ಸ್ಮರಣೆ : ಪುರಂದರ ಗುರುಂ ವಂದೇ ದಾಸ ಶ್ರೇಷ್ಠಂ ದಯಾನಿಧಿಂ

Must Read

ಪುಷ್ಯ ಬಹುಳ ಅಮಾವಾಸ್ಯೆ, ಜನವರಿ ೧೮ ಪುರಂದರದಾಸರ ಪುಣ್ಯದಿನ ; ತನ್ನಿಮಿತ್ತ ಈ ಸಾಂದರ್ಭಿಕ ನುಡಿ ನಮನ

ದಾಸರು ಎಂದು ನೆನಪಾದ ಕೂಡಲೇ ನಮ್ಮ ನಾಲಗೆಯ ಮೇಲೆ ನಲಿದಾಡುವ ಮೊದಲ ಹೆಸರು ಪುರಂದರದಾಸರದ್ದು, ದಾಸ ಸಾಹಿತ್ಯವನ್ನು ಜನಪ್ರಿಯ, ಜನಪದಗೊಳಿಸಿದವರಲ್ಲಿ ಬಹು ಮುಖ್ಯರು. ಅವರು ಬಾಳಿದ ಕಾಲವೇ ಹರಿದಾಸ ಸಾಹಿತ್ಯದ ವಸಂತಕಾಲ. ಗುರುಗಳಾದ ವ್ಯಾಸರಾಜರ ಪ್ರೀತಿ ಆದರ ದೊರಕಿದರೂ, ಅವರು ಮಠದಲ್ಲಿ ನಿಲ್ಲಲಿಲ್ಲ, ವಿಜಯನಗರ ಅರಸರ ಮನ್ನಣೆ, ಗೌರವಕ್ಕೆ ಭಾಜನರಾದರೂ, ಅದಕ್ಕೆ ಕೈಚಾಚಲಿಲ್ಲ. ಹೆಂಡತಿ ಮಕ್ಕಳೊಡನೆ ಇದ್ದರೂ ಸಂಸಾರದ ಜಂಜಡದಲ್ಲಿ ಸಿಲುಕಿಕೊಳ್ಳಲಿಲ್ಲ. “ಇರಬೇಕು ಇಲ್ಲದಂತೆ ಇರಬೇಕು” ಎಂದು ಹಾಡಿದಂತೆಯೇ ತಾವೂ ಬದುಕಿದರು. ಹಣದ ಆಸೆ ತೊರೆದು, ಹಾಡಿನ ಹಂಬಲ ಹಿಡಿದು ಹರಿದಾಸರಾದರು, ತಂಬೂರಿಯ ನಾದದಲ್ಲಿ ಭಕ್ತಿಯ ಉನ್ಮಾದದಲ್ಲಿ ನಾದ ಬಿಂಬನನ್ನು ಅರಸಿದರು, ಆರಾಧಿಸಿದರು.

ಅವರ ಅಗಾಧ ಕೃತಿ ಶ್ರೇಣಿಯಲ್ಲಿ, ಹರಿಭಕ್ತಿಯ ಹೊಳಪಿನಲ್ಲಿ ಸಾಮಾಜಿಕ ಕಳಕಳಿ, ಗಂಭೀರ ಚಿಂತನೆ, ನವಿರಾದ ವಿಡಂಬನೆ ಇದೆ. ದಿನನಿತ್ಯದ ತಿಳಿಯಾದ ಮಾತುಗಳಲ್ಲಿ ಭಕ್ತಿ ಭಾವ ತುಂಬಿದ ದಾಸರ ಹಾಡುಗಳು, ಸಮಾಜದ ಎಲ್ಲಾ ವರ್ಗದ ಜನರನ್ನು ನೇರವಾಗಿ ಮುಟ್ಟಿದವು. ಒಮ್ಮೆ ಕೇಳಿದರೆ ಮತ್ತೊಮ್ಮೆ ಕೇಳಬೇಕೆಂಬ ರಚನೆಗಳ ತಾಜಾತನ ಇಂದಿಗೂ ಮಾಸಿಲ್ಲ. ಇವರನ್ನು ನಾರದಾಂಶ ಸಂಭೂತ ಎಂದು ಭಕ್ತಿಯಿಂದ ನೆನೆಯುತ್ತದೆ ದಾಸಕೂಟ. ಪುರಂದರದಾಸರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತದ ಬೆಳವಣಿಗೆಗೆ ಆದ ಉಪಕಾರ ಮಹತ್ತರವಾದುದು. ಭಕ್ತಿ ಸಾಮ್ರಾಜ್ಯದ ಮುಕುಟರಹಿತ ಮಹಾರಾಜರಾಗಿ ಪ್ರಜ್ವಲಿಸುವ ದಾಸರು ಸಂಗೀತದ ಪ್ರಾಥಮಿಕ ಪಾಠಗಳನ್ನು ‘ಪಿಳ್ಳಾರಿ ಗೀತೆ’ಗಳು ಎಂಬ ಸರಳ ಶುದ್ಧ ಶೈಲಿಯ ಪಾಠ ಪದ್ಧತಿಯನ್ನು ಪ್ರಚುರಗೊಳಿಸಿ ಪರಿವರ್ತನಾಶೀಲ ಪ್ರಯೋಗದಲ್ಲಿ ಯಶಸ್ಸು ಕಂಡವರು.

ಪುರಂದರ ಪರಿಮಳ : ದಾಸರೇನು ಸನ್ಯಾಸಿಗಳಲ್ಲ, ಜಗತ್ತಿಗೆ ಅಂಜಿ ಓಡಿದ ವಿರಕ್ತರಲ್ಲ, ಮೂಲತಃ ಚಿನ್ನದ ವ್ಯಾಪಾರಿಗಳು; ಏಟು ಬಿದ್ದಷ್ಟೂ ಚಿನ್ನ ಪುಟವಾಗುವಂತೆ ಶ್ರೀನಿವಾಸ ನಾಯಕರು ಭೋಗ ಜೀವನದಿಂದ ಬೇಸತ್ತು ಭಗವಂತನ ಒಲುಮೆಯ ಗೀಳು ಹಿಡಿದು ಹರಿದಾಸರಾದರು. ತಮ್ಮಲಿದ್ದ ಹೊರೆಯೆಂದು ಕಂಡಿದೆಲ್ಲ ‘ಕೃಷ್ಣಾರ್ಪಣ’ವೆಂದು ದಾನ ಮಾಡಿ ಬಡವರಾಗಿ ಹೊರಟು ಅವರು ‘ನಾನೇಕೆ ಬಡವನೋ ನಾನೇಕೆ ಪರದೇಶಿ’ ಎಂಬ ಆತ್ಮವಿಶ್ವಾಸವನ್ನು ತಳೆದು, ಜೀವನ ಧರ್ಮ ಕಲಿಸಿದ ಹೆಂಡತಿಯನ್ನು ಗುರುವೆಂದು ತಿಳಿದು ‘ಹೆಂಡತಿ ಸಂತತಿ ಸಾವಿರವಾಗಲಿ…’ ಎಂದು ಹೊರಟಿದ್ದು ಭಕ್ತಿ ವ್ಯಾಪಾರಕ್ಕೆ… ಈ ವ್ಯವಹಾರದಲ್ಲಿ ವ್ಯತ್ಯಾಸವೆಂದರೆ ಇಲ್ಲಿ ಕೊಟ್ಟಿದ್ದು ಭಕ್ತಿಯನ್ನೆ, ಪಡೆದಿದ್ದು ಭಕ್ತಿಯನ್ನೇ. ಉಪಾಯದಿಂದ ಅಪಾರ ಮಹಿಮನನ್ನು ನೆನೆಯುತ್ತಾ ಅಂದು ನೆಟ್ಟ ಭಕ್ತಿಯ ಬೀಜ ಇಂದಿಗೂ ಜೀವಂತವಾಗಿದ್ದು ಹೆಮ್ಮರವಾಗಿ ಬೆಳೆದಿದೆ. ಅವರ ಸಂಗೀತಾತ್ಮಕ ಸಾಹಿತ್ಯದೊಟೆಯಿಂದ ಚಿಮ್ಮಿದ ಚಿಲುಮೆ ಬತ್ತಿ ಹೋಗದೆ; ಸದಾ ಉಕ್ಕಿ ಹರಿಯುವ ತಂಪು ನೀಡುವ ಜೀವಝರಿಯಾಗಿದೆ.

ಕಡು ಜ್ಞಾನ ಭಕ್ತಿ ವೈರಾಗ್ಯದ ನಿಧಿಗಳಾಗಿ ನಿಂತ ದಾಸರು ‘ದಾಸನಾಗುವುದು ಏಸು ಜನ್ಮದ ಸುಕೃತ’ವೆಂದು ಹಾಡುತ್ತ ಗುರುಕರುಣದಿಂದಲೇ ಹರಿಚರಣದ ಒಲವು ಮೂಡೀತು, ಅದಕ್ಕೆಂದೆ ದಾಸರು ಹಾಡಿದರು ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಅದರಂತೆ ‘ದಾಸರೆಂದರೆ ಪುರಂದರ ದಾಸರಯ್ಯ’ ಎಂಬ ಪ್ರಶಂಸೆಗೆ ಪಾತ್ರರಾದವರು. ದಾಸ ಸಾಹಿತ್ಯ ಕೆಲವೆಡೆ ಪ್ರಭು ಸಮ್ಮಿತೆಯಾಗಿಯೂ ಮಿತ್ರ ಸಮ್ಮಿತೆಯಾಗಿಯೂ, ಇನ್ನೂ ಕೆಲವೆಡೆ ಕಾಂತಾ ಸಮ್ಮಿತೆಯಾಗಿಯೂ ತೋರುವುದು. ಸಂದರ್ಭೋಚಿತವಾಗಿ ಮೂರು ರೂಪ ಧರಿಸಿದ ಈ ಸಾಹಿತ್ಯದ ಔನ್ನತ್ಯವನ್ನು ಎಷ್ಟು ವರ್ಣಿಸಿದರೂ ಕಡಿಮೆಯೇ. ನಾಸ್ತಿಕರಿಂದ ಹಿಡಿದು ಆಸ್ತಿಕ ಶಿಖಾಮಣಿಗಳವರೆಗೂ ಅವರ ಕೃತಿಗಳಲ್ಲಿ ಬೆಳಕು ಸಿಕ್ಕುವುದು. ಸಂಸಾರದಲ್ಲಿ ಕ್ಲೇಶಪಟ್ಟು ಆರ್ತರಾದವರಿಗೆ ಪುರಂದರದಾಸರ ಪದಗಳಿಂದ ನೆಮ್ಮದಿ ಉಂಟಾಗಿ ಯಂತ್ರಮಯವಾಗುತ್ತಿರುವ ಇಂದಿನ ಜಗತ್ತಿಗೆ ಅನುಭವಸಾರದ ಉಕ್ತಿಗಳು, ಅಪ್ಪಟ ಮಾನವ ಧರ್ಮ ಬೋಧಿಸಿದ ಕೈದೀವಿಗೆಗಳು. ದುಮಾರ್ಗಿಗಳು, ಸನ್ಮಾರ್ಗಿಗಳಾಗಿರಲಿ, ಸನ್ಮಾರ್ಗಿಗಳು ಸಂತರಾಗಲಿ ಎಂಬ ಆಶಯ ಅವರ ಕೃತಿಗಳಲ್ಲಿ ಕಾಣುತ್ತೇವೆ.

ಬಯಲು ಮಂಟಪದ ಗಾಳಿಗೋಪುರವನ್ನೇರಿ ಬಾಳುವೆಗೆ ಅಳವಡಿಸಲಾಗದ ಕಗ್ಗವನ್ನು ಹೇಳಿ ಹೋಗುವ ಸ್ವಭಾವ ಅವರದ್ದಲ್ಲ. ಅವರು ಬಾಳಿದವರು, ಬಾಳನ್ನು ನೋಡಿದವರು, ಬೆಳಕನ್ನು ಕಂಡವರು. ‘ತಂಬೂರಿ ಮೀಟಿದವ ಭವಾಬ್ಧಿ ದಾಟಿದವ’ ಎಂದು ಎಲ್ಲವನ್ನೂ ತ್ಯಾಗ ಮಾಡಿ ನಿರ್ಲಿಪ್ತತೆ ಸಿದ್ಧಿಸಿದಾಗ ಬಡತನದಲ್ಲಿ ಕೂಡ ಸಿರಿತನಕ್ಕಿಂತ ಹೆಚ್ಚು ಸುಖ. ದೊಡ್ಡವರ ಕೃತಿಗಳೆಂದರೆ ಕನ್ನಡಿಯಿದ್ದಂತೆ, ನಾವು ಅವುಗಳನ್ನು ನಮ್ಮೆದುರು ಹಿಡಿದುಕೊಂಡರೆ ನಮ್ಮ ದೋಷಗಳೆಲ್ಲವೂ ಕಾಣುತ್ತದೆ. ಆಗಲಾದರೂ ನಮ್ಮನ್ನು ನಾವು ತಿದ್ದಿಕೊಳ್ಳಬೇಕು. ಇದೇ ಮಹಾನುಭಾವರಿಂದ ಲೋಕಕ್ಕೆ ಆಗುವ ಲಾಭ. ಈ ಕಾರಣಕ್ಕೆ ನಾವು ಅವರನ್ನು ಸದಾ ಸ್ಮರಿಸಬೇಕು.

ಪುರಂದರದಾಸರ ಸಾಹಿತ್ಯದ ಒಂದು ಹೆಗ್ಗಳಿಕೆಯೆಂದರೆ ಅದು ಪಂಡಿತ ಮಂಡಳಿಯ ಸ್ವತ್ತಾಗುವುದಕ್ಕಿಂದ ಹೆಚ್ಚಾಗಿ ಜನನಮುದಾಯದ ನಡುವಿನ ಆಚರಣೆಯ ಭಾಗವಾಗಿ ನೆಲೆಗೊಂಡಿರುವುದು. ಈ ದೃಷ್ಟಿಯಿಂದ ಅವರು ಈ ನಾಡಿನ ಜನಪದದ ಭಾಗವಾಗಿಯೂ ತಮ್ಮ ಅಸ್ತಿತ್ವವನ್ನು ಸ್ಥಾಪಿಸಿಕೊಂಡಿದ್ದಾರೆ.

ದಾಸತ್ವ ಎನ್ನುವುದು ‘ಅಹಂ’ನ ನಿರಾಕರಣೆ. ಇದು ದಾಸರ ಸಾಧನೆಯಾದದ್ದು ಹಲವು ವಿಧದಲ್ಲಿ. ಕರ್ತೃತ್ವವನ್ನು ಇಲ್ಲವಾಗಿಸುವುದು ದಾಸತ್ವದ ಪ್ರಧಾನ ನೆಲೆ. ವ್ಯಕ್ತಿ ತನ್ನನ್ನು ವಿಸ್ತರಿಸಿಕೊಂಡಂತೆ ಕರ್ತೃತ್ಯವೂ ಕರಗುತ್ತ ಹೋಗಿ ಬಹುಕರ್ತೃತ್ವದ ಸಮುದಾಯದಲ್ಲಿ ಒಂದಾಗಿ ಬಿಡುತ್ತದೆ. ಈ ಅರ್ಥದಲ್ಲಿ ದಾಸರು ಸಮುದಾಯದ ದನಿಯೂ ಆಗುತ್ತಾರೆ. ಹಾಡು ‘ತಿಳಿಸು’ವುದಿಲ್ಲ ‘ಆಗು’ತ್ತದೆ. ಅರ್ಥವನ್ನು ಮೀರುವುದು ಅದರ ವಿಧಾನ. ಹೇಳದಂತಿರಬೇಕು. ಹೇಳಿದಂತಿರಬೇಕು ಇದು ಹಾಡಿನ ಸ್ವರೂಪ. ಮಾಡದಂತಿರಬೇಕು ಮಾಡಿದಂತಿರಬೇಕು – ಇದು ದಾಸರ ಆಶಯ. ಆದ್ದರಿಂದ ಎಲ್ಲವನ್ನೂ ಆಟವನ್ನಾಗಿಸಿದರು. ಆಟಕ್ಕೆ ‘ಕುಣಿತ’ ಎಂಬ ಅರ್ಥವೂ ಇದೆ. ದಾಸರು ಎಲ್ಲವನ್ನು ಕುಣಿಸಿದವರು. ಭಾಷೆ ಮತ್ತು ಅಭಿವ್ಯಕ್ತಿ ಮಾತ್ರವಲ್ಲ. ಅವರಲ್ಲಿ ವಸ್ತುವೂ ಕುಣಿಯುತ್ತದೆ. ಅವರ ದೇವರು ಕುಣಿಯುವ ದೇವರು. ತಾವೂ ಕುಣಿದರು ದೇವರನ್ನು ಕುಣಿಸಿದರು. ಸಮುದಾಯಕ್ಕೊಂದು ಕುಣಿತದ ಲಯವನ್ನು ಕೊಟ್ಟರು. ಈ ದೃಷ್ಟಿಯಿಂದ ದಾಸರ ಅಭಿವ್ಯಕ್ತಿಯೆಂದರೂ ಅದೇ, ಅನುಭಾವವೆಂದರೂ ಅದೇ.

ಪುರಂದರದಾಸರು ಮುರಿದು ಕಟ್ಟಿದವರು. ಅದು ಸಿದ್ಧಾಂತವಿರಬಹುದು, ಪುರಾಣವಿರಬಹುದು, ಭಾಷೆಯಿರಬಹುದು, ಛಂದೋ ರೂಪವಿರಬಹುದು. ಎಲ್ಲವನ್ನು ಒಪ್ಪಿಕೊಳ್ಳುತ್ತಲೇ ಅದನ್ನೊಂದು ಬಿಡುಗಡೆಯ ಪರಿಧಿಗೆ ಒಯ್ದು ಮುಟ್ಟಿಸುವ ತಂತ್ರಗಾರಿಕೆಯ ಕೌಶಲ್ಯವನ್ನು ಇವರಲ್ಲಿ ಕಾಣಬಹುದು. ದಾಸರು ನೀತಿ – ಸಿದ್ಧಾಂತಗಳನ್ನು ಬೋಧಿಸಿದರೆನ್ನುವುದು ಸರಳೀಕರಣಗೊಂಡ ಸತ್ಯ. ಅವರಲ್ಲಿ ಪ್ರಧಾನವಾಗಿ ಗುರುತಿಸಬೇಕಾದುದು ಆಗುವಿಕೆಯ ಪ್ರಕ್ರಿಯೆಯನ್ನೇ ಹೊರತು ಹೇಳಿಕೆಗಳ ಗುಡ್ಡೆಯನ್ನಲ್ಲ. ಈ ದೃಷ್ಠಿಯಿಂದ ನೋಡಿದಾಗ, ಅವರ ಅಂತರಂಗದ ಬೇರೊಂದು ಜಗತ್ತು ನಮ್ಮ ಕಣ್ಮುಂದೆ ತೆರೆಯುತ್ತದೆ.

ಪುರಂದರರ ಕೀರ್ತನೆಗಳಲ್ಲಿ ಎಲ್ಲವೂ ಇದೆಯೆನ್ನುವ ಭಾವೋದ್ರೇಕದ ಹೇಳಿಕೆಗಳಿಗಿಂತ ಅವರ ರಚನೆಗಳಲ್ಲಿ ವೈವಿಧ್ಯಮಯ ಬದುಕಿನ ಸಂಕೀರ್ಣ ಅನುಭವಿದೆಯೆಂದು ಹೇಳುವುದು ನ್ಯಾಯಸಮ್ಮತ. ಭಕ್ತಿ, ಅಧ್ಯಾತ್ಮ ಅನುಭಾವಗಳ ಜೊತೆಗೆ ಸಾಮಾಜಿಕ ಪ್ರಜ್ಞೆ ವಿಡಂಬನೆ, ಜಾತ್ಯತೀತ ಪರಿಕಲ್ಪನೆಗಳು ಗಮನ ಸೆಳೆಯುತ್ತವೆ. ಜಡತ್ವವನ್ನು ತೊರೆದು ಚಲನಶೀಲವಾಗುವ, ಅಹಂಭಾವವನ್ನು ಬಿಟ್ಟು ಅನುಭಾವಿಯಾಗುವ ಡಾಂಭಿಕತೆ ಸೋಗಿನ ಸಂಸ್ಕೃತಿಯನ್ನು ವಿಡಂಬಿಸಿ ತನ್ನೊಳಗನ್ನು ಬೆಳಗಲೆತ್ನಿಸುವ ಈ ಕ್ರಿಯೆ ತುಂಬಾ ಮಹತ್ವದೆನಿಸುತ್ತದೆ. ಅವರು ಭಕ್ತಿಯನ್ನು ಸಾಧಿಸಿ ಹರಿದಾಸರಾದಂತೆ ಸಮಾನತೆಯನ್ನು ಸಾರಿ ಹೇಳುವ ಸಮಾಜ ಚಿಂತಕರು ಆಗಿದ್ದಾರೆ. ನಮ್ಮ ಪರಂಪರೆಯ ಮೂಲ ನೆಲೆಗಳನ್ನು ನವ ವಸಹತುಶಾಯಿ ಆಕ್ರಮಣದ ಈ ಸಂದರ್ಭದಲ್ಲಿ ಶೋಧಿಸಬೇಕಾದುದು ತುಂಬಾ ಅಗತ್ಯವಾಗಿದೆ. ಅಂತರಂಗದ ನಡೆ ದಾಸರ ನುಡಿಕಟ್ಟಿನಲ್ಲಿ ಶಾಬ್ದಿಕ ಕಸರತ್ತಾಗದೆ ಅನುಭೂತಿಯ ಆವಿಷ್ಕಾರವಾಗಿ ಮೂಡಿ ಕನ್ನಡದ ಕನ್ನಡಿಯಲ್ಲಿ ಕಣ್ಣಿಗೆ ಕಟ್ಟುವಂತೆ ಪರಿಮೂಡಿಸಿದ ಅನನ್ಯ ದೇಸಿ ಪ್ರತಿಭೆ. ಅಂತಹ ಹರಿಶರಣರಿಗೆ ನಮೋ ನಮಃ.

ಡಾ. ಗುರುರಾಜ ಪೋಶೆಟ್ಟಿಹಳ್ಳಿ (ಪ್ರಣವ) ಸಂಸ್ಕೃತಿ ಚಿಂತಕರು ಮೊಬೈಲ್ : ೯೭೩೯೩೬೯೬೨೧

LEAVE A REPLY

Please enter your comment!
Please enter your name here

Latest News

ಅಕ್ರಮ ಸಾರಾಯಿ ನಿಷೇಧಿಸಲು ಬಾಲಚಂದ್ರ ಜಾರಕಿಹೊಳಿ ಸೂಚನೆ

ಮೂಡಲಗಿ-ಅರಭಾವಿ ಮತಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮ ಸಾರಾಯಿಯನ್ನು ಕೂಡಲೇ ನಿಷೇಧಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಕೊಳ್ಳುವಂತೆ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಪೊಲೀಸ್ ಅಧಿಕಾರಿಗಳಿಗೆ...

More Articles Like This

error: Content is protected !!
Join WhatsApp Group