ಲೇಖನ : ಮಠಗಳಲ್ಲಿನ ಗದ್ದುಗೆ ಪೂಜೆಯ ಘಂಟಾನಾದ; ಬಸವ ತತ್ವದ ಮೌನಾಲಾಪ!

Must Read

ಬಸವಣ್ಣನ ತತ್ವವು ವ್ಯಕ್ತಿ ಪೂಜೆಗೆ ವಿರೋಧವಾದದ್ದು. ಲಿಂಗಾಯತ ಧರ್ಮದ ಮೂಲ ಆತ್ಮವೇ ನಿರಾಕಾರ ಭಕ್ತಿ, ಸಮಾನತೆ ಮತ್ತು ಪ್ರಶ್ನಿಸುವ ಸ್ವಾತಂತ್ರ್ಯ!

ಆದರೆ ಇಂದಿನ ಸನ್ನಿವೇಶದಲ್ಲಿ ಕೆಲವು ವಿರಕ್ತ ಲಿಂಗಾಯತ ಮಠಗಳು ಈ ಮೂಲಭೂತ ತತ್ವವನ್ನೇ ಮರೆತು, ಬಸವಾದಿ ಶರಣರ ಚಿಂತನೆಗಿಂತ ತಮ್ಮ ಮಠಗಳಲ್ಲಿನ ಲಿಂಗೈಕ್ಯ ಸ್ವಾಮಿಗಳ ಗದ್ದುಗೆ ಪೂಜೆಗೆ ಹೆಚ್ಚಿನ ಮಹತ್ವ ನೀಡುತ್ತಿರುವುದು ಗಂಭೀರ ಹಾಗೂ ಆತಂಕಕಾರಿ ಬೆಳವಣಿಗೆಯಾಗಿದೆ.

ಬಸವಣ್ಣನ ಫೋಟೋ ನೆಪಕ್ಕೆ, ಗದ್ದುಗೆಗೆ ಮಾತ್ರ ಪ್ರಾಧಾನ್ಯ !

ವಿಪರ್ಯಾಸವೆಂದರೆ, ಕೆಲವು ಮಠಗಳಲ್ಲಿ ಬಸವಣ್ಣನ ಫೋಟೋ ಕೇವಲ ಗೋಡೆಯ ಮೇಲಿನ ಅಲಂಕಾರಕ್ಕೆ ಮಾತ್ರ ಸೀಮಿತವಾಗಿದೆ; ಇನ್ನೂ ಕೆಲವು ವಿರಕ್ತ ಮಠಗಳಲ್ಲಿ ಅದೂ ಕಾಣುವುದಿಲ್ಲ..! ಆದರೆ ಅವುಗಳಲ್ಲಿ ಪ್ರತಿದಿನ ನಡೆಯುವುದು ಗದ್ದುಗೆ ಪೂಜೆ, ವಾರ್ಷಿಕ ಉತ್ಸವ, ಜಾತ್ರೆ ಇತ್ಯಾದಿತ್ಯಾದಿ ಆಚರಣೆಗಳು ಮಾತ್ರ.

ಬಸವಣ್ಣನು ಪ್ರಶ್ನಿಸಿದ್ದ ಸ್ಥಾವರ ಲಿಂಗ–ವ್ಯಕ್ತಿ ಪೂಜೆ ಇಂದು ಮಠಗಳ ಪ್ರಮುಖ ಚಟುವಟಿಕಾ ಕೇಂದ್ರಗಳಾಗಿವೆ. ಇದು ಬಸವ ಪರಂಪರೆಯ ಮೌನ ಹತ್ಯೆಯಲ್ಲವೇ?

ಶಿಕ್ಷಣ ದಾಸೋಹವೋ ಅಥವಾ ಬಸವಣ್ಣನ ಹೆಸರಿನ ವ್ಯಾಪಾರವೋ?

ಹಲವು ಮಠಾಧಿಪತಿಗಳು ತಾವು ಬಸವಾದಿ ಶರಣರ ತತ್ವದಂತೆ ಶಿಕ್ಷಣ ದಾಸೋಹ ಮಾಡುತ್ತಿದ್ದೇವೆ ಎಂದು ಪ್ರಚಾರ ಪಡೆದುಕೊಳ್ಳುತ್ತಾರೆ. ಆದರೆ ವಾಸ್ತವದಲ್ಲಿ— ಮೆಡಿಕಲ್, ಇಂಜಿನಿಯರಿಂಗ್, ಪ್ರೊಫೆಷನಲ್ ಕಾಲೇಜುಗಳಲ್ಲಿ ಮಠದ ಆಡಳಿತ ಮಂಡಳಿಗಳ ಮೂಲಕ ಪ್ರತಿವರ್ಷವೂ ಲಕ್ಷಾಂತರ ರೂಪಾಯಿ ಡೊನೇಷನ್, ದೇಣಿಗೆ ಎಂಬ ಹೆಸರಿನಲ್ಲಿ ವಸೂಲಿ! ಇದು ಶಿಕ್ಷಣ ಸೇವೆಯೇ, ಅಥವಾ ಶಿಕ್ಷಣ ವ್ಯಾಪಾರವೇ?
ಬಸವ ತತ್ವವು ಕಾಯಕವನ್ನು ಗೌರವಿಸಿತು; ಆದರೆ ಇಂದಿನ ಮಠಗಳು ಬಸವಣ್ಣನ ಹೆಸರಿನಲ್ಲಿ ಬಸವೋದ್ಯಮ ನಡೆಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಬಡ ಲಿಂಗಾಯತ ವಿದ್ಯಾರ್ಥಿಗಳಿಗೆ ಪ್ರೊಫೆಷನಲ್ ಶಿಕ್ಷಣ ಮರೀಚಿಕೆ! ದೇಶ–ವಿದೇಶಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮಠಗಳು, ಅದೇ ವೇಳೆ ಬಡ ಲಿಂಗಾಯತ ವಿದ್ಯಾರ್ಥಿಗಳಿಗೆ ಮೆಡಿಕಲ್ ಅಥವಾ ಇಂಜಿನಿಯರಿಂಗ್ ಶಿಕ್ಷಣವನ್ನು ಅಪಹಾಸ್ಯಕರ ಕನಸಾಗಿಸುವುದು ಎಂತಹ ವಿಪರ್ಯಾಸ?

ಬಸವ ತತ್ವ ಸಮಾಜದ ಕೊನೆಯ ವ್ಯಕ್ತಿಯ ಪರವಾಗಿತ್ತು. ಆದರೆ ಇಂದಿನ ಮಠಗಳ ಶಿಕ್ಷಣ ನೀತಿಗಳು ಶ್ರೀಮಂತರ ಪರವಾಗಿವೆ. ವಿರಕ್ತ ಸಂಪ್ರದಾಯಕ್ಕೆ ವಿರುದ್ಧವಾಗಿ ವಂಶಪಾರಂಪರ್ಯ ಉತ್ತರಾಧಿಕಾರ ರಾರಾಜಿಸುತ್ತಿದೆ!

ಇನ್ನೊಂದು ದ್ರೋಹವೆಂದರೆ— ಮಠದ ಆಸ್ತಿಪಾಸ್ತಿಗಳು ಅನ್ಯರ ಪಾಲಾಗದಂತೆ ನೋಡಿಕೊಳ್ಳುವ ನೆಪದಲ್ಲಿ, ವಿರಕ್ತ ಸಂಪ್ರದಾಯಗಳಿಗೆ ವಿರುದ್ಧವಾಗಿ, ತಮ್ಮ ರಕ್ತ ಸಂಬಂಧಿಗಳನ್ನೇ ಉತ್ತರಾಧಿಕಾರಿಗಳಾಗಿ ನೇಮಿಸುವುದು..!
ಇದನ್ನು ಕಂಡು ಬಡ, ಅಮಾಯಕ ಲಿಂಗಾಯತರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಾಗಿದೆ..! ವಿರಕ್ತ ಮಠಗಳು ಮಠಗಳಾಗಿರಬೇಕಿತ್ತೇ ಹೊರತು ಕುಟುಂಬದ ವಾರಸುದಾರಿಕೆಗೆ ಒಳಪಟ್ಟ ಜಮೀನು ಆಸ್ತಿಗಳಾಗಬಾರದು .!

ಬಸವತತ್ವಕ್ಕೆ ವಿರುದ್ಧವಾದ ರಾಜಕೀಯ ಫರ್ಮಾನುಗಳು:

ರಾಜಕೀಯ ಪಕ್ಷಗಳ ಮುಖಂಡರು ಬಸವತತ್ವಕ್ಕೆ ವಿರುದ್ಧವಾಗಿ ನಡೆದುಕೊಂಡರೂ, ಜಾತಿ–ಪಂಗಡ–ಪ್ರದೇಶಗಳ ಲೆಕ್ಕಾಚಾರದಲ್ಲಿ ಇಂತಹವರನ್ನೇ ಬೆಂಬಲಿಸಬೇಕೆಂದು ಕೆಲವು ಮಠಗಳಿಂದ ತೆರೆಮರೆಯಲ್ಲಿ ಫರ್ಮಾನು ಹೊರಡುವುದು! ಇದು ಧರ್ಮದ ನೈತಿಕ ಶಕ್ತಿಗೆ ಭಾರೀ ಧಕ್ಕೆಯನ್ನು ಉಂಟು ಮಾಡುವಂಥದ್ದು. ಮಠಗಳು ರಾಜಕೀಯದ ನೈತಿಕ ನ್ಯಾಯಾಧಿಕರಣಗಳಾಗಬೇಕಿತ್ತು; ಆದರೆ ಅವು ಇಂದು ರಾಜಕೀಯದ ಮೌನ ಪಾಲುದಾರರಾಗಿವೆ..!

ಬಸವ ತತ್ವ ಆಚರಣೆ ಇಲ್ಲ, ಬಸವ ಬ್ರ್ಯಾಂಡಿಂಗ್ ಮಾತ್ರ!

ಇಂದು ಕಾಣುತ್ತಿರುವುದು ಬಸವ ತತ್ವದ ಆಚರಣೆ ಅಲ್ಲ—ಬಸವಣ್ಣನ ಹೆಸರಿನ ಬ್ರ್ಯಾಂಡಿಂಗ್ ಮಾತ್ರ! ವಚನಗಳು ವೇದಿಕೆಗಳಲ್ಲಿ ಪಠಣಕ್ಕೆ,.. ಬಸವಣ್ಣನ ಹೆಸರು ಫಲಕಗಳಿಗೆ ಮಾತ್ರ ಎಂಬಂತಾಗಿದೆ! ಆದರೆ ಸಮಾಜದಲ್ಲಿ ಸಮಾನತೆ, ಪಾರದರ್ಶಕತೆ, ನ್ಯಾಯ ಇತ್ಯಾದಿಗಳು ಕಾಣೆಯಾಗಿವೆ
ಮುಂದಿನ ದಾರಿ: ಮಠಗಳು ಬದಲಾಗದಿದ್ದರೆ ಸಮಾಜ ಬದಲಾಗದು ಲಿಂಗಾಯತ ಮಠಗಳು ಉಳಿಯಬೇಕಾದರೆ—
ಗದ್ದುಗೆ ಪೂಜೆಗಿಂತ ವಚನ ತತ್ವಕ್ಕೆ ಪ್ರಾಧಾನ್ಯ ನೀಡಬೇಕು. ಶಿಕ್ಷಣವನ್ನು ವ್ಯಾಪಾರದಿಂದ ಮುಕ್ತಗೊಳಿಸಬೇಕು. ಉತ್ತರಾಧಿಕಾರ ಮತ್ತು ಆಸ್ತಿ ವಿಚಾರದಲ್ಲಿ ಪಾರದರ್ಶಕತೆ ತರಬೇಕು. ರಾಜಕೀಯ ಪಕ್ಷಗಳಿಗಿಂತ ಸಮಾಜದ ಪರ ನಿಲ್ಲಬೇಕು.

ಬಸವಣ್ಣನ ಹೆಸರಿನಲ್ಲಿ ಬಸವ ತತ್ವದ ಹತ್ಯೆ ನಿಲ್ಲಬೇಕು. ಬಸವಣ್ಣನ ತತ್ವವು ಮೌನವಾಗಿದ್ದರೆ, ಮಠಗಳ ವೈಭವ ಎಷ್ಟೇ ಹೆಚ್ಚಿದರೂ ಅದು ಶೂನ್ಯವೇ..! ವಿರಕ್ತ ಮಠಗಳು ಆತ್ಮಪರಿಶೀಲನೆಗೆ ಒಳಗಾಗದಿದ್ದರೆ, ಇತಿಹಾಸ ಅವುಗಳನ್ನು ಧರ್ಮರಕ್ಷಕರಾಗಿ ಅಲ್ಲ, ಧರ್ಮದ ದ್ರೋಹಿಗಳಾಗಿ ನೆನಪಿಸಿಕೊಳ್ಳುತ್ತದೆ ಅಷ್ಟೆ!

ನಿಜಗುಣಮೂರ್ತಿ ಕನಕಪುರ.                                       ( ನಿಮ್ಮ ಅಭಿಪ್ರಾಯಗಳನ್ನು 9448863309 ಇಲ್ಲಿಗೆ ವಾಟ್ಸಪ್ ಮಾಡಿ – ಸಂ. )

LEAVE A REPLY

Please enter your comment!
Please enter your name here

Latest News

ಅಕ್ರಮ ಸಾರಾಯಿ ನಿಷೇಧಿಸಲು ಬಾಲಚಂದ್ರ ಜಾರಕಿಹೊಳಿ ಸೂಚನೆ

ಮೂಡಲಗಿ-ಅರಭಾವಿ ಮತಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮ ಸಾರಾಯಿಯನ್ನು ಕೂಡಲೇ ನಿಷೇಧಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಕೊಳ್ಳುವಂತೆ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಪೊಲೀಸ್ ಅಧಿಕಾರಿಗಳಿಗೆ...

More Articles Like This

error: Content is protected !!
Join WhatsApp Group