ಮೂಡಲಗಿ – ನಾವು ಬುದ್ಧನನ್ನು ಬೆಳೆಸಿದವರು, ಸಾಯಿ ಯನ್ನು ಬೆಳೆಸಿದವರು ಆದರೆ ಅವರಂತೆಯೇ ಬದುಕಿದ ಅಥಣಿಯ ಮುರುಗೇಂದ್ರರನ್ನು ಬೆಳೆಸಲಿಲ್ಲ, ಸಿದ್ದೇಶ್ವರರನ್ನು ಬೆಳೆಸಲಿಲ್ಲ. ಇನ್ನು ಮುಂದಾದರೂ ಇಂಥ ಜ್ಞಾನಿಗಳನ್ನು ನಾವು ಬೆಳೆಸಬೇಕು, ಅವರ ಆದರ್ಶಗಳನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದು ಬಾಗೋಜಿಕೊಪ್ಪದ ಶ್ರೀ ಶಿವಲಿಂಗ ಮುರುಘರಾಜೇಂದ್ರ ಸ್ವಾಮಿಗಳು ಹೇಳಿದರು.
ಇಲ್ಲಿನ ಗ್ರಹಸ್ಥಾಶ್ರಮ ಆಧ್ಯಾತ್ಮಿಕ ಕೇಂದ್ರದಲ್ಲಿ ಶ್ರೀ ಸಿದ್ಧೇಶ್ವರ ಸ್ವಾಮಿಗಳ ಮೂರನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿದರು.
ಇಂದಿನ ದಿನಗಳಲ್ಲಿ ವಯಸ್ಸಾದ ಮೇಲೆ ನಾವು ಅಧ್ಯಾತ್ಮದತ್ತ ಬರುತ್ತಿದ್ದೇವೆ ಯುವಕರು ಯಾರೂ ಬರುತ್ತಿಲ್ಲ ಇದು ವಿಷಾದನೀಯ. ಮಕ್ಕಳಿಗೆ ಸಂಸ್ಕಾರ ಕೊಡುವುದು ಹಿರಿಯರ ಕರ್ತವ್ಯ. ಯಾಕೆಂದರೆ ಹದಿ ಹರೆಯದವರು ದಾರಿ ತಪ್ಪುತ್ತಿದ್ದಾರೆ ಅಂಥವರಿಗೆ ಸಂಸ್ಕಾರದ ಮಾರ್ಗದರ್ಶನ ನೀಡಬೇಕಾಗಿದೆ. ಇಂಥ ಆಧ್ಯಾತ್ಮಿಕ ಕಾರ್ಯಕ್ರಮಕ್ಕೆ ಯುವಕರನ್ನು ಕರೆದುಕೊಂಡು ಬರಬೇಕು ಎಂದರು.
ಸಿದ್ದೇಶ್ವರ ಸ್ವಾಮಿಗಳು ಪ್ರಕೃತಿ ಪ್ರೇಮಿಗಳು, ಸಮಯ ನಿಷ್ಠರು ಅವರ ಸಮಯಪಾಲನೆ ಎಲ್ಲರೂ ಕಲಿಯಬೇಕು. ಸಮಾಜಕ್ಕೆ ಅಧ್ಯಾತ್ಮದ ಜ್ಞಾನವನ್ನು ನೀಡಿ ಹೋದ ಸಿದ್ದೇಶ್ವರರು ನಿಜಕ್ಕೂ ಅಮರರು ಅಂಥವರನ್ನು ಕಳೆದುಕೊಂಡ ಭಾರತ ದೇಶ ಬಡವಾಗಿದೆ ಎಂದು ಬಾಗೋಜಿಕೊಪ್ಪದ ಶ್ರೀ ಶಿವಲಿಂಗ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು
ಹಾರೂಗೇರಿಯ ಚಿಂತಕ ಪ್ರೊ. ಆಯ್ ಆರ್ ಮಠಪತಿ ಮಾತನಾಡಿ, ನಿರ್ಮೋಹತ್ವದಿಂದ ಸಿದ್ದೇಶ್ವರ ಸ್ವಾಮೀಜಿಗಳು ಬದುಕಿದ್ದರು. ನಾನು ಯಾರು ಎಂಬುದನ್ನು ತಿಳಿದುಕೊಳ್ಳಲು ಪೂಜ್ಯ ಮಲ್ಲಿಕಾರ್ಜುನ ಸ್ವಾಮೀಜಿಗಳ ತತ್ವಗಳ ಅಡಿಯಲ್ಲಿ ಬದುಕಿದ್ದರು. ದೇವನು ನಮ್ಮೊಳಗೆ ಇದ್ದಾನೆ. ಆ ಶಕ್ತಿಯನ್ನು ಜಾಗೃತ ಮಾಡಲು ಗುರುವಿಗೆ ಸಿದ್ದೇಶ್ವರರು ವಿನೀತರಾದರು. ಅವರ ವ್ಯಕ್ತಿತ್ವ ಅಯಸ್ಕಾಂತ ಇದ್ದಂತಿತ್ತು. ಅವರ ಭಾವದಲ್ಲಿ ದಿಗಂಬರತ್ವ ಇತ್ತು ಅವರು ನಿರಹಂಕಾರಿಯಾಗಿದ್ದರು ಆದ್ದರಿಂದಲೇ ಅವರು ಜ್ಞಾನಿಯಾಗಿದ್ದರು ಎಂದರು
ಮಕ್ಕಳ ಸಾಹಿತಿ ಸಂಗಮೇಶ ಗುಜಗೊಂಡ ಮಾತನಾಡಿ, ಸಿದ್ದೇಶ್ವರ ಸ್ವಾಮೀಜಿಯವರೆಂದರೆ ಸೂರ್ಯನನ್ನೇ ತಮಗೆ ತೋರಿಸಿದಂತೆ. ಅವರೊಬ್ಬ ಶ್ರೇಷ್ಠ ದಾರ್ಶನಿಕರು. ಈ ಪ್ರಪಂಚದ ಸತ್ಯವನ್ನು ಅವರು ತಮ್ಮ ಕೊನೆಯ ಪತ್ರದಲ್ಲಿ ಹೇಳಿದ್ದಾರೆ. ಈ ಬದುಕಿನಲ್ಲಿ ನಾವು ಏನು ಮಾಡಬೇಕಾಗಿದೆ ಎಂಬುದರ ಚಿಂತನೆ ಮಾಡಲು ಅವರು ಹೇಳುತ್ತಿದ್ದರು. ಬುದ್ಧ, ಬಸವರ ಸಾಲಿನಲ್ಲಿ ನಿಲ್ಲುವ ಪೂಜ್ಯರು ಎಲ್ಲ ಉಪಾಧಿಗಳನ್ನು ಮೀರಿ ನಿಂತ ದಾರ್ಶನಿಕರಾಗಿದ್ದರು ಎಂದರು.
ಹಾರೂಗೇರಿಯ ಚಂದ್ರಶೇಖರ ಗುಡಶಿ ಮಾತನಾಡಿ, ಈ ಜಗತ್ತಿಗೆ ಬೇಕಾದ ಆನೆಯನ್ನು ಸ್ವಾಮೀಜಿ ನೀಡಿದ್ದರು. ಇದರಲ್ಲಿ ಆ ಎಂದರೆ ಆನಂದ ಹಾಗೂ ನೆ ಎಂದರೆ ನೆಮ್ಮದಿಯನ್ನು ಅವರು ಭಕ್ತರಿಗೆ ನೀಡಿದ್ದರು ಎಂದರು.
ಪತ್ರಕರ್ತ ಅರುಣ ಬಣಗಾರ, ಕಸಾಪ ತಾಲೂಕಾ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ, ನಿಪನಾಳದ ಶ್ರೀ ಪ್ರಭು ಮಹಾರಾಜರು ಹಾಗೂ ವಕೀಲ ಶಿವಶಂಕರ ಬೋಳಜಾಡರ ಮಾತನಾಡಿದರು
ಮಾರುತಿ ಗೌಡರ ಹಾಗೂ ತಂಡದವರು ಪ್ರಾರ್ಥನಾ ಗೀತೆ ಹಾಗೂ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು
ಈ ಸಂದರ್ಭದಲ್ಲಿ ಸ್ಥಳೀಯ ಶ್ರೀ ಮಹಾಲಕ್ಷ್ಮಿ ಸಹಕಾರ ಸಂಘದ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾದ ಸಂತೋಷ ಪಾರ್ಶಿ ಮತ್ತು ಮಹಾದೇವ ಗೋಕಾಕ ಅವರನ್ನು ಸತ್ಕರಿಸಲಾಯಿತು.
ಬಾಲಶೇಖರ ಬಂದಿ ಕಾರ್ಯಕ್ರಮ ನಿರ್ವಹಿಸಿದರು.

