ಲೇಖನ : ಜೀವನವನ್ನು ಉನ್ನತೀಕರಿಸಿಕೊಳ್ಳಬೇಕೇ ಹೊರತು ಜೀವನಶೈಲಿಯನ್ನಲ್ಲ

Must Read

ಬದುಕೆಂಬುದು ಮೇಲ್ನೋಟಕ್ಕೆ ಎಲ್ಲರಿಗೂ ಒಂದೇ ರೀತಿ ಕಾಣುತ್ತದೆ. ಆದರೆ ಕೆಲವರ ಬದುಕು ಸಾರ್ಥಕತೆಯನ್ನು ಪಡೆದುಕೊಳ್ಳದೇ ಕೇವಲ ಬಂದ ಪುಟ್ಟ ಹೋದ ಪುಟ್ಟ ಎನ್ನುವಂತಾಗುತ್ತದೆ. ಹಗಲು ರಾತ್ರಿ ಒಂದರ ಹಿಂದೆ ಒಂದು ಬಂದಂತೆ ಕಷ್ಟ ಸುಖಗಳು ಬರತ್ತಲೇ ಇರುತ್ತವೆ. ಹೀಗಿದ್ದಾಗ್ಯೂ ಕೂಡ ಹಲವರಿಗೆ ಬದುಕು ಬರೀ ಗೋಳೇ ಆಗಿಬಿಡುತ್ತದೆ.

ಸಾಲ ಮಾಡಿಯಾದರೂ ತುಪ್ಪ ತಿನ್ನು ಎನ್ನುವ ಮಾತಿನಂತೆ ಯುವ ಸಮುದಾಯ ಕೇವಲ ಶೋಕಿ ಬದುಕಿನ ಬೆನ್ನು ಬಿದ್ದಿದೆ ಎನ್ನುತ್ತದೆ ಹಿರಿ ಪೀಳಿಗೆ. ಹಿರಿಯ ತಲೆಮಾರಿನವರು ಹೇಳುವಂತೆ ಜೀವನವನ್ನು ಉನ್ನತೀರಿಸುವುದನ್ನು ಬಿಟ್ಟು ಜೀವನಶೈಲಿಯ ಹಿಂದೆ ಬಿದ್ದಿದ್ದಾರೆ. ಆದರೆ ಕೆಲವರು ಮಾತ್ರ ಬಡತನದ ಬೇಗುದಿಯಲ್ಲಿ, ಬದುಕಿನಲ್ಲಿ ಏನಿರಲಿ ಬಿಡಲಿ ತಾವೇ ಕಿಂಗ್ ಸೈಜ್ ಜೀವನ ಕಟ್ಟಿಕೊಳ್ಳುತ್ತಿದ್ದಾರೆ. ತಮ್ಮವರನ್ನು ಖುಷಿಯಿಂದ ನೋಡಿಕೊಳ್ಳುತ್ತಿದ್ದಾರೆ. ಶ್ರೀಮಂತರ ಮನೆಯಲ್ಲಿ ಹುಟ್ಟಿದ ಕೆಲವರು ಐಶಾರಾಮಿ ಜೀವನ ಅನುಭವಿಸುತ್ತಿದ್ದಾರೆ. ಇದರರ್ಥ ಇಷ್ಟೇ ಹುಟ್ಟು ನಮ್ಮ ಕೈಲಿಲ್ಲ ಸಾವು ನಮ್ಮ ಕೈಲಿಲ್ಲ. ಸಾವಿನ ರಹಸ್ಯ ತಿಳಿಯಲು ಆಗಿಲ್ಲ. ಆದರೆ ಹುಟ್ಟು ಸಾವುಗಳ ನಡುವೆ ಇರುವ ಬದುಕು ನಮ್ಮ ಕೈಯಲ್ಲಿದೆ ಅನ್ನೋದು ಮಾತ್ರ ನೂರರಕ್ಕೆ ನೂರರಷ್ಟು ಸತ್ಯ. ಹಾಗಿದ್ದರೆ ನಮಗೆ ಬೇಕಾದ ಕಿಂಗ್ ಸೈಜ್ ಬದುಕು ಕಟ್ಟಿಕೊಳ್ಳುವುದು ಹೇಗೆ ಬದುಕನ್ನು ಉನ್ನತೀಕರಿಸುವುದು ಹೇಗೆ ನೋಡೋಣ ಬನ್ನಿ.

ಒಂದೇ ಸಮದ ನಡಿಗೆ
ನಾವು ಸಮತಟ್ಟಾದ ನೆಲದಲ್ಲಿ ನಡೆಯಬಲ್ಲೆವು. ಅಲ್ಲಿ ಹಳ್ಳಕೊಳ್ಳಗಳಿಲ್ಲ ತಗ್ಗು ದಿಣ್ಣೆಗಳಿಲ್ಲ ಗುಡ್ಡ ಬೆಟ್ಟಗಳಿಲ್ಲ. ನಡೆಯುವ ಹಾದಿಯಲ್ಲಿ ಶಿಖರಗಳಿದ್ದರೆ ಕಂದಕಗಳಿದ್ದರೆ ಸಾಗುವುದು ಬಲುಕಷ್ಟ. ಇದಕ್ಕೆ ವಿಶಿಷ್ಟ ಸೂತ್ರವೊಂದಿದೆ ಅದೇನೆಂದರೆ, ದೃಢಸಂಕಲ್ಪವನ್ನು ಮಾಡಿದರೆ ಅಡ್ಡಿಯಾಗಿ ಕಾಣುವ ಎತ್ತರದ ಶಿಖರ ನಮ್ಮ ಕಾಲಿನ ಕೆಳಗಿರುತ್ತದೆ. ಹಾಗಾದರೆ ಮನಸ್ಸು ಒಪ್ಪಿ ಮಾಡುವ ಕೆಲಸದ ಕಾರಣದಿಂದ ಬದಲಾವಣೆ ಸಂಭವಿಸುತ್ತದೆ ಅಂತಾಯಿತು. ಭಯದ ಸ್ಥಿತಿಯಲಿದ್ದರೆ, ಬದಲಾವಣೆಯನ್ನು ಬಯಸುವುದಿಲ್ಲ. ಬರೀ ಜೀವನಶೈಲಿಯ ಹಿಂದೆ ಬಿದ್ದರೆ ಸಮತಟ್ಟಾದ ನೆಲದಲ್ಲಿ ನಡೆಯುವುದು ಕಷ್ಟವಾಗುತ್ತದೆ. ಬದುಕಿನಲ್ಲಿ ಸಾಧನೆಯತ್ತ ಏರಿಳಿತವಿಲ್ಲದ ಒಂದೇ ಸಮದ ನಡಿಗೆ ನಡೆಯುವುದಿಲ್ಲ, ತ್ವರಿತ ನಡಿಗೆ ಮುಖ್ಯ. ದೃಢ ಮನಸ್ಸಿನಿಂದ ಮಾಡಿದ ಕೆಲಸಗಳು ಖಂಡಿತ ಒಳ್ಳೆಯ ಫಲಗಳನ್ನು ನೀಡುತ್ತವೆ.

ತೇಲಿಸುವಿಕೆ-ಮುಳುಗಿಸುವಿಕೆ
ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳದೇ ಹೋದರೆ, ಹಬ್ಬಕ್ಕೆ ತಂದ ಕುರಿ ಕೊಲ್ಲುವುರೆಂಬುದನ್ನು ಅರಿಯದೇ ತೋರಣಕ್ಕೆ ತಂದ ತಳಿರು ಮೇಯುವಂತೆ ಆಗುವುದು ಖಂಡಿತ. ಯಾರನ್ನೂ ದೂಷಿಸಿ ಪ್ರಯೋಜನವಿಲ್ಲ. ಗಟ್ಟಿಯಾದರೆ ದೇವರು ಭೆಟ್ಟಿಯಾಗುತ್ತಾನೆ. ಬೆನ್ನು ತೋರಿಸಿ ಹೋದವರನ್ನು ತಲೆ ಎತ್ತಿ ಬದುಕಲು ಬದುಕು ಬಿಡುವುದಿಲ್ಲ .ಬದುಕಿನತ್ತ ಕುತೂಹಲದಿಂದ ದಿಟ್ಟಿಸುವವರನ್ನು ತಲೆ ತಗ್ಗಿಸಲು ಬಿಡುವುದಿಲ್ಲ. ಈ ಸಂದರ್ಭದಲ್ಲಿ ಒಂದು ಮಾತನ್ನು ಹೇಳಬೇಕೆನಿಸುತ್ತದೆ. ಪ್ರತಿಯೊಂದನ್ನೂ ತೀರ ಗಂಭಿರವಾಗಿ ತೆಗೆದುಕೊಂಡರೂ ತೊಂದರೆ ತಪ್ಪಿದ್ದಲ್ಲ. ಒಂದಿಷ್ಟನ್ನು ನೀರಿನ ಮೇಲೆ ಕಾಗದದ ದೋಣಿಯ ಹಾಗೆ ತೇಲಿಸಬೇಕು. ಒಂದಿಷ್ಟನ್ನು ಯಾವುದೇ ವಿಚಾರ ಮಾಡದೇ ನೀರಿನಲ್ಲಿ ಕಲ್ಲು ಚೆಲ್ಲಿದಂತೆ ಮುಳುಗಿಸಿಬಿಡಬೇಕು. ಯುವ ಸಮುದಾಯದ ಸಮಸ್ಯೆ ಎಂದರೆ ಜವಾಬ್ದಾರಿಯಿಂದ ಮಾಡಲೇಬೇಕಾದ ಸಂಗತಿಗಳನ್ನು ಮುಳುಗಿಸುತ್ತದೆ. ಮುಳುಗಿಸಬೇಕಾದ ವಿಷಯಗಳನ್ನು ತಲೆ ಮೇಲೆ ಹೊತ್ತು ತಿರುಗುತ್ತದೆ.

ಸಮರ್ಪಕ ಆಯ್ಕೆ
ನಮ್ಮ ಬದುಕಿನ ಗುಣಮಟ್ಟಕ್ಕೆ ನಮ್ಮ ಆಯ್ಕೆಗಳೇ ಕಾರಣ, ಅವಕಾಶಗಳಲ್ಲ. ಹಾಗಾಗಿ ಬದುಕಿನ ಸಾರ್ಥಕತೆಗಾಗಿ, ಯೋಚಿಸಿ, ಅವಲೋಕಿಸಿ, ಅಂತರಂಗದಲ್ಲಿ ಮಥಿಸಿ ಸಮರ್ಪಕವಾದುದನ್ನು ಆಯ್ಕೆ ಮಾಡಿಕೊಳ್ಳಬೇಕು. ತಾವು ಆಯ್ಕೆ ಮಾಡಿಕೊಂಡಂತೆ ತಾವು ನಿರ್ಣಯಿಸಿದಂತೆ ಬಾಳುವವರು ಮಾತ್ರ ಕಿಂಗ್ ಸೈಜ್ ಬದುಕಲು ಸಾಧ್ಯ. ಒಂದು ಸಲ ನಿರ್ಣಯಿಸಿದ ಮೇಲೆ ಅದರಿಂದ ಹಿಂದೆ ಸರಿಯುವ ಮಾತೇ ಇಲ್ಲ. ಎಷ್ಟೇ ಕಠಿಣ ಪರಿಸ್ಥಿತಿ ಬಂದರೂ, ಜಟಿಲ ಸಮಸ್ಯೆಗಳು ಎದುರಾದರೂ ಹಿಂದೆ ಹೆಜ್ಜೆ ಇಡುವ ಹಾಗಿಲ್ಲ. ಕೆಲವು ಸನ್ನಿವೇಶದಲ್ಲಿ ಹಿನ್ನೆಡೆ ಉಂಟಾಗಿ ಹೀನಾಯ ಸೋಲು ಅನುಭವಿಸಿದರೂ ಕುಗ್ಗುವ ಜಗ್ಗುವ ಮನಸ್ಥಿತಿ ಇಲ್ಲದೇ ಇರುವವರಿಗೆ ಕಿಂಗ್ ಸೈಜ್ ಜೀವನ ಒಲಿಯುತ್ತದೆ.

ಪ್ರಯತ್ನದ ಬಲೆ
ಹಾಗೆ ನೋಡಿದರೆ ಜೀವನವೆನ್ನುವುದು ಸಾಗರದಂತೆ ದೂರದಲ್ಲಿ ನಿಂತು ನೋಡುವವರಿಗೆ ಅದರ ಅಂದ ಚೆಂದ ಅಷ್ಟೇ ಸಿಗೋದು ಏರಿಳಿತ ಬೋರ್ಗರೆತ ಗೊತ್ತಾಗೋದು. ಕಾಲಿಗೆ ಮರಳು ಹತ್ತೋದು. ಆದರೆ ಅದೇ ಸಾಗರಕ್ಕೆ ಪ್ರಯತ್ನದ ಬಲೆಯನ್ನು ತೆಗೆದುಕೊಂಡು ಹೋದರೆ ಹೊಟ್ಟೆ ತುಂಬಿಸಿಕೊಳ್ಳಲು ಮೀನು ಸಿಗುತ್ತವೆ. ಮಿಕ್ಕಿದರೆ ಮಾರಿ ಮಿಕ್ಕ ಪದಾರ್ಥಗಳನ್ನು ಕೊಂಡುಕೊಳ್ಳಬಹುದು. ಮೀನು ಹಿಡಿಯುವುದನ್ನೇ ಉಪಜೀವನ ಮಾಡಿಕೊಳ್ಳಬಹುದು. ಮತ್ತಷ್ಟು ಮಗದಷ್ಟು ಲೆಕ್ಕವಿಲ್ಲದಷ್ಟು ಪ್ರಯತ್ನಪಟ್ಟು ಈಜು ಕಲಿತು ಸಾಗರದ ಒಳಹೊಕ್ಕರೆ ಮುತ್ತುಗಳೇ ಸಿಗುತ್ತವೆ. ಹಾಗಾದರೆ ಈ ಜೀವನವನ್ನು ಹೂವಿನಂತೆ ಸುಂದರವಾಗಿಸುವ ಪ್ರಯತ್ನಕ್ಕೆ ಶರಣಾಗುವುದೇ ಒಳಿತಲ್ಲವೇ?

ಹೊಸ ಹೊಣೆ
ನೋಯುವ ಹಲ್ಲಿಗೆ ಮತ್ತೆ ಮತ್ತೆ ನಾಲಿಗೆ ಮರಳುವಂತೆ. ಸಿಗದೇ ಇರುವುದಕ್ಕೆ ಮನಸ್ಸು ಹಾತೊರೆಯುತ್ತದೆ. ಅಂದರೆ ಫಲ ಬಯಸುತ್ತೇವೆಯೇ ಹೊರತು ಜವಾಬ್ದಾರಿಯೆಂಬ ಹೊಣೆಯ ಹೊರೆಯನ್ನು ಹೊರಲು ಬಯಸುವುದಿಲ್ಲ. ಎಲ್ಬರ್ಟ್ ಹಬ್ಬರ್ಡ್ ಹೇಳುವಂತೆ “ಯಾರು ಹೊರಬಲ್ಲನೋ ಆತನೆಡೆಗೆ ಹೊಣೆಗಾರಿಕೆ ಆಕರ್ಷಿತಗೊಳ್ಳುತ್ತದೆ.” ಜವಾಬ್ದಾರಿ ಎಂದರೆ ಆಲೋಚನೆಯಿಂದ ಕೂಡಿದ ಕ್ರಿಯೆ. ಬದುಕು ಎಲ್ಲರಿಗೂ ಒಂದೇ ಆದರೂ ಯಾವನು ಹೆಚ್ಚಿನ ಜವಾಬ್ದಾರಿಯ ಹೊಣೆ ಹೊರುತ್ತಾನೋ ಅವನು ತನಗೆ ತಾನೇ ಬಡ್ತಿ ಕೊಟ್ಟುಕೊಳ್ಳುತ್ತಾನೆ. ಬದುಕಿನ ಅನುಭವಗಳನ್ನು ಹಗುರವಾಗಿ ತೆಗೆದುಕೊಳ್ಳದೇ ಸಫಲತೆಗೆ ಹೇಗೆ ಸಹಾಯವಾಗುವವು ಎನ್ನುವುದನ್ನು ಪರಾಮರ್ಶಿಸಬೇಕು. ಸದಾ ಹೊಸ ಹೊಸ ಹೊಣೆ ಹೊರಲು ಸಿದ್ಧರಿರಬೇಕು. ಹಾಗಾದಾಗ ಕಿಂಗ್ ಸೈಜ್ ಬದುಕು ಹತ್ತಿರ ಸುಳಿಯುತ್ತದೆ.

ಭದ್ರವಾದ ನೆಲೆ
ಸ್ಪರ್ಧಾತ್ಮಕ ಜಗತ್ತಿನಲ್ಲಿ ಜೀವನವು ಅತಂತ್ರ ಮತ್ತು ಉದ್ವೇಗಪೂರಿತವಾಗಿ ಸಾಗುತ್ತಿದೆ ಎಂದು ಅನಿಸುತ್ತದೆ. ಬದುಕಿಗೆ ಒಂದು ಭದ್ರವಾದ ನೆಲೆ ಇಲ್ಲ ಅಂತ ಅನಿಸುವುದೂ ಉಂಟು. ಇದರಿಂದ ಮುಕ್ತರಾಗಲು ನಮ್ಮ ಸಂಸ್ಕೃತಿ ಪರಂಪರೆಯನ್ನು ಅನುಸರಿಸಬೇಕಾದ ಅಗತ್ಯವಿದೆ. ಹಾಕಿಕೊಳ್ಳುವ ಬಟ್ಟೆ, ಸಾಲು ಸಾಲು ಸವಲತ್ತುಗಳು ಸೌಲಭ್ಯಗಳಿಂದ ಬದುಕು ಭರ್ಜರಿಯೆನಿಸಿದರೂ ಒಳಗಿನಿಂದ ಟೊಳ್ಳು ಟೊಳ್ಳಾಗಿದೆ ಅನಿಸುತ್ತದೆ. “ಹಾರಲು ಬಯಸುವ ವ್ಯಕ್ತಿ ಮೊದಲು ನಿಲ್ಲಲು, ನಡೆಯಲು ಹಾಗೂ ಓಡಲು ಕಲಿಯಬೇಕು.” ಎನ್ನುವುದು ಫ್ರೆಡಿಕ್ ನೀತ್ಸೆ ಮಾತು. ಈ ಮಾತು ಎಷ್ಟು ಸತ್ಯವಲ್ಲವೇ? ಹಕ್ಕಿಯಂತೆ ಹಾರಿ ಗಗನ ಚುಂಬಿಸುವ ಕನಸು ಕಾಣುವ ಮೊದಲು ಸರಿಯಾಗಿ ಭದ್ರವಾದ ನೆಲೆ ಕಂಡುಕೊಳ್ಳಬೇಕು. ನಿಲ್ಲಲು ನಡೆಯಲು ಹಾಗೂ ಓಡಲು ಕಲಿಯಬೇಕು. ಅಂದಾಗ ಮಾತ್ರ ಕಿಂಗ್ ಸೈಜ್ ಬದುಕು ಸಾಧ್ಯ.

ಕೊನೆ ಹನಿ
ಬದುಕಿನ ಸ್ಥಾನ ಪಲ್ಲಟದಲ್ಲಿ ಒಮ್ಮೆ ನಲಿಸುವ ಖುಷಿ ಇನ್ನೊಮ್ಮೆ ಅಳಿಸುವ ಅಳು ನಡೆಯುವಾಗಿನ ನೆರಳಿನಂತೆ ಹಿಂಬಾಲಿಸುವವು. ಸಾಲು ಸಾಲು ಸೋಲುಗಳು ಹಿಂಬಾಲಿಸಿದಾಗ ಸುಟ್ಟು ಬೂದಿಯಾದರೂ ಫಿನಿಕ್ಸ ಹಕ್ಕಿಯಂತೆ ಮತ್ತೆ ಜೀವಂತ ಎದ್ದು ನಿಲ್ಲುವ ಛಲ ಬೆಳೆಸಿಕೊಳ್ಳಬೇಕು. ಬದುಕು ಇರುವುದು ಕೇವಲ ನಾವು ಬದುಕಲು ಅಲ್ಲ ನಮ್ಮವರಿಗಾಗಿ ಬದುಕಲು ಇದನ್ನೇ ಇನ್ನಷ್ಟು ಅರ್ಥಪೂರ್ಣವಾಗಿ ಸ್ವಾಮೀ ವಿವೇಕಾನಂದರು ‘ಇತರರಿಗಾಗಿ ಬದುಕುವುದೇ ಜೀವನದ ನಿಜವಾದ ಸಾರ್ಥಕತೆ.’ ಎಂದಿದ್ದಾರೆ. ಕವಿ ಕುವೆಂಪು ಹೇಳುವಂತೆ ಹೂವು ಬಳ್ಳಿಗೆ ಅಲಂಕಾರವೇ ಹೊರತು ವಿಗ್ರಹಕ್ಕಲ್ಲ. ಹಾಗೆಯೇ ಬದುಕು ಇರುವುದು ಕಿಂಗ್ ಸೈಜ್ ಬದುಕಲು ಹೊರತು ಕೇವಲ ಶೋಕಿಗಲ್ಲ. ಜೀವನವನ್ನು ಉನ್ನತೀಕರಿಸಿಕೊಳ್ಳಬೇಕೇ ಹೊರತು ಜೀವನಶೈಲಿಯನ್ನಲ್ಲ ಎಂಬುದನ್ನು ತಿಳಿದು ಬದುಕಿದರೆ ಜೀವನದ ತಂಪು ಕಂಪು ಇಂಪು ಇನ್ನಷ್ಟು ಹೆಚ್ಚುತ್ತದೆ.

ಜಯಶ್ರೀ.ಜೆ. ಅಬ್ಬಿಗೇರಿ.
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ ೯೪೪೯೨೩೪೧೪೨

 

Latest News

ಅಕ್ರಮ ಸಾರಾಯಿ ನಿಷೇಧಿಸಲು ಬಾಲಚಂದ್ರ ಜಾರಕಿಹೊಳಿ ಸೂಚನೆ

ಮೂಡಲಗಿ-ಅರಭಾವಿ ಮತಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮ ಸಾರಾಯಿಯನ್ನು ಕೂಡಲೇ ನಿಷೇಧಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಕೊಳ್ಳುವಂತೆ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಪೊಲೀಸ್ ಅಧಿಕಾರಿಗಳಿಗೆ...

More Articles Like This

error: Content is protected !!
Join WhatsApp Group