ಮಾನವ ಹಕ್ಕುಗಳು ಪ್ರತಿಯೊಬ್ಬರಿಗೂ ಸಲ್ಲುವ ಮೂಲಭೂತ ಹಕ್ಕುಗಳು; ನ್ಯಾಯಾಧೀಶೆ ಪಂಕಜ ಕೊಣ್ಣೂರ

Must Read

ಸಿಂದಗಿ – ಪ್ರತಿಯೊಬ್ಬರಲ್ಲೂ ಅಡಗಿರುವ ಸಾಮರ್ಥ್ಯವನ್ನು ಗುರುತಿಸಿ ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯ. ಮಾನವ ಹಕ್ಕುಗಳ ಆಚರಣೆ ಕಾರ್ಯಕ್ರಮಗಳು ಕೇವಲ ಒಂದು ದಿನದ ಕಾರ್ಯಕ್ರಮವಲ್ಲ. ಅವು ಸಮಾಜ ಬದಲಾವಣೆಗೆ ದಾರಿ ಹೇಳುವ ಚಳವಳಿಗಳು ಎಂದು ಸಿವಿಲ್ ನ್ಯಾಯಾಧೀಶೆ ಪಂಕಜ ಕೊಣ್ಣೂರ ಹೇಳಿದರು.

ತಾಲೂಕ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಸಿಂದಗಿ ಮತ್ತು ಸಂಗಮ ಸಂಸ್ಥೆ ಸಿಂದಗಿ ಇವರ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಅಂಗವಿಕಲರ ದಿನಾಚರಣೆ ಹಾಗೂ ವಿಶ್ವ ಮಾನವ ಹಕ್ಕುಗಳ ದಿನಾಚರಣೆ- ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಾನವ ಹಕ್ಕುಗಳು ಪ್ರತಿಯೊಬ್ಬರಿಗೂ ಸಲ್ಲುವ ಮೂಲಭೂತ ಹಕ್ಕುಗಳು. ಅಂಗವಿಕಲರು ಅಥವಾ ವಿಶೇಷ ಚೇತನರು ಸಮಾಜದ ಪ್ರತ್ಯೇಕ ಭಾಗವಲ್ಲ ಅವರು ನಮ್ಮದೇ ಕುಟುಂಬದ, ಸಮಾಜದ ಅನಿವಾರ್ಯ ಅಂಗ. ಎಂದರು.

ವಕೀಲರ ಸಂಘದ ಕಾರ್ಯದರ್ಶಿ ಸಿ.ಎಂ. ಸೂರ್ಯವಂಶಿ ಮಾತನಾಡಿ, ವಿಶೇಷ ಚೇತನರು ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಅವಕಾಶ, ಪ್ರೋತ್ಸಾಹ ಮತ್ತು ಸಮಾನ ಹಕ್ಕುಗಳ ರಕ್ಷಣೆ ಅತ್ಯವಶ್ಯಕ. ಶಿಕ್ಷಣ, ಉದ್ಯೋಗ, ಆರೋಗ್ಯ ಮತ್ತು ಸಾಮಾಜಿಕ ರಕ್ಷಣೆಯ ಹಕ್ಕುಗಳು ಅವರಿಗೆ ಸುಲಭವಾಗಿ ಲಭ್ಯವಾಗುವಂತೆ ಕಾನೂನು ಸೇವಾ ಸಂಸ್ಥೆಗಳು ಮುಂದಾಗುತ್ತಿವೆ. ಸಮಾಜದ ಪ್ರತಿಯೊಬ್ಬರೂ ವಿಶೇಷ ಚೇತನರನ್ನು ಸಮಾನತೆಯಿಂದ ನೋಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದರು.

ವಕೀಲ ವಿನಾಯಕ ಬಡಿಗೇರ ಮಾತನಾಡಿ, ಮಾನವ ಹಕ್ಕುಗಳ ಕುರಿತು ಉಪನ್ಯಾಸ ನೀಡಿ, ಮಾನವ ಹಕ್ಕುಗಳು ಸಂವಿಧಾನದತ್ತ ಮತ್ತು ಮಾನವೀಯತೆಯ ಹೃದಯ. ಪ್ರತಿಯೊಬ್ಬರೂ ಭಯವಿಲ್ಲದೆ, ಬೇಧ-ಭಾವವಿಲ್ಲದೆ, ಸ್ವಾತಂತ್ರ‍್ಯದಿಂದ ಬದುಕುವ ಹಕ್ಕು ಹೊಂದಿದ್ದಾರೆ. ಅಂಗವಿಕಲರನ್ನು ಕರುಣೆ ಪ್ರಜ್ಞೆಯಿಂದ ನೋಡಬಾರದು ಗೌರವದಿಂದ ವರ್ತಿಸಬೇಕು. ಅವರಿಗೆ ಹಕ್ಕುಗಳನ್ನು ನೀಡುವುದು ದಯೆ ಅಲ್ಲ-ಅದು ನ್ಯಾಯ ಎಂದು ಹೇಳಿದರು.

ಸಂಗಮ ಸಂಸ್ಥೆಯ ಸಹನಿರ್ದೇಶಕಿ ಸಿಸ್ಟರ್ ಸಿಂಥಿಯಾ ಮಾತನಾಡಿ, ಸಮಾಜದ ದುರ್ಬಲ ಮತ್ತು ವಿಶೇಷ ಚೇತನರಿಗೆ ಕಾನೂನು ಅರಿವು ಪರಿಚಯಿಸುವುದು ಅತ್ಯಂತ ಅಗತ್ಯ. ಅರಿವು ಬಂದಾಗಲೇ ಹಕ್ಕುಗಳನ್ನು ಬಳಸುವ ಧೈರ್ಯ ಬರುವುದು ಎಂದು ತಿಳಿಸಿದರು.

ನಿರ್ದೇಶಕ ಫಾದರ್ ಸಂತೋಷ ಮಾತನಾಡಿ, “ಜ್ಞಾನವೇ ಶಕ್ತಿ. ತಮಗೆ ಲಭ್ಯವಿರುವ ಮಾನವ ಹಕ್ಕುಗಳು, ಸರ್ಕಾರದ ಸೌಲಭ್ಯಗಳು ಮತ್ತು ಕಾನೂನು ರಕ್ಷಣೆಯ ಬಗ್ಗೆ ತಿಳಿದುಕೊಂಡರೆ ಮಾತ್ರ ವ್ಯಕ್ತಿತನ್ನ ಬದುಕಿನಗುಣಮಟ್ಟವನ್ನು ಸುಧಾರಿಸಿಕೊಳ್ಳಬಹುದು. ಅನ್ಯಾಯ, ಹಿಂಸೆ, ಶೋಷಣೆ ಎದುರಾದಾಗ ಮೌನ ವಾಗಬೇಡಿ. ಹಕ್ಕುಗಳಿಗಾಗಿ ಧೈರ್ಯವಾಗಿ ಹೋರಾಡಿ, ಕಾನೂನು ನೆರವನ್ನು ಪಡೆಯಿರಿ ಎಂದು ಪ್ರೇರಣೆ ನೀಡಿದರು.

ವಕೀಲ ಪಿ.ವಿ. ದೇಶಪಾಂಡೆ ಉಪಸ್ತಿತರಿದ್ದರು.
ವಿವಿಧ ಗ್ರಾಮಗಳಿಂದ ವಿಶೇಷ ಚೇತನರು, ಮಹಿಳಾ ಸಂಘಗಳು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ವಿಜಯ ಭಂಟನೂರ ನಿರೂಪಿಸಿದರು. ಬಸವರಾಜ ಬಿಸನಾಳ ಸ್ವಾಗತಿಸಿದರು, ಉಮೇಶ ದೊಡ್ಡಮನಿ ವಂದಿಸಿದರು.

LEAVE A REPLY

Please enter your comment!
Please enter your name here

Latest News

ಗೌರವ -ಘನತೆಯೇ ಮಾನವ ಹಕ್ಕಿನ ಮೂಲ: ಕರೆಪ್ಪ ಬೆಳ್ಳಿ

ಸಿಂದಗಿ: ಮನುಷ್ಯನಿಗೆ ಮೊದಲು ಗೌರವ ಮತ್ತು ಘನತೆ ಇರಬೇಕು. ಜಾತಿ—ಧರ್ಮ ಯಾವ ಬೇಧ ಭಾವವೂ ಇಲ್ಲದೆ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳಿವೆ. ನಾವು ಎಲ್ಲರೂ ಮಾನವೀಯ ಮೌಲ್ಯಗಳನ್ನು...

More Articles Like This

error: Content is protected !!
Join WhatsApp Group