ಭವ್ಯ ಭಾರತದ ಇತಿಹಾಸವು ತೆರೆದಿಟ್ಟ ಅಪ್ಪಟ ರಾಷ್ಟ್ರ ಪ್ರೇಮಿ ಸೇನಾನಿ ಹೈದ್ರಾಬಾದ ಕರ್ನಾಟಕದ ಹುಲಿ ದಿಟ್ಟ ಸ್ವಾತಂತ್ರ್ಯ ಹೋರಾಟಗಾರ ಮಹದೇವಪ್ಪ ರಾಂಪುರೆ.
ಮಹದೇವಪ್ಪ ರಾಂಪುರೆ (1920-1973) ಒಬ್ಬ ಭಾರತೀಯ ರಾಜಕಾರಣಿ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಘದ (H.K.E. Society) ಸ್ಥಾಪಕರು, ಗುಲ್ಬರ್ಗಾದಲ್ಲಿ ಮಹದೇವಪ್ಪ ರಾಂಪುರೆ ಮೆಡಿಕಲ್ ಕಾಲೇಜ್ ಅನ್ನು 1963ರಲ್ಲಿ ಸ್ಥಾಪಿಸಿ, ಆ ಭಾಗದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ; ಅವರು ಮೈಸೂರು ವಿಧಾನ ಪರಿಷತ್ ಉಪಾಧ್ಯಕ್ಷರಾಗಿ, ಕಲಬುರಗಿ ಲೋಕಸಭಾ ಸದಸ್ಯರಾಗಿ ಮೂರು ಭಾರಿ ಸೇವೆ ಸಲ್ಲಿಸಿದ್ದಾರೆ.
ಸಂಕ್ಷಿಪ್ತ ಜೀವನ ಚರಿತ್ರೆ:
ಜನನ ಮತ್ತು ಆರಂಭಿಕ ಜೀವನ: ಮಹದೇವಪ್ಪ ರಾಂಪುರೆ ಅವರು 1920ರಲ್ಲಿ ಜನಿಸಿದರು.ತಾಯಿ ಗುರುದೇವಿ
ತಂದೆ ಯಶವಂತಪ್ಪ ರಾಂಪುರೆ
ಮಹದೇವಪ್ಪ ರಾಮಪುರೆ ಅವರು 6 ಜನ ಅಣ್ಣ – ತಮ್ಮಂದಿರು ಹಾಗೂ ಒಬ್ಬಳೆ
ಒಬ್ಬಳು ತಂಗಿ.ಆರಂಭಿಕ ಶಿಕ್ಷಣವನ್ನು ಸೊಲ್ಲಾಪುರದಲ್ಲಿ ಮುಗಿಸಿದರು. ಇವರ ಅಜ್ಜನವರು ಸುಮಾರು ನಾಲ್ಕು ನೂರು ಎಕರೆ ಭೂಮಿಯನ್ನು ಹೊಂದಿದ್ದರು. ಮೂಲತಃ ಸೋಲಾಪುರ ಜಿಲ್ಲೆಯ ಕುಂಬಾರಿ ಗ್ರಾಮದಲ್ಲಿ ಒಂದು ಅಡತಿ ಅಂಗಡಿ ಕೃಷಿ ವ್ಯಾಪಾರ ಮಾಡಿಕೊಂಡಂತಹ ಶ್ರೀಮಂತ ಮನೆತನವಾಗಿತ್ತು.
ಮಹದೇವಪ್ಪ ರಾಮಪುರೆ ಅವರು ತಮ್ಮ ಶಿಕ್ಷಣವನ್ನು ಮೊಟಕುಗೊಳಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ಮಹಾರಾಷ್ಟ್ರದಲ್ಲಿ ಇವರ ಮೇಲೆ ಬ್ರಿಟಿಷ್ ಸರ್ಕಾರ ವಾರಂಟ್ ಜಾರಿ ಮಾಡಿದ ಮೇಲೆ ಸಂಘರ್ಷವನ್ನು ಮುನ್ನಡೆಸಬೇಕೆಂಬ ಯೋಚನೆ ಹಂಬಲದಿಂದ ಕಲಬುರ್ಗಿಗೆ ಬಂದರು .
ತಮ್ಮ 26 ನೆಯ ವಯಸ್ಸಿನಲ್ಲಿ ಹೈದ್ರಾಬಾದ ಸರಕಾರದ ಎಂ ಎಲ್ ಸಿ ಆಗಿ ಆಯ್ಕೆಯಾದರು ಮುಂದೆ ಕರ್ನಾಟಕ ಏಕೀಕರಣವಾದ ಮೇಲೆ ಕರ್ನಾಟಕದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿ ಉಪಸಭಾಪತಿಯಾಗಿ ಆಯ್ಕೆಯಾದರು.
*ರಾಜಕೀಯ ಜೀವನ:*
ಮಹದೇವಪ್ಪ ರಾಂಪುರೆ ಅವರು ಮೂಲತಃ ಸಮಾಜವಾದಿ ಎಡಪಂಥೀಯ ವೈಚಾರಿಕ ನೆಲೆಯಲ್ಲಿ ಬೆಳೆದವರು. ಡಾ ಎಂ ಎನ್ ರಾಯ್ ಅವರ ಸಿದ್ಧಾಂತದಲ್ಲಿ ನಂಬಿಕೆ ಇಟ್ಟವರು. ಕರ್ನಾಟಕದ ನವ ನಿರ್ಮಾಪಕ ಎಸ್ ನಿಜಲಿಂಗಪ್ಪನವರ ಬಲಗೈ ಬಂಟನಾಗಿ ಕಾರ್ಯ ಮಾಡಿದವರು. ಚಂದ್ರಶೇಖರ ಪಾಟೀಲ ವೀರೇಂದ್ರ ಪಾಟೀಲ ಮುಂತಾದ ಯುವ ನಾಯಕರ ಜೊತೆಗೂಡಿ ಹೈದ್ರಾಬಾದ ಕರ್ನಾಟಕದ ಸಮಗ್ರ ಏಳ್ಗೆಗೆ ಕನಸು ಕಂಡವರಲ್ಲಿ ಪ್ರಮುಖರು ಹಾಗೂ ರಜಾಕಾರ ಹಾವಳಿ ಎದುರಿಸಿದ ಸೇನಾನಿಯಾಗಿದ್ದರು. ಇವರು ಶ್ರೀಮತಿ ತಾರಾದೇವಿ ಅವರನ್ನು ವಿವಾಹವಾದರು.ಇವರಿಗೆ.
5 ಜನ ಗಂಡುಮಕ್ಕಳು
3 ಜನ ಹೆಣ್ಣುಮಕ್ಕಳು
ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ, ನಂತರ ರಾಜಕೀಯ ಪ್ರವೇಶಿಸಿದರು. ಮೈಸೂರು ವಿಧಾನ ಪರಿಷತ್ ಉಪಾಧ್ಯಕ್ಷರಾಗಿ (1956-1957) ಮತ್ತು ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ (1957-1970) ಸೇವೆ ಸಲ್ಲಿಸಿದರು.
ಎಸ್ ನಿಜಲಿಂಗಪ್ಪನವರ ಮೊರಾರ್ಜಿ ದೇಸಾಯಿ ಡಾ ಎಂ.ಎನ್ ರಾಯ್ ಡಾ ನೀಲಂ ಸಂಜೀವ ರೆಡ್ಡಿ ಮುಂತಾದವರ ಜೊತೆಗೆ ರಾಜಕೀಯ ಒಡನಾಟವನ್ನು ಹೊಂದಿದ್ದರು.
ತೀವ್ರಗಾಮಿ ಸತ್ಯ ಸಮತೆ ಶಾಂತಿ ಪ್ರೀತಿ ಮಂತ್ರ ಜಪಿಸಿದ ರಾಜಕೀಯ ಮುತ್ಸದ್ಧಿ. ಇವರ ಲೋಕ ಸಭೆಯಲ್ಲಿ ಮಾತನಾಡುವ ವೈಖರಿ ಕಂಡು ರಾಷ್ಟ್ರಪತಿ ಡಾ ಎಸ್ ರಾಧಾಕೃಷ್ಣ ಅವರು ಮಹದೇವಪ್ಪ ರಾಮಪುರೆ ಅವರನ್ನು ಶ್ರೇಷ್ಠ ಸಂಸತ್ ಪಟು ಎಂದು ಬಣ್ಣಿಸಿದ್ದಾರೆ.
*ಶಿಕ್ಷಣಕ್ಕೆ ಕೊಡುಗೆ:*
ಡಾ ಡಿ ಸಿ ಪಾವಟೆ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಕರ್ನಾಟಕ ವಿಶ್ವ ವಿದ್ಯಾಲಯದ
ಸಿಂಡಿಕೇಟ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಹೈದರಾಬಾದ್ ಕರ್ನಾಟಕ ಭಾಗದ ಶಿಕ್ಷಣದ ಬೆಳವಣಿಗೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಇದರ ಫಲವಾಗಿ 1963ರಲ್ಲಿ ಗುಲ್ಬರ್ಗಾದಲ್ಲಿ ಮಹದೇವಪ್ಪ ರಾಂಪುರೆ ವೈದ್ಯಕೀಯ ಮಹಾವಿದ್ಯಾಲಯವನ್ನು ಸ್ಥಾಪಿಸಿದರು.
*ಪ್ರಮುಖ ಕೊಡುಗೆಗಳು:*
H.K.E. ಸೊಸೈಟಿ: ಇದರ ಸಂಸ್ಥಾಪಕರು .ಇದಕ್ಕೂ ಮುಂಚೆ ದೊಡ್ಡಪ್ಪ ಅಪ್ಪ ಅವರ ಶ್ರೀ ಶರಣ ಬಸವೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಅದರ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ನೂರಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರು.
M.R. ಮೆಡಿಕಲ್ ಕಾಲೇಜ್: ಭಾರತದ ಖಾಸಗಿ ವೈದ್ಯಕೀಯ ಕಾಲೇಜಾಗಿ, ರಾಷ್ಟ್ರೀಯ ವೈದ್ಯಕೀಯ ಆಯೋಗದಿಂದ ಮಾನ್ಯತೆ ಪಡೆದು, ಗುಣಮಟ್ಟದ ವೈದ್ಯಕೀಯ ಶಿಕ್ಷಣ ನೀಡುತ್ತಿದೆ.
ಈ ಭಾಗದ ಜನರ ಕಲ್ಯಾಣಕ್ಕಾಗಿ ಶಿಕ್ಷಣ ಮತ್ತು ಆರೋಗ್ಯದ ಮೂಲಸೌಕರ್ಯಗಳನ್ನು ಕಲ್ಪಿಸಬೇಕೆಂಬ ದೂರದೃಷ್ಟಿಯನ್ನು ಹೊಂದಿದ್ದರು ಅವರ ದೂರದೃಷ್ಟಿ ಮತ್ತು ಶ್ರಮದಿಂದ ಸ್ಥಾಪಿಸಲಾದ ಸಂಸ್ಥೆಗಳು ಇಂದಿಗೂ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ.
ಇಂತಹ ಒಬ್ಬ ಸೃಜನಶೀಲ ವೈಚಾರಿಕ ಚಿಂತಕ ಶಿಕ್ಷಣ ಪ್ರೇಮಿ ಅಪ್ಪಟ ದೇಶ ಭಕ್ತ 1973 ರಲ್ಲಿ ತಮ್ಮ 53 ನೆಯ ವಯಸ್ಸಿನಲ್ಲಿ ಬಯಲಾದರು. ಇಂತಹ ದಿವ್ಯ ಜ್ಯೋತಿ ಇಂದಿಗೂ ಬೆಳಗುತ್ತಿದೆ ನಮ್ಮೆಲ್ಲರ ಮಧ್ಯೆ.
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ 9552002338

