ದಿನಾಂಕ: 16.12.2025 ಮಂಗಳವಾರದಂದು ನಮ್ಮ ಇತಿಹಾಸ ವಿಭಾಗದಿಂದ ಹಿರೇಬೆಣಕಲ್ , ಕುಡುತಿನಿ ಹಾಗೂ ಬಳ್ಳಾರಿಯ ಸ್ಥಳಗಳಿಗೆ ಶೈಕ್ಷಣಿಕ ಪ್ರವಾಸ ಆಯೋಜಿಸಲಾಗಿತ್ತು. ನಸುಕಿನ ಚುಮು ಚುಮು ಚಳಿಯ ಮಧ್ಯದಲ್ಲಿಯೂ ಬೆಳಿಗ್ಗೆ ೩ ಗಂಟೆಯಿಂದಲೇ ಚಾರಣದ ಭರಾಟೆ ನಡೆಯುತಿತ್ತು. ಕೊನೆಗೂ ಹರಸಾಹಸದಿಂದ ಕೊರೆಯುವ ಚಳಿಯನ್ನು ಲೆಕ್ಕಿಸದೇ ಕೂತೂಹಲದ ಪ್ರವಾಸಕ್ಕೆ ಅಣಿಯಾದೆವು. ಎಲ್ಲರನ್ನು ಒಗ್ಗೂಡಿಸಿ ನಮ್ಮ ವಿಶ್ವವಿದ್ಯಾನಿಲಯದ ವಸತಿನಿಲಯವನ್ನು ಬಿಡುವಾಗ ಸಮಯ ಸರಿಯಾಗಿ ೫ ಗಂಟೆಯಾಗಿತ್ತು. ಇದರಲ್ಲಿ ವಾಹನಗಳ ಚಾಲಕರ ಕೊಡುಗೆಯೂ ಇದೆ. ನಮಗಾಗಿಯೇ (ಪ್ರಥಮ ವರ್ಷದ ವಿದ್ಯಾರ್ಥಿಗಳು) ಒಂದು ಟಿ.ಟಿ. ವಾಹನ ಮೀಸಲಿರಿಸಿದ್ದು ಎಲ್ಲೊ ಒಂದು ಕಡೆ ಸಂತೋಷ ಪಡುವಂತಹದು. ನಮಗೆ ಆರಂಭದಿಂದ ಕೊನೆಯವರೆಗೂ ಉತ್ಸಾಹ ಹಾಗೂ ಸಂತೋಷಕ್ಕೆ ಕೊರತೆ ಇರಲಿಲ್ಲ.
ರಾಯಚೂರಿನ ಆರ್. ಟಿ.ಒ. ವೃತ್ತದ ಹತ್ತಿರ ನಮ್ಮ ವಿಭಾಗದ ಉಪನ್ಯಾಸಕರ ಆಗಮನವಾಯಿತು. ನಮ್ಮೆಲ್ಲರ ಪ್ರೀತಿಯ ಡಾ. ಡಿ ವೀರೇಶ ಸರ್ ಅವರು ನಮ್ಮ ವಾಹನ ಏರಿದ್ದು ಇನ್ನು ಸಂತೋಷವಾಯಿತು. ವೀರೇಶ್ ಸರ್ ರವರು ಮೊದಲೇ ಹೇಳಿದ ಹಾಗೆ ನಾವು ಹೋಗುವ ಸ್ಥಳದ ಬಗ್ಗೆ ಪ್ರಾರಂಭದಲ್ಲಿ ಆ ಸ್ಥಳಗಳ ಕುರಿತು ಸಂಕ್ಷಿಪ್ತ ಮಾಹಿತಿಯನ್ನು ಹಂಚಿಕೊಂಡರು. ಅಲ್ಲಿಂದಲೇ ಯಾವಾಗ ಆ ಸ್ಥಳಗಳಿಗೆ ತಲುಪುತ್ತೇವೆಯೋ ಎಂಬ ಕುತೂಹಲ ಕೆರಳಿಸಿತು. ಆ ಸ್ಥಳದ ಬರುವಿಕೆಗಾಗಿ ಕ್ಷಣಗಣನೆ ಎಣಿಸುತ್ತಿದ್ದೆವು.
ಮೊದಲು ರಾಯಚೂರಿನಿಂದ ಪ್ರಾರಂಭವಾದ ನಮ್ಮ ಪಯಣ ಆ ಮಧ್ಯದಲ್ಲಿ ಬೆಳಗಿನ ಉಪಹಾರವನ್ನು ಗಂಗಾವತಿ ಯಲ್ಲಿ ಸೇವಿಸಿ ಮುಂದೆ ಹಿರೆಬೆಣಕಲ್ ಕಡೆಗೆ ನಮ್ಮ ಪ್ರಯಾಣ ಸಾಗಿತು. ಅಲ್ಲಿ ತಲುಪಿದ ನಂತರ ಹಿರೇಬೆಣಕಲ್ ಬಂದಿದೆ ಇಳಿಯಿರಿ ಎಂದೊಡನೆ ನಮಗೆ ಅಚ್ಚರಿ ಎನಿಸಿದ್ದು ನಮ್ಮೊಡನೆ ಉಪನ್ಯಾಸಕರು ಮಕ್ಕಳಾಗಿ ಬೆರೆತು ತಲುಪುವ ತಾಣದ ಬಗ್ಗೆ ಮಾಹಿತಿ ತಿಳಿಸುತ್ತಾ, ಮಧ್ಯದಲ್ಲಿ ನಮ್ಮ ಗಾನದ, ನೃತ್ಯದ, ತಮಾಷೆಯಲ್ಲಿ ಮುಳುಗಿ ನಮ್ಮೊಂದಿಗೆ ಬೆರೆತದ್ದು ನಿಜಕ್ಕೂ ನಮಗೆ ಮರೆಯಲಾಗದ ನೆನಪು. ಯಾವುದೇ ಸ್ಥಳಗಳಿಗೆ ಭೇಟಿ ನೀಡಿದಾಗ ಆ ಸ್ಥಳದ ಸ್ಥಳೀಯ ವ್ಯಕ್ತಿಗಳ ಸಹಾಯ ಬಹಳ ಮುಖ್ಯವಾದದ್ದು ಎಂದು ಅರಿತಿದ್ದ ವೀರೇಶ್ ಸರ್ ರವರು ಸ್ಥಳೀಯ ವ್ಯಕ್ತಿಯಾದ ಭಾಷಾ ರವರನ್ನು ಮುಂಚಿತವಾಗಿಯೇ ಸಂಪರ್ಕಿಸಿದ್ದರು. ವೀರೇಶ ಸರ್ ಅವರು ಭಾಷಾರವರಿಗೆ ತಮ್ಮ ಸಮಯವನ್ನು ನಮಗಾಗಿ ಮೀಸಲಿಟ್ಟು ಇಲ್ಲಿನ ವಿಶೇಷ ಪ್ರಾಗೈತಿಹಾಸಿಕ ನೆಲೆಗಳನ್ನು ತೋರಿಸಲು ಹೇಳಿದರು. ಭಾಷಾ ಅವರೂ ನಮ್ಮೊಳಗೊಬ್ಬರಾಗಿ ಬೆರೆತು ಸುಮಾರು 6/7ಕಿ.ಮೀ. ಬೆಟ್ಟಗುಡ್ಡ ಸುತ್ತಿಸಿದರು. ಪ್ರಾಚೀನ ಮಾನವನ ನೆಲೆಗಳನ್ನು ಹುಡುಕುತ್ತಾ ಸಾಗಿದ ನಮಗೆ ಮೊದಲು ಕಾಣಿಸಿ ಕೊಂಡಿದ್ದು ಪ್ರಾಗೈತಿಹಾಸದ ಮಾನವ ಆಗ ತಾನೇ ಪ್ರಾಣಿಗಳಂತೆ ಬದುಕುವುದನ್ನು ಬಿಟ್ಟು ಆಹಾರ, ಬದುಕುವ ಭದ್ರ ನೆಲೆಯನ್ನು ಕಂಡುಕೊಂಡು ಸ್ವಲ್ಪ ಸುಧಾರಣೆ ಕಂಡಂತ ಕಾಲವದು. ಆಗ ಅವನು ತನ್ನ ಬೇಸರವನ್ನು ಕಳೆಯುವ ಸಲುವಾಗಿ ಹಲವಾರು ಕಲೆಗಳನ್ನು ಕಲಿತುಕೊಂಡ. ಅವುಗಳಲ್ಲಿ ಬಹಳ ಪ್ರಮುಖವಾದದ್ದು ಚಿತ್ರಕಲೆ ಅವನು ತನ್ನ ನಯನಕ್ಕೆ ಸೆರೆಸಿಕ್ಕ ಪ್ರಾಣಿಗಳು ಹಾಗೂ ಅವನು ತನ್ನ ಆಹಾರಕ್ಕಾಗಿ ಬೇಟೆಯಾಡುವ ಕಾಯಕವನ್ನು ಕೈಗೊಂಡಿದ್ದನ್ನು ಅದನ್ನು ವರ್ಣಚಿತ್ರಗಳಲ್ಲಿ ಚಿತ್ರಿಸಿದ ಅದನ್ನು ಚಿತ್ರಿಸಲು ನೈಸರ್ಗಿಕವಾಗಿ ಗಿಡ ಮೂಲಿಕೆಯ ಬಣ್ಣಗಳು, ಹಂದಿಯ ನೆತ್ತರನ್ನು ಬಳಸಿಕೊಂಡು ತನ್ನ ನೆಲೆಯನ್ನು ಭದ್ರಗೊಳಿಸಿಕೊಂಡ ಕುರುಹುಗಳನ್ನು ಉಳಿಸಿದ್ದಾರೆ. ಅದರ ಬೆನ್ನಹತ್ತಿ ಹೊರಟ ನಮಗೆ ಇವೆಲ್ಲ ದೃಶ್ಯಗಳನ್ನು ಕಣ್ತುಂಬಿಕೊಳ್ಳುವ ಸುಂದರ ಕ್ಷಣಗಳನ್ನು ಸೆರೆ ಹಿಡಿದೆವು.
ಈ ವರ್ಣ ಚಿತ್ರಗಳ ಬಗ್ಗೆ ವೀರೇಶ್ sir ನಮಗೆ ಮಾನವ ಯಾವ ರೀತಿ ಬಣ್ಣ ತಯಾರಿಸುತ್ತಿದ್ದ ಅದನ್ನ ಅವನು ಯಾವುದರಿಂದ ಬಿಡಿಸುತ್ತಿದ್ದ ಈ ಎಲ್ಲ ಮಾಹಿತಿಯನ್ನು ತಿಳಿಸಿದರು. ಹಾಗೆಯೇ ಮುಂದೆ ಸಾಗಿದೆವು ದಾರಿ ಯುದ್ದಕ್ಕೂ ಪೂರ್ವಸೂರಿಗಳ ಸಮಾಧಿಗಳನ್ನು ನಿರ್ಮಾಣ ಮಾಡುವಲ್ಲಿ ತೋರಿದ ಅವರ ಕೌಶಲ್ಯದ ಬಗ್ಗೆ ಚರ್ಚೆ ಮಾಡುತ್ತಾ ಸಾಗಿದೆವು. ನಮಗೆ ಮೊದಲು ದರ್ಶನ ವಾಗಿದ್ದು ಕಲ್ಮನೆ ಹಾಗೂ ನೆಲಹಾಸು ಸಮಾಧಿಗಳು. ಇವು ಸಾಮಾನ್ಯ ಮನುಷ್ಯನ ಮನೆಗಳು ಇರಬಹುದು ಎಂದು ಸರ್ ಬಳಿ ಹೇಳಿದಾಗ. ಇಲ್ಲ ಅವು ಪೂರ್ವಜರ ಸಮಾಧಿಗಳು ಎಂದು ಅವುಗಳ ಕುರಿತು ನಡೆದಿರುವ ಅಧ್ಯಯನಗಳು ಹಾಗೂ ಉತ್ಖನನಗಳು ಸಾಬೀತು ಪಡಿಸಿವೆ ಎಂದು ತಿಳಿಸಿದರು. ಜೊತೆಗೆ ಇಲ್ಲಿ ಸುಮಾರು 400 ಹೆಚ್ಚು ಸಮಾಧಿಗಳು ಇರುವಿಕೆಯ ಬಗ್ಗೆಯೂ ತಿಳಿಸಿದರು. ವಿಶೇಷವಾಗಿ ಮಾನವ ಮಗುವಿನ ಸಮಾಧಿಯನ್ನು ಹೇಗೆ ಮಾಡಿದ್ದ ಎಂಬುದು ಮುಖ್ಯವಾಗುತ್ತದೆ. ಮೊರೇರಾ ಬೆಟ್ಟದಲ್ಲಿ ಮುಖ್ಯವಾಗಿ ವೃತ್ತಾಕಾರ ಸಮಾಧಿ, ನೆಲಹಾಸು ಸಮಾಧಿ, ಕಲ್ಮನೆ ಸಮಾಧಿ ಹಾಗೂ ಮಾನವಾಕೃತಿ ಸಮಾಧಿ ಹೀಗೆ ಮುಂತಾದ ವೈವಿಧ್ಯಮಯ ಸಮಾಧಿಯ ಪ್ರಕಾರಗಳನ್ನು ಗುರುತಿಸಬಹುದು. ಅವು ನಮ್ಮನ್ನು ಮೂಕವಿಸ್ಮಿತರನ್ನಾಗಿಸಿದವು.
ಇದಕ್ಕೆ ಕಾರಣ ವೀರೇಶ್ ಸರ್ , ಪದ್ಮಜಾ ಮೇಡಂ, ಮಂಜುನಾಥ ಸರ್ ಹಾಗೂ ಸ್ಥಳೀಯ ವ್ಯಕ್ತಿ ಭಾಷಾ ಅವರು. ಇಷ್ಟೊಂದು ಸಂಖ್ಯೆಯಲ್ಲಿ ಸಮಾಧಿಗಳನ್ನು ನಿರ್ಮಿಸಲು ಪ್ರಮುಖ ಕಾರಣ ಪಂಚಭೂತಗಳಲ್ಲಿ ಪ್ರಮುಖವಾದಂತಹ ಜಲಮೂಲ. ಅದನ್ನು ವೀಕ್ಷಿಸಿ ಕಣ್ಣುತುಂಬಿಕೊಂಡೆವು. ಅಲ್ಲಿ ಸ್ವಲ್ಪ ಮನಸಿಗೆ ಘಾಸಿ ಉಂಟಾಗುವ ಸಂಗತಿಗಳು ಉಂಟು. ಏಕೆಂದರೆ ಒಂದು ಕಡೆ ಸಮಯದ ಅಭಾವ. ಮತ್ತೊಂದು ಕಡೆ ಮುಖ್ಯವಾದ ವರ್ಣಚಿತ್ರಗಳನ್ನು ನೋಡದಿರುವುದು. ಹಿರೇಬೆಣಕಲ್ ಕುರಿತು ಕೇವಲ ಪಠ್ಯಗಳಲ್ಲಿ ಓದಿದ ನಾವು ಅದನ್ನು ನೇರವಾಗಿ ಕಣ್ತುಂಬಿಕೊಳ್ಳುವ ಆಸೆಯನ್ನು ವ್ಯಕ್ತ ಪಡಿಸಿದ್ದಕ್ಕಾಗಿ ಆ ಆಸೆಗೆ ಆಸರೆಯಾಗಿ ನಮ್ಮ ವಿಭಾಗದ ಉಪನ್ಯಾಸಕರಾದ ಡಾ. ಡಿ ವೀರೇಶ್, ಡಾ ಮಂಜುನಾಥ, ಡಾ ಪದ್ಮಜಾ ದೇಸಾಯಿ ಹಾಗೂ ಇವರು ಆ ಸ್ಥಳಕ್ಕೆ ನಮ್ಮನ್ನು ಕರೆದೊಯ್ದದ್ದು ಎಂದು ಮರೆಯಲಾಗದ ಸಂಗತಿ. ಆ ಸ್ಥಳದಲ್ಲಿ ನಮ್ಮ ಪಾದ ಸೋಕಿಸಿ ಅಲ್ಲಿನ ನೆಲ ಸ್ಪರ್ಶದಿಂದ ಆ ಸ್ಥಳದ ಕುರಿತು ತಿಳಿದದ್ದು ಮಾತ್ರ ಸೋಜಿಗ. ಅದರ ಬಗ್ಗೆ ಮಾಹಿತಿ ತಿಳಿಯಬೇಕೆನ್ನುವ ನಮ್ಮ ಆಸೆಗೆ ಆ ದಿನ ಪೂರ್ಣವಿರಾಮವೂ ಸಿಕ್ಕಿತ್ತು. ಇಲ್ಲಿಂದ ಸ್ಥಳೀಯ ವ್ಯಕ್ತಿಯ ಮಾರ್ಗದರ್ಶನ ಮೇರೆಗೆ ವೀರೇಶ್ ಸರ್ ರವರ ಬೆನ್ನತಿ 5 ಜನ ವಿದ್ಯಾರ್ಥಿ ಗಳ ಗುಂಪಿನೊಂದಿಗೆ ಸಾಗಿದ ನಮಗೆ ಸಾಕಷ್ಟು ಮುಳ್ಳು,ಗಿಡ ಗಂಟಿಗಳು ಕೂಡ ನಮ್ಮನ್ನು ಸ್ವಾಗತಿಸಿದವು. ಬಂಡೆಗಳ ಮಧ್ಯದಲ್ಲಿ ನುಗ್ಗಿ ಸಾಗಿದ ನಮಗೆ ನಾವೇ ಆದಿಮಾನವರೆಂಬಂತೆ ಅನುಭವವಾಯಿತು. ಅಲ್ಲಿ ನಮಗೆ ಒಂದು ಗುಹೆಯಲ್ಲಿ ಕೆಂಪು ವರ್ಣಚಿತ್ರಗಳು ಕಾಣಿಸಿಕೊಂಡವು. ಇವು ಮಾನವ ತಾನು ವಾಸ ಮಾಡುತಿದ್ದ ಗುಹೆ ಬಂಡೆಗಳಲ್ಲಿ ವರ್ಣಚಿತ್ರಗಳನ್ನು ಬಿಡಿಸುತ್ತಿದ್ದ ಎಂಬ ಮಾಹಿತಿ ದೊರೆಯಿತು. ಅಲ್ಲಿಂದ ಮುಂದೆ ಹೆಜ್ಜೆ ಹೆಜ್ಜೆಗೂ ಸಾಗುವ ಕಠಿಣ ಸವಾಲುಗಳನ್ನು ಎದುರಿಸಿ ಧೈರ್ಯದಿಂದ ಮುಂದೆಸಾಗಿದೆವು. ದಾರಿಯಲ್ಲೇ ಹಲವಾರು ಕಲ್ಲುಗುಳಿಗಳನ್ನು ಗಮನಿಸುತ್ತಾ ಆ ರಚನೆಯ ಹಿನ್ನೆಲೆಯನ್ನು ತಿಳಿದುಕೊಂಡೆವು. ಇವು ಪ್ರಾಚೀನ ಮಾನವ ಆಯುಧಗಳಿಗೆ ಆಕರ ನೀಡಲು ಹಾಗೂ ಧಾರ್ಮಿಕ ಆಚರಣೆಗಳಿಗೆ ಬಳಿಕೆ ಮಾಡುತ್ತಿದ್ದರು ಎನ್ನುವ ಅಂಶ ಕೂತುಹಲ ಮೂಡಿಸಿತು.
ನಾವು ಬಂದಿದ್ದು ತಾಣಗಳ ಮಹತ್ವವನ್ನು ಅರಿಯಲಿಕ್ಕೆ ಮತ್ತೆ ಈ ಅವಕಾಶ ಸಿಗುವುದಿಲ್ಲ ಎಂದು ಅರಿತು ಬೂದಿ ದಿಬ್ಬದ ಕಡೆ ಮುನ್ನಡೆದವು. ಇನ್ನೂ ಸಮಯ ನೆತ್ತಿ ಮೇಲೆ ಬಂದು ಸುಮಾರು 2 ಗಂಟೆ ಆಗಿದ್ದರೂ ಹಸಿವು ಎಂಬ ಭೂತ ನಮ್ಮನ್ನು ಈ ದಿನ ಯಾಕೆ ಕಾಡಲಿಲ್ಲವೆಂಬ ಪ್ರಶ್ನೆ ಇನ್ನೂ ಕೌತುಕವಾಗಿಯೇ ಉಳಿಯಿತು. ಏಕೆಂದರೆ ದಿನವೂ ಎರಡು ಗಂಟೆಯಾದರೆ ಸಾಕು ಹಸಿವು ಎಂಬ ನಾವುಗಳು, ಅಂದು ಯಾಕೋ ಹಸಿವನ್ನೇ ನುಂಗಿಬಿಟ್ಟಿದ್ದೆವು. ಇನ್ನೂ ಬೂದಿ ದಿಬ್ಬದಲ್ಲಿ ಸಿಕ್ಕ ಸಮಯ ೮ ನಿಮಿಷಗಳು ಮಾತ್ರ. ಬೂದಿ ದಿಬ್ಬವು ಈ ಹಿಂದೆ ಹೈನುಗಾರಿಕೆ ಮಾಡುತ್ತಿದ್ದ ಆದಿಮಾನವ ಅವುಗಳ ಸಗಣಿಯನ್ನು ಗುಡ್ಡೆ ಹಾಕಿ ಸುಟ್ಟಿರುವ ಈ ಸ್ಥಳವೆ ಬೂದಿ ದಿಬ್ಬವಾಗಿದೆ ಎಂಬ ಸಂಗತಿ ನಿಜಕ್ಕೂ ಅಚ್ಚರಿ. ನಂತರ ಅಲ್ಲಿಂದ ಬಳ್ಳಾರಿಯ ರಾಬರ್ಟ್ ಬ್ರೂಸ್ ಫುಟ್ ಮ್ಯೂಸಿಯಂ(ಕರ್ನಾಟಕದ ಏಕೈಕ ಪ್ರಾಗೈತಿಹಾಸಿಕ ವಸ್ತುಸಂಗ್ರಹಾಲಯ) ಕಡೆ ಸಾಗಿದೆವು ಅದನ್ನು ತಲುಪುವ ಹೊತ್ತಿಗೆ ಸಮಯ 4:30 ಗಂಟೆಯಾಗಿತ್ತು. ಹಸಿವು ಬೇಡುತ್ತಿದ್ದ ನಮಗೆ ಊಟದ ವ್ಯವಸ್ಥೆಯು ತಡವಾದರೂ ರುಚಿಕರವಾಗಿತ್ತು. ತಮ್ಮ ಸ್ನೇಹಿತರಿಗೆ ಊಟದಲ್ಲಿ ಚಪಾತಿ ಮತ್ತು ಇತರೆ ತಿನಿಸುಗಳು ಸಿಗದೆ ಬರೀ ಅನ್ನದಲ್ಲಿಯೇ ತೃಪ್ತಿಕಾಣಬೇಕಾಯಿತು. ಇದು ಸಹಜವಾಗಿ ಸ್ಪಲ್ವ ಬೇಸರ ಉಂಟುಮಾಡಿತು. ನಂತರ ಊಟ ಮುಗಿಸಿಕೊಂಡು ಬೆಟ್ಟ ಹತ್ತಿ ಕಾಲು ನೋವು ಅನುಭವಿಸಿದ ನಮಗೆ ಮ್ಯೂಸಿಯಂ ನೋಡಲು ಕಷ್ಟವೆನಿಸಿದರು ಇಷ್ಟಪಟ್ಟು ಒಳ ಹೊಕ್ಕ ನಮಗೆ ಬೇಸರವೆಲ್ಲ ಮಂಗಮಾಯವಾಯಿತು. ಆದಿ ಹಳೆ ಶಿಲಾಯುಗದಿಂದ ಬೃಹತ್ ಶಿಲಾಯುಗದವರೆಗಿನ ಪ್ರಾಚ್ಯ ಅವಶೇಷಗಳನ್ನು ನೋಡುವುದರ ಜೊತೆಗೆ ಸ್ಪರ್ಶಿಸುವ ಅವಕಾಶ ಕಲ್ಪಿಸಿದ್ದು ನಿಜಕ್ಕೂ ನಮ್ಮನ್ನು ಪೂರ್ವಜರಲ್ಲಿಗೆ ಕರೆದೊಯ್ಯುತ್ತದೆ. ಈ ಅವಕಾಶವನ್ನು ಕಲ್ಪಿಸಿದ ಡಾ. ರವಿ ಕೋರಿಶೆಟ್ಟರ್ ಸರ್ ಅವರ ಆಲೋಚನಾ ಕ್ರಮಕ್ಕೆ ತಲೆಬಾಗಲೇ ಬೇಕು. ಮಾನವ ತನ್ನ ಬುದ್ಧಿ ಶಕ್ತಿ ಬದಲಾದಂತೆ ಹೇಗೆ ಉಪಕರಣ ತಯಾರಿಸಿದ ಹಾಗೂ ಯಾವ ತಂತ್ರ ಅನುಸರಿಸಿದ ಇತ್ಯಾದಿ ಅಂಶಗಳ ಕುರಿತು ವಸ್ತುಸಂಗ್ರಹಾಲದಲ್ಲಿ ಗೌರಿ ಮೇಡಂ ತಿಳಿಸಿದರು. ಅದರಲ್ಲೂ ವಸ್ತುಸಂಗ್ರಹಾಲಯದ ಮುಖ್ಯ ಆಕರ್ಷಣೆಗಳೆಂದರೆ ಶಿಲಾಯುಧಗಳು, ಮಡಿಕೆಗಳು, ಬೂದಿದಿಬ್ಬದಲ್ಲಿ ದೊರೆತ ಗಂಡು ಮಗುವಿನ ಶವಪೆಟ್ಟಿಗೆ ಹಾಗೂ ತಲೆಬುರೆಡೆಗಳು ನಮ್ಮನ್ನು ಹೊಸ ದಿಕ್ಕಿನಡೆಗೆ ಕಂಡೊಯ್ಯದವು.
ನಂತರ ರಾಯಚೂರು ವಿ.ವಿ. ಕಡೆಗೆ ಪ್ರಯಾಣ ಸಾಗಿತು. ನಮ್ಮಲ್ಲಿ ಕೈಕಾಲು ನೋವು ಇದ್ದರೂ ಖುಷಿಯಲ್ಲಿ ಅವು ಕಾಣದಾದವು. ಅಲ್ಲಿಂದ ಮತ್ತೆ ನಮ್ಮ ಪಯಣ ರಾಯಚೂರಿನತ್ತ ಸಾಗಿತು. ಮತ್ತೆ ವಾಹನವೇರಿದ ನಮಗೆ ಆಯಾಸವೆನಿಸಿದರು ಸಹ ಮಂಗನಂತೆ ಮತ್ತೆ ಜಿಗಿದೆವು. ವಾಹನದಲ್ಲಿ ನೃತ್ಯ ಹಾಡು ಹೀಗೆ ರಾಯಚೂರು ಬಂದ ಪರಿವೇ ಇರಲಿಲ್ಲ. ಪ್ರವಾಸದ ಸಮಯದಲ್ಲಿ ಸಣ್ಣಪುಟ್ಟ ಕೊರತೆಗಳಾದರೂ ಸಹ ನಮ್ಮ ಹುಡುಕಾಟದ ಹಸಿವಿನ ನೆಲೆಯಲ್ಲಿ ಆ ಕೊರತೆಗಳು ಕೇಂದ್ರ ಬಿಂದುವೇನಲ್ಲ. ಹೀಗೆ ಪ್ರವಾಸ ಒಂದು ದಿನವಾದರೂ ನೆನಪುಗಳು ನೂರೊಂದು ಉಳಿದವು. ಸಾಧ್ಯವಾದರೆ ನೀವೂ ಸಹ ಈ ಸ್ಥಳಗಳಿಗೊಮ್ಮೆ ಭೇಟಿ ನೀಡಿ. ಏಕೆಂದರೆ ನಮ್ಮದೇ ಮಾನವರ ನೆಲೆಗಳ ಐತಿಹಾಸಿಕತೆಯನ್ನು ತಿಳಿದುಕೊಳ್ಳುವ ಭಾಗ್ಯ ನಿಮಗೂ ಲಭಿಸಲಿ.
ಅಶೋಕ ನಾಯಕ
ಎಂ ಎ ಪ್ರಥಮವರ್ಷ
ಇತಿಹಾಸ ವಿಭಾಗ
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯ, ರಾಯಚೂರು.
(ಚಾರಣ ಅನುಭವದ ಬರಹ ಬರೆಯಲು ಪ್ರೋತ್ಸಾಹಿಸಿದ ನನ್ನ ಬರವಣಿಗೆಯ ಕರಡನ್ನು ತಿದ್ದಿದ *ಡಾ ಡಿ ವೀರೇಶ ಸರ್, ಡಾ ಮೇಘನ ಜಿ, ಮೇಡಂ* ಗುರುಗಳಿಗೆ ತುಂಬು ಹೃದಯದ ಧನ್ಯವಾದಗಳು.)

