ಶಿಕ್ಷಣ ಎಂದರೆ ಕೇವಲ ತರಗತಿ ಕೋಣೆಗೆ ಸೀಮಿತವಲ್ಲ; ಪುಸ್ತಕಗಳ ಹೊರತಾಗಿಯೂ ಜಗತ್ತೇ ಒಂದು ದೊಡ್ಡ ಪಾಠಶಾಲೆ ಎಂಬುದನ್ನು ನಮಗೆ ಅರಿವುಗೊಳಿಸಿದ ಅನುಭವವೇ ನಮ್ಮ ಈ ಶೈಕ್ಷಣಿಕ ಅಧ್ಯಯನ ಪ್ರವಾಸ.
ದಿನಾಂಕ ೧೬/೧೨/೨೦೨೫, ಮಂಗಳವಾರದಂದು ಬೆಳಿಗ್ಗೆ ೬:೦೦ ಗಂಟೆಗೆ ನಾನು, ನಮ್ಮ ಸ್ನೇಹಿತರು ಹಾಗೂ ನಮ್ಮ ಗುರುಗಳಾದ ಡಾ. ಡಿ. ವೀರೇಶ ಸರ್, ಡಾ. ಪದ್ಮಜಾ ಮೇಡಂ ಹಾಗೂ ಡಾ. ಮಂಜುನಾಥ ಸರ್ ಅವರೊಂದಿಗೆ ಸೇರಿ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ, ರಾಯಚೂರುದಿಂದ ನಮ್ಮ ಅಧ್ಯಯನ ಪ್ರವಾಸವನ್ನು ಆರಂಭಿಸಿದೆವು. ಎಲ್ಲರ ಮುಖದಲ್ಲೂ ಕುತೂಹಲ, ಉತ್ಸಾಹ ಮತ್ತು ಹೊಸದನ್ನು ತಿಳಿದುಕೊಳ್ಳಬೇಕೆಂಬ ಆಸೆ ತುಂಬಿ ತುಳುಕುತ್ತಿತ್ತು.
ಸುಮಾರು ೧೧:೦೦ ಗಂಟೆಗೆ ನಾವು ಐತಿಹಾಸಿಕ ಮಹತ್ವ ಹೊಂದಿರುವ ಹಿರೇಬೆಣಕಲ್ ಸ್ಥಳಕ್ಕೆ ತಲುಪಿದೆವು. ಅಲ್ಲಿನ ಬೆಟ್ಟಗಳನ್ನು ಏರುತ್ತಾ ಸಾಗುತ್ತಿದ್ದಂತೆ, ಸಾವಿರಾರು ವರ್ಷಗಳ ಹಿಂದಿನ ಮಾನವ ಜೀವನ ನಮ್ಮ ಕಣ್ಣೆದುರು ಜೀವಂತವಾಗುತ್ತಿರುವಂತೆ ಅನಿಸಿತು. ಆದಿ ಮಾನವರು ಗುಹೆಗಳ ಮೇಲೆ ಚಿತ್ರಿಸಿದ್ದ ಪ್ರಾಣಿಗಳ ಚಿತ್ರಗಳು, ದಿನನಿತ್ಯದ ಬದುಕಿನ ದೃಶ್ಯಗಳು, ಸಂಸ್ಕೃತಿ ಮತ್ತು ನಂಬಿಕೆಗಳು ನಮ್ಮನ್ನು ಆಳವಾಗಿ ಆಕರ್ಷಿಸಿದವು. ಅಲ್ಲದೆ, ಹಳೇಶಿಲಾಯುಗದ ಮಾನವರು ತಮ್ಮ ಪೂರ್ವಜರಿಗಾಗಿ ಬಂಡೆಕಲ್ಲುಗಳಲ್ಲಿ ನಿರ್ಮಿಸಿದ್ದ ಸುಂದರವಾದ ಸಮಾಧಿಗಳು ಅವರ ಕಲಾ ನೈಪುಣ್ಯ ಮತ್ತು ಬುದ್ಧಿವಂತಿಕೆಗೆ ಸಾಕ್ಷಿಯಾಗಿದ್ದವು. ಇಂತಹ ಶಿಲಾ ಸಮಾಧಿಗಳನ್ನು ಇಂದಿನ ಕಾಲದಲ್ಲೂ ನಿರ್ಮಿಸುವುದು ಅಷ್ಟು ಸುಲಭವಲ್ಲ ಎಂಬ ಭಾವನೆ ನಮಗೆ ಮೂಡಿತು.
ಸುಮಾರು ಮಧ್ಯಾಹ್ನ ೨:೦೦ ಗಂಟೆಯವರೆಗೆ ಹಿರೇಬೆಣಕಲದ ಐತಿಹಾಸಿಕ ಮಹತ್ವವನ್ನು ಅಧ್ಯಯನ ಮಾಡುತ್ತಾ, ಅಲ್ಲಿನ ಪ್ರತಿಯೊಂದು ಶಿಲೆಯೂ ಒಂದು ಕಥೆ ಹೇಳುತ್ತಿರುವಂತೆ ಅನಿಸಿತು.
ಅಲ್ಲಿಂದ ಹೊರಟು ನಾವು ಕುಡಿತಿನಿಯ ಸಮೀಪದಲ್ಲಿರುವ ಬೂದಿ ಗುಡ್ಡ (ಅಥವಾ ಬೂದಿ ದಿಬ್ಬ) ಎಂಬ ವಿಶಿಷ್ಟ ಸ್ಥಳಕ್ಕೆ ತೆರಳಿದೆವು. ದೂರದಿಂದ ನೋಡಿದರೆ ಅದು ಒಂದು ಪುಟ್ಟ ಗುಡ್ಡದಂತೆ ಕಾಣುತ್ತಿದ್ದರೂ, ಅದನ್ನು ಹತ್ತಿ ಕೈಯಿಂದ ಮುಟ್ಟಿ ನೋಡಿದಾಗ ಮಾತ್ರ ಅದು ನಿಜವಾಗಿಯೂ ಬೂದಿಯಿಂದ ನಿರ್ಮಿತವಾದ ದಿಬ್ಬ ಎಂಬುದು ತಿಳಿಯಿತು. ಈ ಸ್ಥಳದ ವಿಶೇಷವೆಂದರೆ, ಹಳೇಶಿಲಾಯುಗದ ಮಾನವರು ಹಸು, ಎತ್ತು, ಕರಗಳಂತಹ ಪ್ರಾಣಿಗಳ ಸಗಣಿಯನ್ನು ಮರುಪಯೋಗ ಮಾಡುವ ಜ್ಞಾನವಿಲ್ಲದೆ, ಅದನ್ನು ಒಂದೇ ಸ್ಥಳದಲ್ಲಿ ಶೇಖರಿಸಿ ಬೆಂಕಿಗೆ ಒಡ್ಡಿ ಬೂದಿಯಾಗಿ ಪರಿವರ್ತಿಸಿ, ಮತ್ತೆ ಅದೇ ಸ್ಥಳದಲ್ಲಿ ಸಗಣಿಯನ್ನು ಹಾಕುತ್ತಿದ್ದರು ಎಂಬ ಮಹತ್ವದ ವಿಚಾರವನ್ನು ಇತಿಹಾಸಕಾರರು ಪತ್ತೆಹಚ್ಚಿದ್ದಾರೆ. ಈ ವಿಚಾರ ನಮ್ಮನ್ನು ಅಚ್ಚರಿಗೊಳಿಸಿ, ಆದಿ ಮಾನವನ ಬದುಕಿನ ಸರಳತೆಯನ್ನೂ ಚಿಂತನೆಗಳನ್ನೂ ಅರಿಯಲು ಸಹಾಯ ಮಾಡಿತು.
ನಂತರ ಸಂಜೆ ೪:೦೦ ಗಂಟೆಗೆ ನಾವು ಬಳ್ಳಾರಿ ನಗರದಲ್ಲಿರುವ ರಾಬರ್ಟ್ ಬ್ರೂಸ್ ಪೂಟ್ ಪುರಾತತ್ವ ವಸ್ತು ಸಂಗ್ರಾಲಯಕ್ಕೆ ಭೇಟಿ ನೀಡಿದೆವು. ಅಲ್ಲಿ ಸಂಗ್ರಹಿಸಲಾದ ಹಳೇಶಿಲಾಯುಗದ ಉಪಕರಣಗಳು, ಕಲ್ಲಿನ ಆಯುಧಗಳು ಮತ್ತು ಇತರೆ ಪುರಾತನ ವಸ್ತುಗಳು ವಿಶೇಷವಾಗಿ ಪುರಾತತ್ವ ಶಾಸ್ತ್ರದ ವಿದ್ಯಾರ್ಥಿಗಳಿಗೆ ಅಪಾರ ಜ್ಞಾನವನ್ನು ನೀಡುವಂತಿದ್ದವು. ಪ್ರತಿಯೊಂದು ವಸ್ತುವೂ ಮಾನವನ ಅಭಿವೃದ್ಧಿ ಹಾದಿಯನ್ನು ವಿವರಿಸುವ ಮೌನ ಸಾಕ್ಷಿಗಳಾಗಿದ್ದವು.
ಸಂಜೆ ೭:೩೦ ಗಂಟೆಗೆ ನಾವು ಬಳ್ಳಾರಿ ನಗರವನ್ನು ಬಿಟ್ಟು, ದಣಿದ ದೇಹಗಳ ಜೊತೆಗೆ ಜ್ಞಾನದಿಂದ ತುಂಬಿದ ಮನಸ್ಸುಗಳೊಂದಿಗೆ ಪ್ರಯಾಣ ಮುಂದುವರೆಸಿದೆವು. ಇದೆಲ್ಲವೂ ನಾವು ಪುಸ್ತಕದಲ್ಲಿ ಹೀಗಿದೆ ಎಂದು ಓದಿದ್ದೆವು. ನಮ್ಮನ್ನು ಕಾಡಿದ ಸ್ಥಳಗಳು ಹೌದು ಆದರೆ ಅವುಗಳನ್ನು ನೋಡುತ್ತೇವೆ ಎಂಬ ಸಣ್ಣ ಅರಿವು ನಮಗಿರಲಿಲ್ಲ. ಆದರೆ 2025ರ ಕೊನೆಯಲ್ಲಿ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದ ಈ ಸ್ಥಳಗಳಿಗೆ ನಾವು ಹೋಗಿ ಬಂದೆವು ಎಂಬುದನ್ನು ನನಗೀಗಲೂ ಅರಗಿಸಿಕೊಳ್ಳಲಾಗುತ್ತಿಲ್ಲ. ಎಲ್ಲವು ಒಂದು ಸ್ವಪ್ನ ಅದರಲ್ಲಿ ನಾನಿದ್ದೇನೇನೋ ಅನಿಸುತ್ತದೆ ಆದರೆ ವಾಸ್ತವದಲ್ಲಿ ನಾವು ಆ ಸ್ಥಳಗಳಿಗೆ ಪಾದಸ್ಪರ್ಶ ಮಾಡಿ ಬಂದೆವು ಎಂಬುದು ಇಂದಿಗೂ ಖುಷಿ ಇದೆ. ಮುಂದೆಯೂ ಈ ನೆನಪು ಮರೆಯಲಾಗದ ಸ್ಮೃತಿಯೊಳಗೆ ನನ್ನ ನೆನಪಿನ ಪುಟಗಳಲ್ಲಿ ಸದಾ ಜೀವಂತವಿರುತ್ತದೆ. ತಡರಾತ್ರಿ ೧೨:೦೦ ಗಂಟೆಗೆ ಸುರಕ್ಷಿತವಾಗಿ ರಾಯಚೂರಿಗೆ ತಲುಪಿದೆವು.
ಒಟ್ಟಾರೆಯಾಗಿ, ಈ ಒಂದು ದಿನದ ಶೈಕ್ಷಣಿಕ ಅಧ್ಯಯನ ಪ್ರವಾಸದಲ್ಲಿ ನಾನು ನನ್ನ ಸ್ನೇಹಿತರೊಂದಿಗೆ ಅಪಾರ ಸಂತೋಷವನ್ನು ಹಂಚಿಕೊಂಡೆ. ಇತಿಹಾಸವನ್ನು ಪುಸ್ತಕಗಳಲ್ಲಿ ಓದಿದಷ್ಟೇ ಅಲ್ಲ, ಅದನ್ನು ನೋಡಿ, ಅನುಭವಿಸಿ, ಅರಿತುಕೊಂಡ ಸ್ಮರಣೀಯ ದಿನವಿದು. ಈ ಪ್ರವಾಸ ನಮ್ಮ ಜೀವನದಲ್ಲಿ ಎಂದಿಗೂ ಮರೆಯಲಾಗದ ಒಂದು ಅಮೂಲ್ಯ ಅನುಭವವಾಗಿ ಉಳಿಯಲಿದೆ.
ಪ್ರವಾಸದ ಅನುಭವವನ್ನು ಬರೆಯಲು ಪ್ರೋತ್ಸಾಹಿಸಿ, ಅಕ್ಷರ ಸಂಯೋಜನೆಯನ್ನು ಮಾಡಿದ ಗುರುಗಳಾದ ಡಾ. ಡಿ. ವೀರೇಶ ಸರ್ ಹಾಗೂ ಡಾ. ಮೇಘನ ಜಿ. ಮೇಡಂ ಹಾಗೂ ಡಾ.ವೈ ಬಿ ಕಡಕೋಳ ಸರ್ ರವರು ಈ ಬರಹವನ್ನು ಪ್ರಕಟಿಸಲು ಸಹಕಾರ ನೀಡಿದ ಎಲ್ಲರಿಗೂ ಹೃದಯಪೂರ್ವಕ ಕೃತಜ್ಞತೆಗಳು.
ಸ್ನೇಹ ಚೌಹಾಣ್, ಎಂ.ಎ. ವಿದ್ಯಾರ್ಥಿ ಇತಿಹಾಸ ವಿಭಾಗ, ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯ, ರಾಯಚೂರು

