ಕೊಪ್ಪಳ ಆರಾಧ್ಯದೇವರ ಸಾಮರಸ್ಯದ
ಮಹಿಮೆಯನು ಸಾರುತಲಿಹುದು
ಸಾಗರದೋಪಾದಿಯ ಮಹಾಪರಿಷೆಯು.
ಶ್ರೀ ಅಭಿನವ ಗವಿಸಿದ್ದೇಶ್ವರರ ಜಾತ್ರೆಯು
ಸರಳತೆ ಸಾತ್ವಿಕತೆಯ ಪ್ರತಿರೂಪವು
ದಕ್ಷಿಣ ಭಾರತದ ಮಹಾಕುಂಭಮೇಳವು
ಶ್ರೀಮಠದ ಸಾಂಸ್ಕ್ರತಿಕ ಭವ್ಯಪರಂಪರೆಯು.
ಅರಿವಿನ ತ್ರಿವಿಧ ಮಹಾದಾಸೋಹವು
ಸರ್ವರ ಜಾಗೃತಿ-ಚಿಚ್ಛಕ್ತಿಯ ಪ್ರೇರಕವು
ಗ್ರಾಮೀಣ ಸೊಗಡಿನ ಆಟೋಟವು
ಕಣ್ಮನ ಸೆಳೆಯುವ ಚಿತ್ತಚಿತ್ತಾರದ
ಬೆಳಕಿನ ದೀಪಗಳ ರಂಗೋಲಿಯು.
ಆಯಸ್ಕಾಂತದಂಥ ಕಲಾಸಾಗರೋತ್ಸವವು
ವಿಶೇಷಚೇತನರ ಕಲ್ಯಾಣ ಮಹೋತ್ಸವವು.
ಪ್ರವಚನ ಚಿಂತನ ಸಂಗೀತ-ಸಾಹಿತ್ಯಮೇಳವು
ಮನಾಕರ್ಷಕ ಮನರಂಜನೆಯು.
ದೇಶಿ ಶೈಲಿಯ ವೇಷಭೂಷಣಗಳು
ಜಾನಪದರ ವಿಧವಿಧ ಕ್ರೀಡೆಗಳು.
ದೇಶಿ ಸಂಸ್ಕೃತಿಯ ಹಿರಿಮೆ-ಗರಿಮೆಯನು
ವಿಶ್ವಕೆ ಸಾರಿಸಾರಿ ಅರುಹುತಲಿಹವು.
‘ಮನುಕುಲಂ ತಾನೊಂದೇ ವಲಂ’
ಭಾವೈಕೖತೆ ಪ್ರತಿಬಿಂಬಿಸುವಂತಿಹವು.
ಸರ್ವರಿಗೆ ಸ್ಪೂರ್ತಿಯ ಸೆಲೆಯು
ಉತ್ಸಾಹ-ಪ್ರೋತ್ಸಾಹದ ಕಾರಂಜಿಯು
ಹೃದಯಾನಂದ ಕಣ್ಮನಕೋರೈಸುವ ಚೈತನ್ಯದ ಚಿಲುಮೆಯಂತಿಹುದು.
ಸಪ್ತಸಾಗರದೋಪಾದಿಯಲಿಹುದು
ಸದ್ಭಕ್ತರ ಆರೋಗ್ಯ ಮಹಾಮೇಳವು
ಕೊಪ್ಪಳದ ಗವಿಸಿದ್ದೇಶ್ವರರ ಮಹಾಪರಿಷೆಯ
ವೈಭವವನು ಬಣ್ಣಿಸಲು ಪದಗಳೇ ಸಾಲವು.
*******

–-ಪ್ರೊ.ಶಕುಂತಲಾ.ಚನ್ನಪ್ಪ.ಸಿಂಧೂರ.
ಕವಯಿತ್ರಿ, ಸಾಹಿತ್ಯಚಿಂತಕರು.
ಗದಗ.

