ಕುಮಾರಿ ವಾಸವಿ ವಿನೂತನಳ ಭರತನಾಟ್ಯ ರಂಗ ಪ್ರವೇಶ

Must Read

ನಿರಂತರ ಸ್ಕೂಲ್ ಆಫ್ ಡಾನ್ಸ್ ಸಂಸ್ಥೆಯ ಗುರುಗಳಾದ ವಿದುಷಿ ಶ್ರೀಮತಿ ಸೌಮ್ಯ ಸೋಮಶೇಖರ್ ಹಾಗೂ ವಿದ್ವಾನ್ ಸೋಮಶೇಖರ್ ಚೂಡನಾಥ್ ಇವರ ಶಿಷ್ಯೆಯಾದ ಕುಮಾರಿ ವಾಸವಿ ವಿನೂತನಳ ಭರತನಾಟ್ಯ ರಂಗ ಪ್ರವೇಶ ಕೆಆರ್ ಪುರಂ ನಲ್ಲಿರುವ “ಜನಪದರು” ಸಭಾಂಗಣದಲ್ಲಿ ನಡೆಯಿತು.

ಸಾಂಪ್ರದಾಯಿಕವಾದ ಪೂಜೆಯೊಂದಿಗೆ ಪ್ರಾರಂಭಿಸಿ, ಗುರುಗಳ ಬಳಿ ಗೆಜ್ಜೆಗಳನ್ನು ಪಡೆದು ಅವರ ಆಶೀರ‍್ವಾದದೊಂದಿಗೆ ಹಾಗೂ ತಂದೆ ತಾಯಿಯರಾದ ಶ್ರೀಮತಿ ಲಕ್ಷ್ಮಿ ಸುದೀಪ್ತಿ ಹಾಗೂ ರಾಮ್ ಕುಮಾರ್ ರವರ ಆಶೀರ‍್ವಾದದೊಂದಿಗೆ ಗುರುಹಿರಿಯರ ಸಮ್ಮುಖದಲ್ಲಿ ಶುಭ ಪ್ರಾರಂಭ ಮಾಡಿದಳು.

ಭರತನಾಟ್ಯ ಮಾರ‍್ಗದ ಪ್ರಾರಂಭಿಕ ನೃತ್ಯ ಬಂಧವಾದ ಪುಷ್ಪಾಂಜಲಿಯೊಂದಿಗೆ ವಿಘ್ನ ನಿವಾರಕ ವಿನಾಯಕನ ಕುರಿತಾದ “ಗಜವದನಾ ಕರುಣಾ ಸದನ” ಎಂಬ ಸ್ತುತಿಯೊಂದಿಗೆ ರಂಗಪ್ರವೇಶ ಪ್ರಾರಂಭವಾಯಿತು.

ದುಷ್ಟ ಶಿಕ್ಷಣ ಶಿಷ್ಟ ರಕ್ಷಣಾ ಮಾಡುವ ಪರಿಯನ್ನು ಮಹಿಷಾಸುರ ಸಂಹಾರದೊಂದಿಗೆ ವಿವರಿಸುತ್ತಾ ದುರ‍್ಗೆಯ ಹಲವಾರು ರೂಪಗಳನ್ನು ದುರ‍್ಗಾ ಕೌತ್ವಂ ಮುಖಾಂತರ ನೃತ್ಯ ಪ್ರದರ‍್ಶನ ಮುಂದುವರೆಯಿತು. ದುರ‍್ಗೆಯ ಸಾಕ್ಷಾತ್ಕಾರ ಬಹಳ ಸೊಗಸಾಗಿ ರೂಪುಗೊಂಡಿತು. ದಾಸ ಶ್ರೇಷ್ಠರಾದ ಪುರಂದರದಾಸರ “ವೇಂಕಟಾಚಲ ನಿಲಯಂ” ಕೃತಿಯೊಂದಿಗೆ ವಾಸವಿ ಸಭಿಕರೆಲ್ಲರನ್ನು ವೈಕುಂಠಪುರಕ್ಕೆ ಕರೆದೊಯ್ದಳು.

ಶಂಖ ಚಕ್ರ ಗದಾಪದ್ಮ ಸಹಿತನಾದ ವೆಂಕಟೇಶನ ವರ‍್ಣನೆಯನ್ನು ಬಹಳ ಸುಂದರವಾಗಿ ಈ ಕೃತಿಯಲ್ಲಿ ಪ್ರದರ‍್ಶಿಸಲಾಗಿತ್ತು. ಆನಂತರ ಪದರ‍್ಶನ ದೊಂದಿಗೆ ವಿನೂತನಾ ತನ್ನ ಶಕ್ತಿ ಸಾಮರ‍್ಥ್ಯವನ್ನು, ಜತಿಗಳ ಮೇಲಿರುವ ಹಿಡಿತವನ್ನು, ಸೃಜನಾತ್ಮಕ ಕೌಶಲ್ಯವನ್ನು, ಭಕ್ತಿರಸಭರಿತವಾದ ಅಭಿನಯದೊಂದಿಗೆ ತನ್ನ ನೃತ್ಯದ ಮುಖಾಂತರ ಸಭೆಯಲ್ಲಿದ್ದ ಕಲಾ ರಸಿಕರ ಮನಸೆಳೆದಳು.

ಮುಂದಿನ ನೃತ್ಯ ಬಂಧಗಳನ್ನು ಶ್ರೀ ಕೃಷ್ಣನಿಗೆ ಸಮರ‍್ಪಿಸುತ್ತಾ ಜಾವಳಿಯೊಂದಿಗೆ ಪ್ರಾರಂಭಿಸಿದಳು. ವಿದ್ವಾನ್‌ ಶ್ರೀ ಪ್ರಸನ್ನ ಕುಮಾರ್‌ ರವರ ರಚನೆಯ “ನೋಡಿದಾಕ್ಷಣ” ಎಂಬ ಜಾವಳಿಗೆ ವಿನೂತನಾಳ ರಸಭರಿತವಾದ ಅಭಿನಯ ಶ್ರೀ ಕೃಷ್ಣನಿಗಾಗಿ ಕಾತುರದಿಂದ ಕಾಯುವ ಗೋಪಿಯ ಮನಸ್ಸನ್ನು ಪ್ರತಿಬಿಂಬಿಸಿತು. ಕಾಣುವಷ್ಟು ಹತ್ತಿರದಲ್ಲಿದ್ದರೂ ಸಿಗದಷ್ಟು ದೂರದಲ್ಲಿದ್ದ ಕೃಷ್ಣನ ಕೈಯಲ್ಲಿದ್ದ ಕೊಳಲು, ತಲೆಯ ಮೇಲಿನ ನವಿಲುಗರಿ ತಾನಾಗಬಾರದೇ ಎಂಬ ಹಂಬಲ ಬಹಳ ಸುಂದರವಾಗಿ ರೂಪುಗೊಂಡಿತು. ಈ ಚಿತ್ರಣವನ್ನು ಮುಂದಕ್ಕೆ ಕೊಂಡೊಯ್ಯುತ್ತಾ “ವಾರಣಂಆಯಿರಂ” ನಲ್ಲಿ ಆಂಡಾಳ್‌ (ಗೋದಾದೇವಿ) ಆಗಿ, ಕನಸಿನಲ್ಲಿ ಶ್ರೀ ಕೃಷ್ಣನೊಂದಿಗೆ ವಿವಾಹವಾದ ವಿವರಣೆಯನ್ನು ಸೊಗಸಾಗಿ ಪ್ರದರ‍್ಶಿಸಲಾಯಿತು.

ಡಾ|| ಬಾಲಮುರಳಿ ಕೃಷ್ಣ ರವರ ರಚನೆಯ ಕದನಕುತೂಹಲ ರಾಗದ ತಿಲ್ಲಾನ ಜನಮನ ಸೂರೆಗೊಂಡಿತು. ಸುಮಾರು ೯೦ ನಿಮಿಷಗಳ ಕಾಲ ನೃತ್ಯ ಪ್ರದರ‍್ಶನ ಮಾಡಿದ್ದರೂ ಯಾವುದೇ ರೀತಿಯಲ್ಲಿ ಶಕ್ತಿಗುಂದದೆ, ಚೈತನ್ಯ ಭರಿತಳಾಗಿ ತಿಲ್ಲಾನವನ್ನು ಮಾಡಿದಳು. ಪುಟ್ಟಪರ‍್ತಿ ಸಾಯಿ ಬಾಬಾರವರ ೧೦೦ನೇ ಜನ್ಮದಿನವಾದ್ದರಿಂದ ಅವರ ಆರತಿಯೊಂದಿಗೆ ಮಂಗಳವನ್ನು ಮಾಡಿದಳು.

ಪ್ರಖ್ಯಾತ ನೃತ್ಯ ಗುರುಗಳಾದ ವಿದುಷಿ ಡಾ|| ಮಾನಸ ಕಂಟಿ, ವಿದುಷಿ ಶ್ರೀಮತಿ ರೇಖಾ ಜಗದೀಶ ಹಾಗೂ ಪ್ರಸಿದ್ದ ಹೋಮಿಯೋಪತಿ ವೈದ್ಯರಾದ ಡಾ|| ರಾಜೀವ ರವರು ಮುಖ್ಯ ಅತಿಥಿಗಳಾಗಿ ಕಾರ‍್ಯಕ್ರಮದಲ್ಲಿ ಉಪಸ್ತಿತರಿದ್ದರು.
ವಿದ್ವಾನ್‌ ಶ್ರೀ ರಾಜೀವ್‌ ರಾಜಗೋಪಾಲನ್‌ ರವರ ಗಾಯನ, ವಿದ್ವಾನ್‌ ಶ್ರೀ ವಿದ್ಯಾಶಂಕರ, ವಿದ್ವಾನ್‌ ಶ್ರೀ ರಘು ಸಿಂಹ, ವಿದ್ವಾನ್‌ ಶ್ರೀ ಶ್ರೀನಿಧಿ ಮಾಥುರ್‌, ವಿದ್ವಾನ್‌ ಶ್ರೀ ಮಿಥುನ್‌ ಶಕ್ತಿ ರವರ ವಾದ್ಯವೃಂದ ಅತ್ಯದ್ಭುತವಾದ ಸಹಕಾರವನ್ನು ವಿನೂತನಾತಳಿಗೆ ನೀಡಿದರು.

– ಶ್ರೀಮತಿ ಮಾನಸ ಬಿ ಆರ್

LEAVE A REPLY

Please enter your comment!
Please enter your name here

Latest News

ಡಾ.ಮಹಾಂತೇಶ ಬೀಳಗಿ ಯುವಕರಿಗೆ ಸ್ಫೂರ್ತಿ – ಮೌಲಾಲಿ ಆಲಗೂರ

ಸಿಂದಗಿ: ಸ್ಪೂರ್ತಿದಾಯಕ ಮಾತುಗಳಿಂದ ಲಕ್ಷಾಂತರ ಸ್ಪರ್ಧಾತ್ಮಕ ಓದುಗರ ಕೀರ್ತಿ ಹೆಚ್ಚಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕ, ಐಎಎಸ್ ಅಧಿಕಾರಿ ಮಹಾಂತೇಶ...

More Articles Like This

error: Content is protected !!
Join WhatsApp Group