ಬೀದರಿನ ವಿಷ್ಣುಕಾಂತ ಅವರ ನಿರ್ದೇಶನ, ನಿರ್ಮಾಣದಡಿ ಚಿತ್ರೀಕರಣ ಮಾಡಲಾದ ಜಗನ್ಮಾತೆ ಅಕ್ಕ ಮಹಾದೇವಿ ಚಲನ ಚಿತ್ರಕ್ಕೆ ಬಹಿಷ್ಕಾರ ಹಾಕಲು ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಇದರ ಅಧ್ಯಕ್ಷರು ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ ಇವರು ಕರೆ ಕೊಟ್ಟಿದ್ದಾರೆ.
ಪ್ರಕಟಣೆಯೊಂದರಲ್ಲಿ ಅವರು, ಚಲನ ಚಿತ್ರದ ಬಗ್ಗೆ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಪಟ್ಟಣ ಅವರ ಅಭಿಪ್ರಾಯ ಈ ಕೆಳಗಿನಂತಿದೆ….
ಬಹಿಷ್ಕಾರಕ್ಕೆ ಮುಖ್ಯ ಕಾರಣ ; ಚಲನ ಚಿತ್ರವನ್ನು ಪೌರಾಣಿಕ ಶಿವ ಪಾರ್ವತಿ ಕಥೆಗಳನ್ನು ಆಧರಿಸಿ ಇದು ಸನಾತನ ಧರ್ಮದ ಮೂಲ ಸ್ವರೂಪ ಎಂದು ಹೇಳುವ ಕಾರ್ಯ ಕುತಂತ್ರ ನಡೆದಿದೆ.
ಅಕ್ಕ ಮಹಾದೇವಿ ಬೆತ್ತಲೆ ಬಂದಿಲ್ಲ ; ಅಕ್ಕ ಮಹಾದೇವಿ ಅವರು ಬೆತ್ತಲೆ ಬಂದಿಲ್ಲ. ಅವರನ್ನು ಕೇಶಧಾರಿ ಅಕ್ಕ ಮಹಾದೇವಿಯನ್ನಾಗಿ ತೋರಿಸಿ ಅಕ್ಕ ಮಹಾದೇವಿ ಅವರಿಗೆ ಹಾಗೂ ಸಮಸ್ತ ಮಹಿಳೆಯರ ಕುಲಕ್ಕೆ ವಿಷ್ಣುಕಾಂತ ಅಪಮಾನ ಮಾಡಿದ್ದಾರೆ.
ವೈಚಾರಿಕ ನೆಲೆಯಲ್ಲಿ ರೂಪಗೊಂಡ ಅಕ್ಕ ಮಹಾದೇವಿ ಕಲ್ಯಾಣದ ಮೇರು ಲಿಂಗಸಾಧಕಿ. ಇಂತಹ ಪವಿತ್ರ ಐತಿಹಾಸಿಕ ವಚನಕಾರ್ತಿಯನ್ನು ಹೀಗೆ ಅವಮಾನಗೊಳಿಸಿ ದುಡ್ಡು ಕೀರ್ತಿ ಪಡೆಯಬೇಕೆನ್ನುವ ಹುನ್ನಾರ ಚಲನ ಚಿತ್ರದ ನಿರ್ಮಾಪಕರದ್ದು.
ನೋವಿನ ವ್ಯಥೆ ಏನೆಂದರೆ ನಮ್ಮ ಬಸವ ತತ್ವ ಪ್ರಸಾರ ಮಾಡುವ ಡಾ ಗಂಗಾಂಬಿಕಾ ಪಾಟೀಲ ಮತ್ತು ಡಾ ಚೆನ್ನಬಸವಾನಂದ ಸ್ವಾಮಿಗಳು ಇದರ ರಾಯಭಾರಿಗಳಾಗಿದ್ದಾರೆ. ಇದರ ಪರವಾಗಿ ಪ್ರಚಾರ ಮಾಡಿ ತಮ್ಮ ಅಜ್ಞಾನವನ್ನು ಪ್ರದರ್ಶನ ಮಾಡಿದ್ದಾರೆ.
ಡಾ ಚೆನ್ನಬಸವ ಶ್ರೀಗಳು ಇಂತಹ ನಿರ್ಮಾಪಕರಿಗೆ ಎಲ್ಲಾ ಮಠಾಧೀಶರು ದುಡ್ಡು ಕೊಡ ಬೇಕು ಎಲ್ಲರೂ ಚಲನ ಚಿತ್ರ ನೋಡ ಬೇಕೆಂದು ಕರೆ ಕೊಟ್ಟಿದ್ದು ದುರಂತದ ಸಂಗತಿ.
ಶ್ರೀ ಚೆನ್ನಬಸಾನಂದ ಸ್ವಾಮೀಜಿ ಅವರಿಗೆ ನಾನು ಫೋನ್ ಮಾಡಿ ಕೇಳಿದಾಗ ನಾನು ಚಲನ ಚಿತ್ರ ಪೂರ್ತಿ ನೋಡಿಲ್ಲ ಎಂದು ಹಾರಿಕೆ ಉತ್ತರ ಕೊಟ್ಟರು.
ಲಿಂಗಾಯತ ಧರ್ಮ ಹಾಳಾಗಿದ್ದು ವೈದಿಕ ಪಂಚ ಪೀಠ ಸ್ವಾಮೀಜಿಗಳಿಂದ ಅಲ್ಲ. ಬಸವ ತತ್ವವನ್ನು ನಾಡಿಗೆ ಪ್ರಸಾರ ಮಾಡುವ ಇಂತಹ ಅಕ್ಕ ಮಾತೆ ಸ್ವಾಮೀಜಿಗಳಿಂದ.
ಕರ್ನಾಟಕ ರಾಜ್ಯ ಸರಕಾರವು
ಇಂತಹ ವಿವಾದಾಸ್ಪದ ಚಲನ ಚಿತ್ರಗಳನ್ನು ನಿರ್ಮಿಸುವ ಸಂದರ್ಭದಲ್ಲಿ ಶರಣ ಸಂಸ್ಕೃತಿ ಅಧ್ಯಯನಕಾರರ ಸೆನ್ಸಾರ್ ಮಂಡಳಿ ರಚಿಸ ಬೇಕು.
ಇಂತಹ ಕುಲಗೆಟ್ಟ ಚಲನ ಚಿತ್ರಗಳಿಂದ ಶರಣರ ಚರಿತ್ರೆಗೆ ಮಸಿ ಬಳಿಯುವ ಕೆಲಸ ಮಾಡುವ ಸಂದರ್ಭದಲ್ಲಿ ಈ ಚಲನ ಚಿತ್ರಗಳಿಗೆ ಯಾವುದೇ ರೀತಿಯ ರಿಯಾಯಿತಿ ಸಬ್ಸಿಡಿ ನೀಡಬಾರದು.
ವಚನ ದರ್ಶನ ಪುಸ್ತಕ ಆಮೇಲೆ ಶರಣರ ಶಕ್ತಿ ಅದರ ಮುಂದುವರೆದ ಭಾಗವೇ ಈ ಜಗನ್ಮಾತೆ ಅಕ್ಕ ಮಹಾದೇವಿ.
ಇಂತಹ ಚಲನ ಚಿತ್ರಗಳನ್ನು ನೋಡುವುದು ಬಸವ ದ್ರೋಹದ ಕಾರ್ಯ. ಚಲನ ಚಿತ್ರಗಳ ಪರವಾಗಿ ಪ್ರಚಾರ ಮಾಡುವ ನಕಲಿ ಅಕ್ಕ ಮತ್ತು ಸ್ವಾಮಿಗಳಿಗೆ ಧಿಕ್ಕಾರವಿದೆ.
_________________________
ಡಾ. ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

