ಸೂರ ಕಾ ಬಾದಷಾಹ ಪಂಡಿತ ಬಸವರಾಜ ರಾಜಗುರು

Must Read

ರಾಜಗುರು ಎಂದಾಕ್ಷಣ ಇವರಿಗೂ ಅರಸು ಮನೆತನಕ್ಕೂ ಏನು ಸಂಬಂಧ ಎನ್ನುವ ಹಲವು ಪ್ರಶ್ನೆಗಳು ಉದ್ಭವವಾಗುತ್ತವೆ .ಹೌದು ಇವರ ಹಿರಿಯರು ಕೆಳದಿ ಅರಸು ಮನೆತನದ ರಾಜಗುರುಗಳಾಗಿದ್ದರು. ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತದ ದೊರೆ ಎಂದೆನಿಸಿಕೊಂಡ ಬಸವರಾಜ ರಾಜಗುರು ಅವರು ದೇಶವು ಕಂಡ ಅಪ್ರತಿಮ ಸಂಗೀತಗಾರ ಮತ್ತು ಗಾಯಕರು

ಸೂರ ಕಾ ಬಾದಶಾಹ ಎಂದು ಖ್ಯಾತರಾದ ಬಸವರಾಜ ಮಹಾಂತಸ್ವಾಮಿ ರಾಜಗುರು ಇವರು ಧಾರವಾಡ ಜಿಲ್ಲೆಯ ಎಲಿವಾಳ ಗ್ರಾಮದಲ್ಲಿ ೧೯೧೭ ಆಗಸ್ಟ್ ೨೪ರಂದು ಜನಿಸಿದರು. ಇವರ ತಂದೆ ಮಹಾಂತಸ್ವಾಮಿಗಳು ತಂಜಾವೂರಿನಲ್ಲಿ ಕರ್ನಾಟಕ ಸಂಗೀತ ಕಲಿತವರು.
ಚಿಕ್ಕಂದಿನಂದಲೂ ಬಸವರಾಜರು ರಂಗಗೀತೆಗಳಲ್ಲಿ ಒಲವು ತೋರಿಸುತ್ತಿದ್ದರು. ನಾಟಕ ಕಂಪನಿಗಳಿಗೆ ಹೋಗಿ, ಅಲ್ಲಿ ರಂಗಗೀತೆಗಳನ್ನು ಹಾಡಲು ಅವಕಾಶ ಪಡೆಯಲು ಪ್ರಯತ್ನಪಡುತ್ತಿದ್ದರು. ಇದನ್ನು ಗಮನಿಸಿದ ಇವರ ತಂದೆ ಬಸವರಾಜರನ್ನು ಸವಣೂರ ವಾಮನರಾಯರ ಕಂಪನಿಯಲ್ಲಿ ಸೇರಿಸಿದರು. ಬಸವರಾಜರ ತಂದೆ, ಇವರ ೧೩ನೆಯ ವಯಸ್ಸಿನಲ್ಲಿ ತೀರಿಕೊಂಡರು.

*ಸಂಗೀತ ಶಿಕ್ಷಣ*
ಬಸವರಾಜರನ್ನು ಅವರ ಚಿಕ್ಕಪ್ಪ ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿರುವ ಸಂಸ್ಕೃತ ಪಾಠಶಾಲೆಗೆ ಸೇರಿಸಿದರು. ಗದಗಿನ ಅಂಧ ಗಾನಯೋಗಿ ಪಂಚಾಕ್ಷರಿ ಗವಾಯಿ ಅಲ್ಲಿ ಬಂದಾಗ ಇವರ ಹಾಡುಗಾರಿಕೆ ಕೇಳಿ, ಇವರನ್ನು ಗದುಗಿಗೆ ಕರೆದುಕೊಂಡು ಹೋದರು.

ಬಸವರಾಜರು ಗಾನಯೋಗಿಗಳ ಆಶ್ರಮದಲ್ಲಿ ಕಠಿಣವಾದ ಸಂಗೀತ ಸಾಧನೆ ಮಾಡಿದರು. ೧೯೩೬ರಲ್ಲಿ ವಿಜಯನಗರ ಸಾಮ್ರಾಜ್ಯದ ೬ನೆಯ ಶತಮಾನೋತ್ಸವವನ್ನು ಹಂಪಿಯಲ್ಲಿ ಆಚರಿಸುತ್ತಿದ್ದ ಸಂದರ್ಭದಲ್ಲಿ ಬಸವರಾಜ ರಾಜಗುರು ತಮ್ಮ ಪ್ರಥಮ ಕಚೇರಿಯನ್ನು ನೀಡಿದರು. ಗುರು ಪಂಚಾಕ್ಷರಿಯವರೆ ಸ್ವತಃ ತಬಲಾ ಸಾಥ್ ನೀಡಿದರು!

ಆ ಸಮಯದಲ್ಲಿ ಇವರು ಹಾಡಿದ ರಾಗ ಬಾಗೇಶ್ರೀ ಹಾಗು ನಿಜಗುಣಿ ಶಿವಯೋಗಿಗಳ ವಚನಗಳನ್ನು ಕೇಳಿದ ಜನಸ್ತೋಮ ಮಂತ್ರಮುಗ್ಧವಾಯಿತು. ಹಿಂದುಸ್ತಾನಿ ಸಂಗೀತದ ಹೊಸ ತಾರೆಯೊಂದು ಕರ್ನಾಟಕದ ಬಾನಿನಲ್ಲಿ ಉದಯಿಸಿತ್ತು. ಗುರು ಪಂಚಾಕ್ಷರಿ ಅವರ ಮಾರ್ಗದರ್ಶನದಲ್ಲಿ ಹಿಂದೂಸ್ತಾನಿ ಸಂಗೀತಕ್ಕೆ ಸಜ್ಜಾದರು.
೧೯೩೬ರಿಂದ ೧೯೪೩ರವರೆಗೆ ಮುಂಬಯಿ ಆಕಾಶವಾಣಿ ಹಾಗು ಎಚ್.ಎಮ್.ವಿ. ಕಂಪನಿಯವರಿಗಾಗಿ ಬಸವರಾಜ ರಾಜಗುರು ಅನೇಕ ರಾಗಗಳನ್ನು ಹಾಡಿದರು. ೧೯೪೪ರಲ್ಲಿ ಗುರು ಪಂಚಾಕ್ಷರಿ ಗವಾಯಿಗಳ ನಿಧನದ ಬಳಿಕ ಬಸವರಾಜರು ಮುಂಬಯಿಗೆ ಬಂದು ಸವಾಯಿ ಗಂಧರ್ವರ ಶಿಷ್ಯವೃತ್ತಿ ಸ್ವೀಕರಿಸಿದರು. ಸವಾಯಿ ಗಂಧರ್ವರು ಅನತಿಕಾಲದಲ್ಲಿ ಅರ್ಧಾಂಗವಾಯು ಪೀಡಿತರಾಗಿದ್ದರಿಂದ, ತಮ್ಮ ಶಿಷ್ಯ ಬಸವರಾಜರನ್ನು ಸುರೇಶಬಾಬು ಮಾನೆ ಎನ್ನುವ ಗವಾಯಿಗಳಿಗೆ ಒಪ್ಪಿಸಿದರು.

ಕೆಲ ಸಮಯದ ನಂತರ ಬಸವರಾಜ ರಾಜಗುರು ಸದ್ಯದ ಪಾಕಿಸ್ತಾನ ಭಾಗದಲ್ಲಿದ್ದ, ಕಿರಾಣಾ ಘರಾಣಾದ ಪ್ರಸಿದ್ಧ ಗಾಯಕರಾದ ಹಾಗು ತಮ್ಮ ಗುರು ಪಂಚಾಕ್ಷರಿ ಗವಾಯಿಗಳ ಗುರುವಾದ ಉಸ್ತಾದ ವಹೀದಖಾನರಲ್ಲಿ ತೆರಳಿ ತಮ್ಮ ಶಿಕ್ಷಣ ಮುಂದುವರಿಸಿದರು. ಅಲ್ಲಿಂದ ಉಸ್ತಾದ ಲತೀಫ ಖಾನ‍ರಲ್ಲಿ ೬ ತಿಂಗಳುವರೆಗೆ ಕಲಿತರು. ಇನಾಯತುಲ್ಲಾ ಖಾನ, ರೋಶನ ಅಲಿ ಹಾಗು ಗೋವಿಂದರಾವ ಟೇಂಬೆಯವರಲ್ಲಿ ಸಹ ಸಂಗೀತಾಭ್ಯಾಸ ಮಾಡಿದ ಬಸವರಾಜ ರಾಜಗುರು ಹಿಂದುಸ್ತಾನಿ ಸಂಗೀತದ ಮೂರು ಪ್ರಸಿದ್ಧ ಘರಾಣಾಗಳಲ್ಲಿ ( ಕಿರಾಣಾ ಘರಾಣಾ,ಗ್ವಾಲಿಯರ ಘರಾಣಾ ಹಾಗು ಪತಿಯಾಳಾ ಘರಾಣಾ ) ಪ್ರಭುತ್ವ ಸ್ಥಾಪಿಸಿದರು.

*ಸಾವು ಗೆದ್ದ ಸಾಧಕರು*
——————————
೧೯೪೭ರಲ್ಲಿ ದೇಶ ವಿಭಜನೆಯ ಸಮಯದಲ್ಲಿ ರಾಜಗುರು ಕರಾಚಿಯಲ್ಲಿದ್ದರು. ಪಾಕಿಸ್ತಾನದಲ್ಲಿ ನಡೆಯುತ್ತಿದ್ದ ನರಮೇಧದಿಂದ ತಪ್ಪಿಸಿಕೊಳ್ಳಲು, ಉಸ್ತಾದ ಲತೀಫ ಖಾನರ ಸಲಹೆಯಂತೆ, ರಾಜಗುರು ಭಾರತಕ್ಕೆ ತೆರಳುವ ಟ್ರೇನ್ ಒಂದನ್ನು ಹತ್ತಿ ಪಲಾಯನ ಮಾಡಬೇಕಾಯಿತು. ಭಾರತದ ಗಡಿಗಿಂತ ಸ್ವಲ್ಪ ಮೊದಲು ಆ ಟ್ರೇನ್ ನಿಲ್ಲಿಸಿ, ಪಾಕಿಸ್ತಾನಿಗಳು ಹಿಂದುಗಳ ಹತ್ಯೆ ಪ್ರಾರಂಭ ಮಾಡಿದಾಗ, ರಾಜಗುರು ಟ್ರೇನಿನ ಬೋಗಿಯ ಕೆಳಗೆ ಅಡಗಿಕೊಂಡು ದಿಲ್ಲಿಯವರೆಗೆ ಬಂದರು. ದಿಲ್ಲಿಯಿಂದ ಪುಣೆಗೆ ಬಂದ ರಾಜಗುರು ತಮ್ಮ ಸಂಗೀತ ವೃತ್ತಿ ಮುಂದುವರಿಸುತ್ತಿದ್ದಂತೆಯೆ ಮತ್ತೊಂದು ಗಂಡಾಂತರ ಎದುರಾಯಿತು.

೧೯೪೮ರಲ್ಲಿ ಮಹಾತ್ಮ ಗಾಂಧಿಯವರ ಹತ್ಯೆಯಾಗುತ್ತಿದ್ದಂತೆ, ಕೊಲೆಗಾರ ನಾಥೂರಾಮ ಘೋಡಸೆ ಬ್ರಾಹ್ಮಣ ಜಾತಿಯವನಾಗಿದ್ದ ಕಾರಣ ಮಹಾರಾಷ್ಟ್ರ ರಾಜ್ಯದಲ್ಲಿ ಬ್ರಾಹ್ಮಣರ ಮೇಲೆ ಹಿಂಸಾಚಾರ ಪ್ರಾರಂಭವಾಯಿತು. ಬ್ರಾಹ್ಮಣನೊಬ್ಬನ ಮನೆಯಲ್ಲಿ ಬಾಡಿಗೆಗಿದ್ದ ಬಸವರಾಜ ರಾಜಗುರು ದೊಂಬಿಕಾರರ ಕೈಯಲ್ಲಿ ಸಿಕ್ಕಿಬಿದ್ದಿದ್ದರು. ಆದರೆ ತಾವು ಬ್ರಾಹ್ಮಣರಲ್ಲವೆಂದು ಅವರಿಗೆ ಮನವರಿಕೆ ಮಾಡಿಕೊಟ್ಟು ಪಾರಾದ ರಾಜಗುರು ಧಾರವಾಡಕ್ಕೆ ಮರಳಿದರು.

*ಅಧ್ಯಾಪನ ಮತ್ತು ಶಿಷ್ಯ ವರ್ಗ*

ಬಸವರಾಜ ರಾಜಗುರು ತಮ್ಮ ಗುರು ಪಂಚಾಕ್ಷರಿ ಗವಾಯಿಗಳಿಗೆ ಕೊಟ್ಟ ಮಾತಿನಂತೆ, ತಮ್ಮ ಸಂಗೀತ ವಿದ್ಯೆಯನ್ನು ನಿರ್ವಂಚನೆಯಿಂದ ಅನೇಕ ವಿದ್ಯಾರ್ಥಿಗಳಿಗೆ ಧಾರೆಯರೆದರು. ಸಂಗೀತ ಕ್ಷೇತ್ರದಲ್ಲಿ ಈಗ ಪ್ರಸಿದ್ಧರಾದ ಗಣಪತಿ ಭಟ್ಟ, ಪರಮೇಶ್ವರ ಹೆಗಡೆ,ಶಾಂತಾರಾಮ ಹೆಗಡೆ ಹಾಗು ನಚಿಕೇತ ಶರ್ಮಾ ಸಂಗೀತ ಕಟ್ಟಿ ಡಾ ಮೃತ್ಯುಂಜಯ ಶೆಟ್ಟರ ಮೊದಲಾದವರು ರಾಜಗುರುಗಳ ಶಿಷ್ಯಂದಿರು.

*ಆದರ್ಶ ವ್ಯಕ್ತಿತ್ವ*

ಬಸವರಾಜ ರಾಜಗುರುಗಳಿಗೆ ಯಾವುದೇ ದುರಭ್ಯಾಸವಿರಲಿಲ್ಲ. ಚಹಾ, ಸಿಗರೇಟು, ತಂಬಾಕು, ಮದ್ಯಪಾನ ಇತ್ಯಾದಿ ಸಣ್ಣ ಹಾಗು ದೊಡ್ಡ ದುರ್ಗುಣಗಳಿಗೆ ಅವರಲ್ಲಿ ಸ್ಥಾನವಿರಲಿಲ್ಲ. ಅವರು ಸಂಪೂರ್ಣ ಶಾಖಾಹಾರಿಗಳಾಗಿದ್ದರು. ಕರಿದ ತಿಂಡಿಗಳನ್ನು ತಿನ್ನುತ್ತಿರಲಿಲ್ಲ. ಸಂಗೀತ ಕಚೇರಿಗಾಗಿ ಎಲ್ಲಿಯೇ ಹೋಗಲಿ, ತಮ್ಮ ಭಕ್ಷ್ಯ, ಭೋಜನ ಸಾಮಗ್ರಿಗಳನ್ನು ತಮ್ಮ ಜೊತೆಗೆ ಒಯ್ಯುತ್ತಿದ್ದರು. ಧಾರವಾಡದಿಂದಲೆ ಕಾದಾರಿಸಿದ ಕುಡಿಯುವ ನೀರನ್ನು ಸಹ ಒಯ್ಯುತ್ತಿದ್ದರು!

ಬಸವರಾಜ ರಾಜಗುರುಗಳದು ಅತಿ ನಿರ್ಭಿಡೆಯ ದಿಟ್ಟ ಸ್ವಭಾವ. ಆ ಸಮಯದ ಖ್ಯಾತ ಗಾಯಕರಾದ ಉಸ್ತಾದ ನಿಶಾದ ಖಾನರನ್ನು , ಉಸ್ತಾದ ಛೋಟೆ ಗುಲಾಮರನ್ನು ಸಂಗೀತ ಕಚೇರಿಗಳಲ್ಲಿ ಯಶಸ್ವಿಯಾಗಿ ಎದುರಿಸಿ ಪ್ರಶಂಸೆ ಪಡೆದರು.ಆದರೆ ಇಂತಹ ಯಶಸ್ಸಿನಿಂದ ತಲೆ ತಿರುಗದ ರಾಜಗುರು, ತಮ್ಮ ದೈನಂದಿನ ಜೀವನದಲ್ಲಿ ದೇವಪೂಜೆ ಹಾಗು ಸಂಗೀತ ಸಾಧನೆಗಳನ್ನು ತಪ್ಪಿಸುತ್ತಿರಲಿಲ್ಲ.

*ವೈಶಿಷ್ಟ್ಯ*
ಬಸವರಾಜ ರಾಜಗುರು ಕಿರಾಣಾ, ಗ್ವಾಲಿಯರ ಹಾಗು ಪಟಿಯಾಲಾ ಘರಾಣಾಗಳ ಆಳ ಜ್ಞಾನ ಉಳ್ಳವರಾಗಿದ್ದರು. ಈ ಮೂರೂ ಘರಾಣಾಗಳ ಶ್ರೇಷ್ಠ ಅಂಶಗಳನ್ನು ಒಳಗೊಂಡ ಸಂಗೀತ ಅವರದಾಗಿತ್ತು.

*ಪುರಸ್ಕಾರ*
ಬಸವರಾಜ ರಾಜಗುರುಗಳಿಗೆ ೧೯೭೫ರಲ್ಲಿ ಪದ್ಮಶ್ರೀ ಪ್ರಶಸ್ತಿ ಹಾಗು ೧೯೯೧ರಲ್ಲಿ ಪದ್ಮಭೂಷಣ ಪ್ರಶಸ್ತಿ ಲಭಿಸಿದವು. ಅಲ್ಲದೆ ಕರ್ನಾಟಕ ರಾಜ್ಯ ಹಾಗು ಕೇಂದ್ರದ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ ಸಹ ಲಭಿಸಿದ್ದವು.

ಅಮೇರಿಕದಲ್ಲಿ ಕಚೇರಿ ನಡೆಯಿಸಿಕೊಡುವ ಉದ್ದೇಶದಿಂದ , ವೀಸಾ ಪಡೆಯಲು ಚೆನ್ನೈಗೆ ತೆರಳಿದ ರಾಜಗುರು ಧಾರವಾಡಕ್ಕೆ ಮರಳಿ ಬರುತ್ತಿದ್ದರು. ಬೆಂಗಳೂರಿಗೆ ಬಂದಾಗ ಅವರಿಗೆ ಅಲ್ಲಿ ಲಘು ಹೃದಯಾಘಾತವಾಯಿತು. ಅವರ ಶಿಷ್ಯ ನಚಿಕೇತ ಶರ್ಮಾ ಅವರನ್ನು ಆಸ್ಪತ್ರೆಗೆ ಒಯ್ದರು.

೧೯೯೧ ಜುಲೈ ೨೧. ಆಸ್ಪತ್ರೆಯಲ್ಲಿದ್ದ ಬಸವರಾಜ ರಾಜಗುರು ಅರೆಪ್ರಜ್ಞಾವಸ್ಥೆಯಲ್ಲಿ ಕನವರಿಸಿದರು. “ ಮೂಲೆಯಲ್ಲಿರುವ ತಂಬೂರಿ ತೆಗೆದುಕೊ, ಸಾ ಆಲಾಪ ಮಾಡು. ಇದು ರಾಗ ಬಿಹಾಗದ ಸಮಯ.” ಹೌದು, ಆವಾಗ ರಾತ್ರಿ ೧೧ ಗಂಟೆ. ಅದು ರಾಗ ಬಿಹಾಗದ ಸಮಯ!

ಕೊನೆಯ ಪಯಣ
ನಚಿಕೇತ ಶರ್ಮಾ ಎಷ್ಟೆ ಬಿನ್ನವಿಸಿಕೊಂಡರೂ ಸಹ , ಕರ್ನಾಟಕ ಸರಕಾರ- (ಆಗ ಬಂಗಾರಪ್ಪನವರು ಮುಖ್ಯ ಮಂತ್ರಿಗಳಾಗಿದ್ದರು)- ಸುರ ಕಾ ಬಾದಶಾಹ, ಪದ್ಮಭೂಷಣ ಪ್ರಶಸ್ತಿ ಸನ್ಮಾನಿತ ರಾಜಗುರುಗಳ ಶವವನ್ನು ಬೆಂಗಳೂರಿನಿಂದ ಧಾರವಾಡಕ್ಕೆ ಸಾಗಿಸಲು ಸರಕಾರಿ ವ್ಯವಸ್ಥೆಯನ್ನು ಕಲ್ಪಿಸಲಿಲ್ಲ.

ಖಾಸಗಿ ವಾಹನದಲ್ಲಿ ಇವರು ಅಲ್ಲಿ ತಲುಪಿದಾಗ ಬಸವರಾಜ ರಾಜಗುರುಗಳ ಕೊನೆಯ ದರ್ಶನಕ್ಕಾಗಿ ಧಾರವಾಡ ಪಟ್ಟಣವೆ ಅಲ್ಲಿ ಕಾಯುತ್ತ ನಿಂತಿತ್ತು. ಇವರ ಜೊತೆಯ ಮತ್ತೊಬ್ಬ ಖ್ಯಾತ ಸಂಗೀತ ಸಾಧಕ ಪದ್ಮವಿಭೂಷಣ ಮಲ್ಲಿಕಾರ್ಜುನ ಮನಸೂರ ಉಸುರಿದರು: “ವಾಹ್! ಸಾವಿನಲ್ಲೂ ಇವರೊಬ್ಬ ಬಾದಶಾಹ!” ಎಂದು ಉದ್ಗರಿಸಿದರು . ಸೂರ ಕಾ ಬಾದಷಾಹ ಪಂಡಿತ ಬಸವರಾಜ ರಾಜಗುರು ಅವರು ಅಪಾರ ಅಭಿಮಾನಿ ಬಳಗ ಶಿಷ್ಯರನ್ನು ಬಿಟ್ಟು ಬಯಲಾದರು.
________________________
ಡಾ.ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

LEAVE A REPLY

Please enter your comment!
Please enter your name here

Latest News

ಅಕ್ರಮ ಸಾರಾಯಿ ನಿಷೇಧಿಸಲು ಬಾಲಚಂದ್ರ ಜಾರಕಿಹೊಳಿ ಸೂಚನೆ

ಮೂಡಲಗಿ-ಅರಭಾವಿ ಮತಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮ ಸಾರಾಯಿಯನ್ನು ಕೂಡಲೇ ನಿಷೇಧಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಕೊಳ್ಳುವಂತೆ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಪೊಲೀಸ್ ಅಧಿಕಾರಿಗಳಿಗೆ...

More Articles Like This

error: Content is protected !!
Join WhatsApp Group