ಬೆಂಗಳೂರು: ಯೋಗ ವಿಜ್ಞಾನ ಮತ್ತು ಆಧ್ಯಾತ್ಮಿಕ ಅಧ್ಯಯನ ಕ್ಷೇತ್ರದಲ್ಲಿ ತಮ್ಮ ವಿಶಿಷ್ಟ ಸೇವೆ ಮತ್ತು ಸಂಶೋಧನಾ ಕೊಡುಗೆಗಾಗಿ, ಸೌಮ್ಯ ರಂಜನ್ ಮೋಹಕುಡ್ ಅವರಿಗೆ ಏಷ್ಯಾ ಅಂತಾರಾಷ್ಟ್ರೀಯ ಕಲ್ಚರ್ ರೀಸರ್ಚ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ.
ಈ ಗೌರವವನ್ನು ಇತ್ತೀಚೆಗೆ ಪಾಂಡಿಚೆರಿಯಲ್ಲಿ ನಡೆದ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಅಧಿಕೃತವಾಗಿ ಘೋಷಿಸಲಾಯಿತು. ಸಮಾವೇಶದಲ್ಲಿ ಸೌಮ್ಯ ರಂಜನ್ ಮೋಹಕುಡ್ ಸಕ್ರಿಯವಾಗಿ ಭಾಗವಹಿಸಿ ಮಹತ್ವದ ಕೊಡುಗೆ ನೀಡಿದ್ದರು.
ಪ್ರಸಿದ್ಧ ಯೋಗಗುರು, ಇಷಾ ಫೌಂಡೆಷನ್ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್, ಮತ್ತು ಮೈಸೂರಿನ ಖ್ಯಾತ ಯೋಗಗುರು ಶ್ರೀನಾಥ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ಅವರು, ಟೆಂಪಲ್ ಯೋಗದಲ್ಲಿ ಪ್ರಾವೀಣ್ಯತೆ ಗಳಿಸಿಕೊಂಡಿದ್ದಾರೆ. ಯೋಗದ ವೈಜ್ಞಾನಿಕ ಆಯಾಮ ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ಸಮಾಜದ ವಿವಿಧ ವರ್ಗಗಳಿಗೆ ತಲುಪಿಸುವಲ್ಲಿ ಅವರ ಸೇವೆ ನಿರಂತರವಾಗಿದೆ.
ವಿಶ್ವವಿದ್ಯಾಲಯದ ಆಯೋಜಕರು ಈ ಗೌರವವನ್ನು ಸೌಮ್ಯ ರಂಜನ್ ಮೋಹಕುಡ್ ಅವರ ಸೇವಾ ಪಯಣದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲೆಂದು ಅಭಿಪ್ರಾಯಪಟ್ಟಿದ್ದಾರೆ.

