ಮೂಡಲಗಿ : ತಾಲೂಕಿನ ರೈತರ ವಿವಿಧ ಸಮಸ್ಯೆಗಳ ಮತ್ತು ಅವುಗಳ ಪರಿಹಾರ ಕುರಿತು ಭಾರತೀಯ ಕಿಸಾನ್ ಸಂಘದ ಉತ್ತರ ಪ್ರಾಂತ ಚಿಕ್ಕೋಡಿ ಭಾಗ ಮೂಡಲಗಿ ತಾಲೂಕಾ ಘಟಕದ ವತಿಯಿಂದ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ರೈತರು ಕಬ್ಬನ್ನು ಕಾರ್ಖಾನೆಗಳಿಗೆ ಸಾಗಿಸಿ ವರ್ಷಾನುಗಟ್ಟಲೆ ಹಣಕ್ಕಾಗಿ ಕಾಯುತ್ತಾ ಕುಳಿತುಕೊಳ್ಳಬೇಕಾಗಿದೆ ಆದ್ದರಿಂದ ರೈತರು ಕಬ್ಬು ಕಳಿಸಿದ 15 ದಿನಗಳ ಒಳಗಾಗಿ ರೈತರ ಖಾತೆಗೆ ಬಿಲ್ ಜಮಾ ಮಾಡಬೇಕು, ಅರಿಶಿನ, ಭತ್ತ ಹಾಗೂ ಗೊಂಜಾಳ ಬೆಳೆಗಳು ಅಧಿಕವಾಗಿ ಬೆಳೆಯುವ ರೈತರ ಅನುಕೂಲಕ್ಕಾಗಿ ಮೂಡಲಗಿ ತಾಲೂಕಾ ಕೇಂದ್ರದಲ್ಲಿನ ಅತಿ ದೊಡ್ಡದಾದ ಕೃಷಿ ಮಾರುಕಟ್ಟೆಯಲ್ಲಿ ಖರೀದಿ ಕೇಂದ್ರ ಸ್ಥಾಪಿಸಬೇಕು, ಇತ್ತಿಚೆಗೆ ರೈತರ ಹೊಲಗಳಿಗೆ ರಸ್ತೆಗಳ ಸಮಸ್ಯೆಯನ್ನು ಕಾಣಿಸುತ್ತಿದ್ದು ನಮ್ಮ ಹೊಲ ನಮ್ಮ ಹಾದಿ ಕಾಯ್ದೆಯನ್ನು ಅನುಷ್ಠಾನಕ್ಕೆ ತರುವ ಕುರಿತು ಹಾಗೂ ಪೋಡಿ ಹಾಗೂ ವಿದ್ಯುತ್ ಸಮಸ್ಯೆಯಿಂದ ರೈತರು ಮುಕ್ತರಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಮುಖ್ಯಮಂತ್ರಿಗಳನ್ನು ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಉಪಾಧ್ಯಕ್ಷ ಶಿವಾನಂದ ಮುಧೋಳ, ತಾಲೂಕಾ ಘಟಕದ ಅಧ್ಯಕ್ಷ ಉಮೇಶ ಬೆಳಕೂಡ, ಉಪಾಧ್ಯಕ್ಷ ಬಸಲಿಂಗ ನಿಂಗನೂರ ಹಾಗೂ ಕಾರ್ಯದರ್ಶಿ ಸಂತೋಷ ಕುಲಕರ್ಣಿ ಉಪಸ್ಥಿತರಿದ್ದರು.

