ಮೂಡಲಗಿ: ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಬೆಳಗಾವಿ ಜಿಲ್ಲೆಯಲ್ಲಿ ಪಿ.ಎಂ.ಜಿ.ಎಸ್. ವೈ-I, II, ಮತ್ತು III ಅಡಿಯಲ್ಲಿ ಸುಮಾರು 431.73 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಒಟ್ಟು 1306.14 ಕಿ.ಮೀ ರಸ್ತೆ ಮಂಜೂರಾಗಿದ್ದು ಅದರಲ್ಲಿ 1282.27 ಕಿ.ಮೀ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವ ಕಮಲೇಶ್ ಪಾಸ್ವಾನ್ ಅವರು ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದ್ದಾರೆ.
ನವದೆಹಲಿಯಲ್ಲಿ ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಬೆಳಗಾವಿ ಜಿಲ್ಲೆಯಲ್ಲಿ ಮಂಜೂರಾದ ಒಟ್ಟು ರಸ್ತೆಗಳ ಉದ್ದ ಮತ್ತು ಈ ಯೋಜನೆಗಳಿಗೆ ನೀಡಿದ ಒಟ್ಟು ಹಣಕಾಸು ವೆಚ್ಚದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಬೆಳಗಾವಿ ಜಿಲ್ಲೆಯಲ್ಲಿ ಪಿ.ಎಂ.ಜಿ.ಎಸ್. ವೈ-I ಯೋಜನೆಯಡಿ 153.61 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಒಟ್ಟು 822.41 ಕಿ.ಮೀ ರಸ್ತೆ ಮಂಜೂರಾಗಿದ್ದು ಅದರಲ್ಲಿ 822.21 ಕಿ.ಮೀ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಪಿ.ಎಂ.ಜಿ.ಎಸ್. ವೈ-II ಯೋಜನೆಯಡಿ 58.92 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಒಟ್ಟು 123.41 ಕಿ.ಮೀ ರಸ್ತೆ ಮಂಜೂರಾಗಿದ್ದು ಅದರಲ್ಲಿ 120.54 ಕಿ.ಮೀ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಪಿ.ಎಂ.ಜಿ.ಎಸ್.ವೈ-III ಯೋಜನೆಯಡಿ 219.20 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಒಟ್ಟು 360.32 ಕಿ.ಮೀ ರಸ್ತೆ ಮಂಜೂರಾಗಿದ್ದು ಅದರಲ್ಲಿ 339.52 ಕಿ.ಮೀ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ-III ರನ್ನು 2019 ರಲ್ಲಿ ಪ್ರಾರಂಭಿಸಲಾಗಿದೆ. ಇದು ಗ್ರಾಮೀಣ ಕೃಷಿ ಮಾರುಕಟ್ಟೆಗಳು, ಶಾಲೆಗಳು ಮತ್ತು ಆಸ್ಪತ್ರೆಗಳಿಗೆ ವಸತಿಗಳನ್ನು ಸಂಪರ್ಕಿಸುವ ಮೂಲಕ ಅಸ್ತಿತ್ವದಲ್ಲಿರುವ ಗ್ರಾಮೀಣ ರಸ್ತೆ ಜಾಲವನ್ನು ಮತ್ತಷ್ಟು ಸುಧಾರಿಸಲು ಈ ಯೋಜನೆಯಿಂದ ಅನುಕೂಲಬಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ ಒಟ್ಟು 583 ವಸತಿ ಪ್ರದೇಶಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಪಿ.ಎಂ.ಜಿ.ಎಸ್. ವೈ-I ಮತ್ತು II ಅಡಿಯಲ್ಲಿ 170 ರಸ್ತೆಗಳು 942.75 ಕಿ.ಮೀ ನಿರ್ಮಾಣವಾಗಿದ್ದು, ಅವುಗಳ ಐದು ವರ್ಷಗಳ ವಾರ್ಷಿಕ ನಿರ್ವಹಣಾ ಅವಧಿ ಮತ್ತು ಆರನೇ ವರ್ಷದ ನವೀಕರಣ ಯಶಸ್ವಿಯಾಗಿ ಪೂರ್ಣಗೊಂಡ ನಂತರ, ಹೆಚ್ಚಿನ ನಿರ್ವಹಣೆಗಾಗಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಗೆ ಹಸ್ತಾಂತರಿಸಲಾಗಿದೆ. “ಗ್ರಾಮೀಣ ರಸ್ತೆಗಳು” ರಾಜ್ಯ ವಿಷಯವಾಗಿದೆ ಮತ್ತು ಪಿ.ಎಂ.ಜಿ.ಎಸ್.ವೈ ಮಾರ್ಗಸೂಚಿಗಳ ಪ್ರಕಾರ, ಕಾರ್ಯಕ್ರಮದ ಅಡಿಯಲ್ಲಿ ನಿರ್ಮಿಸಲಾದ ರಸ್ತೆಗಳ ನಿರ್ವಹಣೆ ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆಂದು ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.

