ಇಂದು ವೈಕುಂಠ ಏಕಾದಶಿ. ಇದು ಸ್ವರ್ಗದ ಬಾಗಿಲು ತೆರೆಯುವ ದಿನವೆಂದು ನಂಬಿಕೆ.ಹೀಗಾಗಿ ಈ ದಿನ ದೇಗುಲಗಳಲ್ಲಿ ವಿಶೇಷ ಪೂಜೆಗಳು ಜರುಗುತ್ತವೆ.ಏಕಾದಶ ಇದು ಸಂಸ್ಕೃತ ಪದ.ಈ ಪದದ ಅರ್ಥ ಹನ್ನೊಂದು. ಹಿಂದೂ ಪಂಚಾಂಗದ ಹನ್ನೆರಡು ಮಾಸಗಳ ಶುಕ್ಲಪಕ್ಷದ ಮತ್ತು ಕೃಷ್ಣಪಕ್ಷದ ಹನ್ನೊಂದನೆಯ ದಿನವನ್ನು ಏಕಾದಶಿ ಎಂದು ಆಚರಿಸಲಾಗುತ್ತದೆ. ಒಂದು ಮಾಸದಲ್ಲಿ ಎರಡು ಏಕಾದಶಿಗಳು ಬರುತ್ತವೆ. ಈ ದಿನದಂದು ಉಪವಾಸ ಮಾಡುವ ಪದ್ಧತಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಮಾರನೆಯ ದಿನ ದ್ವಾದಶಿಯಂದು ಉಪವಾಸವನ್ನು ಮುರಿದು ಆಹಾರ ಸೇವಿಸುವರು.
ವೈಕುಂಠ ಏಕಾದಶಿ ಏಕಾದಶಿಗಳಲ್ಲಿಯೇ ವಿಶೇಷವಾದದ್ದು. ಧರ್ನುಮಾಸದ ಶುಕ್ಲಪಕ್ಷದ ಈ ದಿನ ಶ್ರೀ ವಿಷ್ಣುವಿನ ವಾಸಸ್ಥಾನ ವೈಕುಂಠ ದ್ವಾರ ತೆರೆಯುವ ದಿನವಾದ್ದರಿಂದ ಈ ಏಕಾದಶಿ ಶ್ರೇಷ್ಠವಾದದ್ದು ಎಂಬ ನಂಬಿಕೆ.ಆದ್ದರಿಂದಲೇ ಇದನ್ನು ಮೋಕ್ಷ ಏಕಾದಶಿ ಎನ್ನುವರು. ಈ ದಿನದಂದು ಶ್ರೀ ವೆಂಕಟೇಶ್ವರ ಶ್ರೀನಿವಾಸ ಮತ್ತು ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜೆಗಳು ಜರುಗುತ್ತವೆ. ಈ ದಿನ ದೇವಾಲಯದಲ್ಲಿ ನಿರ್ಮಿಸಿರುವ ಪ್ರವೇಶ ದ್ವಾರದ (ವೈಕುಂಠ ದ್ವಾರ) ಒಳಗೆ ಹೋಗಿ ದೇವರ ದರ್ಶನ ಪಡೆದು ಬಂದರೆ ಮೋಕ್ಷ ಸಿಗುವುದೆಂಬ ನಂಬಿಕೆ.ಅಂದರೆ ಈ ದಿನದಂದು ಸ್ವರ್ಗದ ಅಥವ ವಿಷ್ಣು ಲೋಕದ ಬಾಗಿಲು ತೆರೆದಿರುತ್ತದೆ ಎಂಬ ನಂಬಿಕೆ.
ಆಷಾಢ ಮಾಸದ ಶುಕ್ಲಪಕ್ಷದ ಹೆಸರು ಶಯನೀ. ಈ ದಿನ ಮಹಾವಿಷ್ಣುವು ನಿದ್ರಿಸಲು ತೆರಳುವನೆಂದೂ, ಮುಂದೆ ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿ “ಪ್ರಭೋದಿನಿ”ಯ ನಂತರ ಬರುವ ಉತ್ಥಾನ ದ್ವಾದಶಿಯಂದು ಅವನು ನಿದ್ರೆ ಮುಗಿಸಿ ಎಚ್ಚರಗೊಳ್ಳುತ್ತಾನೆ ಎಂಬುದು ಆಸ್ತಿಕರ ನಂಬಿಕೆ.ಈ ಎರಡೂ ಏಕಾದಶಿಗಳ ನಡುವಿನ ನಾಲ್ಕು ತಿಂಗಳ ಅವಧಿಯನ್ನು ಚಾತುರ್ಮಾಸ್ಯ ಎನ್ನುವರು.
ವೈಕುಂಠ ಏಕಾದಶೀ ಎಂಬುದು ಹೇಗೆ ಬಂತು ಎಂಬುದಕ್ಕೆ ಹಲವು ದೃಷ್ಟಾಂತಗಳನ್ನು ಪುರಾಣಗಳಲ್ಲಿ ಕಾಣಬಹುದು. ಭವಿಷೋತ್ತರ ಪುರಾಣದಲ್ಲಿ ಬರುವ ಒಂದು ದೃಷ್ಟಾಂತ ಈ ರೀತಿ ಇದೆ.ಏಕಾದಶಿ ಎನ್ನುವ ದೇವಿಯು ವಿಷ್ಣುವಿನಿಂದ ಉದ್ಬವಳಾಗಿ “ಮುರ” ಎನ್ನುವ ರಾಕ್ಷಸನನ್ನು ಸಂಹರಿಸಲು ವಿಷ್ಣುವಿಗೆ ಸಹಾಯ ಮಾಡಿದಳಂತೆ.ಇದರಿಂದ ಸಂತಸನಾದ ವಿಷ್ಣು ಆ ದೇವಿಗೆ ಈ ಕಾರ‍್ಯದ ಫಲಿತವಾಗಿ ವರವೊಂದನ್ನು ಕೇಳು ಎನ್ನುವನು. ಆಗ ಅವಳು “ವೈಕುಂಠ ಏಕಾದಶಿ” ದಿನದಂದು ಯಾರು ವಿಷ್ಣುವನ್ನು ಭಯ ಭಕ್ತಿ ಹಾಗೂ ಪೂಜ್ಯನೀಯ ಭಾವನೆಯಿಂದ ಆರಾಧಿಸುತ್ತಾರೋ ಹಾಗೂ ಆ ದಿನ ಉಪವಾಸ ಕೈಗೊಳ್ಳುವರೋ ಅಂಥ ಸಾತ್ವಿಕರಿಗೆ ಅವರು ಮಾಡುವ ಪಾಪಗಳನ್ನು ಪರಿಹರಿಸಿ ಅವರಿಗೆ ಮೋಕ್ಷವನ್ನು ಕರುಣಿಸು “ ಎಂದು ವರವನ್ನು ಕೋರಿದಳು. ಅದರಂತೆ ವಿಷ್ಣುವು “ತಥಾಸ್ತು” ಎಂದು ವರವನ್ನು ಕರುಣಿಸಿದ ವರ ಫಲವೀಗ ಭೂಮಿಯಲ್ಲಿ ವೈಕುಂಠ ಏಕಾದಶಿ ವ್ರತ ಪಾರಂಭಗೊಂಡಿತು ಎಂದು ಹೇಳುವರು.
ಈ ದಿನ ಶ್ರೀ ಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು ಬೋಧಿಸಿದನು.ಈ ದಿನ ಶ್ರೀಮನ್ ನಾರಾಯಣನು ಮುಕ್ಕೋಟಿ ದೇವತೆಗಳಿಗೆ ದರ್ಶನ ಕೊಡುವನು.ವೈಕುಂಠ ಏಕಾದಶಿಯಂದು ವಿಷ್ಣು ದೇವಾಲಯದಲ್ಲಿ ಈಶಾನ್ಯದ ಬಾಗಿಲು ತೆರೆಯುತ್ತಾರೆ. ಅಂದು ಭಕ್ತರು ಪೂರ್ವದ ಬಾಗಿಲಿನಿಂದ ದೇವಸ್ಥಾನದ ಒಳಗೆ ಬಂದು ಉತ್ತರದ ಬಾಗಿನಲ್ಲಿರುವ ಶೇ಼ಷಶಯನನ್ನು ದರ್ಶನ ಮಾಡಿಕೊಂಡು ಉತ್ತರದ ಬಾಗಿಲಿನಿದ ಹೊರಗೆ ಹೋಗುವರು.ವರ್ಷಕ್ಕೆ ಒಮ್ಮೆ ಮಾತ್ರ ಉತ್ತರದ ಬಾಗಿಲಿನ ಮೂಲಕ ದರ್ಶನವಾಗುವ ಈ ದಿನಕ್ಕೆ ಮಹತ್ವ ಉಂಟು.
ಇದೇ ವೈಕುಂಠ ಏಕಾದಶಿಯಂದು ಸಮುದ್ರ ಮಂಥನದ ಸಂದರ್ಭದಲ್ಲಿ ಅನೇಕಾನೇಕ ಜೀವಿಗಳು,ದ್ರವ್ಯ ಜೀವಿಗಳು,ಕಾರ್ಕೊಟಕದಂತಹ ವಸ್ತುಗಳು ಹೊರಬರುವ ಸಂದರ್ಭದಲ್ಲಿ ಮೃತ್ಯುಂಜಯನನ್ನು ಪಡೆಯುವಂತಹ “ಅಮೃತ”ವೂ ಹೊರಬಂದಿತೆನ್ನುವರು.ಹೀಗೆ ಈ ದಿನವು ಅನೇಕ ಮಹತ್ವವನ್ನು ಹೊಂದಿದ್ದು.ಸತ್ತ ಮೇಲೆ ಸ್ವರ್ಗಪ್ರಾಪ್ತಿಯಾಗಲಿ ಎಂದು ಎಲ್ಲರೂ ಬಯಸುವ ಬಯಕೆಗಳಲ್ಲಿ ಒಂದು. ಅದಕ್ಕಾಗಿ ವಿವಿಧ ಆಚರಣೆಗಳಲ್ಲಿ ತೊಡಗುವುದು ಕೂಡ.ಹೀಗಾಗಿ ಸ್ವರ್ಗದ ಬಾಗಿಲು ತೆರೆಯುವ ದಿನವೆಂದು ವೈಕುಂಠ ಏಕಾದಶಿಯನ್ನು ಕರೆಯಲಾಗಿದೆ.
ಬ್ರಹ್ಮಾಂಡ ಪುರಾಣದಲ್ಲಿ ಈ ರೀತಿ ದೃಷ್ಟಾಂತವೊಂದು ಈ ಕುರಿತು ಬರುತ್ತದೆ. ಪುರಾತನ ಕಾಲದಲ್ಲಿ ಗೋಕಲವೆಂಬ ನಗರದಲ್ಲಿ ವೈಖಾಸನ ಎಂಬ ರಾಜರ್ಷಿಯಿದ್ದ. ಒಂದು ದಿನ ಅವನ ಕನಸಿನಲ್ಲಿ ತನ್ನ ತಂದೆ ಸತ್ತ ನಂತರ ನರಕದಲ್ಲಿರುವ ಬಗ್ಗೆ ಕನಸು ಬಿದ್ದು. ಆ ಕನಸಿನ ಬಗ್ಗೆ ಋಷಿ ಮುನಿಗಳಲ್ಲಿ ವಿಚಾರಿಸಲು ಅವರು ಅದು ನಿಜವೆಂದರು. ಆಗ ಅದನ್ನು ಪಾರು ಮಾಡುವ ಬಗೆ ಹೇಗೆ ಎಂದು ತಿಳಿಯಲು ಯಜ್ಞಯಾಗಾದಿಗಳನ್ನು ಮಾಡಲು ಸೂಚಿಸಿದರು. ಏಕಾದಶಿಯ ವ್ರತಾಚರಣೆಯೊಂದಿಗೆ ಈ ಯಜ್ಞ ಯಾಗಾದಿಗಳನ್ನು ಮಾಡುತ್ತ ಕೊನೆಗೆ ವೈಕುಂಠ ಏಕಾದಶಿಯಂದು ಈ ವ್ರತವನ್ನು ಪೂರ್ಣಗೊಳಿಸಿ ಸೂಕ್ತ ದಾನಧರ್ಮವನ್ನು ಮಾಡುತ್ತಿದ್ದಂತೆ ಅವನ ತಂದೆಯ ದೇಹವು ನರಕದಿಂದ ಹೊರಬಂದು ಸ್ವರ್ಗವನ್ನು ಸೇರಿತು.ಮುಂದೆ ಈ ದಿನವನ್ನು ವೈಕುಂಠ ಏಕಾದಶಿಯೆಂದು ಆಚರಿಸಿದರು
ಇನ್ನೊಂದು ದೃಷ್ಟಾಂತದನ್ವಯ ನಂದಗೋಪ ಎಂಬುವನು ಶ್ರೀ ಕೃಷ್ಣನ ಸಲಹೆಯಂತೆ ಏಕಾದಶಿಯಂದು ಉಪವಾಸ ಮತ್ತು ದ್ವಾದಶಿಯಂದು ಪಾರಾಯಣೆಯನ್ನು ನಿರಂತರವಾಗಿ ಆಚರಿಸುತ್ತಿದ್ದನಂತೆ. ಹೀಗೆ ಆಚರಿಸುತ್ತಿರಲು ಒಮ್ಮೆ ಏಕಾದಶಿ ಆಚರಿಸಿ ದ್ವಾದಶಿಯಂದು ಬೆಳಗಿನ ಜಾವ ಯಮುನಾ ನದಿಯಲ್ಲಿ ಸ್ನಾನಕ್ಕಿಳಿಯಲು ಅದು ರಾಕ್ಷಸರ ಸಂಚಾರ ಕಾಲವಾದ್ದರಿಂದು ವರುಣದೇವನ ಸೇವಕನಾದ ರಾಕ್ಷಸ ನಂದಗೋಪನನ್ನು ವರುಣ ದೇವನ ಬಳಿಗೆ ಕರೆದುಕೊಂಡು ಹೋದನಂತೆ, ಇತ್ತ ನಂದ ಗೋಪಾಲಕದವರೆಲ್ಲಿ ನಂದಗೋಪ ಬರದಿರುವುದನ್ನು ಕಂಡು ಬಲರಾಮಕೇಷ್ಣರಿಗೆ ಈ ಸುದ್ದಿ ಮುಟ್ಟಿಸಲು,ಶ್ರೀ ಕೃಷ್ಣ ಪರಮಾತ್ಮನು ವರುಣಲೋಕಕ್ಕೆ ತೆರಳಿ ವರುಣನನ್ನು ಕಂಡು ವಿಚಾರ ತಿಳಿಸಲು ವರುಣದೇವ ಸಾತ್ವಿಕನನ್ನು ತನ್ನ ಸೇವಕ ಕರೆದುಕೊಂಡು ಬಂದ ತಪ್ಪಿಗೆ ಮನ್ನಿಸಬೇಕೆಂದು ಕೃಷ್ಣ ಪರಮಾತ್ಮನಲ್ಲಿ ನಿವೇದಿಸಿಕೊಂಡು ಗೋಪಾಲಕನನ್ನು ಕಳಿಸಿಕೊಟ್ಟನು..ನಂದಗೋಪನಿಗೆ ಪರಮಾನಂದವಾಯಿತು.ಈ ಸಂದರ್ಭ ಎಲ್ಲರೂ ಕೃಷ್ಣನನ್ನು ಕೊಂಡಾಡಿದರು.ಪರಮಾತ್ಮನೆಂದು ನಿನ್ನ ನಿಜರೂಪವನ್ನು ಅರಿಯಲಾರೆವು ಎಂದು ಭಕ್ತಿಯಿಂದ ನಮಿಸಿದರು.ಇದನ್ನರಿತ ಕೃಷ್ಣ ಎಲ್ಲರಿಗೂ ಯಮುನಾ ನದಿಯಲ್ಲಿ ಬ್ರಹ್ಮಕುಂಡವೆಂಬ ಮಡುವಿನಲ್ಲಿ ಮುಳುಗಿ ಬರುವಂತೆ ತಿಳಿಸಿದ. ಹೀಗೆ ಎಲ್ಲರೂ ಆ ಬ್ರಹ್ಮ ಕುಂಡದಲ್ಲಿ ಮುಳುಗಿ ಬರಲು ಅವರಿಗೆ ವೈಕುಂಠದ ದರ್ಶನವಾಯಿತು.ಆಗ ಶ್ರೀ ಕೃಷ್ಣನು ಪರದೈವವೆಂಬ ಅವರ ನಂಬಿಕೆ ಸ್ಥಿರವಾಯಿತು.
ವೈಕುಂಠ ಏಕಾದಶಿಯಂದು ಶ್ರೀ ಮನ್ನಾರಾಯಣನ ದರ್ಶನ ಮಾಡಿ ವೈಕುಂಠ ದ್ವಾರದ ಮೂಲಕ ಹೊರಬರಬೇಕು.ಹೀಗೆ ಮಾಡಿದರೆ ಸಪ್ತ ಜನ್ಮದಲ್ಲಿ ಮಾಡಿದ ಪಾಪಗಳು ನಾಶವಾಗುತ್ತವೆ ಎಂಬ ನಂಬಿಕೆ.ವೈಕುಂಠ ದ್ವಾರದಲ್ಲಿ ಹೋಗುವುದೆಂದರೆ ನಾವು ತಲೆಬಾಗಿ ಹೋಗಬೇಕು. ಬಾಗುವುದೆಂದರೆ ನಾವು ನಮ್ಮ ಅಹಂಕಾರವನ್ನು ಕಳೆದು ಹೋದಂತೆ.ಅಂದರೆ ಎಲ್ಲಿಯವರೆಗೆ ನಮ್ಮಲ್ಲಿ ಅಹಂಕಾರವಿರುತ್ತದೆಯೋ ಅಲ್ಲಿಯವರೆಗೂ ನಮಗೆ ದೇವರ ದರ್ಶನ ಸಾಧ್ಯವಿಲ್ಲ.ಅದನ್ನು ಕಳೆದುಕೊಂಡ ಕೂಡಲೇ ಇರುವುದೆಲ್ಲ ದೈವವೇ ಎಂಬ ನಂಬಿಕೆ ಕೂಡ.ವಶಿಷ್ಠರ ಪ್ರಕಾರ ಹನ್ನೊಂದು ಇಂದ್ರೀಯಗಳಿಂದ ಸಂಪಾದಿಸಿದ ಸಕಲಪಾಪಗಳನ್ನು ಹನ್ನೊಂದನೆಯ ತಿಥಿಯಾದ ಏಕಾದಶಿಯು ಪರಿಹರಿಸುತ್ತದೆ ಎಂಬ ನಂಬಿಕೆ.ಆದ್ದರಿಂದ ಹನ್ನೊಂದನೆಯ ಏಕಾದಶಿಗೆ ಸರಸಮನಾದದ್ದು ಯಾವುದೂ ಇಲ್ಲ ಎಂಬುದು..
ಏನೇ ಇರಲಿ ಏಕ ಎಂದರೆ ಒಂದು ದಶ ಎಂದರೆ ಹತ್ತು ಈ ಒಂದು ಮತ್ತು ಹತ್ತು ಕೂಡಿ ಏಕಾದಶಿ ಎಂದಾಗಿದೆ. ಹನ್ನೊಂದರ ವಿಶೇಷವು ಹನ್ನೆರಡು ಮಾಸಗಳಲ್ಲಿ ಬರುವ ಮೂಲಕ ಹನ್ನೊಂದನೆಯದು ವೈಕುಂಠ ಏಕಾದಶಿಯಾಗಿದ್ದು ಎಲ್ಲ ದೇಗುಲಗಳಲ್ಲಿಯೂ ಭಕ್ತಿಯಿಂದ ಶ್ರದ್ಧೆಯಿಂದ ದೇವರನ್ನು ಪೂಜಿಸಿ ಪ್ರಾರ್ಥಿಸಿ ಮುಂಬರುವ ದಿನಗಳಲ್ಲಿ ಉತ್ತಮ ಕಾರ‍್ಯಗಳಲ್ಲಿ ಮನಸ್ಸನ್ನು ತೊಡಗಿಸಿಕೊಂಡು ಬದುಕನ್ನು ನಡೆಸುವ ಮೂಲಕ ನಿತ್ಯದ ಬದುಕಿನಲ್ಲಿ ದೈವತ್ವದ ಮೂಲಕ ಸತ್ತು ಹೋಗುವ ಮುನ್ನ ಸ್ವರ್ಗ ಪ್ರಾಪ್ತಿಯ ಬದುಕನ್ನು ನಡೆಸಿದರೆ ಬದುಕು ಹಸನಾಗುವುದು ಖಂಡಿತ.ಇದು ಪುರಾಣದ ವಿಚಾರವಾದರೂ ಕೂಡ ಇಂದು ನಡೆಯುತ್ತಿರುವ ಕೆಟ್ದ ಕಾರ್ಯಗಳಲ್ಲಿ ತೊಡಗಿದ ಮನಸುಗಳು ಕೂಡ ಒಳ್ಳೆಯದರ ಕಡೆಗೆ ತೆರಳುವ ಮೂಲಕ ಮುಕ್ತಿ ಪ್ರಾಪ್ತಿ ಮಾಡಿಕೊಂಡರೆ ಇನ್ನೂ ಉತ್ತಮ.
ಡಾ.ವೈ.ಬಿ.ಕಡಕೋಳ
ಶಿಕ್ಷಕರು
ಮಾರುತಿ ಬಡಾವಣೆ. ಸಿಂದೋಗಿ ಕ್ರಾಸ್.
ಮುನವಳ್ಳಿ-೫೯೧೧೧೭
ತಾಲೂಕ ಃ ಸವದತ್ತಿ ಜಿಲ್ಲೆ ಃ ಬೆಳಗಾವಿ
೯೪೪೯೫೧೮೪೦೦

