ಸಿಂದಗಿ: ರಾಜ್ಯದಲ್ಲಿ ಸರಕಾರ ರಚನೆಗೊಂಡು ಎರಡುವರೆ ವರ್ಷ ಗತಿಸಿದರು ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಸಮಸ್ಯೆಗಳು ಎದುರಾಗಿ ಶಿಕ್ಷಣ ವ್ಯವಸ್ಥೆ ಕುಸಿದಿದೆ. ಮೂಲ ಸೌಲಭ್ಯಗಳಿಲ್ಲದೆ ಹಾಳಾಗಿದೆ ಇದರಿಂದ ಕಿತ್ತೂರು ಕರ್ನಾಟಕದ ಶಾಲೆಗಳು ಗಂಭೀರ ಪರಿಸ್ಥಿತಿಯಲ್ಲಿವೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ದೂರಿದರು.
ಪಟ್ಟಣದ ಸ್ವಗೃಹದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ೬೦ ಸಾವಿರಕ್ಕಿಂತ ಹೆಚ್ಚು ಶಿಕ್ಷಕರ ಕೊರತೆಯಿಂದ ಶಿಕ್ಷಣ ಮಟ್ಟ ಕುಸಿದಿದೆ. ಹಿಂದಿನ ಸರಕಾರದಲ್ಲಿ ೧೫ ಸಾವಿರ ಶಿಕ್ಷಕರ ನೇಮಕಾತಿ ಆದೇಶ ನ್ಯಾಯಾಲಯದಲ್ಲಿದೆ ಎನ್ನುವ ನೆಪದಲ್ಲಿ ಶಿಕ್ಷಕರ ನೇಮಕಾತಿ ಕೈಬಿಟ್ಟಿದೆ. ಇನ್ನೊಂದೆಡೆ ಶತಮಾನ ಕಂಡ ಶಾಲೆಗೆ ಭೂ ಪರಿವರ್ತನ ಪತ್ರ ನೀಡಿ ಎಂದರೆ ಹಿಂದಿನಿಂದ ಯಾವ ಆದೇಶದ ಮೇಲೆ ಮಾನ್ಯತೆ ನೀಡಿದ್ದೀರಿ ಮತ್ತು ಖಾಸಗಿ ಸಂಸ್ಥೆಗಳ ಮಾನ್ಯತೆ ನವೀಕರಣ ಹೆಸರಲ್ಲಿ ಶೋಷಣೆ ಮಾಡುತ್ತ ಲಂಚಾವತಾರಕ್ಕೆ ಇಳಿದಿದಲ್ಲದೆ ೪೯ ಸಾವಿರ ಶಾಲೆಗಳು ಆಘಾತಕಾರಿ ಪರಿಸ್ಥಿತಿ ಎದುರಿಸುತ್ತಿವೆ. ಗೌರಿ ಮಾಡಲು ಹೋಗಿ ಗಣಪತಿ ಮಾಡಲು ಹೊರಟಿದೆ. ನೀತಿ ರಹಿತ ಶಿಕ್ಷಣ ನೀತಿ ಸರಕಾರವಾಗಿದೆ ಈ ಸರಕಾರಕ್ಕೆ ಸರಕಾರಿ ಶಾಲೆಗಳೆಂದರೆ ಮಕ್ಕಳ ಆಟವಾಗಿದೆ. ಹಾಗಿದ್ದರೆ ಸರಕಾರಿ ಶಾಲೆಗಳ ಬಗ್ಗೆ ಶ್ವೇತ ಪತ್ರ ಹೊರಡಿಸಿ ಎಂದು ಚಾಟಿ ಬೀಸಿದರು.
ಅತಿಥಿ ಉಪನ್ಯಾಸಕರ ಕುರಿತು ಸರಕಾರದಲ್ಲಿ ಸ್ಪಷ್ಟತೆಯಿಲ್ಲ ಪ್ರತಿಶತ ೯೦ ರಷ್ಟು ಉಪನ್ಯಾಸಕರು ವೇತನವಿಲ್ಲದೆ ಕುಳಿತ್ತಿದ್ದಾರೆ ಅದಕ್ಕೆ ಪ್ರತಿಯೊಂದು ಸಮಸ್ಯೆಗೆ ಪರಿಹಾರವಿದೆ ಕಾರಣ ಅತಿಥಿ ಉಪನ್ಯಾಸಕರು ಯಾರು ಹತಾಶೆಗೊಳಗಾಗಬಾರದು ನಿಮ್ಮ ಜೊತೆ ನಾವಿದ್ದೇವೆ ಎಂದರು.
ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಮಾತನಾಡಿ, ಜಿಲ್ಲಾ ವಿಭಜನೆಯಾದರೆ ಸಿಂದಗಿಯನ್ನು ಜಿಲ್ಲೆಯನ್ನಾಗಿ ಮಾಡಬೇಕು, ಈ ತಾಲೂಕಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚು ಆಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ನಡೆಯುವ ಚಳಿಗಾಲ ಅಧಿವೇಶನದಲ್ಲಿ ಜಿಲ್ಲಾ ನ್ಯಾಯಾಲಯ ಮಂಜೂರು ನೀಡಬೇಕು ಎಂದು ಒತ್ತಾಯಿಸಿದರು.
ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪುರ ಮಾತನಾಡಿದರು.
ಈ ಸಂದರ್ಭದಲ್ಲಿ ಮಲ್ಲು ಪೂಜಾರಿ, ಸಿದ್ರಾಮ ಆನಗೊಂಡ, ಸಾಯಬಣ್ಣ ಪುರದಾಳ ಇದ್ದರು.

