ಇತಿಹಾಸ ಮತ್ತು ಸಾಹಿತ್ಯ ಸಮಾಜದ ಸಾಂಸ್ಕೃತಿಕ ಚೈತನ್ಯವನ್ನು ರೂಪಿಸುತ್ತವೆ : ಸೋಮಲಿಂಗ ಗೆಣ್ಣೂರ

Must Read

ಹುನಗುಂದ – ಕನ್ನಡ ಭಾಷೆ ಮತ್ತು ಸಾಹಿತ್ಯವು ನಮ್ಮ ನಾಡಿನ ಆತ್ಮಸ್ವರೂಪ. ಇತಿಹಾಸದ ಪಥದಲ್ಲಿ ಕನ್ನಡವು ಕೇವಲ ಭಾಷೆಯಾಗಿ ಮಾತ್ರವಲ್ಲ, ಸಂಸ್ಕೃತಿ, ಧರ್ಮ, ತತ್ವ, ಜೀವನ ಮೌಲ್ಯಗಳನ್ನು ಸಾರುವ ಶಕ್ತಿಯಾಗಿ ಬೆಳೆದು ಬಂದಿದೆ ಎಂದು ಸ್ಥಳೀಯ ವಿ.ಎಂ.ಕೆ.ಎಸ್.ಆರ್.ವಸ್ತ್ರದ ಕಲಾ, ವಿಜ್ಞಾನ ಹಾಗೂ ವಿ.ಎಸ್.ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯ, ಹುನಗುಂದದಲ್ಲಿ ಆಯೋಜಿಸಿದ ಡಾ.ಶಿವಾನಂದ ನಾಗಣ್ಣವರ ಅವರ ಐದು ಸಂಶೋಧನಾ ಗ್ರಂಥಗಳ ಲೋಕಾರ್ಪಣೆ ಹಾಗೂ ಐದು ಸಂಶೋಧನ ಗ್ರಂಥಗಳ ಬಿಡುಗಡೆ ಹಾಗೂ “ಇತಿಹಾಸ ಮತ್ತು ಕನ್ನಡ ಸಾಹಿತ್ಯ – ಒಂದು ಸಾಂಸ್ಕೃತಿಕ ದೃಷ್ಟಿಕೋನ”* ಎಂಬ ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯವಹಿಸಿದ ಚಿತ್ತರಗಿ ಸಂಸ್ಥಾನಮಠ ಇಲಕಲ್-ಹುನಗುಂದದ ಪೂಜ್ಯಶ್ರೀ.ಮ.ನಿ.ಪ್ರ ಗುರುಮಹಾಂತಸ್ವಾಮಿಗಳು ಆಶೀರ್ವದಿಸಿದರು.

ಸಾನಿದ್ಯ ವಹಿಸಿದ ಶಿರೂರು ಮಹಾಂತೇಶ್ವರ ತೀರ್ಥದ ಪೂಜ್ಯರಾದ ಡಾ.ಬಸವಲಿಂಗಸ್ವಾಮಿಗಳು ಮಾತನಾಡುತ್ತಾ ಭಾರತೀಯ ಇತಿಹಾಸ ತನ್ನದೇ ಆದ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಅಂತಹ ಸಂಸ್ಕೃತಿ ಸಂಸ್ಕಾರಗಳ ಬಗ್ಗೆ ಸಂಶೋಧನೆಯ ಮೂಲಕ ಹೊಸ ತಲೆಮಾರಿಗೆ ತಲುಪಿಸುವ ಕಾರ್ಯ ಶ್ಲಾಘನೀಯವಾಗಿದೆ. ಇಂದು ಬಿಡುಗಡೆಯಾಗುತ್ತಿರುವ ಕರ್ನಾಟಕದಲ್ಲಿ ಶೈವಧರ್ಮದ ಬೆಳವಣಿಗೆ. ಶೈವಾವಲೋಕನ, ರಾಷ್ಟ್ರೀಯ ಹೋರಾಟದಲ್ಲಿ ಹುನಗುಂದ ತಾಲೂಕಿನ ದೇಶಗತಿ ಮನೆತನಗಳ ಪಾತ್ರ, ದಕ್ಷಿಣಾ ಪಥೇಶ್ವರ ಇಮ್ಮಡಿ ಪುಲಿಕೇಶಿ ಹಾಗೂ ವಿಚಾರ ಸಂಕಿರಣದ ಲೇಖನಗಳ ಸಂಪುಟ ಈ ಐದು ಸಂಶೋಧನ ಗ್ರಂಥಗಳು ಕನ್ನಡ ಸಾಹಿತ್ಯದ ಅಧ್ಯಯನಕ್ಕೆ ಹೊಸ ಆಯಾಮಗಳನ್ನು ನೀಡಲಿದ್ದು, ಭವಿಷ್ಯದ ಸಂಶೋಧಕರಿಗೆ ದಾರಿದೀಪವಾಗುವುವೆಂಬ ವಿಶ್ವಾಸ ನನಗಿದೆ ಎಂದು ಆಶೀರ್ವದಿಸಿದರು.

ಸಮಾರಂಭದ ಉದ್ಘಾಟಕರಾಗಿ ಆಗಮಿಸಿದ ಬಾಗಲಕೋಟೆ ವಿಶ್ವವಿದ್ಯಾಲಯ, ಜಮಖಂಡಿಯ ಕುಲಸಚಿವರಾದ ಸೋಮಲಿಂಗ ಗೆಣ್ಣೂರ ಅವರು ಮಾತನಾಡುತ್ತ ಇತಿಹಾಸ ಮತ್ತು ಸಾಹಿತ್ಯ ಪರಸ್ಪರ ಪೂರಕವಾಗಿ ಸಮಾಜದ ಸಾಂಸ್ಕೃತಿಕ ಚೈತನ್ಯವನ್ನು ರೂಪಿಸುತ್ತವೆ. ಈ ಗ್ರಂಥಗಳು ಹಾಗೂ ವಿಚಾರ ಸಂಕಿರಣವು ಹೊಸ ಚಿಂತನೆ, ಗಂಭೀರ ಸಂಶೋಧನೆ ಮತ್ತು ಬೌದ್ಧಿಕ ಸಂವಾದಕ್ಕೆ ದಾರಿ ಮಾಡಿಕೊಡಲಿದೆ. ಇತಿಹಾಸ ಮತ್ತು ಸಾಹಿತ್ಯ ಪರಸ್ಪರ ಪೂರಕವಾದವುಗಳು. ಇತಿಹಾಸವು ಕಾಲದ ಸತ್ಯವನ್ನು ಹೇಳಿದರೆ, ಸಾಹಿತ್ಯವು ಆ ಕಾಲದ ಮನಸ್ಸು, ಭಾವನೆ ಮತ್ತು ಸಂಸ್ಕೃತಿಯನ್ನು ಬಿಂಬಿಸುತ್ತದೆ. ಈ ಎರಡನ್ನೂ ಸಾಂಸ್ಕೃತಿಕ ದೃಷ್ಟಿಕೋನದಿಂದ ಅವಲೋಕಿಸುವ ಈ ರಾಷ್ಟ್ರೀಯ ವಿಚಾರ ಸಂಕಿರಣವು ಚಿಂತನೆ, ಸಂವಾದ ಮತ್ತು ಜ್ಞಾನ ವಿಸ್ತರಣೆಗೆ ವೇದಿಕೆಯಾಗಲಿದೆ ಅದರ ಸದುಪಯೋಗವನ್ನು ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು, ಸಮಾಜದ ಪ್ರತಿಯೊಬ್ಬ ನಾಗರೀಕನೂ ಅರಿತುಕೊಳ್ಳಬೇಕಿದೆ ಎಂದರು.

ವಿಶೇಷ ಆಮಂತ್ರಿತರಾಗಿದ್ದ ಬಾಗಲಕೋಟ ಜಿಲ್ಲಾ ಲೋಕಾಯುಕ್ತ ಡಿವೈಎಸ್ಪಿ ಸುರೇಶರೆಡ್ಡಿಯವರು ಮಾತನಾಡುತ್ತ ಇತಿಹಾಸ ಮತ್ತು ಸಾಹಿತ್ಯವು ಸಮಾಜದ ಸಂಸ್ಕೃತಿ, ಮೌಲ್ಯಗಳು ಹಾಗೂ ಚಿಂತನೆಗಳನ್ನು ದಾಖಲಿಸುವ ಶಕ್ತಿಶಾಲಿ ಮಾಧ್ಯಮಗಳಾಗಿವೆ. ಇಲ್ಲಿ ನಡೆದ ಚರ್ಚೆಗಳು ಸಂಶೋಧಕರಿಗೆ ಹೊಸ ದಿಕ್ಕು ನೀಡುವಂತಿವೆ. ಇಂತಹ ಶೈಕ್ಷಣಿಕ ವೇದಿಕೆಗಳು ಕನ್ನಡ ಸಾಹಿತ್ಯದ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡುತ್ತವೆ. ಮನುಷ್ಯನಿಗೆ ಮೊದಲು ಸಂಸ್ಕಾರ ಮುಖ್ಯ ಅಂತಹ ಸಂಸ್ಕಾರವನ್ನು ಕನ್ನಡ ಸಾಹಿತ್ಯ ಮತ್ತು ಇತಿಹಾಸ ಮೂಡಿಸುತ್ತವೆ. ಹಿಂದಿನ ಘಟನೆಗಳನ್ನು ಅವಲೋಕಿಸಿ ಬದುಕಿನಲ್ಲಿ ಅಳವಡಿಸಿಕೊಂಡಾಗ ಮುಂದಿನ ಬದುಕು ಸುಂದರವಾಗಲು ಸಾಧ್ಯವೆಂದರು.

ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಈರಣ್ಣ ಪತ್ತಾರ ಡಾ.ಎಸ್.ಆರ್.ನಾಗಣ್ಣವರ ಬರೆದ ಕರ್ನಾಟಕದಲ್ಲಿ ಶೈವಧರ್ಮದ ಬೆಳವಣಿಗೆ ಮತ್ತು ಶೈವಾವಲೋಕನ ಕೃತಿಗಳನ್ನು ಅವಲೋಕಿಸುತ್ತಾ ಶೈವಧರ್ಮದ ಹುಟ್ಟು, ಬೆಳವಣಿಗೆ, ಶಾಖೆಗಳು, ದಾನ-ದತ್ತಿಗಳು, ನಿರ್ಮಿತ ದೇವಾಲಯಗಳ ಸಂಕ್ಷಿಪ್ತವಾದ ವಿಷಯವನ್ನು ಪ್ರಸ್ತುತಪಡಿಸುತ್ತಾ ವಿಚಾರ ಸಂಕಿರಣದ ವಿವಿಧ ಆಯಾಮಗಳನ್ನು ತಮ್ಮ ಆಶಯ ನುಡಿಗಳಲ್ಲಿ ಹೇಳಿದರು. ವಿಶ್ರಾಂತ ಪ್ರಾಧ್ಯಾಪಕ ಮಹೇಶ ತಿಪ್ಪಶೆಟ್ಟಿ ‘ರಾಷ್ಟ್ರೀಯ ಹೋರಾಟದಲ್ಲಿ ಹುನಗುಂದ ತಾಲೂಕಿನ ದೇಶಗತಿ ಮನೆತನಗಳ ಪಾತ್ರ’ ಕೃತಿಯನ್ನು ಪರಿಚಯಿಸುತ್ತಾ ತಾಲೂಕಿನಲ್ಲಿಯ ದೇಶಗತಿ ಮನೆತನಗಳ ಪರಿಚಯ ಮಾಡುತ್ತಾ ಅವರು ಸ್ವಾತಂತ್ರ್ಯಕ್ಕಾಗಿ ನೀಡಿದ ಪ್ರತ್ಯಕ್ಷ ಮತ್ತು ಪರೋಕ್ಷ ಸಹಾಯದ ದಾಖಲೆಗಳನ್ನು ಪರಿಚಯಿಸಿದರು.

ಹುನ್ನೂರಿನ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಸಹಪ್ರಾಧ್ಯಾಪಕ ಡಾ.ಎನ್.ವಿ.ಅಸ್ಕಿ ‘ದಕ್ಷಿಣಾ ಪಥೇಶ್ವರ ಇಮ್ಮಡಿ ಪುಲಿಕೇಶಿ’ ಕೃತಿಯ ಒಳತಿರುಳನ್ನು ಎಳೆಯೆಳೆಯಾಗಿ ಬಿಚ್ಚಿಡುತ್ತಾ ಪುಲಿಕೇಶಿ ದೇಶೀಯ ವಿದೇಶಿಯರೊಂದಿಗಿನ ಸಂಬಂಧ, ಅವನ ಆಡಳಿತದ ವರ್ಣನೆಯನ್ನು ಪುಸ್ತಕದಲ್ಲಿ ದಾಖಲಿಸಿದ್ದನ್ನು ಪರಿಚಯಿಸಿದರು.

ಬನಹಟ್ಟಿಯ ಎಸ್.ಟಿ.ಸಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ಮಂಜುನಾಥ ಬೆನ್ನೂರು ರಾಷ್ಟ್ರೀಯ ವಿಚಾರ ಸಂಕಿರಣದ ಲೇಖನಗಳ ಮೌಲ್ಯ, ಸಂಶೋಧನಾ ಪ್ರಬಂಧಗಳ ರಚನೆಯ ಪ್ರತಿಬಿಂಬವನ್ನು ಪ್ರಸ್ತುತಪಡಿಸಿದರು. ಇದೇ ಸಂದರ್ಭದಲ್ಲಿ ಕೃತಿಯ ರಚನಾಕಾರ ಹಾಗೂ ಅತಿಥಿಗಳನ್ನು ಸನ್ಮಾನಿಸಲಾಯಿತು.

ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಸಂಶೋಧನಾ ಸಂಸ್ಥೆಯ ವಿಶ್ರಾಂತ ನಿರ್ದೇಶಕರಾದ ಡಾ.ರು.ಮ.ಷಡಕ್ಷರಯ್ಯ ಮಾತನಾಡುತ್ತಾ ರಾಷ್ಟ್ರೀಯ ವಿಚಾರ ಸಂಕಿರಣವು ಜ್ಞಾನಾರ್ಜನೆ ಮತ್ತು ಚಿಂತನೆಗೆ ವಿಶಾಲ ವೇದಿಕೆಯಾಗಿವೆ. ವಿದ್ವಾಂಸರು ಮಂಡಿಸಿದ ವಿಚಾರಗಳು ಇತಿಹಾಸ ಮತ್ತು ಸಾಹಿತ್ಯದ ನಡುವಿನ ಆಳವಾದ ಸಂಬಂಧವನ್ನು ಸ್ಪಷ್ಟಪಡಿಸಿವೆ. ಇಂತಹ ಕಾರ್ಯಕ್ರಮಗಳು ಸಂಶೋಧಕರಲ್ಲಿ ಹೊಸ ಉತ್ಸಾಹ ತುಂಬುತ್ತವೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ ವಿ.ಮ.ವಿ.ವ.ಸಂಘದ ಗೌರವ ಕಾರ್ಯದರ್ಶಿಗಳಾದ ಡಾ.ಮಹಾಂತೇಶ ಕಡಪಟ್ಟಿಯವರು ಮಾತನಾಡುತ್ತಾ ಐದು ಸಂಶೋಧನ ಗ್ರಂಥಗಳ ಬಿಡುಗಡೆ ಹಾಗೂ “ಇತಿಹಾಸ ಮತ್ತು ಕನ್ನಡ ಸಾಹಿತ್ಯ – ಒಂದು ಸಾಂಸ್ಕೃತಿಕ ದೃಷ್ಟಿಕೋನ” ಎಂಬ ರಾಷ್ಟ್ರೀಯ ವಿಚಾರ ಸಂಕಿರಣವು ನಮ್ಮ ಬೌದ್ಧಿಕ ಪರಂಪರೆಯನ್ನು ಸಮೃದ್ಧಗೊಳಿಸುವ ಪ್ರಯತ್ನವಾಗಿದೆ. ಇತಿಹಾಸ ಮತ್ತು ಸಾಹಿತ್ಯವು ಸಮಾಜದ ಸಾಂಸ್ಕೃತಿಕ ಆತ್ಮವನ್ನು ಅನಾವರಣಗೊಳಿಸುವ ಪ್ರಮುಖ ಸಾಧನಗಳಾಗಿವೆ. ಇಲ್ಲಿ ಮಂಡಿಸಲಾದ ವಿಚಾರಗಳು ಮತ್ತು ಚರ್ಚೆಗಳು ಸಂಶೋಧನೆಗೆ ಹೊಸ ಆಯಾಮಗಳನ್ನು ನೀಡುತ್ತವೆ ಎಂದು ತಮ್ಮ ಅಧ್ಯಕ್ಷೀಯ ಸಮಾರೋಪದ ನುಡಿಗಳನ್ನಾಡಿದರು. ವೇದಿಕೆಯ ಮೇಲೆ ಐಕ್ಯೂಎಸಿ ಸಂಚಾಲಕ ಡಾ.ಎಲ್.ಎನ್.ಕುಲಕರ್ಣಿ, ಕಾಲೇಜು ಒಕ್ಕೂಟದ ಕಾರ್ಯಾಧ್ಯಕ್ಷ ಡಾ.ಬಿ.ಎಂ.ಹಲಸಂಗಿ ಉಪಸ್ಥಿತರಿದ್ದರು. ಬೆಂಗಳೂರಿನ ಕದಂಬ ಪ್ರಕಾಶನದ ಸಂಸ್ಥಾಪಕ ನಾಗೇಶ ಪುಸ್ತಕಗಳನ್ನು ನೋಡಿದರೆ ಸಾಲದು, ಅವುಗಳನ್ನು ಕೊಂಡುಕೊಂಡು ಆಸಕ್ತಿಯಿಂದ ಓದಿದಾಗ ಮಾತ್ರ ಕೃತಿಯ ರಚನಾಕಾರನ ಮತ್ತು ಪ್ರಕಾಶಕರ ಶ್ರಮ ಸಾರ್ಥಕವೆಂದರು. ವಿಚಾರ ಸಂಕಿರಣದಲ್ಲಿ ಒಟ್ಟು 31 ಸಂಶೋಧನಾ ಲೇಖನಗಳನ್ನು ಸಾದರಪಡಿಸಲಾಯಿತು. ಸು.300ಕ್ಕೂ ಅಧಿಕ ಸಾರ್ವಜನಿಕರು, ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರಾಚಾರ್ಯ ಡಾ.ಎಸ್.ಆರ್.ಗೋಲಗೊಂಡ ಸ್ವಾಗತಿಸಿದರು. ಇತಿಹಾಸ ವಿಷಯದ ಸಹಪ್ರಾಧ್ಯಾಪಕ ಮತ್ತು ರಾಷ್ಟ್ರೀಯ ವಿಚಾರ ಸಂಕಿರಣದ ಸಂಘಟನಾ ಕಾರ್ಯದರ್ಶಿ ಡಾ.ಎಸ್.ಆರ್.ನಾಗಣ್ಣವರ ಪ್ರಸ್ತಾವಿಕ ಮಾತುಗಳನ್ನಾಡಿದರು. ಸಹಸಂಘಟನಾ ಕಾರ್ಯದರ್ಶಿ ಎಸ್.ಬಿ.ಚಳಗೇರಿ ವಂದಿಸಿದರು. ವೀಣಾ ಬಾಪ್ರಿ ಮತ್ತು ಸಂಗಡಿಗರು ವಚನಪ್ರಾರ್ಥನೆಗೈದರು.

LEAVE A REPLY

Please enter your comment!
Please enter your name here

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...

More Articles Like This

error: Content is protected !!
Join WhatsApp Group