ಸೂರ್ಯ ಮುಳುಗದ ಸಾಮ್ರಾಜ್ಯದ ಸೊಲ್ಲನ್ನಡಗಿಸಿದ ಕೀರ್ತಿ ಕಿತ್ತೂರು ಸಂಸ್ಥಾನಕ್ಕಿತ್ತು. ಅದಕ್ಕೆ ಪ್ರಜಾ ಬಲ ಮತ್ತು ಸೇನಾ ಸಾಮರ್ಥ್ಯದ ಕೊರತೆಯೇನೂ ಇರಲಿಲ್ಲ. ಪ್ರಾಯಶಃ ಕಲ್ಮಠದ ಅಯೋನಿಜ ಜಗದ್ಗುರುವಿನ ಶಾಪವೇ ಅಧಃಪತನಕ್ಕೆ ಕಾರಣವಾಯಿತೇನೋ?! ೧೨ನೆ ಶತಮಾನದಿಂದಲೂ ಕಿತ್ತೂರಿಗೆ, ಗೀಜಗನಹಳ್ಳಿ ಎಂದೇ ಕರೆಯಲಾಗಿತ್ತು. ಕದಂಬರ ವೀರ ಜಯಕೇಶಿ ಕೆತ್ತಿಸಿದ ಗೋವೆಯ ಶಾಸನವೊಂದರಲ್ಲಿ ಗೀಜಗನಹಳ್ಳಿ ಮತ್ತು ಬಸವೇಶ್ವರ ದೇವಾಲಯದ ಉಲ್ಲೇಖವಿದೆ. ಕ್ರಿ. ಶ. ೧೫೮೫ ರಲ್ಲಿ ಶಿವಮೊಗ್ಗ ಜಿಲ್ಲೆಯ ಸಗರ ನಾಡಿನ ಹಿರೇಮಲ್ಲ ಶೆಟ್ಟಿ ಮತ್ತು ಚಿಕ್ಕಮಲ್ಲ ಶೆಟ್ಟಿ ಅಪ್ರತಿಮ ಸೇನಾನಿಗಳಾಗಿದ್ದರು.
ಬಿಜಾಪುರ ಸುಲ್ತಾನರ ಸೈನ್ಯದಲ್ಲಿ ಸಲ್ಲಿಸಿದ ಅಮೋಘ ಸೇವೆಗಾಗಿ, ಅವರಿಗೆ ಬಳುವಳಿಯಾಗಿ ನೀಡಿದ ಸಂಪಗಾಂವನಲ್ಲಿ ಪ್ರತ್ಯೇಕ ಸಾಮ್ರಾಜ್ಯ ಸ್ಥಾಪಿಸಿಕೊಂಡು, ರಾಜ್ಯಭಾರ ಮಾಡುತ್ತಿದ್ದರು. ಅದು ಕ್ರಿ. ಶ. ೧೫೮೬ ರಿಂದ ೧೮೨೪ರ ವರೆಗೆ ಸ್ವತಂತ್ರ ಸಂಸ್ಥಾನವಾಗಿತ್ತು. ೧೨ ಸಮರ್ಥ ಆಳರಸರನ್ನು ಒಳಗೊಂಡಿತ್ತು. ಕ್ರಿ. ಶ. ೧೬೬೦ ರಿಂದ ೧೬೯೧ ರವರೆಗೆ, ಅಂದರೆ ೩೧ ವರ್ಷ ರಾಜ್ಯಭಾರದ ಮಾಡಿದ ಅಲ್ಲಪ್ಪಗೌಡ ಸರದೇಸಾಯಿ ಕಾಲದಲ್ಲಿ ಕಿತ್ತೂರು ರಾಜಧಾನಿಯಾಯಿತು.
ಸಗರ ನಾಡಿನಿಂದ ನಾಲ್ಕು ಸನ್ಯಾಸಿಗಳು ಲೋಕ ಸಂಚಾರ ಮಾಡುತ್ತ ಗೀಜಗನಹಳ್ಳಿಗೆ ಬಂದರು. ಅವರಲ್ಲಿ ಮುದಿ ಮಡಿವಾಳೇಶ್ವರ ಸ್ವಾಮಿ, ಶ್ರೀಗುರು ಸಿದ್ದೇಶ್ವರರು, ವಿರುಪಾಕ್ಷ ಸ್ವಾಮಿ ಹಾಗೂ ಬಾಬಾ ಎಂಬ ಮುಸ್ಲಿಂ ಸೂಫಿ ಸಂತ ಇದ್ದರು. ಅವರಲ್ಲಿ ಒಬ್ಬರಾದ ಮುದಿ ಮಡಿವಾಳೇಶ್ವರರು ಗೀಜಗನಹಳ್ಳಿಯ ಹಿರೇಮಲ್ಲನಗೌಡರ ಮನೆಯಲ್ಲಿ ತಂಗಿದ್ದರು. ಅವರ ಕೃಪಾಶೀರ್ವಾದದಿಂದ ಮಲ್ಲನಗೌಡರ ದರ್ಭಾರವನ್ನು ಗೀಜಗನಹಳ್ಳಿಯಿಂದ ಕಿತ್ತು ತಂದು ಸ್ಥಾಪಿಸಿದ ಸಂಸ್ಥಾನವೇ ಕಿತ್ತೂರು ಎನ್ನಲಾಗುತ್ತದೆ. ನಂತರ ಕಿತ್ತೂರಿನಲ್ಲಿದ್ದ ೧೨ನೇ ಶತಮಾನದ ಬಸವಣ್ಣನ ಗುಡಿಯಲ್ಲೆ ಕಲ್ಮಠ ಸ್ಥಾಪಿಸಿ ಮುದಿ ಮಡಿವಾಳೇಶ್ವರರು ರಾಜಗುರುವಾದರು ಎಂದು ಜನಪದರ ಕಥೆಗಳಿವೆ. ಅವರು ಲಿಂಗೈಕ್ಯರಾದ ಬಳಿಕ ಇನ್ನೋರ್ವ ಮಹಾ ತಪಸ್ವಿ ಎನಿಸಿದ ಪ್ರಭುಸ್ವಾಮಿಯವರು ಕಲ್ಮಠದ ಗುರುವಿನ ಸ್ಥಾನವಹಿಸಿಕೊಂಡರು.
“ಯೋಗ ಸಿದ್ದಿಯ ಪಡೆದ ಗುರುವರ
ತ್ಯಾಗ ಬುದ್ದಿಯ ತೋರುತಲಿ ಭವಯೋಗ
ಮಾಯೆಯ ಬಿಡಿಸಿದನು ಮಲ್ಲಸರ್ಜ ಪ್ರಭುವರನ”/
ವಿರಕ್ತ ಪರಪರೆಯ ಪ್ರಭುಸ್ವಾಮಿಗಳು ಮಹಾನ್ ತಪೋನಿಷ್ಠರಾದರೂ, ಅವರಿಗೆ ಆಗಾಗ ಅನಾರೋಗ್ಯ ಕಾಡುತ್ತಿತ್ತು. ಅದಕ್ಕೆಂದು ತಮ್ಮ ಉತ್ತರಾಧಿಕಾರಿಯ ಹುಡುಕಾಟದ ಚಿಂತೆಯಲ್ಲಿ ಕಾಲ ಕಳೆಯುತ್ತಿದ್ದರು. ಭಗವಂತನಲ್ಲಿ ಸಾತ್ವಿಕ ಸಂತನ ಅವತಾರಕ್ಕಾಗಿ ಜಪಿಸುತ್ತಿದ್ದರು. ಒಂದು ರಾತ್ರಿ ನಿದ್ರಾಹೀನರಾಗಿ ವಿಚಿತ್ರ ಕನಸ್ಸೊಂದು ಅನುಭವಿಸಿದ್ದರು. ಬೆಳಿಗ್ಗೆ ಅದನ್ನೆ ಕನವರಿಸುತ್ತ ವಾಯು ವಿಹಾರದಲ್ಲಿದ್ದಾಗ, ಹೂದೋಟದ ಬ್ರಹ್ಮ ಕಮಲದ ಪಕಳೆಯಲ್ಲಿ ಮುದ್ದಾದ ಗಂಡು ಮಗು ಘಟ ಸರ್ಪದ ಸುಪರ್ಧಿಯಲ್ಲಿ ಕಿಲ ಕಿಲವೆಂದು ನಗಾಡುವುದನ್ನು ಗಮನಿಸಿದರು.
“ಭೂಲೋಕ ಮಾಯೆಯ ಸ್ತ್ರೀ ಗರ್ಭ ಜನಿತ/ ಜನ್ಮವು ಅತೀ ಹೇಯ”/
ಎಂದು ಶಿವನ ಒಡ್ಡೊಲಗದಲ್ಲಿ ವೀರಭದ್ರ ಭುವಿಗೆ ಗುರುವಾಗಿ ಅವತರಿಸಲು ನೀಡಿದ ಪ್ರತ್ಯುತ್ತರಕ್ಕೆ ಅವನೇ ಅಯೋನಿಜನಾಗಿ ಅವತರಿಸಿದನಂತೆ. ಇದನ್ನು ದೊರೆ ಮಲ್ಲಸರ್ಜನಿಗೆ ತಿಳಿಸಿದಾಗ ಕಲ್ಮಠದಲ್ಲಿ ಆಶ್ರಯ ಪಡೆದ ಬಂಜೆ ನಾಗಲಾಂಬಿಕೆಗೆ ಪೋಷಣೆ ಮಾಡಲು ಒಪ್ಪಿಸಿದರಂತೆ. ನಂತರ ನಾಮಕರಣ ದಿನದಂದು ಕಲ್ಮಠದ ರಾಜಗುರುವಾಗಿದ್ದ ಮುದಿ ಮಡಿವಾಳೇಶ್ವರರ ಸವಿನೆನಪಿಗಾಗಿ “ಶಿವಯೋಗಿ ಮಡಿವಾಳೇಶ್ವರ” ಎಂದು ಕರೆಯುವುದು ವಾಡಿಕೆಯಾಯಿತು.
“ಧೀರ ಮಡಿವಾಳ ವಿದ್ಯೆ ಕಲಿಯುತ/
ಧಾರುಣೀತಲದೊಳಗೆ ತನ್ನಯ ಅಪಾರ
ವಿದ್ಯೆಯ ಮಹಿಮನಾದ ಸಾರ ಗುರುದಯದಿ”/
ಕಿತ್ತೂರಿನ ಕಲ್ಮಠದ ಆಶ್ರಯದಲ್ಲಿದ್ದ ವಿರುಪಾಕ್ಷ ಪಂಡಿತರಲ್ಲಿ ಬಾಲ ಮಡಿವಾಳೇಶನಿಗೆ ವಿದ್ಯೆ ಕೊಡಲು ಆರಂಭಿಸಿದರು. ಮಲ್ಲಸರ್ಜ ದೊರೆಯ ಯುವರಾಜ ಬಾಪುಗೌಡ ಹಾಗೂ ಆಲೂರು ಶೆಟ್ಟಿಯ ಮಗ ಮಲ್ಲಶೆಟ್ಟಿ ಸಹಪಾಠಿಗಳಾಗಿದ್ದರು. ಪ್ರತಿದಿನ ರಾಜವಾಡೆಯಲ್ಲಿ ಜರುಗುತ್ತಿದ್ದ ಸಹಪಂಕ್ತಿ ಭೋಜನಕ್ಕೆ ಬಾಲ ಮಡಿವಾಳೇಶ ಬರುತ್ತಿದ್ದಂತೆ ಬಾಪುಗೌಡ ಒಂದಿನ ಬಾಗಿಲು ಮುಚ್ಚಿಸಿ, ಒಳ ಪ್ರವೇಶಿಸದಂತೆ ತಡೆದ. ಇದರಿಂದ ಅವಮಾನಿತನಾಗಿ ಮನನೊಂದು ಇನ್ಮುಂದೆ “ಕಿತ್ತೂರು ರಾಜವಾಡೆಯಲ್ಲಿ ಕಾಲಿಡುವುದಿಲ್ಲ” ಎಂದು ಮಡಿವಾಳೇಶ ಪ್ರತೀಜ್ಞೆ ಗೈದಿದ್ದ.
“ಬಾಲ ರೂಪದಿ ತನ್ನ ತಂದೆಗೆ/
ಲೀಲೆಗಳ ತೋರುತ ಮಡಿವಾಳ/
ಲೀಲೆಯಿಂದಲಿ ಮೆರೆದನಾ/ ಕಿತ್ತೂರ ಕಲ್ಮಠದಿ”/
ಪುತ್ರ ಬಾಪುಗೌಡ ತೋರಿದ ಅಪಮಾನ ತಿಳಿದು ದೊರೆ ಮಲ್ಲಸರ್ಜ ಕಲ್ಮಠಕ್ಕೆ ಧಾವಿಸಿ ಹಿರಿ ಮತ್ತು ಕಿರಿಯ ಗುರುವರರಲ್ಲಿ ಕ್ಷಮೆಯಾಚಿಸಿದ. ಆ ಸಂದರ್ಭದಲ್ಲಿ ಬಾಲ ಮಡಿವಾಳ ಅಪಶಕುನದ ಭವಿಷ್ಯ ನುಡಿದು ಅವನತಿಗೆ ಶಾಪ ವಿಧಿಸಿ ಮಲ್ಲಸರ್ಜನನ್ನು ಚಿಂತೆಗೆ ದೂಡಿದ್ದನು. ಅದಾದ ಕೆಲವೆ ದಿನಗಳಲ್ಲಿ ಟಿಪ್ಪು ಸುಲ್ತಾನನ ಸೈನಿಕರು, ಕಿತ್ತೂರು ಸಂಸ್ಥಾನದ ಮೇಲೆ ದಾಳಿಗೈದು ದೊರೆ ಮಲ್ಲಸರ್ಜನನ್ನು ಬಂಧಿಸಿ, ಪೇಶ್ವೆಗಳಿಗೆ ಒಪ್ಪಿಸಿ, ಪುಣೆ ಜೈಲಿನಲ್ಲಿ ಇರಿಸಿ ಬಿಟ್ಟರು.
ಬಾಲ ಮಡಿವಾಳೇಶನಿಗೆ ೧೪ ವರ್ಷ ತುಂಬುತ್ತಿದ್ದಂತೆ ರಾಜಗುರು ಪ್ರಭುಸ್ವಾಮಿಗಳು ಅವನನ್ನು ಹೆಚ್ಚಿನ ವ್ಯಾಸಂಗಕ್ಕಾಗಿ ಕಾಶಿ ವಿದ್ಯಾಪೀಠಕ್ಕೆ ಕಳುಹಿಸಿದ್ದರು. ಇತ್ತ ಪುಣೆ ಜೈಲಿನಲ್ಲಿದ್ದ ಮಲ್ಲಸರ್ಜನಿಗೆ ವಿಷಪ್ರಾಶನವಾಗಿದ್ದಕ್ಕೆ ಬಿಡುಗಡೆಗೊಂಡು ಅರಮನೆ ಸೇರುತ್ತಿದ್ದಂತೆ ಅಸುನೀಗಿದನು. ಈ ಬೆಳವಣಿಗೆಗೆ ಚಿಂತಾಕ್ರಾಂತರಾಗಿ ಕೆಲವೆ ದಿನಗಳಲ್ಲಿ ಪ್ರಭುಸ್ವಾಮಿಗಳು ಲಿಂಗೈಕ್ಯರಾದರು.
ಮಲ್ಲಸರ್ಜನ ಸಾವಿನ ನಂತರ ಬಾಪುಗೌಡನಿಗೆ ಪಟ್ಟಾಧಿಕಾರ ಮಹೋತ್ಸವ ಏರ್ಪಟ್ಟಿತ್ತು. ಅದಕ್ಕೆ ಸಿಂಹಾಸನವನ್ನು ಪಾವಿತ್ರ್ಯಗೊಳಿಸಲು ಅಭಿಷೇಕಕ್ಕಾಗಿ ಪವಿತ್ರ ಗಂಗಾಜಲ ತರಲು ಬೆಳವಾಡಿ ಮಲ್ಲಣ್ಣನನ್ನು ಕಾಶಿಗೆ ಕಳುಹಿಸಲಾಯಿತು. ಅಲ್ಲಿ ವ್ಯಾಸಂಗ ನಿರತ ಮಡಿವಾಳೇಶನಿಗೆ ಕಿತ್ತೂರಿನ ವಿದ್ಯಮಾನ ತಿಳಿಸಿದ ಮಲ್ಲಣ್ಣ, ಶುದ್ಧ ಗಂಗಾಜಲ ಹೊತ್ತು ಕಿತ್ತೂರಿಗೆ ತಂದು ಒಪ್ಪಿಸಿದ. ಇದಾದ ಬಳಿಕ ಕಿತ್ತೂರಿನಲ್ಲಿ ಬಾಪುಗೌಡ ದೊರೆಯಾಗಿದ್ದ. ಚೌಕಿಮಠದ ಗಂದಿಗವಾಡ ಶ್ರೀಗುರುಸಿದ್ದ ಸ್ವಾಮಿ ಕಲ್ಮಠದ ರಾಜಗುರುವಾಗಿ ಅಲಂಕೃತಗೊಂಡಿದ್ದರು. ಮಲ್ಲಪ್ಪ ಶೆಟ್ಟಿಯನ್ನು ಮಠದ ಕೋಶಾಧ್ಯಕ್ಷನನ್ನಾಗಿ ಹಾಗೂ ವಿರುಪಾಕ್ಷ ಶರಣನನ್ನು ಮಠದ ಕೋಟೆಯ ಆಡಳಿತ ಅಧಿಕಾರಿಯನ್ನಾಗಿ ನೇಮಿಸಲಾಗಿತ್ತು. ಈ ಬೆಳವಣಿಗೆಯನ್ನು ತಿಳಿದ ಮಡಿವಾಳೇಶ ಕಾಶಿಯಿಂದ ಬಂದು, ಕಲ್ಮಠದ ಸಿಂಹಾಸನ ಬಿಟ್ಟು ಕೊಡಲು ಗರ್ಜಿಸಿದ. ಗೌರವ ಸಿಗದಕ್ಕೆ ರಾಜವಾಡೆಗೆ ತೆರಳಿ ರಾಜನನ್ನು ವಿಚಾರಿಸಿದ.
“ವಿನಾಶ ಕಾಲೇ ವಿಪರೀತ ಬುದ್ದಿ” ಎಂಬಂತೆ ಅರಮನೆಯ ಕೋಟೆಯ ಬಾಗಿಲನ್ನು ಹಾಕಿಸಿ ಬಾಪುಗೌಡನ ಭೇಟಿಯಾಗದಂತೆ ಮಡಿವಾಳೇಶನಿಗೆ ಅವಮಾನಿಸಲಾಯಿತು. ತನಗೆ ಕಿತ್ತೂರು ಸಾಮ್ರಾಜ್ಯದ ಕಲ್ಮಠದ ರಾಜಗುರುವಿನ ಸ್ಥಾನ ವಂಚನೆಯಿಂದ ಕೈತಪ್ಪಿತ್ತೆಂದು ಮನವರಿಕೆ ಮಾಡಿಕೊಂಡ ಮಡಿವಾಳೇಶ, ಆಗ ಅರಮನೆಯ ಮಹಾಧ್ವಾರದ ಮುಂದೆ ನಿಂತು, ತನ್ನ ಶಾಪಗ್ರಸ್ಥ ಹಸ್ತವನೆತ್ತಿ;
“ಕಿತ್ತೂರು ಸಂಸ್ಥಾನ ಶತ್ರು ಪಡೆಗೆ ತುತ್ತಾಗಿ, ಸೋತು ಸರ್ವನಾಶವಾಗಲಿ/
ಯಾವ ಪಾಪಾತ್ಮನ ಪಿತೂರಿಗೆ ಗುರು ದ್ರೋಹವಾಯಿತೋ/
ಅದೇ ಪಾಪಿಯ ಕೈಯಿಂದ ಕಿತ್ತೂರಿನ ವಂಶವೃಕ್ಷ ಕತ್ತರಿಸುವ ಕಠಾರಿಯಾಗಲಿ”/
ಹೀಗೆಂದು ತನ್ನಲ್ಲಿದ್ದ ಖಾವಿ ವಸ್ತ್ರ, ಇತರೆ ಸಾಮಗ್ರಿಗಳನ್ನು ಅರಮನೆಯ ಕೋಟೆಯ ಬಾಗಿಲು ಮುಂದೆ ಸುಟ್ಟು ಅದರ ಮೂರು ಬೊಗಸೆ ಹಾಳು ಬೂದಿಯನ್ನು ತೂರಾಡಿದ ಮಡಿವಾಳೇಶ, ಕಾಲ್ನಡಿಗೆಯಲ್ಲಿ ಬೆಳವಾಡಿಯತ್ತ ಸಾಗಿದ. ಅಲ್ಲಿನ ಸಿದ್ದನ ಗವಿಯಲ್ಲಿ ಹನ್ನೊಂದು ದಿವಸ ಮೌನ ಅನುಷ್ಠಾನ ಗೈದು, ೧೨ನೆ ದಿನಕ್ಕೆ ಸೋಗಲಾಪುರಕ್ಕೆ ತೆರಳಿದ. ಹೀಗೆ ಲೋಕ ಸಂಚಾರ ನಿರತ ಮಡಿವಾಳೇಶ ತನ್ನ ಆತ್ಮ ರಕ್ಷಣೆಗಾಗಿ ಕಿತ್ತೂರಿನ ಶತ್ರು ಗಳಾದ ಮೈಸೂರಿನ ಮಹಾರಾಜರ ಆತಿಥ್ಯ ಸ್ವೀಕರಿಸಿದನು. ಅಲ್ಲಿ ೫೨೦ ಪ್ರಾಮುಖ್ಯ ಪಂಡಿತರ ಸಭೆಯಲ್ಲಿ ಭಾಗಿಯಾಗಿದ್ದನು. ನಂತರ ಚನ್ನಪಟ್ಟಣಕ್ಕೆ ತೆರಳಿ, ಬ್ರಹ್ಮ ರಾಕ್ಷಸದಿಂದ ಎಷ್ಟೋ ಅಮಾಯಕರಿಗೆ ಉಪದ್ರಿತವಾದ ಮನೆಯಲ್ಲಿ ವಾಸವಿದ್ದನು. ಕರಾಳ ರಾತ್ರಿಯೊಂದು ಬ್ರಹ್ಮ ರಾಕ್ಷಸ ಪ್ರತ್ಯಕ್ಷವಾದಾಗ,
“ಕಂಡನೆಲೆ ಮಾಯ ನಿನ್ನ ರೂಪವ/
ಭಂಡತನವ ಬಿಡು/
ದಂಡಿಸದೆ ಪೋಪುದಿಲ್ಲ/
ಬಂಡತನವ ಮಾಡದಲೆ ನೀ”/
ಹೀಗೆಂದು ರಾಕ್ಷಸನನ್ನು ಶರಣಾಗಿಸಿ ಬೆಳಿಗ್ಗೆ ಮನೆಯ ಮಾಲೀಕನಿಗೆ ಗರ್ಜಿಸಿ ೧೦ ಸಾವಿರ ದಂಡವಾಗಿ ಗುರು ದಕ್ಷಣೆ ಸ್ವೀಕರಿಸಿ, ಕಾಶ್ಮೀರದ ಕಡೆಗೆ ಪ್ರಯಾಣ ಗೈದನು. ತದನಂತರ ಮೈಸೂರು, ಕಾಶ್ಮೀರ, ನೇಪಾಳ, ಭೂತಾನ್ ದೊರೆಗಳ ಆಶ್ರಯ ಪಡೆದು, ಆದರದ ಆತಿಥ್ಯ ಸ್ವೀಕರಿಸುತ್ತ ಲೋಕ ಸಂಚಾರದಲ್ಲೇ ನಿರತರಾದರು.
ಹೀಗೊಮ್ಮೆ ಗಾಣಗಾಪುರದಲ್ಲಿ ನದಿ ಸ್ನಾನಕ್ಕೆ ತೊಡಗಿದಾಗ, ಕುಲಕರ್ಣಿ ಎಂಬಾತ ಬ್ರಾಹ್ಮಣನೂ ನದಿ ಸ್ನಾನಕ್ಕೆ ಬಂದನು. ಅವಾಗ ಶಿವಯೋಗಿ ಮಡಿವಾಳೇಶ್ವರರು ತುಂಬಿಟ್ಟ ತಂಬಿಗೆ ಮುಟ್ಟಿದ್ದ. ಅದಕ್ಕೆ ರೊಚ್ಚಿಗೆದ್ದ ಮಡಿವಾಳೇಶ್ವರರು, ತಮ್ಮ ಬೆತ್ತದಿಂದ ಅವನ ನೆತ್ತಿಗೆ ಹೊಡೆದು ಸಾಯಿಸಿದ್ದಕ್ಕೆ ಮುರುಗೋಡ ನ್ಯಾಯಾಲಯದಲ್ಲಿ ಖಟ್ಲೆ ಅನುಭವಿಸಿದ್ದರು.
ದೊಡ್ಡವಾಡದ ಅಂಬಪ್ಪ ಸವಣೂರ (ಎಲಿಗಾರ) ಮನೆಯಲ್ಲಿ ವಾಸವಿದ್ದಾಗ ಮಡಿವಾಳೇಶ್ವರರು ಪಗಡಿ ಆಟವಾಡುತ್ತಿದ್ದರು. ಅವರೊಂದಿಗೆ ರಾಮಚಂದ್ರಪ್ಪ ಎಂಬ ಸ್ಥಳೀಯ ಸಹ ಆಟಗಾರನಿದ್ದ. ಅವನು ಸುಳ್ಳು ಆಟಗಾರ, ಮೋಸದಿಂದ ತಮ್ಮನ್ನು ಸೋಲಿಸುತ್ತಿದ್ದಾನೆಂದು ಅಪಾದಿಸಿ ಕೈಕಾಲು ಕಟ್ಟಿ ಭಾವಿಯಲ್ಲಿ ಹಾಕಲು ಹಠ ಹಿಡಿದಿದ್ದರು. ಅವಾಗ ರಾಮಚಂದ್ರಪ್ಪನ ತಾಯಿ ಬಂದು, ತನ್ನ ಏಕೈಕ ಪುತ್ರನ ಉಳಿಸಿ ಎಂದು ಅಂಗಲಾಚಿದ್ದಳು.
ಕೆಲವು ದಿನಗಳಾದ ಬಳಿಕ ಮಡಿವಾಳೇಶ್ವರರಿಗೆ ಆಶ್ರಯ ನೀಡಿದ್ದ ಮನೆಯ ಮಾಲಿಕನಾದ ಅಂಬಪ್ಪನವರು ಎಲ್ಲೋ ತೀರ್ಥ ಯಾತ್ರೆಗೆ ಹೋಗಿದ್ದರು. ಮನೆಯಲ್ಲಿ ಮಡಿವಾಳೇಶ್ವರ ಒಬ್ಬರನ್ನೇ ಬಿಟ್ಟು ಅವರ ಮಾತು ಮೀರಿ ಹೋಗಿದ್ದಕ್ಕೆ ಮರಳಿ ಬರುವಷ್ಟರಲ್ಲಿ ಅಂಬಪ್ಪನ ಮನೆಯಲ್ಲಿ ಎಲ್ಲವೂ ನಾಶವಾಗಿ ಹೋಗಿತ್ತು!. ಮಡಿವಾಳೇಶ್ವರರು ಯಾರಿಗೂ ಹೇಳದೆ ಮನೆ ತೊರೆದು ಹೋಗಿದ್ದರು.
ಶಿವಯೋಗಿ ಮಡಿವಾಳೇಶ್ವರರಿಗೆ ಯಾವಾಗಲೂ ಅಭ್ಯಂಗ ಸ್ನಾನ ಮಾಡುವ ಹವ್ಯಾಸ ಇತ್ತು. ಮುರುಗೋಡದ ನಾಡ ಹೊಸೂರಿನಲ್ಲಿದ್ದಾಗ ತಮ್ಮ ಆಪ್ತರು ಮೈಗೆ ಎಣ್ಣೆ ಹಚ್ಚಿ ನೀರು ಎರೆಯುತ್ತಿದ್ದರು. ಅವರಿಗೆ ಬಿಸಿ ನೀರು ಕಾಯಿಸುವ ಬೆಂಕಿಯು, ಪಕ್ಕದ ಮನೆಯ ಹಲಕೇರಿ ಮುದುಕಪ್ಪನ ಮನೆಯನ್ನು ಸುಟ್ಟಿತ್ತು. ಅವಾಗ ಮನೆಯವರು ಬೊಬ್ಬೆ ಹಾಕುತ್ತ ಊರಿನ ಜನರನ್ನು ಸೇರಿಸಿ, ಮಡಿವಾಳೇಶ್ವರರ ಹೆಸರಿನಲ್ಲಿ ಗೋಳಿಟ್ಟಿದ್ದರು.
ಅಷ್ಟೊತ್ತಿಗೆ ಕಿತ್ತೂರು ಪರಕೀಯರ ಪಾಲಾಗಿತ್ತು. ಚನ್ನಮ್ಮ ಸೆರೆಯಾಗಿ ಬೈಲಹೊಂಗಲ ಜೈಲಿನಲ್ಲಿದ್ದಳು. ಹಾವೇರಿಯ ಮಲ್ಲಪ್ಪಶೆಟ್ಟಿ ಮತ್ತು ವೆಂಕಟರಾವ್, ಕಿತ್ತೂರು ಸಂಸ್ಥಾನದ ಲೆಕ್ಕಪತ್ರ ನೋಡಲು ಬ್ರಿಟೀಷರಿಂದ ನೇಮಕಗೊಂಡಿದ್ದರು. ಖಜಾನೆಯ ಕೀಲಿಕೈ ಅವರ ಕೈ ವಶವಾಗಿತ್ತು. ಧಾರವಾಡದಿಂದ ಚಾಪ್ಲಿನ್ ಬಂದು ಕಿತ್ತೂರಿನ ಅರಮನೆಯನ್ನು ನೆಲಸಮಗೊಳಿಸಿದ್ದ. ಮರದ ದಿಮ್ಮಿಗಳಿಂದ ತಯ್ಯಾರಿಸಿದ್ದ ದ್ವಾರ ಬಾಗಿಲು, ತೊಲೆ, ಕಿಟಕಿ, ಬೆಲೆ ಬಾಳುವ ರಾಜ ದರ್ಭಾರದ ಬಟ್ಟೆ, ಕಂಚಿನ ಪಾತ್ರೆ ಎಲ್ಲವೂ ಹರಾಜು ಹಾಕಿದ್ದ. ಅಳಿದುಳಿದ ಅರಮನೆಯ ಸಂಪತ್ತನ್ನೆಲ್ಲ ಲೂಟಿಗೈದು ಬ್ರಿಟನ್ನಿಗೆ ಅಟ್ಟಿದ್ದ. ಅರಮನೆಯ ಮಹಾಧ್ವಾರ ಮತ್ತು ಕೋಟೆ ಗೋಡೆಯನ್ನು ಕೆಡವಿದ್ದರು. ಮರಮುಟ್ಟು, ಕಾಗದ ಪತ್ರ ದಾಖಲೆಗಳಿಗೆ ಬೆಂಕಿ ಹಚ್ಚಿದ್ದರು. ನೆಲ ಅಗೆದು, ಅಲಂಕೃತ ಕಲ್ಲುಗಳ ಒಡೆದು, ಗುಪ್ತ ನಿಧಿಗಾಗಿ ಶೋಧಿಸಿದ್ದರು.
ಮುರುಗೋಡಿನಲ್ಲಿ ನೆಲೆಸಿದ ಶಿವಯೋಗಿ ಮಡಿವಾಳೇಶ್ವರರು ತಮಗೆ ನೈವೇದ್ಯ ಕೊಡಲು ಬಂದ ಮುದುಕಪ್ಪನಿಂದ ಕಿತ್ತೂರು ಅವನತಿಯ ಕುರಿತು ಕೇಳಿ ತಿಳಿದುಕೊಂಡರು. ತಮ್ಮ ಆರೈಕೆಗಾಗಿ ಶಂಕರಪ್ರಭು ಮತ್ತು ಚನ್ನಬಸವಾರ್ಯರೆಂಬ ಇಬ್ಬರು ವಟುಗಳನ್ನು ನೇಮಿಸಿಕೊಂಡಿದ್ದರು. ಸತ್ಯಾಸತ್ಯತೆ ತಿಳಿಯಲು ಅವರನ್ನು ಹಾಳಾದ ಕಿತ್ತೂರಿಗೆ ಕಳುಹಿಸಿದ್ದರು. ಅವಾಗ ಗರಗದ ಭಕ್ತರು ಮಡಿವಾಳೇಶ್ವರರನ್ನು ಕರೆಯಲು ಆಗಮಿಸಿದ್ದರು. ಅಲ್ಲಿನ ಹಳ್ಳದ ಬಸವಣ್ಣನ ಗುಡಿಯ ತೀರದಲ್ಲಿ ತಮಗೆ ಮಠ ಕಟ್ಟಿಸಿ ಕೊಟ್ರೆ ಗರಗಕ್ಕೆ ಬರುವುದಾಗಿ ಹೇಳಿ ಕಳುಹಿಸಿದ್ದರು. ಅದರಂತೆ,
“ಭರದಿಂದ ಕರ್ನಾಟಕದಿ ಚರಿಸುತೆ/
ಪರಮ ಗುರು ತಾ ಸ್ಥಾಪಿಸದ ನಾ/
ಗರಗದಾ ಗ್ರಾಮದೊಳು ನಿತ್ಯ ಮಠವನ್ನ”/
ಕೊನೆಗೆ ಗರಗದ ತುಪ್ಪರಿ ಹಳ್ಳದ ತೀರದಲ್ಲಿದ್ದ ಬಸವಣ್ಣನ ಗುಡಿಯಲ್ಲಿ ಬಂದು ನೆಲೆಸಿದ್ದರು. ಅಲ್ಲಿನ ಹಂಗರಕಿ ದೇಸಾಯಿ ಅವರು ಗುರು ಮಠವನ್ನು ನಿರ್ಮಿಸಿ ಕೊಟ್ಟರು. ಅದಾದ ಕೆಲವೆ ತಿಂಗಳುಗಳಲ್ಲಿ ಭೀಕರ ಬರಗಾಲ ಆವರಿಸಿತ್ತು. ಅದಕ್ಕೆಂದು ಸಂಚರಿಸಿ ಭಕ್ತರ ಮನೆಯಿಂದ ಭಿಕ್ಷಾಟನೆಗೈದು ರೊಟ್ಟಿ ಬಣವಿ ನಿರ್ಮಿಸಿದ್ದರು. ಸಹಸ್ರಾರು ಭಕ್ತರಿಗೆ ಇಷ್ಟಲಿಂಗ ಪೂಜೆ ಕುರಿತು ಅಂಚೆ ಪತ್ರ ಕಳುಹಿಸಿ ಜನಪ್ರಿಯತೆ ಗಳಿಸಿದರು.
ಹೀಗೆ ಗರಗದ ಮಠದಲ್ಲಿ ನೆಲೆಸಿದಾಗ ಅನೇಕ ಭಕ್ತರು ನಿತ್ಯ ದರ್ಶನಕ್ಕೆ ದೂರ ದೂರದ ಊರುಗಳಿಂದ ಆಗಮಿಸುತ್ತಿದ್ದರು. ಅವರಲ್ಲಿ ನೇಗಿನಾಳ ರಾಮನಗೌಡ್ರು ಒಬ್ಬರಾಗಿದ್ದರು. ಅವರು ತಮ್ಮ ಪತ್ನಿ ಬಿಂದವ್ವನೊಂದಿಗೆ ದರ್ಶನಕ್ಕೆ ಬಂದರು. ವಿವಾಹವಾಗಿದ್ದ ರಾಮನಗೌಡರಿಗೆ ಪುರುಷತ್ವ ಇಲ್ಲವೆಂದು ಮಡಿವಾಳೇಶ್ವರ ಶಿವಯೋಗಿಗಳ ಮುಂದೆ ತಮ್ಮ ಗೋಳು ತೋಡಿಕೊಂಡರು. ಅವಾಗ ಗಂಡ ಮತ್ತು ಹೆಂಡ್ತಿಯನ್ನು ಜೊತೆಯಾಗಿ ಪಕ್ಕದ ತುಪ್ಪರಿ ಹಳ್ಳದಲ್ಲಿ ಸ್ನಾನ ಗೈಯ್ಯಲು ಹೇಳಿದರು. ರಾತ್ರಿ ಪ್ರಸಾದ ಸೇವಿಸಿದ ಬಳಿಕ ತಮ್ಮ ಕುದುರೆಯ ಅಂಕಣದಲ್ಲಿ ಮಲಗಲು ತಿಳಿಸಿದ್ದರು. ರಾಮನಗೌಡರ ಪತ್ನಿಯಾದ ಬಿಂದವ್ವನನ್ನು ಬೆಳಿಗ್ಗೆ ತಮ್ಮ ಬಳಿ ರಹಸ್ಯವಾಗಿ ಕರೆದು, ರಾತ್ರಿಯ ಅನುಭವ ಕುರಿತು ವಿಚಾರಿಸಿದ್ದರು. ಅವಾಗಿನಿಂದ ಅವರಿಬ್ಬರೂ ಗರಗದಲ್ಲಿಯೇ ಉಳಿದರು. ಜೀವನ ಫರ್ಯಂತರ ಶಿವಯೋಗಿಗಳ ಸೇವೆಯಲ್ಲಿ ತೊಡಗಿದರು. ಕೊನೆಗೆ ಅವರಿಬ್ಬರೂ ಅಲ್ಲಿಯೇ ತೀರಿಹೋದರು. ನಂತರ ಅವರಿಬ್ಬರ ಸಮಾಧಿಯನ್ನು ಮಡಿವಾಳೇಶ್ವರರ ಗದ್ದುಗೆ ಎದುರಿನಲ್ಲೇ ನಿರ್ಮಿಸಿದ್ದು ಇಂದಿಗೂ ಗಮನಿಸಬಹುದಾಗಿದೆ.
ಶಿವಯೋಗಿ ಮಡಿವಾಳೇಶ್ವರರು ಗರಗದ ಶ್ರೀಮಠದಲ್ಲಿ, ತಾವು ಲಿಂಗೈಕ್ಯರಾಗುವುದನ್ನು ಭಕ್ತರ ಒತ್ತಾಸೆಗೆ ೧೦ ವರ್ಷಗಳವರೆಗೆ ಮುಂದೂಡಿದ್ದರು. ಅದಾದ ಬಳಿಕ ಮುಂಚಿತವಾಗಿಯೇ ನಿರ್ಮಿಸಿದ್ದ ಸಮಾಧಿಯಲ್ಲಿ ಲಿಂಗ ಪೂಜೆಯಲ್ಲಿಯೇ ನಿರತರಾಗಿ ನಿರ್ವಿಕಲ್ಪ ಸಮಾಧಿಯಾದರು. ಅಲ್ಲಿಯೇ ಗದ್ದುಗೆ ಸ್ಥಾಪಿಸಿ, ಬೃಹತ್ತಾದ ದೇವಾಲಯ ನಿರ್ಮಿಸಲಾಗಿದೆ. ಅದುವೇ ಇಂದಿನ ಪ್ರಸಿದ್ಧ ಗರಗದ ಶಿವಯೋಗಿ ಮಡಿವಾಳೇಶ್ವರರ ದೇವಸ್ಥಾನ…!

-ಡಾ. ಸತೀಶ ಕೆ. ಇಟಗಿ
ಪತ್ರಿಕೋದ್ಯಮ ಉಪನ್ಯಾಸಕರು,
ಬಸವ ನಗರ, ಮುದ್ದೇಬಿಹಾಳ
ಜಿ: ವಿಜಯಪುರ-೫೮೬೨೧೨(ಕರ್ನಾಟಕ)
ಮೊ: ೯೨೪೧೨೮೬೪೨೨

