ಲೇಖನ : ಇದ ಹಾನಿ ಮಾಡಲು ಬೇಡಿ

Must Read

ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ ಎಂದು ಹೇಳಿದ ಪುರಂದರದಾಸರು ಮಾನವ ಜನ್ಮದ ಮೌಲ್ಯವನ್ನು ಎತ್ತಿ ಹೇಳಿದ್ದಾರೆ. ಅಂದರೆ ಮನುಷ್ಯರಾಗಿ ಹುಟ್ಟುವದೇ ಒಂದು ದೊಡ್ಡ ವರ. ಇಂಥ ಮಾನವ ಜನ್ಮವನ್ನು ನಿರರ್ಥಕಗೊಳಿಸಿಕೊಳ್ಳದಿರಿ ಎನ್ನುವದು ಅವರ ಸಂದೇಶ. ಜಂತೂನಾಂ ನರಜನ್ಮ ದುರ್ಲಭಂ ಎಂದು ಶಂಕರಾಚಾರ್ಯರು ಹೇಳಿದ್ದು ಇದೇ ಅರ್ಥದಲ್ಲಿ ಮಾನವ ಜನ್ಮ ಸಿಗುವದು ದುರ್ಲಭ. ಸಿಕ್ಕಾಗ ಅದನ್ನು ಸಾರ್ಥಕಗೊಳಿಸಿಕೊಳ್ಳಿ ಎಂಬುದು ಅವರ ಸದ್ವಿಚಾರ. ಈ ಸದ್ವಿಚಾರವನ್ನು ಪೂರೈಸುವದು ಕಷ್ಟವೆನಿಸಿದರೂ ಸಾಧ್ಯವಾದುದು.

ಅತ್ಯಮೂಲ್ಯವಾದ ಮುತ್ತು ಸಿಗುವದು ಸಮುದ್ರದ ಆಳದಲ್ಲಿ. ದಡದಲ್ಲಿ ಸಿಗುವದು ಮರಳು. ಬೆಲೆಬಾಳುವ ಮುತ್ತಿನಂಥ ಮಾನವ ಜೀವನವನ್ನು ಸಾರ್ಥಕಗೊಳಿಸಿಕೊಳ್ಳುವ ಉತ್ಕಟೇಚ್ಛೆ ನಮ್ಮಲ್ಲಿರಬೇಕು. ವ್ಯರ್ಥ ಮಾಡಿಕೊಂಡರೆ ನಮ್ಮಂಥ ಮೂರ್ಖರು ಯಾರೂ ಇಲ್ಲ.

ಪೂಜಾರಿಯೊಬ್ಬ ದಾರಿಯಲ್ಲಿ ನಡೆದು ಹೋಗುತ್ತಿರುವಾಗ ಪಕ್ಕದ ಹೊಲದೆಡೆಗೆ ದೃಷ್ಟಿ ಹಾಯಿಸಿದ. ಎಲ್ಲಡೆಯೂ ಹಸಿರಿನಿಂದ ಕಂಗೊಳಿಸುವ ಗದ್ದೆಗಭಿಕ್ಷುಕನಿಗೆತ ಪೈರು ಪೂಜಾರಿಗೆ ಸಮೃದ್ಧ ಫಲವನ್ನು ಕಂಡು ಬಹಳ ಸಂತೋಷವಾಯಿತು. ಗದ್ದೆಯಲ್ಲಿ ನಿಂತ ರೈತನೆಡೆಗೆ ಸಾಗಿದ ಪೂಜಾರಿ, “ನೀನು ನಿಜಕ್ಕೂ ಪುಣ್ಯವಂತ ಆ ದೇವರು ನಿನಗೆ ಸುಂದರ ತೋಟವನ್ನು ಕರುಣಿಸಿದ್ದಾನೆ ಇದಕ್ಕೆ ನೀನು ಕೃತಜ್ಞವಾಗಿರಬೇಕು.” ಎಂದ ಅದಕ್ಕೆ ರೈತ ಸಮಾಧಾನದಿಂದ ನುಡಿದ. “ದೇವರು ನನಗೆ ಸುಂದರವಾದ ತೋಟವನ್ನು ವರದಾನವಾಗಿ ನೀಡಿದ್ದಾನೆ. ಅದಕ್ಕೆ ನಾನು ಕೃತಜ್ಞನಾಗಿದ್ದೇನೆ. ಆದರೆ ಈ ತೋಟ ಸಂಪೂರ್ಣ ದೇವರ ಉಸ್ತುವಾರಿಯಲ್ಲಿದ್ದಾಗ ನೋಡಬೇಕಿತ್ತು ಅಂದ. ಹೀಗೆ ಕೆಲವರು ದೇವರು ಕೊಟ್ಟ ದೊಡ್ಡ ಕೊಡುಗೆಯಾದ ಮಾನವ ಜೀವನವನ್ನು ಅವನೇ ಉದ್ಧರಿಸುತ್ತಾನೆಂದು ತಪ್ಪಾಗಿ ತಿಳಿದುಕೊಂಡು ಕಾಯುತ್ತಾರೆ.

ಇನ್ನು ಕೆಲವರು ಹಣವನ್ನು ಲಾಟರಿ ಜೂಜಾಟಗಳಲ್ಲಿ ತೊಡಗಿಸಿ ದಿಢೀರ ಶ್ರೀಮಂತನಾಗಿ ಮೆರೆಯಬೇಕೆಂದು ಜಾತಕ ಪಕ್ಷಿಯಂತೆ ಕಾಯುತ್ತ ತನ್ನ ಜೀವನದ ಜೊತೆಗೆ ತನ್ನ ನಂಬಿದವರ ಜೀವನವನ್ನು ಹಾಳುಗೆಡುವುತ್ತಾರೆ. ಇಂಥ ಮೂರ್ಖರ ಬಗ್ಗೆ ಏನು ಹೇಳುವುದು? ಅದರಂತೆ ಪುಣ್ಯ ಕರ್ಮಗಳನ್ನು ಮಾಡದಿರುವವನು ಮೂರ್ಖನೆ. ಆದ್ದರಿಂದ ಆಚಾರ್ಯ ಶಂಕರರು ಹೇಳಿದಂತೆ ನರ ಜನ್ಮ ಪಡೆಯುವದು ದುರ್ಲಭ ಎನ್ನುವದಾದರೆ ಅದನ್ನು ಸಾರ್ಥಕಗೊಳಿಸಿಕೊಳ್ಳುವದು ಇನ್ನೂ ಕಷ್ಟಕರ. ನಮ್ಮನ್ನು ನಾವರಿತರೆ ಕೊಂಚ ಸುಲಭವಾಗುವದು.

ರೈಲು ನಿಲ್ದಾಣದಲ್ಲಿ ಭಿಕ್ಷುಕನೊಬ್ಬ ಪಾತ್ರೆಯಲ್ಲಿ ಪೆನ್ಸಿಲ್‌ಗಳನ್ನಿಟ್ಟುಕೊಂಡು ಬೇಡುತ್ತಿದ್ದ ಠಾಕು ಠೀಕಾಗಿ ಡ್ರೆಸ್ ಮಾಡಿದ್ದ ವ್ಯಾಪಾರಿಯೊಬ್ಬ ಭಿಕ್ಷುಕನಿಗೆ ಹಣ ಹಾಕಿ ರೈಲನ್ನೇರಿ ಕುಳಿತುಕೊಂಡ ರೈಲಿನ ಬಾಗಿಲನ್ನು ಹಾಕುವದಕ್ಕೆ ಮುಂಚೆ ತಟ್ಟನೆ ಆತನಿಗೇನೋ ಹೊಳೆಯಿತು, ಆತ ಕೆಳಗಿಳಿದು ಹೋಗಿ ಭಿಕ್ಷುಕನ ಪಾತ್ರೆಯಲ್ಲಿದ್ದ ಪೆನ್ಸಿಲ್‌ನ್ನು ಆರಿಸಿಕೊಳ್ಳುತ್ತ ಹೇಳಿದ.“ಇವುಗಳಿಗೆ ಸರಿಯಾದ ಬೆಲೆಯನ್ನೇ ಇಟ್ಟಿರುವೆ. ನೀನು ಹೇಗೆ ವ್ಯಾಪಾರಿಯೋ ಹಾಗೆ ನಾನೂ ಸಹ.”ಅಷ್ಟು ಹೇಳಿ ವ್ಯಾಪಾರಿ ರೈಲಿನಲ್ಲಿ ಕುಳಿತ

ಆರು ತಿಂಗಳು ಕಳೆದ ನಂತರ ಭಿಕ್ಷುಕ ಸೂಟು ಟೈ ಧರಿಸಿ ವ್ಯಾಪಾರಿಯನ್ನು ಪಾರ್ಟಿಯಲ್ಲಿ ಭೇಟಿಯಾದ. ಸೋಜಿಗದಿಂದ ವ್ಯಾಪಾರಿ ಕೇಳಿದಾಗ ನಾನೀಗ ಭಿಕ್ಷುಕನಲ್ಲ ನಿಮ್ಮ ಹಾಗೆ ವ್ಯಾಪಾರಿ. ನೀವು ನನ್ನಲ್ಲಿ ಸ್ವಗೌರವವನ್ನು ಹುಟ್ಟಿಸಿದಿರಿ. ನಿಮ್ಮಿಂದ ನನ್ನಲ್ಲಿ ಮಹಾತ್ವಾಕಾಂಕ್ಷೆ ಹೆಚ್ಚಿದೆ. ನಾನೀಗ ನನ್ನ ಜೀವನವನ್ನು ಸಾರ್ಥಕಗೊಳಿಸಿಕೊಳ್ಳುತ್ತಿದ್ದೇನೆ ಎಂದ.

ಬಲು ದುರ್ಲಭವಾದ ಮಾನವ ಜೀವನ ನಮಗೆಲ್ಲ ದೊರೆತಿದೆ. ಒಳ್ಳೆಯ ಆಲೋಚನೆಗಳಿಂದ ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಭಿಕ್ಷುಕನ ಕತೆಯಲ್ಲಿ ಬರುವಂತ ಸಜ್ಜನರ ಸಂಗದಿಂದ ಉತ್ಕಟ ಇಚ್ಛೆಯು ಹುಟ್ಟುತ್ತದೆ. ದೇವರ ಅನುಗ್ರಹವಿಲ್ಲದೆ ಹುಲ್ಲು ಕಡ್ಡಿಯೂ ಅಲ್ಲಾಡದು ಎನ್ನುವ ಮಾತೊಂದಿದೆ. ದೈವಾನುಗ್ರಹ ಪಡೆಯಲು ನಿರಂತರವಾದ ಪ್ರಾಮಾಣಿಕ ಭಕ್ತಿಯು ಬೇಕು. ಪ್ರಾಮಾಣಿಕವಾಗಿ ಕರ್ತವ್ಯವನ್ನು ನಿರ್ವಹಿಸುವದು ಪರೋಪಕಾರಾರ್ಥಂ ಇದಂ ಶರೀರಂ ಎಂದು ಪರರ ಸೇವೆಯಲ್ಲಿ ತೊಡಗಿಸಿಕೊಳ್ಳುವದೂ ದೈವಾನುಗ್ರಹಕ್ಕೆ ದಾರಿ ಮಾಡಿಕೊಡುತ್ತದೆ ಎನ್ನುವದರಲ್ಲಿ ಸಂದೇಹವೇ ಇಲ್ಲ.

ಒಮ್ಮೆ ಒಂದು ಊರು ಪ್ರವಾಹಕ್ಕೆ ತುತ್ತಾಯಿತು ಊರಿನ ಜನರೆಲ್ಲಾ ಸುರಕ್ಷಿತ ಸ್ಥಳಕ್ಕೆ ಓಡತೊಡಗಿದರು. ಒಬ್ಬನ ಹೊರತಾಗಿ. ಯಾರೋ ಆತನನ್ನು ನೀನೇಕೆ ಊರನ್ನು ಬಿಟ್ಟು ಹೋಗುತ್ತಿಲ್ಲವೆಂದು ಕೇಳಿದಾಗ ಆತ ಹೇಳಿದ. “ದೇವರು ನನ್ನನ್ನು ರಕ್ಷಿಸುತ್ತಾನೆ ನನಗೆ ಆತನಲ್ಲಿ ನಂಬಿಕೆಯಿದೆ.” ನೀರಿನ ಪ್ರಮಾಣ ಸ್ವಲ್ಪ ಏರಿದಾಗ ಆತನ ರಕ್ಷಣೆಗೆ ಜೀಪೊಂದು ಬಂದಿತು. ಆದರೆ ಆತನು ಅದನ್ನು ವಾಪಾಸ್ ಕಳುಹಿಸಿದ.. ನೀರಿನ ಪ್ರಮಾಣ ಮತ್ತಷ್ಟು ಹೆಚ್ಚಾದಾಗ ಅವನ ರಕ್ಷಣೆಗೆ ದೋಣಿಯೊಂದು ಬಂದಿತು. ಆತ ಅದನ್ನೂ ಬೇಡವೆಂದ. ನೀರಿನ ಪ್ರಮಾಣ ನಿಧಾನವಾಗಿ ಏರತೊಡಗಿದಾಗ ಆತ ಮನೆಯ ಮಹಡಿಯನ್ನು ಏರಿ ಕುಳಿತ. ಆಗ ಅಲ್ಲಿ ಹೆಲಿಕಾಪ್ಟರ್ ಬಂದಿತು. ಅದನ್ನೂ ನಿರಾಕರಿಸಿದ. ಅಷ್ಟೊತ್ತಿಗೆ ಆ ಮನೆ ಮುಳುಗಿದ್ದರಿಂದ ಆತನೂ ಮುಳುಗಿದ. ಅಂತಿಮವಾಗಿ ಆತ ದೇವರ ಪಾದ ಸೇರಿದಾಗ ದೇವರನ್ನು ಕೋಪದಿಂದ ಪ್ರಶ್ನಿಸಿದ. ದೇವರೆ ನನಗೆ ನಿನ್ನ ಮೇಲೆ ಸಂಪೂರ್ಣ ನಂಬಿಕೆಯಿತ್ತು ಅದನ್ನು ನೀನು ಹುಸಿಗೊಳಿಸಿದೆ. ನಾನು ಮುಳುಗುವದನ್ನು ಮೂಕ ಪ್ರೇಕ್ಷಕನಾಗಿ ನೋಡುತ್ತಿದ್ದೆ. ಅಂದ ಅದಕ್ಕೆ ದೇವರು ನಿನಗೆ ಜೀಪ್ ದೋಣಿ ಹಾಗೂ ಹೆಲಿಕಾಪ್ಟರ್‌ನ್ನು ಕಳಿಸಿದವರು ಯಾರೆಂಬುದನ್ನು ಯೋಚಿಸಿದ್ದಿಯಾ? ಎಂದು ನಿಧಾನವಾಗಿ ಹೇಳಿದ

ಹೀಗೆ ಮೌಢ್ಯದಲ್ಲಿ ಬೀಳಬಾರದು. ಒಮ್ಮೆ ಯಾರೋ ವಯಸ್ಸಾದವರನ್ನು ಕೇಳಿದರು “ಜೀವನದ ಅತಿ ಹೆಚ್ಚಿನಹೊರೆ ಯಾವುದು?”ಅದಕ್ಕೆ ಆ ಹಿರಿಯರು ಅತಿ ದುಃಖದಿಂದ “ಹೊತ್ತುಕೊಳ್ಳಲು ಯಾವುದೇ ಹೊರೆ ಇಲ್ಲದೇ ಇರುವದು” ಎಂದು ಹೇಳಿದರು. ಹಣೆಬರಹ ಅದೃಷ್ಟವನ್ನು ಹಳಿಯುತ್ತ ಕೂರದೇ ಹೊಣೆಗಾರಿಕೆಯನ್ನು ಹೊತ್ತಾಗ ನೋವನ್ನು ಸಹಿಸುವ ಶಕ್ತಿ ಹೆಚ್ಚುತ್ತೆ. ಆ ದೇವರು ಕರುಣಿಸಿದ ಶ್ರದ್ಧೆ ಭಕ್ತಿ ದಯೆ ಧರ್ಮ ನಂಬಿಕೆ ಚೈತನ್ಯಗಳನ್ನು ಬಳಸಿಕೊಂಡು ಶಾಂತಿದಾಯಕ ಮತ್ತು ಸುಖದಾಯಕ ಜೀವನ ನಮ್ಮದಾಗಿಸಿಕೊಂಡು ಮಾನವ ಜನ್ಮ ಸಾರ್ಥಕಗೊಳಿಸಿಕೊಳ್ಳೋಣ.

ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ ೯೪೪೯೨೩೪೧೪೨

LEAVE A REPLY

Please enter your comment!
Please enter your name here

Latest News

ಸವದತ್ತಿ ಪರಸಗಡ ಕೋಟೆಯಲ್ಲಿ ಮಂಗಗಳ ಹಾವಳಿ ; ಭಯದಲ್ಲಿ ಭಕ್ತಗಣ

ಸವದತ್ತಿ - ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಹಾಗೂ ಬೆಡಸೂರು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವಂಥ ಪರಸಗಡ ಕೋಟೆಯಲ್ಲಿ ಮಂಗಗಳ ಕಾಟ ಶುರುವಾಗಿದೆ.ದರ್ಶನಕ್ಕೆ ಬಂದಂಥ ಭಕ್ತಾದಿಗಳಿಗೆ ಮಂಗಗಳು...

More Articles Like This

error: Content is protected !!
Join WhatsApp Group