ಸಂಸ್ಕೃತಿ, ಸಾಧನೆ, ಮಿಡ್ಲೆಂಡ್ಸ್ ಕನ್ನಡಿಗರ ಐದನೇ ವರ್ಷದ ಮಹೋತ್ಸವ!
ದೇಹವು ಪರದೇಶದಲ್ಲಿದ್ದರೂ, ಅಂತರಂಗವು ಸದಾ ಬಯಸುವುದು ತಾಯ್ನೆಲದ ನೆನಪು ಮತ್ತು ತಾಯಿನುಡಿಯ ಸೊಗಸು. ರಾಯಲ್ ಲೀಮಿಂಗ್ಟನ್ ಸ್ಪಾ: ನವೆಂಬರ್ ೨೯, ೨೦೨೫ರಂದು ಯುನೈಟೆಡ್ ಕಿಂಗ್‌ಡಮ್‌ನ ಮಿಡ್ಲಾಂಡ್ಸ್ ಪ್ರದೇಶದಲ್ಲಿ ಕರ್ನಾಟಕ ರಾಜ್ಯೋತ್ಸವದ ಭವ್ಯ ಆಚರಣೆ ನಡೆದು, ೪೦೦ಕ್ಕೂ ಹೆಚ್ಚು ಕನ್ನಡಿಗರು ಒಗ್ಗೂಡಿ ತಮ್ಮ ಸಾಂಸ್ಕೃತಿಕ ಬೇರುಗಳನ್ನು ಗೌರವಿಸಿದರು.
ಮಿಡ್ಲಾಂಡ್ಸ್ ಕನ್ನಡಿಗರ ಕೋವೆಂಟ್ರಿ ಕನ್ನಡಿಗರು, ಬರ್ಮಿಂಗ್‌ಹ್ಯಾಮ್ ಕನ್ನಡ ಗ್ರೂಪ್ , ಲೀಮಿಂಗ್ಟನ್ ಸ್ಪಾ / ವಾರ್ವಿಕ್ ಕನ್ನಡಿಗರು, ರಗ್ಬಿ ಕನ್ನಡಿಗರು ಮತ್ತು ನಮ್ಮವರು ಯುಕೆ ಸಂಸ್ಥೆಗಳ ಸಂಯೋಜಿತ ಪ್ರಯತ್ನದಿಂದ ಮಿಡ್ಲೆಂಡ್ಸ್ ಯುಕೆಯಾದ್ಯಂತದ ಕನ್ನಡಿಗರು ಒಂದೇ ವೇದಿಕೆಗೆ ಬಂದ ಈ ಮಹೋತ್ಸವವು ಯಶಸ್ಸಿನ ಐದನೇ ಹೆಜ್ಜೆಯಾಗಿದೆ. ಈ ಐತಿಹಾಸಿಕ ವೇದಿಕೆಯಲ್ಲಿ, ಐದು ವರ್ಷಗಳ ಹಿಂದೆ “ಒಗಟ್ಟಿನಲ್ಲಿಯೇ ಬಲವಿದೆ” ಎಂಬ ಘೋಷದೊಂದಿಗೆ ಪ್ರಾರಂಭವಾದ ಮಿಡ್ಲಾಂಡ್ಸ್ ಕನ್ನಡಿಗರ ಸಂಘವು ಕೇವಲ ಒಂದು ಸಂಘಟನೆಯಲ್ಲ; ಇದು ಸಾವಿರಾರು ಮೈಲಿಗಳ ದೂರದಲ್ಲಿ ಬೆಸೆದುಕೊಂಡಿರುವ ಒಂದು ಕುಟುಂಬ ಎಂದು ಕಾರ್ಯಕ್ರಮದ ಮೂಲಕ ಸಾರಲಾಯಿತು.
ಗಣೇಶ ಚತುರ್ಥಿಯ ಸಡಗರದಿಂದ ಹಿಡಿದು, ಕನ್ನಡ ಕಲಿ – ನಲಿ ಪಾಠಶಾಲೆಗಳ ಪ್ರೋತ್ಸಾಹದವರೆಗೆ – ಮತ್ತು ಆಟ /ಊಟ ನಮ್ಮ ಪ್ರತಿಯೊಂದು ಹೆಜ್ಜೆಯೂ ಕನ್ನಡ ಸಂಸ್ಕೃತಿ ಮತ್ತು ಭಾಷೆಯ ರಕ್ಷಣೆಗಾಗಿಯೇ ಮುಡಿಪಾಗಿದೆ ಎಂಬ ಸಂದೇಶವನ್ನು ಕಾರ್ಯಕ್ರಮದ ಪ್ರಾರಂಭದಲ್ಲಿ ರವಾನಿಸಲಾಯಿತು.
“ಕನ್ನಡ ರಾಜ್ಯೋತ್ಸವವೆಂದರೆ ಒಂದು ಹಬ್ಬವಲ್ಲ… ಅದು ನಮ್ಮ ಆತ್ಮದ ಬಣ್ಣ, ನಮ್ಮ ಮೂಲಗಳ ನೆನಪು, ನಮ್ಮ ಜನ್ಮಭೂಮಿಯ ಘಮಘಮಿಸುವ ಮಣ್ಣಿನ ಸುವಾಸನೆ, ನಮ್ಮ ಮನೆಯಲ್ಲಿ/ಮನದಲ್ಲಿ ಕೇಳಿಬರುವ ತಾಯಿನುಡಿ,” ಎಂದು ಸಾರಲಾಯಿತು.
ರಾಯಲ್ ಲೀಮಿಂಗ್ಟನ್ ಸ್ಪಾದಲ್ಲಿ ನಡೆದ ಈ ಸಾಂಸ್ಕೃತಿಕ ಮಹೋತ್ಸವಕ್ಕೆ ಬರ್ಮಿಂಗ್‌ಹ್ಯಾಮ್‌ನ ಭಾರತೀಯ ಕಾನ್ಸುಲ್ ಜನರಲ್ ಡಾ. ವೆಂಕಟಾಚಲಂ ಮುರುಗನ್, ಲೀಮಿಂಗ್ಟನ್ ಸ್ಪಾ ಮೇಯರ್ ರಗ್ಗಿ ಸಿಂಗ್, ವಾರ್ವಿಕ್ ಕೌನ್ಸಿಲ್ ಚೇರ್ಮನ್ ನವೀನ್ ಟ್ಯಾಂಗ್ರಿ, ಕೌನ್ಸಿಲರ್ ಹೇಮಾ ಯಲ್ಲಪ್ರಗಡ ಮತ್ತು ಖ್ಯಾತ ರೋಯಿಂಗ್ ಸಾಧಕಿ ಅನನ್ಯಾ ಪ್ರಸಾದ್ ಅವರು ಗೌರವಾತಿಥಿಗಳಾಗಿ ಹಾಜರಿದ್ದರು.
ಕಾರ್ಯಕ್ರಮವು ಪುಷ್ಪ ಸಮರ್ಪಣೆಯೊಂದಿಗೆ ಪ್ರಾರಂಭವಾಯಿತು. ಕಾನ್ಸುಲ್ ಜನರಲ್ ಮುರುಗನ್ ಅವರು ಕನ್ನಡದಲ್ಲಿಯೇ ಭಾಷಣ ಮಾಡುತ್ತಾ, ಕನ್ನಡ ಧ್ವಜದ ಬಣ್ಣಗಳ ಮಹತ್ವವನ್ನು ವಿವರಿಸಿದರು. ಕರ್ನಾಟಕವನ್ನು ಭಾರತದ ಟಾಪ್ ೫ ಕಾರ್ಯಕ್ಷಮತೆಯ ರಾಜ್ಯವೆಂದೂ, ವಿಶೇಷವಾಗಿ ಐಟಿ ಮತ್ತು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ರಾಜ್ಯವೆಂದೂ ಎತ್ತಿ ಹೇಳಿದರು.
ಮಹಾಭಾರತದ ಉಡುಪಿ ರಾಜನನ್ನು ಅತ್ಯುತ್ತಮ ರಾಜತಾಂತ್ರಿಕತೆಯ ಐತಿಹಾಸಿಕ ಉದಾಹರಣೆ ಎಂದು ಉಲ್ಲೇಖಿಸಿ, ಮೌಲ್ಯಯುತವಾದ ಆಧುನಿಕ ಪಾಠವನ್ನು ನೀಡಿದರು. ಕೌನ್ಸಿಲರ್ ಹೇಮಾ ಯಲ್ಲಪ್ರಗಡ ಅವರು ಪೋಷಕರು ತಮ್ಮ ಮಕ್ಕಳೊಂದಿಗೆ ಕನ್ನಡದಲ್ಲಿ ಮಾತನಾಡುವುದನ್ನು ನೋಡಿ ಸಂತೋಷ ವ್ಯಕ್ತಪಡಿಸಿ, ವಿದೇಶದಲ್ಲಿರುವ ಮಕ್ಕಳು ಕನ್ನಡ ಭಾಷೆ, ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಕಾಪಾಡಿಕೊಳ್ಳುವುದರ ಮಹತ್ವವನ್ನು ಒತ್ತಿ ಹೇಳಿದರು. ತೊಂದರೆಗಳು ಎದುರಾದಾಗ ಸ್ಥಳೀಯ ಕೌನ್ಸಿಲರ್‌ಗಳು ಮತ್ತು ಮೇಯರ್ ಅವರನ್ನು ಸಂಪರ್ಕಿಸುವಂತೆ ಸಮುದಾಯಕ್ಕೆ ಸಲಹೆ ನೀಡಿದರು.
ಖ್ಯಾತ ರೋಯಿಂಗ್ ಸಾಧಕಿ ಅನನ್ಯಾ ಪ್ರಸಾದ್ ಅವರು ತಮ್ಮ ೩,೦೦೦ ಮೈಲಿಗಳ ‘ಗ್ರೇಟ್ ಅಟ್ಲಾಂಟಿಕ್ ರೋಯಿಂಗ್ ಚಾಲೆಂಜ್’ ಅನುಭವವನ್ನು ಹಂಚಿಕೊಂಡರು. ಬೃಹತ್ ಅಲೆಗಳು, ದೋಣಿಯ ವೈಫಲ್ಯಗಳು, ಕಷ್ಟಕರ ಸರಿಪಡಿಸುವಿಕೆಗಳು ಮತ್ತು ಸಮುದ್ರದಲ್ಲಿ ಕಂಡ ಅದ್ಭುತ ಸೌಂದರ್ಯವನ್ನು ವಿವರಿಸಿದರು. ಮಾನವನ ಮಾನಸಿಕ ಶಕ್ತಿ ಅಗಾಧವಾದದ್ದು, ನಾವು ಸಾಮಾನ್ಯವಾಗಿ ನಂಬುವುದಕ್ಕಿಂತ ಹೆಚ್ಚಿನದನ್ನು ಸಾಧಿಸುವ ಸಾಮರ್ಥ್ಯ ನಮಗಿದೆ ಎಂದರು.
ಈ ಇಡೀ ಕಾರ್ಯಕ್ರಮವನ್ನು ಸಾಲುಮರದ ತಿಮ್ಮಕ್ಕನವರಿಗೆ ಅರ್ಪಣೆ ಮಾಡಲಾಯಿತು. “ಸಾಲುಮರದ ತಿಮ್ಮಕ್ಕ ನಮಗೆ ಹೇಳುವ ಅತ್ಯಂತ ದೊಡ್ಡ ಪಾಠ ಎಂದರೆ— ನಮ್ಮ ಬಳಿ ಇಲ್ಲದದ್ದನ್ನು ಕುರಿತು ದೂರು ಬಿಟ್ಟು; ಬದಲಿಗೆ, ನಮ್ಮ ಬಳಿ ಇರುವ ಸಂಪನ್ಮೂಲಗಳಿಂದ ಸೇವೆ ಮಾಡಿ. ಹಣ ಇಲ್ಲದೆ, ಸೌಲಭ್ಯ ಇಲ್ಲದೆ,ಒಂದು ಬಕೆಟ್ ನೀರಿನಿಂದ 384 ಗಿಡಗಳನ್ನು ಬೆಳೆಸಿದ ಅವರು, ‘ಸಾಧನೆಗೆ ಸಂಪತ್ತು ಬೇಡ, ಮನಸ್ಸು ಸಾಕು’ ಎಂದು ಜಗತ್ತಿಗೆ ತೋರಿಸಿದರು. ನಮ್ಮ ಸ್ವಯಂಸೇವಕರು ಕೂಡಾ ಅದೇ ಮಾರ್ಗ. ತಿಮ್ಮಕ್ಕ ಮರಗಳನ್ನು ಬೆಳೆಸಿದಂತೆ, ನಮ್ಮ ಸ್ವಯಂಸೇವಕರು ನಮ್ಮ ಸಮುದಾಯದ ಭವಿಷ್ಯವನ್ನು ಬೆಳೆಸುತ್ತಿದ್ದಾರೆ,” ಎಂದು ಸ್ವಯಂಸೇವಕರ ಶ್ರಮವನ್ನು ಶ್ಲಾಘಿಸಲಾಯಿತು. ಮೇಯರ್ ರಗ್ಗಿ ಸಿಂಗ್ ಮತ್ತು ಚೇರ್ಮನ್ ನವೀನ್ ಟ್ಯಾಂಗ್ರಿ ಅವರು ತಮ್ಮ ಭಾರತೀಯ ಬೇರುಗಳನ್ನು ಎಂದಿಗೂ ಮರೆಯಲಾಗುವುದಿಲ್ಲ ಎಂದು ಹೇಳಿ, ಸ್ವಯಂಸೇವಕರ ಕಾರ್ಯವನ್ನು ಮೆಚ್ಚಿಕೊಂಡರು.
ಈ ಬಾರಿಯ ರಾಜ್ಯೋತ್ಸವದ ಪ್ರಮುಖ ಆಕರ್ಷಣೆ ಎಂದರೆ “ಜ್ಞಾನ ಪ್ರಸಾರ”. ಕೇವಲ ಮನರಂಜನೆಗೆ ಸೀಮಿತವಾಗದೆ, ಕಾರ್ಯಕ್ರಮವು ಕನ್ನಡ ಸಾಹಿತ್ಯದ ಕಂಪನ್ನು ಪಸರಿಸಿತು. ಕಾರ್ಯಕ್ರಮದ ನಿರೂಪಕರು ಪ್ರೇಕ್ಷಕರೊಂದಿಗೆ ನಿರಂತರ ಸಂವಾದ ನಡೆಸಿದರು. ಕನ್ನಡದ ಮೊದಲಶಾಸನ (ಹಲ್ಮಿಡಿ), ಮೊದಲ ಕವಿ (ಪಂಪ), ಜ್ಞಾನಪೀಠ ಪ್ರಶಸ್ತಿ ವಿಜೇತರುಮತ್ತು ಜನಪದ ಸಾಹಿತ್ಯದ ಕುರಿತು ರೋಚಕ ಪ್ರಶ್ನೆಗಳನ್ನು ಕೇಳುವಮೂಲಕ ಸಭಿಕರಲ್ಲಿ ಸಾಹಿತ್ಯಾಭಿರುಚಿಯನ್ನು ಕೆರಳಿಸಿದರು.
ಸಂಘಟಕರಲ್ಲೊಬ್ಬರಾದ ವಿನಯ್ ವಸ್ತ್ರದ್ ಅವರು, ಒಂದು ದಶಕ ಯುಕೆಯಲ್ಲಿ ಕಳೆದು ತಾಯ್ನಾಡಿಗೆ ಮರಳುವ ಸಮಯದಲ್ಲಿ, ತಾವುಭಾರತದಿಂದ ತಂದಿದ್ದ ನೂರಾರು ಮೌಲ್ಯಯುತ ಕನ್ನಡ ಪುಸ್ತಕಗಳನ್ನುಮರಳಿ ಒಯ್ಯುವ ಬದಲು, ಯುಕೆಯಲ್ಲಿರುವ ಕನ್ನಡಿಗರಿಗೆ ಉಡುಗೊರೆಯಾಗಿ ನೀಡುವ ಮೂಲಕ ಮಾದರಿಯಾದರು.
ದಿನವಿಡೀ ತಂಡದ ನೃತ್ಯಗಳು, ಕನ್ನಡ ಗೀತೆಗಳು, ಶಾಸ್ತ್ರೀಯ ಸಂಗೀತ, ಜಾನಪದ ಹಾಡು ಮತ್ತು ನೃತ್ಯಗಳು ನಡೆದು ಸಾಂಸ್ಕೃತಿಕ ರಸದೌತಣ ನೀಡಿದವು. ವಿಶೇಷವಾಗಿ ಮಕ್ಕಳು ಪುಣ್ಯಕೋಟಿ ಕಥೆಯ ನೃತ್ಯ ಪ್ರದರ್ಶನ ಮಾಡಿ ಎಲ್ಲರ ಮನಗೆದ್ದರು. ಸತ್ಯ, ಪ್ರಾಮಾಣಿಕತೆ ಮತ್ತು ನೈತಿಕ ಮೌಲ್ಯಗಳನ್ನು ಬೋಧಿಸುವ ಈ ಕನ್ನಡದ ಜಾನಪದ ಕಥೆಯು ಯುವ ಪೀಳಿಗೆಗೆ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸಿತು. ಈ ವರ್ಷ, ಕಾರ್ಯಕ್ರಮದ ವೇದಿಕೆಯ ಮೇಲೆ ನೀರಪಣೆಯಲ್ಲಿ ಕನ್ನಡ ಮತ್ತು ಕರ್ನಾಟಕದ ಬಗ್ಗೆ ಪ್ರಶ್ನೆಗಳನ್ನು ಕೇಳಿ, ಸರಿಯಾದ ಉತ್ತರ ನೀಡಿದವರಿಗೆ ಕನ್ನಡದ ಪುಸ್ತಕಗಳನ್ನು ಬಹುಮಾನವಾಗಿ ನೀಡಿ, ಓದುವ ಆಸಕ್ತಿಯನ್ನು ಹೆಚ್ಚಿಸಲಾಯಿತು.GI ಟ್ಯಾಗ್ ಆಧಾರಿತ ಶೈಕ್ಷಣಿಕ ಫ್ಯಾಷನ್ ಶೋ ಸಹ ಎಲ್ಲರ ಗಮನ ಸೆಳೆಯಿತು. ಸ್ವಯಂಸೇವಕರು ಮತ್ತು ಕುಟುಂಬಗಳು ಕರ್ನಾಟಕದ ಭೌಗೋಳಿಕ ಗುರುತು ಪಡೆದ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ, ಕರ್ನಾಟಕದ ಶ್ರೀಮಂತ ಪರಂಪರೆಯನ್ನು ಪ್ರದರ್ಶಿಸಿದರು.
ಕರ್ನಾಟಕದ ವಿವಿಧ ಬಗೆಯ ಆಹಾರ ಮತ್ತು ಜವಳಿ ವ್ಯಾಪಾರ ಮಳಿಗೆಗಳು (ಸ್ಟಾಲ್‌ಗಳು) ಇದ್ದು, ಇದು ಕನ್ನಡಿಗರಿಗೆ ಮತ್ತು ಸ್ಥಳೀಯರಿಗೆ ಕರ್ನಾಟಕದ ಸಂಸ್ಕೃತಿಯ ಪರಿಚಯವನ್ನು ಮಾಡಿಕೊಟ್ಟಿತು. ಸಂಜೆಯ ಕಾರ್ಯಕ್ರಮದಲ್ಲಿ ವಿಜಯೇಂದ್ರ ಮತ್ತು ಶ್ರೀದೇವಿ ಅವರು ೧೯೫೦ರ ದಶಕದಿಂದ ಇಲ್ಲಿಯವರೆಗಿನ ಕನ್ನಡ ಹಿಟ್ ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ಮೋಡಿ ಮಾಡಿದರು. ಹಿರಿಯರು ಮತ್ತು ಕಿರಿಯರು ಎಲ್ಲರೂ ಕುರ್ಚಿಗಳಿಂದ ಎದ್ದು ಕುಣಿದಾಡಿದರು. ಕರ್ನಾಟಕದ ಸಾಂಪ್ರದಾಯಿಕ ಖಾದ್ಯಗಳನ್ನು ಸವಿಯುತ್ತ, ಮಕ್ಕಳು ಮತ್ತು ಹಿರಿಯರು ಸಮಾನವಾಗಿ ಭಾಗವಹಿಸಿದರು.
ಕಾರ್ಯಕ್ರಮವು ಕೊನೆಯಲ್ಲಿ, “ಭಾಷೆ ಎಂದರೆ ಬರಿ ಮಾತಲ್ಲ; ಅದು ನಮ್ಮ ಅಸ್ತಿತ್ವ, ನಮ್ಮ ಗುರುತು, ನಮ್ಮ ಪರಂಪರೆ. ಕನ್ನಡವನ್ನು ಕೇಳೋಣ, ಹೇಳೋಣ, ಕಲಿಯೋಣ, ಉಳಿಸೋಣ. By protecting, promoting and preserving our language and our rich culture! ಒಟ್ಟಾಗಿ ಇದ್ದರೆ ನಾವೇ ಶಕ್ತಿ, ಒಟ್ಟಾಗಿ ಇದ್ದರೆ ನಾವೇ ಬೆಳಕು,ನಮ್ಮವ್ವ ಕನ್ನಡತಿ ಅವಳವ್ವ ಜೈ ಭಾರತಿ!! ಜಯ ಭಾರತ ಜನನಿಯ ತನುಜಾತೆ! ಜಯ ಹೇ ಕರ್ನಾಟಕ ಮಾತೆ! ಒಟ್ಟಿನಲ್ಲಿಯೇ ಬಲವಿದೆ!” ಎಂಬ ಸಂದೇಶದೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಧೀರಜ್ ಗೋವಿಂದ
ಮಿಡ್ಲಾಂಡ್ಸ್ ಕನ್ನಡಿಗರು
ಯು.ಕೆ

