ಕಷ್ಟಗಳನ್ನೇ ಮೆಟ್ಟಿಲಾಗಿಸಿಕೊಂಡು ಸಾಹಿತ್ಯದ ಶಿಖರವೇರಿದ ಶಿಕ್ಷಕ ನಾಗೇಶ್ ಜೆ. ನಾಯಕ

Must Read

ಬದುಕಿನ ಕಷ್ಟಗಳನ್ನೇ ಮೆಟ್ಟಿಲಾಗಿಸಿಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ಮಿಂಚುತ್ತಿರುವ ಪ್ರತಿಭೆ ನಾಗೇಶ್ ಜೆ. ನಾಯಕ. ಶಿಕ್ಷಕರಾಗಿ ಸೇವೆ ಸಲ್ಲಿಸುವುದರೊಂದಿಗೆ ಕಾವ್ಯ, ಗಜಲ್, ಕಥೆ, ಅಂಕಣ ಬರಹ, ವ್ಯಕ್ತಿ ಚಿತ್ರಣ, ವಿಮರ್ಶಾ ಬರಹಗಳನ್ನು ಬರೆಯುತ್ತಲೇ ಸಾಹಿತ್ಯವನ್ನು ಪ್ರವೃತ್ತಿಯನ್ನಾಗಿಸಿಕೊಂಡಿದ್ದಾರೆ.

ಮೂಲತಃ ಸವದತ್ತಿಯವರಾಗಿದ್ದರೂ ಬೈಲಹೊಂಗಲ ತಾಲ್ಲೂಕಿನ ಉಡಿಕೇರಿಯ ರಾಮಲಿಂಗೇಶ್ವರ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕಳೆದ ಇಪ್ಪತ್ಮೂರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿ ಮೂಡಿಸುವುದರೊಂದಿಗೆ ಅವರು ಕವಿತೆ, ನಾಟಕ, ಕತೆಗಳ ಬರವಣಿಗೆಯಲ್ಲಿ ತೊಡಗುವಂತೆ ಪ್ರೇರೇಪಣೆ ನೀಡುತ್ತಿದ್ದಾರೆ.

ಸವದತ್ತಿಯಲ್ಲಿ ಹುಟ್ಟಿದ ಇವರು, ಪದವಿ ಕಲಿಯುತ್ತಿದ್ದಾಗ ಕುಟುಂಬದ ಆರ್ಥಿಕ ತೊಂದರೆಯಿಂದ ಶಿಕ್ಷಣವನ್ನು ಮೊಟಕುಗೊಳಿಸಿ ದೂರದ ಕೊಲ್ಲಾಪುರದ ಹತ್ತಿಗಿರಣಿಗಳಲ್ಲಿ ಕೆಲಸ ಮಾಡಿದರು. ಕಟ್ಟಡದ ಕೆಲಸಗಳಲ್ಲಿ ಕಾರ್ಮಿಕನಾಗಿ ದುಡಿದರು. ಪಾನ್‌ಶಾಪ್ ಅಂಗಡಿ ನಡೆಸಿ, ಚುರುಮುರಿ ಪಾಕೀಟ್ ಮಾರಾಟ ಮಾಡಿ ಆರ್ಥಿಕ ಸಂಕಷ್ಟದಿಂದ ಹೊರಬರಲು ಯತ್ನಿಸಿದರು. ಅಕ್ಕ-ಮಾವನವರ ಸಹಾಯದಿಂದ ಪದವಿ ಪೂರ್ಣಗೊಳಿಸಿ, ತುಮಕೂರಿನ ಸಿದ್ದಾರ್ಥ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಎಡ್. ಪದವಿ ಮುಗಿಸಿ ಬೆಳಗಾವಿಯ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಶ್ರೀ ರಾಮಲಿಂಗೇಶ್ವರ ಪ್ರೌಢಶಾಲೆ ಉಡಿಕೇರಿಯಲ್ಲಿ ಸಮಾಜ ವಿಜ್ಞಾನ ಬೋಧಿಸುವ ಶಿಕ್ಷಕರಾಗಿದ್ದಾರೆ.

ಬದುಕನ್ನು ಕಟ್ಟಿಕೊಳ್ಳಲು ನಾನು ಅನುಭವಿಸಿದ ಕಷ್ಟಗಳು ಸಾಹಿತ್ಯ ರಚನೆಗೆ ಸ್ಫೂರ್ತಿಯಾಗಿವೆ ಎನ್ನುವ ನಾಗೇಶ, ಕಷ್ಟಗಳು ನಮಗೆ ದಟ್ಟ ಅನುಭವಗಳನ್ನು ಕಟ್ಟಿ ಕೊಡುತ್ತವೆ, ಸಾಧನೆಗೆ ಮೆಟ್ಟಿಲುಗಳಾಗುತ್ತವೆ. ದುಃಖಕ್ಕೆ ಯಾವತ್ತೂ ಬೆನ್ನು ಕೊಡಬೇಡಿ ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಾರೆ. ಇದುವರೆಗೆ ಅವರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕಥೆ, ಕವಿತೆ, ಗಜಲ್, ಹನಿಗವಿತೆ, ಅಂಕಣ ಬರಹ, ಜೀವನ ಚರಿತ್ರೆ, ವಿಮರ್ಶಾ ಸಂಕಲನ, ವ್ಯಕ್ತಿ ಚಿತ್ರಣ ಸೇರಿದಂತೆ ಇಪ್ಪತ್ತೇಳು ಕೃತಿಗಳನ್ನು ರಚಿಸಿ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಇವರ ಪ್ರೇರಣೆಯಿಂದ ಅನೇಕ ವಿದ್ಯಾರ್ಥಿಗಳು ಕಾವ್ಯರಚನೆ ಮಾಡುತ್ತಿರುವುದಲ್ಲದೆ ಸಂಕಲನಗಳನ್ನು ಪ್ರಕಟಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿ ಬೆಳೆಸುವುದರೊಂದಿಗೆ ಅವರಿಂದ ಆಕಾಶವಾಣಿಯಲ್ಲಿ ಕವಿತೆಯ ಓದು, ನಾಟಕ ರಚಿಸಿ ಅಭಿನಯ ಕೂಡ ಮಾಡಿಸಿದ್ದಾರೆ.

ನಾಡಿನ ಎಲ್ಲ ಪ್ರಮುಖ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ, ವಿಶೇಷಾಂಕಗಳಲ್ಲಿ ಕವಿತೆ, ಗಜಲ್, ಅಂಕಣ, ಕಥೆ, ಬರಹಗಳು ಪ್ರಕಟಿತವಾಗಿವೆ. ಶಾಲೆ-ಕಾಲೇಜು, ಸಾರ್ವಜನಿಕ ಸಮಾರಂಭ ಒಳಗೊಂಡಂತೆ ರಾಜ್ಯದ ಮುಂತಾದ ಕಡೆಗಳಲ್ಲಿ ವ್ಯಕ್ತಿತ್ವ ವಿಕಸನ, ಸಾಹಿತ್ಯಿಕ ಉಪನ್ಯಾಸಗಳನ್ನು ನೀಡುತ್ತ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಶಿಕ್ಷಕರೆನಿಸಿದ್ದಾರೆ. ಕರೋನಾ ಕಾಲದ ದುರಿತ ಸಂದರ್ಭದಲ್ಲಿ ಫೇಸ್‌ಬುಕ್ ಲೈವ್‌ನಲ್ಲಿ ಜನಪದ ಉಪನ್ಯಾಸ, ಗಜಲ್, ಕಾವ್ಯದ ಓದು, ಹಲವಾರು ಸೃಜನಶೀಲ ಕಾರ್ಯಕ್ರಮಗಳನ್ನು ನೀಡುತ್ತಾ ವೀಕ್ಷಕರ ಮೆಚ್ಚುಗೆ ಗಳಿಸಿದ್ದಾರೆ.

ತಾಲ್ಲೂಕು, ಜಿಲ್ಲಾಮಟ್ಟದ ೬ನೇ ಸಾಹಿತ್ಯ ಸಮ್ಮೇಳನ, ಗದಗನ ೭೬ ಮತ್ತು ಬೆಂಗಳೂರಿನ ೭೭ ಹಾಗೂ ಮಂಡ್ಯದ ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ, ಮೂಡುಬಿದರೆಯಲ್ಲಿ ನಡೆದ ೯ ನೇ ಆಳ್ವಾಸ್ ನುಡಿಸಿರಿ ಸಮ್ಮೇಳನದ ಕವಿಸಮಯ, ಧಾರವಾಡ, ಮೈಸೂರು ಹಾಗೂ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ, ರನ್ನ ಉತ್ಸವ, ಕಿತ್ತೂರು ಉತ್ಸವ, ಹಂಪಿ ಉತ್ಸವ, ಇಟಗಿ ಉತ್ಸವ, ಬೀದರನಲ್ಲಿ ನಡೆದ ಜನಪರ ಉತ್ಸವ, ಮೈಸೂರು ದಸರಾ ಉತ್ಸವ, ದೂರದರ್ಶನ ಚಂದನದಲ್ಲಿ ಅಂಬೇಡ್ಕರ್ ಜಯಂತಿಯ ಅಂಗವಾಗಿ ನಡೆದ ಕವಿಗೋಷ್ಠಿ ಹೀಗೆ ರಾಜ್ಯದ ವಿವಿಧ ಭಾಗಗಳಲ್ಲಿ ಕವಿತೆ ವಾಚಿಸಿ ತಮ್ಮ ಕಾವ್ಯ ಪ್ರತಿಭೆಯನ್ನು ಮೆರೆದಿದ್ದಾರೆ.

ಸಂಚಯ ಕಾವ್ಯ ಬಹುಮಾನ, ಸಂಕ್ರಮಣ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಹಲವಾರು ಸಂಘಟನೆಗಳು ಏರ್ಪಡಿಸಿದ ಕಾವ್ಯ, ಕಥಾ ಸ್ಪರ್ಧೆಯಲ್ಲಿ ಬಹುಮಾನಗಳನ್ನು ಪಡೆದಿದ್ದಾರೆ. ‘ಭರವಸೆಗಳ ಬೆನ್ನೇರಿ’ ಕವನ ಸಂಕಲನಕ್ಕೆ ಆಜೂರು ಪುಸ್ತಕ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ‘ರತ್ನಾಕರ ವರ್ಣಿ ಮುದ್ದಣ’ ದತ್ತಿ ಪ್ರಶಸ್ತಿ, ಎಸ್.ಡಿ. ಇಂಚಲ ಕಾವ್ಯ ಪ್ರಶಸ್ತಿ, ಅಡ್ವೖಸರ್ ಪ್ರಶಸ್ತಿ, ದಲಿತ ಸಾಹಿತ್ಯ ಪರಿಷತ್ತಿನ ಪುಸ್ತಕ ಪ್ರಶಸ್ತಿ, ‘ಪುಟ್ಟ ಪದ್ಯಗಳು’ ಹನಿಗವನ ಸಂಕಲನಕ್ಕೆ ರಾಜ್ಯ ಮಟ್ಟದ ತೃತೀಯ ಬಹುಮಾನ, ‘ಕವಿ ಸಮಯ’ ಸಂಕಲನಕ್ಕೆ ಗಂಗಾಧರ ಮಡಿವಾಳೇಶ್ವರ ತುರುಮರಿ ಪ್ರತಿಷ್ಠಾನದಿಂದ ರಾಜ್ಯಮಟ್ಟದ ಪ್ರಥಮ ಬಹುಮಾನ, ಸಾಲುದೀಪ ವಿಮರ್ಶಾ ಸಂಕಲನಕ್ಕೆ ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ, ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನ ಕೊಡಮಾಡುವ ‘ಸಿರಿಗನ್ನಡ ರಾಜ್ಯೋತ್ಸವ ಪ್ರಶಸ್ತಿ’, ಮನದ ಮಾತು ಸಂಕಲನಕ್ಕೆ ಸಿರಿಗನ್ನಡ ಪುಸ್ತಕ ಪ್ರಶಸ್ತಿ, ‘ಒಡಲ ಕಿಚ್ಚಿನ ಹಿಲಾಲು ಹಿಡಿದು’ ಸಂಕಲನಕ್ಕೆ ವೀರಶೈವ ಪ್ರತಿಷ್ಠಾನ ಪ್ರಶಸ್ತಿ, ‘ಗರೀಬನ ಜೋಳಿಗೆ’ ಗಜಲ್ ಸಂಕಲನಕ್ಕೆ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ಪ್ರಶಸ್ತಿ, ‘ಆತ್ಮ ಧ್ಯಾನದ ಬುತ್ತಿ’ ಗಜಲ್ ಸಂಕಲನಕ್ಕೆ ಗ್ರಾಮೀಣ ಸಾಹಿತ್ಯ ವೇದಿಕೆಯ ಬಹುಮಾನ, ‘ಮನುಷ್ಯರಿಲ್ಲದ ನೆಲ’ ಕವನ ಸಂಕಲನಕ್ಕೆ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ ಕೊಡಮಾಡುವ ಸಿರಿಗನ್ನಡ ಪುಸ್ತಕ ಪ್ರಶಸ್ತಿ, ರಾಜ್ಯಮಟ್ಟದ ಸೇಡಂ ಮುನ್ನೂರು ಪ್ರತಿಷ್ಠಾನ ನೀಡುವ ‘ಅಮ್ಮ’ ಪ್ರಶಸ್ತಿ, ಶಹಾಪೂರಿನ ಯಂಕೋಬ ದೊರೆ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನೀಡುವ ರಾಜ್ಯಮಟ್ಟದ ‘ಅಪ್ಪ’ ಪ್ರಶಸ್ತಿ, ಬೆಳ್ಳಿ ಸಂಭ್ರಮ ಗಜಲ್ ಕಾವ್ಯ ಪ್ರಶಸ್ತಿ ಇವರ ನಿರಂತರ ಸಾಹಿತ್ಯ ಕೃಷಿಗೆ ಸಂದಿರುವ ಗೌರವ ಪ್ರಶಸ್ತಿಗಳಾಗಿವೆ.

ದೂರದರ್ಶನ ಚಂದನವಾಹಿನಿಯ ‘ಬೆಳಗು’ ಹಾಗೂ ‘ಶುಭೋದಯ ಕರ್ನಾಟಕ’ ಕಾರ್ಯಕ್ರಮದಲ್ಲಿ ಇವರ ನೇರ ಸಂದರ್ಶನ ಪ್ರಸಾರವಾಗಿದೆ. ‘ಥಟ್‌ ಅಂತ ಹೇಳಿ’ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದಾರೆ. ಧಾರವಾಡ ಹಾಗೂ ಬೆಂಗಳೂರು ಆಕಾಶವಾಣಿಯಲ್ಲಿ ಇವರ ಕವನ, ಕಥೆ, ಚಿಂತನ, ಪುಸ್ತಕ ಪರಿಚಯ ಪ್ರಸಾರಗೊಂಡಿವೆ. ಕೆ.ಎಲ್.ಇ. ಕನಸು ‘ವೇಣುಧ್ವನಿ’ ಎಫ್.ಎಮ್. ನಲ್ಲಿ ಸಂದರ್ಶನ ಪ್ರಸಾರವಾಗಿದೆ. ಬೆಂಗಳೂರಿನ ಸಾಹಿತ್ಯಿಕ ವೆಬ್‌ಸೈಟ್ ಬುಕ್ ಬ್ರಹ್ಮ ದಲ್ಲಿ ಸಂದರ್ಶನ ಪ್ರಸಾರವಾಗಿದೆ.
ಸವದತ್ತಿಯಲ್ಲಿ ‘ಸಹೃದಯ ಸಾಹಿತ್ಯ ಪ್ರತಿಷ್ಠಾನ’ ಸ್ಥಾಪಿಸಿ, ಅದರ ಮೂಲಕ ಪ್ರತಿವರ್ಷವೂ ಕಾವ್ಯ ಮತ್ತು ಗಜಲ್ ವಿಭಾಗದಲ್ಲಿ ಪ್ರಕಟಿತ ಅತ್ಯುತ್ತಮ ಸಂಕಲನಕ್ಕೆ ‘ಸಹೃದಯ ಕಾವ್ಯ ಪ್ರಶಸ್ತಿ’ ನಗದು ಬಹುಮಾನದೊಂದಿಗೆ ನೀಡುತ್ತಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರಿಗೆ ‘ಸಹೃದಯ ಗೌರವ ಪ್ರಶಸ್ತಿ’ ಕೂಡ ನೀಡಿ ಗೌರವಿಸುತ್ತಿದ್ದಾರೆ. ರಾಜ್ಯಮಟ್ಟದ ಕವಿಗೋಷ್ಠಿ, ಯುವ ಬರಹಗಾರರ ಪುಸ್ತಕ ಪ್ರಕಟಣೆ ಮಾಡುವುದರ ಮೂಲಕ ಹಲವು ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸಿ ಸಾಹಿತ್ಯಿಕ ಬೆಳವಣಿಗೆಗೆ ಪ್ರೋತ್ಸಾಹಿಸುತ್ತಿದ್ದಾರೆ.

ಇವರ ಸಾಹಿತ್ಯ, ಶೈಕ್ಷಣಿಕ ಸೇವೆ ಗಮನಿಸಿ ಬೈಲಹೊಂಗಲ ತಾಲೂಕು ಶೈಕ್ಷಣಿಕ ಇಲಾಖೆ ‘ತಾಲೂಕಾ ಮಟ್ಟದ ಅತ್ಯುತ್ತಮ ಶಿಕ್ಷಕ’ ಪುರಸ್ಕಾರ ನೀಡಿ ಗೌರವಿಸಿದೆ. ರೋಟರಿ ಸಂಸ್ಥೆಯಿಂದ ‘ನೇಷನ್ ಬಿಲ್ಡರ್ ಅವಾರ್ಡ’ ಅಷ್ಟೇ ಅಲ್ಲದೆ ಇವರ ಸಾಹಿತ್ಯ ಸಾಧನೆಗೆ ಸವದತ್ತಿಯ ಸ್ವಾತಂತ್ರೋತ್ಸವ ಸಮಿತಿ, ತಾಲೂಕಾ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಪರಿಷತ್, ನಾಡಹಬ್ಬ ಉತ್ಸವ ಸಮಿತಿ, ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹಲವು ಕನ್ನಡಪರ ಸಂಘಟನೆಗಳು ಗೌರವಿಸಿ ಸನ್ಮಾನಿಸಿವೆ. ಇನ್ನಿಲ್ಲದ ಕಾವ್ಯ ಪ್ರೀತಿಯ ನಾಗೇಶ ಅವರು ತಮ್ಮ ಪ್ರತಿಭೆ ಬೆಳಕಿಗೆ ಬರಲು ನೆರವಾದ ಅಕ್ಕ-ಮಾವ, ಗೆಳೆಯರಾದ ಹಾಶೀಮ್, ಪ್ರಕಾಶ್ ಜಿ., ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಮೋಹನ ಪಾಟೀಲ ಮುಂತಾದವರನ್ನು ಕೃತಜ್ಞತೆಯಿಂದ ಸ್ಮರಿಸುತ್ತಾರೆ.

ಅಪಾರ ಓದುಗ ಅಭಿಮಾನಿಗಳನ್ನು ಹೊಂದಿದ ನಾಗೇಶ ನಾಯಕ, ಓದುಗರು ಸಾಹಿತ್ಯವನ್ನು ಇಷ್ಟಪಟ್ಟು ಮಾತನಾಡುವುದೇ ನಿಜವಾದ ಪ್ರಶಸ್ತಿ ಎನ್ನುತ್ತಾರೆ. ಕಲಿಕೆಯ ಜೊತೆಗೆ ಸಾಹಿತ್ಯ ಪ್ರೀತಿಯನ್ನು ಕಾಪಿಟ್ಟುಕೊಂಡು, ವಿದ್ಯಾರ್ಥಿಗಳಲ್ಲಿ ಬರವಣಿಗೆಯ ಅಭಿರುಚಿ ಮೂಡಿಸುತ್ತಿರುವ ಶಿಕ್ಷಕ ನಾಗೇಶ್ ಅವರು ಸಾಹಿತ್ಯ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಗೈಯ್ಯಲಿ ಎಂದು ಹಾರೖಸುವೆ.

ಡಾ. ವೈ. ಬಿ. ಕಡಕೋಳ
ಶಿಕ್ಷಕ ಸಾಹಿತಿಗಳು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್ ಮುನವಳ್ಳಿ 591117
ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ

LEAVE A REPLY

Please enter your comment!
Please enter your name here

Latest News

ಸ ರಾ ಸುಳಕೂಡೆ ಅವರ ಎರಡು ಸಂಪ್ರತಿ ವಚನಗಳು, ಸಂಭೃತ ವಚನಗಳು ಲೋಕಾಪ೯ಣೆ

ಬೆಳಗಾವಿ - ಚಿಂತನ ಚಾವಡಿ ವತಿಯಿಂದ ಗುರುವಾರ ದಿ. 18.12.2025 ರಂದು ಮುಂಜಾನೆ 11.30 ಕ್ಕೆ ಲಕ್ಷೀ ಪ್ರಿಂಟಸ೯ ಅಟೋನಗರ ಬೆಳಗಾವಿಯಲ್ಲಿ ಸ . ರಾ....

More Articles Like This

error: Content is protected !!
Join WhatsApp Group