ನಾವು ಶಿರಸಿಯಿಂದ ಬನವಾಸಿ ಬಸ್ಸು ಹತ್ತಿದಾಗಲೇ ನಾಲ್ಕೂವರೆ ಆಗಿತ್ತು. ಶಾಲೆ ಬಿಡುವ ವೇಳೆ ಬಸ್ ರಷ್ ಆಗಿತ್ತು. ಬನವಾಸಿಯಲ್ಲಿ ಇಳಿದಾಗ ಐದೂವರೆ ಆಗಿತ್ತು. ಕ್ಯಾಂಟಿನ್‌ನಲ್ಲಿ ಟೀ ಕುಡಿದು ಮೈಂಡ್ ಪ್ರೆಶ್ ಆಯಿತು. ಅಲ್ಲಿ ದೇವಾಲಯದ ದಾರಿ ಕೇಳಲು ನೀವು ಆಟೋದಲ್ಲಿ ಹೋಗಿ ಆರೂವರೆಗೆ ದೇವಸ್ಥಾನದ ಬಳಿಗೆಯೇ ಬಸ್ ಬರುತ್ತದೆ ಅಲ್ಲಿ ವಾಪಸ್ಸು ಹತ್ತಬಹುದು ಎಂದರು. ಎರಡು ಆಟೋದಲ್ಲಿ ಮಧುಕೇಶ್ವರ ದೇವಸ್ಥಾನಕ್ಕೆ ಹೋದೆವು. ದೇವಸ್ಥಾನದ ಪ್ರವೇಶದ್ವಾರದಲ್ಲಿ ನಾವು ಐವರು ಎ.ಹೆಚ್.ಗಣೇಶ್, ಪುಟ್ಟಸ್ವಾಮಿಗೌಡರು, ಬೇಕ್ರೀ ರಾಜೇಗೌಡರು, ಪಟ್ನ ವೆಂಕಟೇಗೌಡರು ಪೋಟೋ ತೆಗೆಸಿಕೊಂಡವು. ಅರ್ಚಕರು ನಿಮಗೆ ಗೈಡ್ ಬೇಕೆ ಎಂದರು. ಹೌದೆಂದು ಅವರಿಂದ ಅನೇಕ ಐತಿಹಾಸಿಕ ಮಾಹಿತಿ ಪಡೆದೆವು.
ಸಿರಸಿಯಿಂದ ಬನವಾಸಿಗೆ ೨೨ ಕಿ.ಮೀ. ದೂರದ ಪ್ರಯಣ. ನಾವು ಪ್ರಯಾಣಿಸಿದ್ದು ಸೊರಬ ರಸ್ತೆಯಲ್ಲಿ. ವರದಾ ನದಿ ದಂಡೆಯಲ್ಲಿ ಬನವಾಸಿ ಇದೆ. ಇದು ಶಿರಸಿ ತಾಲ್ಲೂಕಿಗೆ ಸೇರಿದೆ. ಕ್ರಿ.ಶ. ೧ನೇ ಶತಮಾನದಲ್ಲಿ ಬಾರತಕ್ಕೆ ಬಂದಿದ್ದ ಗ್ರೀಕ್ ಪ್ರವಾಸಿ ಟಾಲೆಮಿ ಈ ಪಟ್ಟಣವನ್ನು ಬನೌಸಿ ಇಂದು ಕರೆದಿದ್ದಾನೆ. ಕ್ರಿ.ಶ.೪ನೇ ಶತಮಾನದಲ್ಲಿ ಜಯಂತಿಪುರ ಅಥವಾ ವೈಜಯಂತಿ ಎಂದು ಕರೆಯಲಾಗುತ್ತಿತ್ತು. ಪಾಂಡವರು ತಮ್ಮ ವನವಾಸದ ಕೆಲ ಕಾಲ ಇಲ್ಲೇ ಕಳೆದರೆಂದೂ ಧರ್ಮರಾಜನ ಅಶ್ವಮೇಧಯಾಗದ ಸಂದರ್ಭ ಸಹದೇವ ದಕ್ಷಿಣ ಭಾರತದ ದಿಗ್ವಿಜಯ ಕಾಲದಲ್ಲಿ ವನವಾಸಕಾ ನಗರವನ್ನು ಗೆದ್ದನೆಂದೂ ಮಹಾಭಾರತದಲ್ಲಿ ಬನವಾಸಿಯನ್ನು ವನವಾಸಕ ಎಂಬ ಉಲ್ಲೇಖವಿದೆ. ವೈಜಯಂತಿ ಎಂದು ಹೆಸರಾದ ಈ ನಗರದಲ್ಲಿ ಮಧು ಕೈಟಭರೆಂಬ ದೈತ್ಯರನ್ನು ವಿಷ್ಣು ಕೊಂದನೆಂದು, ಶಿವಭಕ್ತರಾದ ಈ ದೈತ್ಯರ ಹೆಸರಿನಲ್ಲಿ ಬನವಾಸಿಯಲ್ಲಿ ಮಧುಕೇಶ್ವರ ಮತ್ತು ನದಿಯ ಇನ್ನೊಂದು ದಂಡೆಯಲ್ಲಿರುವ ಅವನಟ್ಟಿ ಅಥವಾ ಕುಪ್ಪತ್ತೂರಿನಲ್ಲಿ ಕೈಟಭೇಶ್ವರ ದೇವಾಲಯ ನಿರ್ಮಿಸಲಾಗಿದೆ ಎಂದು ಹೇಳಲಾಗಿದ್ದರೂ ಈಗಿರುವಂತೆ ಆ ದೇವಾಲಯಗಳು ಅನಂತರ ಕಾಲದವು.
ನಾನು ಹಾಸನದಲ್ಲಿ ನೋಡಿದ ದೇವಿ ಮಹಾತ್ಮೆ ನಾಟಕದಲ್ಲಿ ಈ ಎರಡು ಪಾತ್ರಗಳು ಬರುತ್ತವೆ. ಬೌದ್ಧ ಧರ್ಮ ಪ್ರಸಾರಕ್ಕಾಗಿ ಅಶೋಕ ಚಕ್ರವರ್ತಿ ಕಳುಹಿಸಿದ ಬೌದ್ಧ ಭಿಕ್ಷು ರಖ್ಖಿತ ಬನವಾಸಿ ಪ್ರಾಂತ್ಯಕ್ಕೆ ಬಂದಿದ್ದನೆಂದು ಮಹಾವಂಶ ಎಂಬ ಬೌದ್ಧಗ್ರಂಥ ತಿಳಿಸುತ್ತದೆ. ನಾಗಾರ್ಜುನಕೊಂಡದ ಒಂದು ಶಾಸನದ ಪ್ರಕಾರ ಸಿಂಹಳದ ಭೌದ್ಧ ಭಿಕ್ಷುಗಳು ಧರ್ಮ ಪ್ರಸಾರಕ್ಕಾಗಿ ಬನವಾಸಿಗೆ ಬಂದಿದ್ದರಂತೆ. ಬನವಾಸಿ ಗೌತಮೀ ಪುತ್ರ ಸಾತಕರ್ಣಿಯ ನೇರ ಆಡಳಿತಕ್ಕೆ ಸೇರಿದ್ದು ಅವನು ತನ್ನ ಸೈನ್ಯದೊಡನೆ ವಿಜಯ ವೈಜಯಂತಿಯಲ್ಲಿ ಬೀಡುಬಿಟ್ಟಿದ್ದನೆಂದು ನಾಸಿಕದ ಶಾಸನ ಹೇಳುತ್ತದೆ. ಬನವಾಸಿಯಲ್ಲಿ ದೊರಕಿದ ಸಾತವಾಹನ ದೊರೆ ವಾಸಿಷ್ಠೀ ಪುತ್ರ ಸಿವಸಿರಿ ಪುಳುಮಾವಿನ ಅನಂತರ ಬಂದ (ಕ್ರಿ.ಶ.೨ನೇ ಶತಮಾನ) ಶಿವಶ್ರೀ ಪುಳುಮಾವಿಯ ಶಾಸನ ಅವನ ರಾಣಿಯ ಸ್ಮಾರಕ ಶಿಲೆಯಾಗಿದ್ದು ಆ ಕಾಲದಲ್ಲಿ ಬನವಾಸಿಯ ಪ್ರಾಮುಖ್ಯವನ್ನು ಸೂಚಿಸುತ್ತದೆ.
ಮುಂದೆ ಸಾತವಾಹನರ ಸಾಮಂತರೂ ಆ ವಂಶದ ಶಾಖೆಗೆ ಸೇರಿದವರೂ ಆದ ಚಟುಸಾತಕರ್ಣಿ ದೊರೆಗಳ ಕಾಲದಲ್ಲೂ ಬನವಾಸಿ ಪ್ರಮುಖ ನಗರವಾಗಿತ್ತು. ಮಧುಕೇಶ್ವರ ದೇವಾಲಯದ ಕಂಬದಮೇಲೆ ರಾಷ್ಟ್ರಕೂಟ, ಕಲ್ಯಾಣ ಚಾಳುಕ್ಯ, ವಿಜಯನಗರ ಮತ್ತು ಸೋದೆ ಅರಸರ ಹಲವಾರು ಶಾಸನಗಳು ದೇವಸ್ಥಾನದ ಜೀರ್ಣೋದ್ದಾರ ದಾನದತ್ತಿಗಳ ಬಗ್ಗೆ ತಿಳಿಸುತ್ತವೆ. ಕನ್ನಡವನ್ನು ರಾಜ್ಯ ಭಾಷೆಯಾಗಿ ಬಳಸಿದ ಪ್ರಪ್ರಥಮ ರಾಜವಂಶ ಕದಂಬರು. ಈ ರಾಜ್ಯದ ಸ್ಥಾಪಕ ಮಯೂರಶರ್ಮ (ಕ್ರಿ.ಶ.೩೪೫-೩೬೫) ಈತನ ರಾಜಧಾನಿ ಬನವಾಸಿ. ರಾಜಾ ಕಾಕುಸ್ಥವರ್ಮನ ಕಾಲದಲ್ಲಿ (೪೩೫-೪೫೫) ಉಚ್ಛಾçಯ ಸ್ಥಿತಿಯಲ್ಲಿತ್ತು. ಕನ್ನಡದ ಆದಿಕವಿ ಪಂಪ ತನ್ನ ಕಾವ್ಯ ವಿಕ್ರಮಾರ್ಜುನ ವಿಜಯದಲ್ಲಿ ಬನವಾಸಿಯನ್ನು ವರ್ಣಿಸುತ್ತ ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ ಎಂದಿದ್ದಾನೆ. ಬನ ಮತ್ತು ವಾಸಿ ಪದಗಳಿಂದ ಬನವಾಸಿ ಎಂಬ ಹೆಸರು ಬಂದಿದ್ದು ಕ್ರಮವಾಗಿ ಕಾಡು ಮತ್ತು ವಸಂತ ಎಂಬ ಅರ್ಥ ಕೊಡುತ್ತದೆ.
ಬನವಾಸಿ ಕರ್ನಾಟಕದ ಹಳೆಯ ಪಟ್ಟಣಗಳಲ್ಲಿ ಒಂದು. ಕದಂಬರ ಕಾಲದ ಅನೇಕ ಬಾರಿ ನವೀಕರಿಸಿದ ಸುಂದರ ಮಧುಕೇಶ್ವರ ದೇವಾಲಯ ಪ್ರಾಚೀನ ಇತಿಹಾಸ ಮತ್ತು ಶಾಸನಗಳಿಂದ ಕೂಡಿದೆ. ಇದು ಶಿವನಿಗೆ ಸಮರ್ಪಿತವಾದ ದೇವಾಲಯ. ಗರ್ಭಗುಡಿಯಲ್ಲಿ ಜೇನು ಬಣ್ಣದ ಲಿಂಗವಿದೆ. ಇಲ್ಲಿಯ ಕೋಟೆ ಬಹಳ ಪುರಾತನವಾದದ್ದು. ಚಾಲುಕ್ಯ ಇಮ್ಮಡಿ ಪುಲಕೇಶಿಯ ಐಹೊಳೆ ಶಾಸನದಲ್ಲಿ ಈ ಕೋಟೆಯ ಪ್ರಸ್ತಾಪವಿದೆ. ತಾಳಗುಂದ ಗುಂಡನೂರು ಚಂದ್ರವಳ್ಳಿ ಹಲಸಿ ಮತ್ತು ಹಲ್ಮಿಡಿ ಶಾಸನಗಳು ಈ ಕನ್ನಡ ವಂಶದ ಬಗ್ಗೆ ಬೆಳಕು ಚೆಲ್ಲುತ್ತವೆ. ಕನ್ನಡದ ಮೊಟ್ಟಮೊದಲ ಶಾಸನವೆಂದು ಹೆಸರಾಗಿರುವ ಹಲ್ಮಿಡಿ ಶಾಸನ (ಕ್ರಿ.ಶ.೪೫೦) ಬೇಲೂರು ತಾ. ಹಲ್ಮಿಡಿ ಗ್ರಾಮದಲ್ಲಿ ದೊರಕಿದೆ. ರಾಜಾ ಶಾಂತಿವರ್ಮನ (ಕ್ರಿ.ಶ.೪೫೦) ಕಾಲದ ತಾಳಗುಂದದ ಶಾಸನವು ಬನವಾಸಿ ಕದಂಬರ ಸಾಮ್ರಾಜ್ಯದ ಹುಟ್ಟಿನ ಸಂಭವನೀಯ ವಿವರ ನೀಡುತ್ತದೆ. ತಾಳಗುಂದದ ನಿವಾಸಿ ಮಯೂರವರ್ಮನು ತನ್ನ ಅಜ್ಜ ಮತ್ತು ಗುರು ವೀರವರ್ಮನೊಂದಿಗೆ ವೈದಿಕ ವಿದ್ಯಾರ್ಜನೆಗಾಗಿ ಕಂಚಿಗೆ ಹೋಗುತ್ತಾನೆ. ಅಲ್ಲಿ ಪಲ್ಲವರ ಕಾವಲು ಭಟರೊಂದಿಗೆ ಮನಸ್ತಾಪವಾಗಿ ಅವರಿಂದ ಅವಮಾನಿತನಾಗುತ್ತಾನೆ. ಇದರಿಂದ ಕೋಪಿತನಾಗಿ ಪ್ರತೀಕಾರದ ಪ್ರತಿಜ್ಞೆಗೈದು ಕಂಚಿಯನ್ನು ಬಿಟ್ಟು ವಾಪಸ್ಸು ಬಂದು ಶಸ್ತ್ರಾಭ್ಯಾಸ ಪ್ರಾರಂಭಿಸುತ್ತಾನೆ. ಸೈನ್ಯ ಕಟ್ಟಿ ಪಲ್ಲವರೊಂದಿಗೆ ದೀರ್ಘಕಾಲದ ಯುದ್ಧ ನಂತರ ಕದಂಬರು ಸ್ವತಂತ್ರ ರಾಜ್ಯ ಘೋಷಿಸಿ ಕದಂಬರನ್ನು ಹತ್ತಿಕ್ಕಲಾರದೆ ಪಲ್ಲವರು ಅವರ ಸ್ವತಂತ್ರ ರಾಜ್ಯವನ್ನು ಒಪ್ಪಬೇಕಾಯಿತು. ಅಂತಿಮವಾಗಿ ಬಾದಾಮಿಯ ಚಾಲುಕ್ಯರಿಂದ ಈ ಸಾಮ್ರಾಜ್ಯ ಪತನವಾಯಿತು. ಅಲ್ಲಿಂದ ಮುಂದೆ ಬಾದಾಮಿ ಚಾಲುಕ್ಯರು ನಂತರ ರಾಷ್ಟ್ರಕೂಟರ ಕಲ್ಯಾಣಿ ಚಾಲುಕ್ಯರ ಸಾಮಂತರಾಗಿ ಈ ವಂಶ ಮುಂದುವರಿಯಿತು.
ದೇವಸ್ಥಾನದ ಆವರಣದಲ್ಲಿ ಇರುವ ಫಲಕದಲ್ಲಿ ದೇವಸ್ಥಾನ ಕುರಿತ್ತಾದ ಕೆಲವು ಐತಿಹಾಸಿಕ ಮಾಹಿತಿಗಳಿವೆ. ಕದಂಬರ ಕಾಲದ ಮಧುಕೇಶ್ವರ ದೇವಾಲಯ ಕಲ್ಯಾಣ ಚಾಲುಕ್ಯರಿಂದ ಸೋಂದಾ ಅರಸರ ಕಾಲದವರೆಗೆ ಅನೇಕ ವಾಸ್ತು ಸೇರ್ಪಡೆ ಬದಲಾವಣೆಗಳನ್ನು ಮಾಡುತ್ತಾ ಬಂದಿರುವುದು ಇಲ್ಲಿನ ವಾಸ್ತುಶೈಲಿ ಮತ್ತು ದೊರಕಿರುವ ೧೨ ಶಾಸನಗಳಿಂದ ತಿಳಿಯಬಹುದಾಗಿದೆ. ಕದಂಬರು ಶಾತವಾಹನರ ಶಿಲ್ಪಕಲಾಶೈಲಿಯನ್ನು ಅಳವಡಿಸಿಕೊಂಡರು.
ಪೂರ್ವಾಭಿಮುಖವಾಗಿ ಇರುವ ದೇವಾಲಯದ ಚೌಕಾಕಾರ ಗರ್ಭಗೃಹದ ಸುತ್ತಲೂ ಪ್ರದಕ್ಷಿಣಾ ಪಥವಿದೆ. ಗರ್ಭಗೃಹದಲ್ಲಿ ಪೀಠದ ಮೇಲೆ ಮಧುಕೇಶ್ವರ ಲಿಂಗವಿದೆ. ಲಿಂಗವು ಜೇನುತುಪ್ಪದ ಬಣ್ಣದಲ್ಲಿದೆ. ಎಡಭಾಗದಲ್ಲಿ ಪಾರ್ವತಿ ದೇವಾಲಯವಿದೆ. ಪೂರ್ವಭಾಗದ ಗೋಡೆಗೆ ಅಂಟಿಕೊಂಡಂತೆ ಇರುವ ೨ ಉಪಗುಡಿಗಳಲ್ಲಿ ಮಹಿಷಮರ್ದಿನಿ ಗಣೇಶನ ಶಿಲ್ಪಗಳಿವೆ ಮತ್ತು ದೊಡ್ಡ ಕಂಬಗಳಿರುವ ವಿಶಾಲ ಮಂಟಪವಿದೆ. ಈ ಎಲ್ಲಾ ರಚನೆಗಳು ಕಲ್ಯಾಣ ಚಾಲುಕ್ಯರ ಕಾಲಕ್ಕೆ ಸೇರಿದವುಗಳಾಗಿವೆ. ಈ ಮಂಟಪದ ಮುಂಭಾಗದಲ್ಲಿ ತಿರುಗಣಿ ಯಂತ್ರದಿಂದ ರಚಿತವಾದ ಅಲಂಕೃತ ಕಂಬಗಳಿರುವ ನವರಂಗವಿದೆ. ಅದರಲ್ಲಿ ಕುಳಿತ ನಂದಿಯ ಶಿಲ್ಪವಿದೆ. ನಂದಿಯ ಒಂದು ಕಣ್ಣು ಮಧುಕೇಶ್ವರನನ್ನು ಇನ್ನೊಂದು ಕಣ್ಣು ಪಾರ್ವತಿಯನ್ನು ನೋಡುತ್ತಿದೆ ನೋಡಿ ಎಂದರು ಅರ್ಚಕರು.
ನವರಂಗದ ಸುತ್ತಲೂ ಕಕ್ಷಾಸನವಿದ್ದು ನವರಂಗಕ್ಕೆ ಮೂರು ಪ್ರವೇಶದ್ವಾರಗಳಿವೆ. ಇವುಗಳು ಸಹ ಕಲ್ಯಾಣ ಚಾಲುಕ್ಯರ ಕಾಲದ ನಿರ್ಮಿತಿಗಳಾಗಿವೆ. ದೇವಾಲಯದ ಒಳಭಾಗದಲ್ಲಿ ಪ್ರಾಚೀನ ಶಿಲ್ಪಶೈಲಿಯ ಲಕ್ಷಣಗಳಿರುವ ಆದಿಮಾಧವ ಮತ್ತು ಕಾರ್ತಿಕೇಯನ ಶಿಲ್ಪಗಳಿವೆ. ದೇವಾಲಯಕ್ಕೆ ಈಗಿರುವ ಶಿಖರವು ವಿಜಯನಗರ ಸೋಂದಾ ಅರಸರ ಕಾಲಕ್ಕೆ ಸೇರಿದ್ದು ಸುಖನಾಸಿಯನ್ನು ಹೊಂದಿರುವ ಕದಂಬ ನಾಗರ ಶಿಖರವು ಪಿರಮಿಡ್ಡು ಆಕಾರದಲ್ಲಿ ಮೇಲಕ್ಕೇರುತ್ತದೆ. ನಾಲ್ಕು ಮೂಲೆಗಳಲ್ಲಿ ನಂದಿ ವಿಷ್ಣುವಿನ ದಶಾವತಾರ ೧೨ ಆದಿತ್ಯರು, ದಿಕ್ಪಾಲಕರು, ನಾಗಬಂಧ ಮತ್ತು ಇತರ ದೇವತೆಗಳ ಗಾರೆ ಶಿಲ್ಪಗಳಿಂದ ಶಿಖರವನ್ನು ಅಲಂಕರಿಸಲಾಗಿದೆ. ನವರಂಗದ ಛಾವಣಿಯ ಸಮತಟ್ಟಾಗಿ ಅದರ ಅಂಚು ಇಳಿಜಾರಿನಿಂದ ಕೂಡಿದೆ. ದೇವಾಲಯದ ಮುಂಭಾಗ ಧ್ವಜ ಸ್ಥಂಭವಿದೆ. ಪ್ರಾಕಾರದಲ್ಲಿರುವ ಉಪ ಗುಡಿಗಳಲ್ಲಿ ಸೋಂದಾ ಅರಸರ ಕಾಲದ ದಿಕ್ಪಾಲರು ದುಂಡಿರಾಜ, ಗಣಪತಿ ಚಿಂತಾಮಣಿ ನರಸಿಂಹ ಮತ್ತಿತರ ಶಿಲ್ಪಗಳಿವೆ. ಶಾಸನ ಸಹಿತ ನಾಗಶಿಲ್ಪ ಮತ್ತು ಅಲಂಕೃತ ಶಿಲಾ ಮಂಟಪದಂತಿರುವ ಮಂಟಪವು ದೇವಾಲಯದಲ್ಲಿರುವ ಮುಖ್ಯ ರಚನೆಗಳಾಗಿವೆ.
ಆಯತಾಕಾರದ ತೆಳು ಶಿಲಾ ಫಲಕದ ಮಧ್ಯದಲ್ಲಿ ಸುತ್ತಿಕೊಂಡಂತೆ ಇರುವ ೫ ಹೆಡೆಗಳುಳ್ಳ ನಾಗಶಿಲ್ಪವಿದೆ. ಶಿಲಾಫಲಕದ ಎರಡೂ ಬದಿಯ ಅಂಚಿನಲ್ಲಿ ಕ್ರಿ.ಶ.೨ನೇ ಶತಮಾನಕ್ಕೆ ಸೇರುವ ಬ್ರಾಹ್ಮಿ ಲಿಪಿಯ ಪ್ರಾಕೃತ ಶಾಸನವಿದೆ. ಅದು ಹರಿತಪುತ್ರ ವಿನುಕಡೆ ಚುಟುಕುಲಾನಂದ ಶಾತಕರ್ಣಿಯ ೧೨ನೇ ಆಳ್ವಿಕೆಯ ವರ್ಷದಲ್ಲಿ ಅವನ ಪುತ್ರಿ ಶಿವಸ್ಕಂದ ನಾಗಶ್ರೀಯು ಒಂದು ಕೆರೆ ಹಾಗೂ ವಿಹಾರದೊಂದಿಗೆ ಈ ಕಲಾತ್ಮಕ ನಾಗಶಿಲ್ಪವನ್ನು ನಿರ್ಮಿಸಿ ಕೊಡುಗೆಯಾಗಿ ನೀಡಿದ್ದಾಗಿ ತಿಳಿಸುತ್ತದೆ. ಸಂಜಯಂತಿಯ (ಬನವಾಸಿ) ನಿವಾಸಿ ಅಚಾರ್ಯ ದಾಮೋರಕನ ಶಿಷ್ಯ ನಾಟಕನೆಂಬ ಶಿಲ್ಪಿಯ ಈ ನಾಗಶಿಲ್ಪವನ್ನು ಕೆತ್ತಿದನೆಂದು ಶಾಸನವು ದಾಖಲಿಸಿದೆ. ಸೋಂದಾ ಅರಸ ಸದಾಶಿವ ನಾಯಕನು (ಕ್ರಿ.ಶ.೧೬ನೇ ಶತಮಾನ) ನಿರ್ಮಿಸಿರುವ ಅತ್ಯಂತ ಸೂಕ್ಷ್ಮ ಕೆತ್ತನೆಗಳಿಂದ ಕೂಡಿದ ತ್ರಿಲೋಕ ಮಂಟಪವೆಂದು ಕರೆಯಲಾಗುವ ಶಿಲೆಯು ನವರಂಗದಲ್ಲಿದೆ. ರಘುನಾಥ ನಾಯಕ (ಕ್ರಿ.ಶ.೧೬೨೮) ಕೊಡುಗೆಯಾಗಿ ನೀಡಿದ ಶಿಲಾಮಂಟಪದಲ್ಲಿ ಗಿಡ, ಬಳ್ಳಿ, ಪ್ರಾಣಿ ಮತ್ತು ಜಾಮಿತಿಯ ಅಲಂಕರಣಿಗಳಿಂದ ಕೂಡಿದ ಸೂಕ್ಷ್ಮ ಕೆತ್ತನೆಗಳಿವೆ. ಇಲ್ಲಿನ ಗಣೇಶನ ಅರ್ಧಬಾಗ ಮಾತ್ರ ಇರುವ ಮೂರ್ತಿ ಇದರ ಇನ್ನರ್ದ ವಾರಣಾಸಿಯಲ್ಲಿದೆಯಂತೆ.
ದೇವಾಲಯ ಸಮುಚ್ಛಯದ ಪೂರ್ವ ಭಾಗದಲ್ಲಿರುವ ಮುಖ್ಯ ಪ್ರವೇಶ ದ್ವಾರದಲ್ಲಿರುವ ಮೆಟ್ಟಿಲುಗಳ ಕೈಪಿಡಿ ಗೋಡೆಗಳನ್ನು ಎರಡು ಅಲಂಕೃತ ಆನೆಗಳ ಶಿಲ್ಪಗಳಿಂದ ಕೆತ್ತಲಾಗಿದೆ. ಇಲ್ಲಿಯ ಕಲ್ಲಿನ ಮಂಚ ಪ್ರಧಾನ ಆಕರ್ಷಣೆಗಳಲ್ಲೊಂದು. ಬನವಾಸಿ ಪರಿಸರದಲ್ಲಿ ಸಾಮಾನ್ಯ ಅಲಂಕರಣೆಗಳ ಆದಿಕದಂಬರೇಶ್ವರ, ಆದಿಮಧುಕೇಶ್ವರ, ಅಲ್ಲಮಪ್ರಭು ದೇವಾಲಯಗಳಿವೆ. ನಾವು ದೇವಸ್ಥಾನದಿಂದ ಹೊರಬಂದಾಗ ಕತ್ತಲು ಆವರಿಸುತ್ತಿತ್ತು. ದೇವಾಲಯದ ಹೊರಭಾಗದಲ್ಲಿ ಎರಡು ರಥಗಳನ್ನು ಎತ್ತರಕ್ಕೆ ಮನೆ ನಿರ್ಮಿಸಿ ನಿಲ್ಲಿಸಲಾಗಿದೆ. ಈಗ ರಥೋತ್ಸವಕ್ಕೆ ಹೊಸ ರಥ ಬಳಸಲಾಗುತ್ತಿದ್ದು ಹಳೆಯ ರಥವನ್ನು ಸಂರಕ್ಷಿಸಲಾಗಿದೆ. ಹೊರಗಡೆ ಒಂದು ಸುತ್ತು ಹಾಕಿ ನಡೆದುಕೊಂಡೆ ಬಸ್‌ಸ್ಟಾö್ಯಂಡ್‌ಗೆ ಬಂದೆವು. ಕೆಲಹೊತ್ತಿಗೆ ಬಸ್ಸು ಬಂತು. ಹತ್ತಲು ಹೋದೆವು. ದೇವಸ್ಥಾನಕ್ಕೆ ಹೋಗಿ ಬರುತ್ತೇವೆ ಇಲ್ಲೇ ಇರಿ ಎಂದ ಕಂಡಕ್ಟರ್ ಮೇಡಂ ಹತ್ತಿಸಿಕೊಳ್ಳಲಿಲ್ಲ. ಕದಂಬ ಸೈನ್ಯ ಅಧ್ಯಕ್ಷರು ಬೇಕ್ರಿ ರಮೇಶ್ ನಮಗೆ ಬನವಾಸಿಯ ಗುತ್ಯಪ್ಪ ಮಾದರ್ ಕಪ್ಪಗೇರಿ ಅವರ ಪೋನ್ ನಂಬರ್ ನೀಡಿದ್ದರು. ನಾವು ಬಸ್ ಕಾಯುವಾಗ ಗುತ್ಯಪ್ಪರು ಪೋನ್ ಮಾಡಿ ನಮ್ಮನ್ನು ಗುರುತಿಸಿ ಮಾತನಾಡಿಸಲು ಬಂದರು. ಅಷ್ಟರಲ್ಲಿ ದೇವಸ್ಥಾನದಿಂದ ಬಸ್ಸು ಬಂತು. ನಾಳೇ ಭುವನಗಿರಿಯಲ್ಲಿ ಭೇಟಿಯಾಗೋಣ ಎಂದು ಗುತ್ಯಪ್ಪರಿಗೆ ವಿಶ್ ಮಾಡಿ ಶಿರಸಿ ಬಸ್ಸು ಹತ್ತಿದವು.
—
ಗೊರೂರು ಅನಂತರಾಜು, ಹಾಸನ.
ಮೊ:೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

