠಿಯಿಂದ ಕನ್ನಡಕ್ಕೆ), ವಾರದ ಮಲ್ಲಪ್ಪನವರು (ಮರಾಠಿಯಿಂದ ಕನ್ನಡಕ್ಕೆ), “ಬೆಡಗಿನ ಬೆಳಗಾವಿ”, “ಬೆಳಗಾವಿ ಸಾವಿರದ ನೆನಪುಗಳು”, “ಕಾಡ್ತಾವ ನೆನಪ” ಮುಂತಾದ 53 ಕೃತಿಗಳು ಪ್ರಕಟವಾಗಿ ಕನ್ನಡ ಸಾರಸ್ವತ ಲೋಕದಲ್ಲಿ ಸ್ಥಾನ ಪಡೆದಿವೆ. ಇದೀಗ ಅವರ 54ನೇ ಕೃತಿ “ಬೆಳಗಾವಿ ಒಂದು ಅಧ್ಯಯನ” ಒಂದು ಅಪರೂಪದ ಸಂಶೋಧನಾತ್ಮಕ ಲೇಖನಗಳನ್ನು ಒಳಗೊಂಡ ಅಪರೂಪದ ಕೃತಿಯಾಗಲಿದೆ. 80ರ ಇಳಿವಯಸ್ಸಿನಲ್ಲಿಯೂ ಸಾಹಿತ್ಯ ರಚನೆಗೆ ತೊಡಗಿಸಿಕೊಂಡಿರುವ ಗವಿಮಠರ ಉತ್ಸಾಹ ದೊಡ್ಡದು. 55ನೇ ಕೃತಿಯಾಗಿ ಅವರು “ಕೆ.ಎಲ್.ಇ. ಒಂದು ಮರುಚಿಂತನೆ” ಎಂಬ ವಿಶಿಷ್ಟ ಕೃತಿ ರಚನೆಗೆ ಹೊಳಹು ಹಾಕಿದ್ದಾರೆ. ಕಳೆದ ನೂರು ವರ್ಷಗಳಲ್ಲಿ ಬೆಳಗಾವಿಗಾಗಿ, ಬೆಳಗಾವಿ ಉಳಿಸಿ ಬೆಳೆಸಲು, ಕರ್ನಾಟಕ ಏಕೀಕರಣದ ನನಸು ಮಾಡಲು ಹೋರಾಟ ಮಾಡಿದ ನೂರು ವ್ಯಕ್ತಿಗಳ ಮಾಹಿತಿ ಸಂಗ್ರಹಿಸಿ “ಗಡಿಭಾಗದ ವೀರ ಕನ್ನಡಿಗರು” ಕೃತಿಗೆ ಯೋಜನೆ ರೂಪಿಸುತ್ತಿದ್ದಾರೆ.
ಶ್ರೀಯುತ ಗವಿಮಠರ ಅಭಿಮಾನಿ ಮಿತ್ರ ಬಳಗದವರು ಮುಂದಾಗಿ 2017ರಲ್ಲಿ ಅವರಿಗೆ “ಸಾಹಿತ್ಯಭೂಷಣ” ಅಭಿನಂದನ ಗ್ರಂಥ ಸಮರ್ಪಿಸಿ ಅವರ ಸಾಹಿತ್ಯ ಸೇವೆ ಸ್ಮರಿಸಿದ್ದಾರೆ. ಕೆ.ಎಲ್.ಇ. ಸಂಸ್ಥೆ ತನ್ನ ಶತಮಾನೋತ್ಸವದ ಅಂಗವಾಗಿ ಅವರನ್ನು ಅದ್ದೂರಿಯಾಗಿ ಸನ್ಮಾನಿಸಿ ಗೌರವಿಸಿದೆ. ನಾಗನೂರು ಶ್ರೀಮಠ ಅವರಿಗೆ “ಸೇವಾರತ್ನ” ಪ್ರಶಸ್ತಿ ನೀಡಿದೆ. ಕಾರಂಜಿಮಠ ಅವರ ಅಮೃತ ಮಹೋತ್ಸವ ಆಚರಿಸಿದೆ. ಶ್ರೀಗುರು ರಾಘವೇಂದ್ರ ರಾಯರ ಆಶೀರ್ವಾದ “ಪರಿಮಳ” ಪ್ರಶಸ್ತಿ ಬಂದಿದೆ. ನಾಡೋಜ ಪ್ರತಿಷ್ಠಾನ, ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ, ಸಿರಿಗನ್ನಡ ಪ್ರತಿಷ್ಠಾನ, ಕವಿ ಉಳುವೀಶ ಪ್ರತಿಷ್ಠಾನ, ಜಿಲ್ಲಾ ಲೇಖಕಿಯರ ಸಂಘ, ಬೆಂಗಳೂರಿನ ಕುವೆಂಪು ಪ್ರತಿಷ್ಠಾನ, ಕರ್ನಾಟಕ ಸರಕಾರದ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ “ಗಡಿನಾಡು ಚೇತನ” ರಾಜ್ಯಮಟ್ಟದ ಪ್ರಶಸ್ತಿ, ಕರ್ನಾಟಕ ನಾಟಕ ಅಕೆಡಮಿಯ 2005ರ ವಾರ್ಷಿಕ ಪ್ರಶಸ್ತಿ, ಧಾರವಾಡ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಆದರ್ಶ ಶಿಕ್ಷಕ ಪ್ರಶಸ್ತಿ (2000) ಮುಂತಾದವುಗಳಿಂದ ವಿಭೂಷಿತರಾದ ಗವಿಮಠರಿಗೆ ನಮ್ಮ ಜಿಲ್ಲೆ ಹಾಗೂ ನಾಡಿನ ತುಂಬ ಸಾವಿರಾರು ವಿದ್ಯಾರ್ಥಿಗಳು ನೆಲೆಸಿದ್ದಾರೆ. ಅನೇಕ ಉನ್ನತ ಹುದ್ದೆಗಳಲ್ಲಿದ್ದು ನಿವೃತ್ತರಾಗಿದ್ದಾರೆ.
50 ವರ್ಷಗಳ ಹಿಂದೆ ಅವರ ವಿದ್ಯಾರ್ಥಿಗಳಾಗಿದ್ದವರು ಇಂದಿಗೂ ತಮ್ಮ ಗುರುಗಳ ಮನೆಗೆ ಹೋಗಿ ಶುಭ ಕೋರಿ ಬರುತ್ತಾರೆ ಎನ್ನುವದೇ ನಮ್ಮ ಭಾರತೀಯ ಸಂಸ್ಕೃತಿಗೆ ಸಾಕ್ಷಿಯಾಗಿದೆ. ಗವಿಮಠ ಸರ್ ನಮ್ಮ ಗಡಿಭಾಗದ ಕನ್ನಡಿಗರ ಹೆಮ್ಮೆ. ಅವರ 54ನೇ ಕೃತಿ ಲೋಕಾರ್ಪಣೆ ಆಗುತ್ತಿರುವ ಸಂದರ್ಭದಲ್ಲಿ ಬನ್ನಿ ಅವರಿಗೆ ಶುಭ ಕೋರೋಣ. ಅವರ ಮೊಬೈಲ ನಂ.9448814576.
ಡಾ. ಷಣ್ಮುಖ ಗಣಾಚಾರಿ
ಎಂ.ಕೆ.ಹುಬ್ಬಳ್ಳಿ
ತಾ: ಕಿತ್ತೂರು, ಜಿ: ಬೆಳಗಾವಿ
ಮೊ:9845845511

