ಪಂಚಗರುಡೋತ್ಸವ ಸೇವಾ ಸಮಿತಿ (ರಿ), ಮೈಸೂರು ಇವರ ಆಶ್ರಯದಲ್ಲಿ ನಾಡಿನ ಶ್ರೇಷ್ಠ ವೈಷ್ಣವ ಪರಂಪರೆಯನ್ನು ಪ್ರತಿಬಿಂಬಿಸುವ “ದ್ವಾದಶ (12) ಗರುಡೋತ್ಸವ” ಮಹೋತ್ಸವವನ್ನು ಇದೇ ಜನವರಿ 18, 2026 (ಭಾನುವಾರ) ಮೈಸೂರಿನ ಮಹಾಜನ ವಿದ್ಯಾಸಂಸ್ಥೆ ಕ್ರೀಡಾಂಗಣ, ಜಯಲಕ್ಷ್ಮೀಪುರಂ ಆವರಣದಲ್ಲಿ ಭಕ್ತಿಭಾವಪೂರ್ಣವಾಗಿ ಆಯೋಜಿಸಲಾಗಿದೆ.
ಈ ಮಹೋತ್ಸವವು ಶ್ರೀರಂಗಂ, ತಿರುಪತಿ, ಕಾಂಚೀಪುರಂ, ಮೇಲುಕೋಟೆ ಹಾಗೂ ಶ್ರೀರಂಗಪಟ್ಟಣ ಮುಂತಾದ ಪಂಚ ಮಹಾದಿವ್ಯಕ್ಷೇತ್ರಗಳ ಗರುಡೋತ್ಸವ ಪರಂಪರೆಯನ್ನು ಒಂದೇ ವೇದಿಕೆಯಲ್ಲಿ ಪ್ರತಿಷ್ಠಾಪಿಸುವ ಅಪೂರ್ವ ಧಾರ್ಮಿಕ ಉತ್ಸವವಾಗಿದೆ. ಇದರ ಮೂಲಕ ಶ್ರೀವೈಷ್ಣವ ಸಂಪ್ರದಾಯದ ದೈವೀ ಪರಂಪರೆ, ಭಕ್ತಿ ಹಾಗೂ ಸಂಸ್ಕೃತಿಯ ವೈಭವವನ್ನು ಸಮಾಜದ ಮುಂದಿಡುವ ಉದ್ದೇಶವನ್ನು ಹೊಂದಲಾಗಿದೆ.
ಭಾರತೀಯ ವೈಷ್ಣವ ಪರಂಪರೆಯಲ್ಲಿ ಗರುಡನು ಕೇವಲ ವಾಹನ ಮಾತ್ರವಲ್ಲ — ಆತನೇ ಭಗವಂತನ ಸೇವೆಯ ಜೀವಂತ ಸಂಕೇತ. ಗರುಡನ ಮೇಲೆ ವಿರಾಜಮಾನನಾಗಿರುವ ನಾರಾಯಣನು ಭಕ್ತರ ಹೃದಯದಲ್ಲಿ ಶಾಶ್ವತವಾಗಿ ಸ್ಥಾಪಿತನಾಗಿದ್ದಾನೆ. ಈ ದೈವೀ ತತ್ತ್ವವನ್ನು ಆಚರಣೆಯಾಗಿ ರೂಪಿಸಿದ ಮಹಾನ್ ಪರಂಪರೆಯೇ ಗರುಡೋತ್ಸವ.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ, ಪ್ರಸನ್ನ ವೇಂಕಟರಮಣ, ಶ್ರೀ ಶ್ರೀನಿವಾಸ, ಸಂತಾನ ವೇಣುಗೋಪಾಲ ಸ್ವಾಮಿ , ರಂಗನಾಥ, ಚೆಲುವ ನಾರಾಯಣಸ್ವಾಮಿ ,ಶ್ರೀ ವರದರಾಜ, ಶ್ರೀ ಯೋಗನರಸಿಂಹ ಮತ್ತು ಶ್ರೀ ರಾಮಾನುಜಾಚಾರ್ಯ ಪರಂಪರೆಯ ದೇವತೆಗಳ ಗರುಡಾರೋಹಣ ಸೇವೆಗಳು ಭಕ್ತರ ಸಮ್ಮುಖದಲ್ಲಿ ಭಕ್ತಿಪೂರ್ಣ ವಾತಾವರಣದಲ್ಲಿ ನೆರವೇರಲಿವೆ.
ಈ ಉತ್ಸವಕ್ಕೆ ದೇಶದ ವಿವಿಧ ಭಾಗಗಳಿಂದ ಆಗಮಿಸುವ ಶ್ರೇಷ್ಠ ಶ್ರೀವೈಷ್ಣವ ಆಚಾರ್ಯರು, ಯತಿಗಳು ಹಾಗೂ ಧಾರ್ಮಿಕ ಮುಖಂಡರು ದಿವ್ಯಸಾನ್ನಿಧ್ಯ ನೀಡಲಿದ್ದಾರೆ. ಗರುಡಾರೋಹಣದ ಸಂದರ್ಭದಲ್ಲಿ ದೇವತೆಗಳು ಭಕ್ತರ ಮಧ್ಯೆ ಸಂಚರಿಸುವುದು, ದಿವ್ಯಪ್ರಬಂಧಗಳ ನಾದ, ವೇದಮಂತ್ರಗಳ ಘೋಷ ಮತ್ತು ಭಕ್ತರ ನಾಮಸ್ಮರಣೆ — ಈ ಎಲ್ಲವೂ ಕ್ಷಣಮಾತ್ರದಲ್ಲಿ ಭೂಲೋಕವನ್ನು ವೈಕುಂಠವನ್ನಾಗಿ ಪರಿವರ್ತಿಸುತ್ತದೆ.
ಪಂಚಗರುಡೋತ್ಸವ ಸೇವಾ ಸಮಿತಿ (ರಿ)ಗೌ. ಅಧ್ಯಕ್ಷರಾದ ಕೆ.ಆರ್.ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಅವರ ಮಾರ್ಗದರ್ಶನದಲ್ಲಿ ಈ ಮಹೋತ್ಸವವನ್ನು ಭಕ್ತರು, ಸಮಾಜಮುಖಿ ಕಾರ್ಯಕರ್ತರು ಹಾಗೂ ಧಾರ್ಮಿಕ ಸಂಸ್ಥೆಗಳ ಸಹಕಾರದೊಂದಿಗೆ ಆಯೋಜಿಸಲಾಗಿದೆ.
ರಾಮಾನುಜ ವೇದಿಕೆಯಲ್ಲಿ 18 ಜನವರಿ ಭಾನುವಾರ ಸಂಜೆ ನಾಲ್ಕು ಗಂಟೆಗೆ ದ್ವಾದಶ ಗರುಡೋತ್ಸವ ಉದ್ಘಾಟನಾ ಸಮಾರಂಭ ಮೈಸೂರು ಪರಕಾಲ ಮಠದ ಶ್ರೀಮದ್ ಅಭಿನವ ವಾಗೀಶ ಬ್ರಹ್ಮ ತಂತ್ರ ಸ್ವತಂತ್ರ ಪರಕಾಲ ಸ್ವಾಮಿಗಳು ,ಮೇಲುಕೋಟೆ ಯದುಗಿರಿ ಯತಿರಾಜ ಮಠದ ನಾರಾಯಣ ರಾಮಾನುಜ ಜೀಯರ್ ಸ್ವಾಮಿಗಳು , ಅವಧೂತ ದತ್ತಪೀಠ ಗಣಪತಿ ಸಚ್ಚಿದಾನಂದ ಆಶ್ರಮದ ಕಿರಿಯ ಪೀಠಾಧಿಪತಿ ಶ್ರೀ ದತ್ತ ವಿಜಯೇಂದ್ರ ತೀರ್ಥ ಸ್ವಾಮಿಜಿ ,ಸುದರ್ಶನ ನರಸಿಂಹ ಕ್ಷೇತ್ರದ ಧರ್ಮಾಧಿಕಾರಿ ಭಾಷಾಂ ಸ್ವಾಮೀಜಿ , ಹೈದರಾಬಾದ್ ನ ತ್ರಿದಂಡಿ ಶ್ರೀಮನ್ ನಾರಾಯಣ ರಾಮಾನುಜ ಚಿನ್ನಜಿಯರ್ ಸ್ವಾಮೀಜಿ ರವರುಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ .
ಮೈಸೂರು ಮತ್ತು ಕೊಡಗು ಜಿಲ್ಲೆ ಲೋಕಸಭಾ ಸದಸ್ಯ ಹಾಗೂ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮೆರೆವಣಿಗೆಗೆ ಚಾಲನೆ ನೀಡಲಿದ್ದಾರೆ ,ಮುಖ್ಯ ಅತಿಥಿಗಳಾಗಿ ಖ್ಯಾತ ಸಂಗೀತ ನಿರ್ದೇಶಕ ಇಳೆಯರಾಜ ಭಾಗವಹಿಸಲಿದ್ದಾರೆ ,ಶಾಸಕ ಟಿ ಎಸ್ ಶ್ರೀವತ್ಸ ಅಧ್ಯಕ್ಷತೆ ವಹಿಸುವ ಸಮಾರಂಭದಲ್ಲಿ ಗಣ್ಯಮಾನ್ಯರು ಉಪಸ್ಥಿತರಿರುವರು .
ಇದೇ ವೇದಿಕೆಯಲ್ಲಿ ಬೆಳಗ್ಗೆ 10 ರಿಂದ ವಿಷ್ಣು ಸಹಸ್ರನಾಮ ಪಾರಾಯಣ ,ಯುಗಳ ವೀಣಾ ವಾದನ ,ಭರತನಾಟ್ಯ ವಿಶೇಷ ನೃತ್ಯ ರೂಪಕ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ .
ಇಂತಹ ಉತ್ಸವಗಳನ್ನು ಸಂರಕ್ಷಿಸುವುದು ಕೇವಲ ಧಾರ್ಮಿಕ ಕರ್ತವ್ಯವಲ್ಲ; ಅದು ನಮ್ಮ ಸಂಸ್ಕೃತಿಯ ರಕ್ಷಣೆಯೂ ಹೌದು. ಪಂಚಗರುಡೋತ್ಸವ ಸೇವಾ ಸಮಿತಿ (ರಿ), ಮೈಸೂರು ಈ ಮಹಾನ್ ಪರಂಪರೆಯನ್ನು ಶ್ರದ್ಧೆಯಿಂದ ಮುಂದುವರಿಸುತ್ತಿರುವುದು ನಾಡಿನ ಧಾರ್ಮಿಕ–ಸಾಂಸ್ಕೃತಿಕ ಜೀವನಕ್ಕೆ ದೊಡ್ಡ ಕೊಡುಗೆಯಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

