ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ
“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಫಾ.ಡಾ.ಅಗಸ್ಟೀನ್ ಜಾರ್ಜ್ ಅವರು ಅಭಿಪ್ರಾಯಪಟ್ಟರು.
ಬೆಂಗಳೂರಿನ ಕೆ.ನಾರಾಯಣಪುರದಲ್ಲಿರುವ ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ಜಯಂತಿಯನ್ ವಿಸ್ತರಣಾ ಸೇವೆಗಳು(ಎನ್‌ಸಿಸಿ, ಎನ್‌ಎಸ್‌ಎಸ್, ವೈಆರ್‌ಸಿ, ಕೆಸಿಡಿಸಿ, ಯುಬಿಎ, ಸಿಎಸ್‌ಎ, ಮತ್ತು ಸಿಸಿಇ) ವತಿಯಿಂದ ಬ್ಯಾಪ್ಟಿಸ್ಟ್ ಆಸ್ಪತ್ರೆ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ನಿಮ್ಹಾನ್ಸ್, ಸೇಂಟ್ ಜಾನ್ಸ್ ಆಸ್ಪತ್ರೆ, ಜಯದೇವ ಆಸ್ಪತ್ರೆ ಮತ್ತು ಸೇಂಟ್ ಮಾರ್ಥಾ ಆಸ್ಪತ್ರೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಬೃಹತ್ ರಕ್ತದಾನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಭಾರತ ಕಂಡ ಶ್ರೇಷ್ಠ ಸಂತರಾದ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವದ ಸಂದರ್ಭದಲ್ಲಿ ದೇಶಸೇವೆಯ ಭಾಗವಾಗಿ ಈ ಶಿಬಿರವನ್ನು ಆಯೋಜಿಸಲಾಯಿತು. ರಕ್ತದಾನವು ಮಾನವೀಯತೆಯ ನಿಜವಾದ ಸೇವೆಯಾಗಿದೆ. ಸಮಾಜದಲ್ಲಿ ಸ್ವಯಂಪ್ರೇರಿತ ರಕ್ತದಾನದ ಮಹತ್ವವನ್ನು ಒತ್ತಿಹೇಳಬೇಕಿದೆ. ಯುವಕರಲ್ಲಿ ಮಾನವೀಯತೆ ಮತ್ತು ಸಾಮಾಜಿಕ ಜವಾಬ್ದಾರಿಯ ಪ್ರಜ್ಞೆಯನ್ನು ಬೆಳೆಸಬೇಕಿದೆ. ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಸುರಕ್ಷಿತ ಮತ್ತು ಸಕಾಲಿಕ ರಕ್ತದ ಲಭ್ಯತೆಯನ್ನು ಖಚಿತಪಡಿಸುವುದು ಈ ಶಿಬಿರದ ಮೂಲ ಉದ್ದೇಶವೆಂದು ತಿಳಿಸಿದರು.
ರಕ್ತದಾನ ಶಿಬಿರದಲ್ಲಿ ಬ್ಯಾಪ್ಟಿಸ್ಟ್ ಆಸ್ಪತ್ರೆ, ಭಾರತೀಯ ರೆಡ್ ಕ್ರಾಸ್ ಸೊಸೈಟಿ, ನಿಮ್ಹಾನ್ಸ್, ಸೇಂಟ್ ಜಾನ್ಸ್ ಆಸ್ಪತ್ರೆ, ಜೈದೇವ್ ಆಸ್ಪತ್ರೆ ಮತ್ತು ಸೇಂಟ್ ಮಾರ್ಥಾ ಆಸ್ಪತ್ರೆಯ ಅನುಭವಿ ವೈದ್ಯರು ಮತ್ತು ತಂತ್ರಜ್ಞರು ರಕ್ತ ಸಂಗ್ರಹಣಾ ಕಾರ್ಯವನ್ನು ಮಾಡಿದರು. ರಕ್ತದಾನಿಗಳಿಗೆ ಯಾವುದೇ ರೀತಿಯಲ್ಲಿ ಅನಾನುಕೂಲವಾಗದಂತೆ ಶಿಬಿರವನ್ನು ಸುಗಮವಾಗಿ ನಡೆಸಲು ವಿಶ್ವವಿದ್ಯಾಲಯ ಆವರಣದ ವಿವಿಧ ಸಭಾಂಗಣಗಳಲ್ಲಿ ಸ್ಥಳವ್ಯವಸ್ಥೆಗಳನ್ನು ಮಾಡಲಾಗಿತ್ತು. ಈ ಶಿಬಿರದಲ್ಲಿ, ೧೦೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾಮಾಜಿಕ ಸೇವಾ ಮನೋಭಾವದಿಂದ ಪ್ರೇರಿತರಾಗಿ ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡಿದರು. ಒಟ್ಟು ೩೯೪ ಯೂನಿಟ್ ರಕ್ತವನ್ನು ಸಂಗ್ರಹಿಸುವ ಮೂಲಕ ಅದ್ಭುತವಾದ ಯಶಸ್ಸನ್ನು ಕಂಡಿತು ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ರಕ್ತದಾನ ಶಿಬಿರದಲ್ಲಿ ಸಂಗ್ರಹಿಸಲಾದ ರಕ್ತ ಘಟಕಗಳನ್ನು ಸಹಯೋಗ ನೀಡಿದ ಆಸ್ಪತ್ರೆ ಹಾಗೂ ರಕ್ತನಿಧಿ ಕೇಂದ್ರಗಳಿಗೆ ಹಸ್ತಾಂತರಿಸಲಾಯಿತು. ರಕ್ತದಾನ ಶಿಬಿರದಲ್ಲಿ ‘ಜಯಂತಿಯನ್ ವಿಸ್ತರಣಾ ಸೇವೆ’(ಜೆಸ್) ಕೇಂದ್ರದ ನಿರ್ದೆಶಕರಾದ ಫಾ.ಜೈಸ್ ವಿ. ಥಾಮಸ್ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಘಟಕಗಳ ಸಂಯೋಜಕರು ಹಾಗೂ ಸ್ವಯಂಸೇವಕ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗಿಯಾಗಿದ್ದರು.

