ಖ್ಯಾತ ಜನಪದ ಸಂಶೋಧಕ ಡಾ ಮಲ್ಲಿಕಾರ್ಜುನ ಎಸ್. ಲಠ್ಠೆ

Must Read

ನಾಡಿನ ಬಹುದೊಡ್ಡ ಜನಪದ ಸಾಹಿತ್ಯ ಸಂಶೋಧಕ ಸ್ವರ ವಚನಗಳ ಸಂಪಾದಕ ಉತ್ತರ ಕರ್ನಾಟಕ ಮತ್ತು ಹೈದ್ರಾಬಾದ ಕರ್ನಾಟಕದ ಜಾನಪದ ಹಾಡುಗಳ ಸಂಗ್ರಹಕಾರ ಡಾ ಎಂ ಎಸ್ ಲಠ್ಠೆ. ಪೂರ್ಣ ಹೆಸರು ಮಲ್ಲಿಕಾರ್ಜುನ ಶಿವಪ್ಪ ಲಠ್ಠೆ.

ಮಲ್ಲಿಕಾರ್ಜುನ ಲಠ್ಠೆಯವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ತಾಲ್ಲೂಕು ಕೇಂದ್ರವಾದ ಮುತನಾಳದಲ್ಲಿ. ತಂದೆ ಶಿವಪ್ಪ, ತಾಯಿ ಬಸವಮ್ಮ. ಹಿರೇಬಾಗೇವಾಡಿಯಲ್ಲಿ. ಮುತನಾಳ ಗ್ರಾಮದಿಂದ ಬರಿಗಾಲಿನಲ್ಲಿ ಹೀರೆ ಬಾಗೇವಾಡಿ ಗ್ರಾಮಕ್ಕೆ ನಡೆದು ಬಂದು ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿದರು. ಮುಂದೆ ಹೈ ಸ್ಕೂಲ್ ಶಿಕ್ಷಣವನ್ನು ಕೆ ಎಲ್ ಇ ಸಂಸ್ಥೆ ಜಿ ಎ ಹೈಸ್ಕೂಲ್ ನಲ್ಲಿ ಕರಡಿ ಮಾಸ್ತರ ಮತ್ತು ಬಿ ಆರ್ ಪಾಟೀಲ ಇವರ ಶಿಷ್ಯನಾಗಿ ಶಿಕ್ಷಣ ಮುಗಿಸಿದರು.

ಮುಂದೆ ಧಾರವಾಡ ಕಾಲೇಜಿಗೆ ಸೇರಿದ್ದು ಧಾರವಾಡದ ಕರ್ನಾಟಕ ಕಾಲೇಜು, ಬಿ.ಎ. ಆನರ್ಸ್‌ ಪದವಿ ಮುಗಿಸಿದರು. ಅತ್ಯಂತ ಬಡತನದಲ್ಲಿ ಶಾಲೆ ಕಲಿತ ಈ ಹುಡುಗ ತಮ್ಮ ಕೆಲಸ ಮಾಡುತ್ತಲೆ ಸಾಂಗ್ಲಿಯ ಕಾಲೇಜಿನಿಂದ ಪೂನಾ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ, ಮುಗಿಸಿಕೊಂಡರು. ಮುಂದೆ ಕರ್ನಾಟಕ ವಿಶ್ವವಿದ್ಯಾಲಯದಿಂದ ‘ಮಹಾದೇವಿಯಕ್ಕ ಮತ್ತು ಕಾರಿಕಾಲಮ್ಮೆ ಒಂದು ತೌಲನಿಕ ಅಧ್ಯಯನ’ಕ್ಕೆ ಪಿಎಚ್.ಡಿ. ಪದವಿಯನ್ನು ಪಡೆದರು.

ಪದವಿ ಗಳಿಸಿದ ನಂತರ ಉದ್ಯೋಗಕ್ಕಾಗಿ ಸೇರಿದ್ದು ಬೆಳಗಾವಿಯ ಕೆ.ಎಲ್.ಇ. ಸಂಸ್ಥೆಯ ಹೈಸ್ಕೂಲಿನಲ್ಲಿ ಉಪಾಧ್ಯಾಯರಾಗಿ. ಮತ್ತದೇ ಸಂಸ್ಥೆಯ ಕಾಲೇಜಿನಲ್ಲಿ ಅಧ್ಯಾಪಕರಾಗಿ ಎಂಟು ವರ್ಷ ಮತ್ತು ನಿಪ್ಪಾಣಿ ಜಿ ಏ ಬಾಗೇವಾಡಿ ಕಾಲೇಜಿನಲ್ಲಿ ಏಳು ವರ್ಷ ಸೇವೆ. ನಂತರ ಕರ್ನಾಟಕ ವಿಶ್ವವಿದ್ಯಾಲದಲ್ಲಿ ಪಿ.ಜಿ. ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಪಿ.ಜಿ. ರೀಡರ್, ಪ್ರಾಧ್ಯಾಪಕರಾಗಿ, ಪ್ರಸಾರಾಂಗದ ನಿರ್ದೇಶಕರಾಗಿ ವಿವಿಧ ಹುದ್ದೆ. ಸಂಶೋಧಕರಾಗಿ ಪಿಎಚ್.ಡಿ ಪಡೆದುದಲ್ಲದೆ ಆರು ಜನ ವಿದ್ಯಾರ್ಥಿಗಳಿಗೆ ಪಿಎಚ್.ಡಿ ಮತ್ತು ಹತ್ತು ಜನ ವಿದ್ಯಾರ್ಥಿಗಳಿಗೆ ಎಂ.ಫಿಲ್ ಮಾರ್ಗದರ್ಶಕರಾಗಿ, ವಿದ್ಯಾರ್ಥಿಗಳು ಯಶಸ್ವಿಯಿಂದ ಪದವಿ ಗಳಿಸಿದ ಹೆಗ್ಗಳಿಕೆ.ವಿದ್ಯಾರ್ಥಿ ಪ್ರಿಯರೆನಿಸಿದ ಡಾ ಎಂ ಎಸ್ ಲಠ್ಠೆಯವರು ಅವರಿಂದ ಸಾಕಷ್ಟು ಕ್ಷೇತ್ರ ಕಾರ್ಯ ಮಾಡಿಸಿದ್ದಾರೆ.

*ಬರೆದು, ಸಂಪಾದಿಸಿದ ಗ್ರಂಥಗಳು*
______________________
ಅಕ್ಕಮಹಾದೇವಿ, ಬಿಜ್ಜಳ ಮಹಾದೇವಿ, ಹರಿಹರ ಕವಿಯ ರಗಳೆ, ಶರಣ ನುಲಿಯ ಚಂದಯ್ಯ, ಭೂಮರೆಡ್ಡಿ ಬಸಪ್ಪನವರು, ಶರಣ ಮಾದಾರ ಚನ್ನಯ್ಯ, ಶಿವಯೋಗಿ ಸಿದ್ಧರಾಮ, ಶರಣರ ಜೀವನ ದರ್ಶನ, ಕನ್ನಡ ಯಾತ್ರೆ, ಕರ್ಮಯೋಗಿ ಎಸ್.ಬಿ. ಪಾಟೀಲ, ಶರಣ ಮೇದಾರ ಕೇತಯ್ಯ ಮುಂತಾದ ಕೃತಿ ರಚನೆ ಮಾಡಿದ್ದಾರೆ.

*ಜಾನಪದ ಕೃತಿಗಳು-*
ಜಾನಪದ ದೀಪ್ತಿ (ಭಾಗ 1ಮತ್ತು 2).

*ಸಂದ ಪ್ರಶಸ್ತಿಗಳು:*
ಹಲವಾರು ಸಾಹಿತ್ಯ ಸಮ್ಮೇಳನ, ಜಾನಪದ ಸಮ್ಮೇಳನ, ಶರಣ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷತೆ.

ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ಇಳಕಲ್ ಮಠ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಅವರಿಗೆ ಸಂದ ಮಹತ್ವದ ಗೌರವವೆಂದರೆ ಅಖಿಲ ಭಾರತ 9ನೇ ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಗೌರವಿಸಿದ್ದಾರೆ. 1982ರಲ್ಲಿ ಅರ್ಪಿಸಿದ ಗೌರವಗ್ರಂಥ ‘ಸಾಹಿತ್ಯ ಸಂತುಷ್ಟಿ.’

ಬಾಲ್ಯದಿಂದಲೂ ನಾಟಕ ರಂಗಭೂಮಿಯಲ್ಲಿ ಆಸಕ್ತಿ ಹೊಂದಿದ್ದ ಅಜಾನುಬಾಹು ಮಲ್ಲಿಕಾರ್ಜುನ ಲಠ್ಠೆಯವರು
ಕರಡಿ ಗುರುಗಳ ಅಚ್ಚುಮೆಚ್ಚಿನ ಶಿಷ್ಯನಾಗಿ ಬಸವೇಶ್ವರ ನಾಟಕದಲ್ಲಿ ಶ್ರೀ ಬಸವಣ್ಣನವರ ಪಾತ್ರ ಮಾಡಿ ಅದಕ್ಕೆ ಮೆರಗು ತಂದರು.ಮುಂದೆ ಲಾವಣಿ ಪದ ದಪ್ಪಿನ ಪದ ಬಯಲಾಟ ಸ್ವರ ವಚನಗಳ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.ಜನಪದ ಸೊಗಡನ್ನು ಜೀವಂತ ಇಟ್ಟವರಲ್ಲಿ ಡಾ ಮಲ್ಲಿಕಾರ್ಜುನ ಎಸ್ ಲಠ್ಠೆಯವರು ಪ್ರಮುಖರು.

*ನಿಧನ*
ಡಾ ಎಂ ಎಸ್ ಲಠ್ಠೆಯವರು ಒಂದು ರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡಾಗಲೇ ಹೃದಯ ಸ್ತಂಭನದಿಂದ 19-11-2007 ರಂದು ತಮ್ಮ ಎಪ್ಪತ್ತೈದನೆಯ ವಯಸ್ಸಿನಲ್ಲಿ ಬಯಲಲ್ಲಿ ಬಯಲಾದರು. ತಂದೆಯವರ ಉನ್ನತ ಪರಂಪರೆಯನ್ನು ಇವರ ಮಗ ಡಾ ರವೀಂದ್ರ ಲಠ್ಠೆ ಇವರು ಡಾ ವೀರಣ್ಣ ದಂಡೆ ಇವರ ಮಾರ್ಗದರ್ಶನದಲ್ಲಿ ಡಾ ಎಂ ಎಸ್ ಲಠ್ಠೇಯವರ ಕೃತಿಗಳ ಮರು ಮುದ್ರಣ ಮತ್ತು ಸಾಹಿತ್ಯ ಪ್ರಸಾರ ಮಾಡುತ್ತಿದ್ದಾರೆ. ಬಸವ ಸಮಿತಿ ಕಲಬುರ್ಗಿಯಲ್ಲಿ  ರವೀಂದ್ರ ಲಠ್ಠೆ ಅವರು ಏರ್ಪಡಿಸಿದ ದತ್ತಿ ಉಪನ್ಯಾಸ ಕಾರ್ಯಕ್ರಮಕ್ಕೆ ನಾನು ಪ್ರಮುಖ ಉಪನ್ಯಾಸಕನಾಗಿ ಭಾಗವಹಿಸಿದ್ದೇನೆ. ಅಲ್ಲದೆ ಡಾ ಎಂ ಎಸ್ ಲಠ್ಠೆ ಅವರು ಬೆಳಗಾವಿಯ ಲಿಂಗಾಯತ ಕೇಂದ್ರ ಸಂಶೋಧನಾ ಗ್ರಂಥಾಲಯಕ್ಕೆ ಮೇಲಿಂದ ಮೇಲೆ ಭೇಟಿ ನೀಡುತ್ತಿದ್ದರು. ಡಾ ಎಸ್ ಆರ್ ಗುಂಜಾಳ ಇವರು ಮತ್ತು ನಾನು ದಿನವಿಡಿ ಸಾಹಿತ್ಯ ಮತ್ತು ಇತರ ವಿಷಯಗಳ ಚರ್ಚೆ ಮಾಡುತ್ತಿದ್ದೆವು.ಇಂತಹ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ಸ್ನೇಹ ಜೀವಿ ಡಾ ಎಂ ಎಸ್ ಲಠ್ಠೆ ಅವರಿಗೆ ನೂರಾರು ಶರಣು.

ಡಾ.ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

LEAVE A REPLY

Please enter your comment!
Please enter your name here

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...

More Articles Like This

error: Content is protected !!
Join WhatsApp Group