ಶಿರಸಿ: ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಳ್ಳಲು ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಅಗತ್ಯವಿದೆ. ತಮ್ಮ ಮನೆಗಳಲ್ಲಿ ಸಿರಿಧಾನ್ಯಗಳನ್ನು ಬಳಸುವುದರ ಮೂಲಕ ದೇಹದ ಆರೋಗ್ಯವನ್ನು ಕಾಪಾಡಿ ಕೊಳ್ಳಬಹುದೆಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್ ಎಂ. ಹೇಳಿದರು.
ತಾಲೂಕಿನ ಮಹಾಲಿಂಗಪ್ಪ ಭೂಮಾ ಪ್ರೌಢಶಾಲೆಯಲ್ಲಿ ಶುಕ್ರವಾರದಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡ ಸೃಜನಶೀಲ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿರಿಧಾನ್ಯಗಳನ್ನು ಪೋಷಕಾಂಶಗಳ ಕಣಜ ಎಂದು ಕರೆಯಲಾಗುತ್ತದೆ. ನಮ್ಮ ಅಡುಗೆಮನೆಯು ಆರೋಗ್ಯದ ಅರಮನೆಯಾಗಬೇಕು. ನಮ್ಮ ಮನೆಗಳಲ್ಲಿ ಪ್ರತಿಯೊಬ್ಬರೂ ಸಿರಿಧಾನ್ಯವನ್ನು ಬಳಸುವುದರ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಸಿರಿಧಾನ್ಯಗಳು ಪೋಷಣೆಗೆ ಅವಶ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಸಾಕಷ್ಟು ಪ್ರಮಾಣದಲ್ಲಿ ಹೊಂದಿದೆ. ಕಳೆದ ಹಲವಾರು ವರ್ಷಗಳಿಂದಲೂ ನಾನು ಸಿರಿಧಾನ್ಯವನ್ನು ಉಪಯೋಗಿಸುತ್ತಿದ್ದು, ಅದರ ಪ್ರಯೋಜನವನ್ನು ತಿಳಿದಿದ್ದೇನೆ. ಆಧುನಿಕತೆಯ ಬದುಕಿನಲ್ಲಿ ಪೋಷಕಾಂಶ ಭರಿತ ಆಹಾರಗಳು, ಸಿರಿಧಾನ್ಯಗಳು ಕಣ್ಮರೆಯಾಗುತ್ತಿರುವುದು ಕಂಡು ಬರುತ್ತಿದೆ. ಮಹಿಳೆಯರಲ್ಲಿ ಪೌಷ್ಟಿಕಾಂಶಯುಕ್ತ ಆಹಾರ ಬಳಕೆ ಮಾಡುವ ಉದ್ದೇಶದಿಂದ ಮಾತೃಶ್ರೀ ಹೇಮಾವತಿ ಅಮ್ಮನವರ ಆಶಯದಂತೆ ಗ್ರಾಮಾಭಿವೃದ್ದಿ ಯೋಜನೆಯು ಈ ಕುರಿತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದೆ. ದಿನನಿತ್ಯ ಸಿರಿಧಾನ್ಯಗಳನ್ನು ಬಳಸುವುದರಿಂದ ರಕ್ತದ ಒತ್ತಡ, ಮಧುಮೇಹದಂತಹ ಹಲವಾರು ರೋಗಗಳನ್ನು ತಡೆಗಟ್ಟಬಹುದಾಗಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಶಿರಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಕೆರೆಗದ್ದೆ ಮಾತನಾಡಿ, ಮನುಷ್ಯ ಆಸ್ತಿ, ಸಂಪತ್ತು ಗಳಿಸುವ ಭರದಲ್ಲಿ ಆರೋಗ್ಯ ಕಳೆದುಕೊಳ್ಳುತ್ತಾನೆ. ನಂತರ ಅದೇ ಆರೋಗ್ಯ ಹೊಂದಲು ಸಂಪತ್ತು ಕಳೆದುಕೊಳ್ಳುವ ಸಂದರ್ಭ ಎದುರಾಗುತ್ತದೆ. ಆರೋಗ್ಯವೇ ಭಾಗ್ಯ ಎಂದು ತಿಳಿದುಕೊಂಡು ನೆಮ್ಮದಿ ಜೀವನಕ್ಕೆ ಒತ್ತು ನೀಡಬೇಕು. ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಇಂತಹ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಆಯೋಜಿಸುತ್ತಿರುವುದು ಪ್ರತಿಯೊಬ್ಬರಿಗೂ ಸಹಕಾರಿಯಾಗಿದೆ. ಸಾರ್ವಜನಿಕರು, ರೈತರು ಈ ರೀತಿಯ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಧಾರವಾಡ ಸಿರಿ ಮಿಲೇಟ್ ನ ಆಹಾರತಜ್ಞೆ ಅರುಣಾ ತಿಮ್ಮಾಪುರ, ಧಾರವಾಡ ಸಿರಿ ಮಿಲೇಟ್ ನ ಮಾರುಕಟ್ಟೆ ಅಧಿಕಾರಿ ವಿದ್ಯಾಶ್ರೀ ಪರಮೇಶ್ವರ, ಶಿರಸಿ ಮಹಾಲಿಂಗಪ್ಪ ಭೂಮಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ನಟರಾಜ ಅವರು ಸಿರಿಧಾನ್ಯ ಬಳಕೆ ಮತ್ತು ಆರೋಗ್ಯವರ್ಧನೆಯ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಹಿಳಾ ಜ್ಞಾನವಿಕಾಸ ಕೇಂದ್ರದ ಸದಸ್ಯರಿಗೆ ಮಧುಮೇಹ, ಅಧಿಕ ರಕ್ತದೊತ್ತಡ ಸೇರಿದಂತೆ ಆರೋಗ್ಯ ತಪಾಸಣೆ ಮಾಡಲಾಯಿತು.
ಜಿಲ್ಲಾ ಜನ ಜಾಗೃತಿ ವೇದಿಕೆಯ ಉಪಾಧ್ಯಕ್ಷೆ ಗೌರಿ ನಾಯ್ಕ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಸಹಾಯಕರಾದ ಶಹಜಾನ್ ಕಾಡೇನಳ್ಳಿ, ಮಂಜುಳ, ಆಶಾ ಕಾರ್ಯಕರ್ತೆ ಕಲ್ಪನಾ ರೇವಣಕರ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸೇವಾ ಪ್ರತಿನಿಧಿಗಳು, ಮಹಿಳಾ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಮಹಿಳಾ ಜ್ಞಾನ ವಿಕಾಸ ಕೇಂದ್ರದ ತಾಲ್ಲೂಕು ಸಮನ್ವಯಾಧಿಕಾರಿ ಮಲ್ಲಿಕಾ ಶೆಟ್ಟಿ ನಿರೂಪಿಸಿದರು. ಸೇವಾಪ್ರತಿನಿಧಿಗಳಾದ ಸವಿತಾ ಸ್ವಾಗತಿಸಿದರು. ಸರೋಜ ವಂದಿಸಿದರು.

