ಲೇಖನ : ಊರು ತೇರು ಹಳೆಯ ನೆನಪುಗಳು ನೂರು

Must Read

ಹೇಮಾವತಿ ನದಿ ಗೊರೂರು ಬಳಿ ಹಾಸನ ಮತ್ತು ಅರಕಲಗೊಡು ತಾಲ್ಲೂಕನ್ನು ಸೀಮಾ ರೇಖೆಯಾಗಿ ಬೇರ್ಪಡಿಸಿದೆ. ಗೊರೂರು ಬಳಿ ಸೇತುವೆ ಕಟ್ಟುವ ಮೊದಲು ಯೋಗಾನೃಸಿಂಹಸ್ವಾಮಿ ದೇವಸ್ಥಾನದ ಬಳಿ ಹಾಯಿಗಡವಿದ್ದು ಹಳ್ಳಿಗರು ಇಲ್ಲಿಂದಲೇ ಗೊರೂರಿಗೆ ಬಂದು ಹೋಗುತ್ತಿದ್ದರು. ಹೊಳೆ ತುಂಬಿದಾಗ ಹರಿಗೋಲು ಸಂಪರ್ಕ ಸಾಧನವಾಗುತ್ತಿತ್ತು. ಈ ಹಾಯಿಗಡ ಬಂಡೆಗಳಿಂದ ತುಂಬಿದ್ದು ಆಳ ಕಡಿಮೆ ಇರುತ್ತಿತ್ತಾಗಿ ಇದು ಬೇಸಿಗೆಯ ಸ್ನಾನಘಟ್ಟವೂ ಆಗಿತ್ತು. ನದಿಯಲ್ಲಿ ಈಜುವವರು ಚಿಕ್ಕನಕಲ್ಲಿನಲ್ಲಿ ಪ್ರಾರಂಭಿಸಿ ದೊಡ್ಡನಕಲ್ಲಿನಲ್ಲಿ ಕಲಿತು ಮಟ್ಟೆಕಲ್ ಮಡುವಿನಲ್ಲಿ ಈಜುವಂತಾದಾಗ ಪರಿಣಿತ ಎನ್ನಿಸಿಕೊಳ್ಳುತ್ತಿದ್ದರು. ಮಡುವಿನ ಪಕ್ಕದ ತಿರುವಿನಲ್ಲಿ ಸೋಪಾನದಿಂದ ಕೆಳಕ್ಕೆ ಮರಳು ಸಂಗ್ರಹವಾಗುತ್ತಿತ್ತು. ಈ ಹಾಯ್ಗಡದಲ್ಲಿ ಸೋಪಾನ ಕಟ್ಟೆ ಆಗಿ ಸೇತುವೆಯಾದ ಮೇಲೆ ಇಲ್ಲಿ ಹರಿಗೋಲು ಬಳಕೆ ನಿಂತು ಹೋಯಿತು. ಇಲ್ಲೀಗ ಹೇಮಾವತಿ ನದಿ ಮದ್ಯೆ ಚಿಕ್ಕ ಗುಡಿ ಕಟ್ಟಿ ಅಲ್ಲಿಗೆ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಹೊಸದಾಗಿ ಈಜು ಕಲಿಯುವವರು ಎಮ್ಮೆ ಗುಂಡಿ ಎಂದು ಕರೆಯುತ್ತಿದ್ದ ಈ ಜಾಗದಲ್ಲಿಯೇ. ಆಗ ಹೇಮಾವತಿ ದಂಡೆಯು ಶವಗಳನ್ನು ಹೂಳುವ ರುದ್ರಭೂಮಿಯಾಗಿ ಬಳಕೆಯಾಗುತ್ತಿತ್ತು. ಗ್ರಾಮಕ್ಕೆ ಕುಡಿಯುವ ನೀರೆತ್ತುವ ಪಂಪ್ ಹೌಸ್ ಇಲ್ಲಿಯೇ ಇದೆ.

ಯೋಗನರಸಿಂಹಸ್ವಾಮಿ ದೇವಸ್ಥಾನ ಮುಂದೆ ಎತ್ತರವಾಗಿ ಬೆಳೆದ ಮರಗಳು ಇಂದಿಗೂ ನೆರಳು ನೀಡುತ್ತಿವೆ.
ನದಿ ದಂಡೆಗೂ ಗ್ರಾಮಠಾಣಕ್ಕೂ ನಡುವೆ ತೋಟ ಗದ್ದೆಗಳಿವೆ. ಇದಕ್ಕೆ ನೀರಿನ ಆಸರೆ ಯಗಚಿ ನದಿಗೆ ಕಟ್ಟಿದ್ದ ಚಂಗ್ರವಳ್ಳಿ ನಾಲೆ. ಈಗ ಇದನ್ನು ಹೇಮಾವತಿ ಎಡದಂಡೆ ನಾಲೆಗೆ ಜೋಡಿಸಿದೆ. ಈ ನಾಲೆ ಗೊರೂರು ಗ್ರಾಮಠಾಣ ದಾಟುವಾಗ ಕೋಟೆ ಪೇಟೆ ಎಂದು ಇಬ್ಭಾಗಿಸುತ್ತದೆ. ಊರಿನ ಜಮೀನು ಕೆಳಗೆ ನೀರಾವರಿ ಮೇಲಕ್ಕೆ ಖುಷ್ಕಿ ಭೂಮಿಯನ್ನಾಗಿ ವಿಭಜಿಸಿದೆ. ೬-೫-೧೫೬೮ರ ಚಂಗ್ರವಳ್ಳಿ ನಾಲೆಯ ಶಾಸನವು ಗೊರಊರ ಕಟ್ಟೆ (ಮಣ್ಣೇರಿ) ವೊಡೆದು ಖಿಲವಾಗಿ ಯಿರಲಾಗಿ ಎರಕ್ರಷ್ಣಪನಾಯಕರ ಮಗ ವೆಂಕಟಾದ್ರಿ ಜೀರ್ಣೋದ್ಧಾರ ಮಾಡಿಸಿದ್ದಾಗಿ ಹೇಳಿದೆ. ಯೋಗನರಸಿಂಹಸ್ವಾಮಿ ದೇವಸ್ಥಾನದಿಂದ ಕೋಟೆ ಪೇಟೆ ಬೀದಿಗಳ ಸಂಪರ್ಕಕ್ಕಾಗಿ ಗದ್ದೆಗಳ ಮದ್ಯೆ ರಸ್ತೆ ಮಾಡಲಾಗಿದೆ. ಈಗ ದೇವಸ್ಥಾನ ಅಭಿವೃದ್ಧಿ ಪಡಿಸಲು ಸುತ್ತಲ ಗೋಡೆ ಕಟ್ಟಡ ಒಡೆಯಲಾಗಿದೆ.

ಊರಿನಲ್ಲಿ ಒಂದು ಐತಿಹಾಸಿಕ ಕೋಟೆ ಇತ್ತು. ಈಗ ಕೋಟೆ ಅವಶೇಷ ಏನೂ ಉಳಿದಿಲ್ಲ. ಕ್ರಿ.ಶ.೧೭೮೦ರಲ್ಲಿ ಕೊಡಗಿನ ಲಿಂಗರಾಜೇಂದ್ರ ರಾಜನು ಮರಣಹೊಂದಿದ ನಂತರ ಆತನ ಚಿಕ್ಕಮಗ ರಾಜ್ಯಾಡಳಿತ ನಡೆಸಲಾರನೆಂದು ತಿಳಿದ ಹೈದರಾಲಿ ಕುಯುಕ್ತಿಯಿಂದ ರಾಜರ ಕುಟುಂಬವನ್ನು ಕರೆತಂದು ಗೊರೂರಿನ ಕೋಟೆಯಲ್ಲಿ ಬಂದಿಸಿದ್ದನೆಂದೂ ನಂತರ ೧೭೯೨ರಲ್ಲಿ ಹೈದರಾಲಿಯ ಮಗ ಟಿಪ್ಪುಸುಲ್ತಾನನು ಗೊರೂರು ಕೋಟೆಯಿಂದ ಮಡಿಕೇರಿ ರಾಜಕುಟುಂಬವನ್ನು ಪಿರಿಯಾಪಟ್ಟಣಕ್ಕೆ ವರ್ಗಾಯಿಸಿದನೆಂದು ಕೃಷ್ಣಯ್ಯನವರ ಮಡಿಕೇರಿ ಇತಿಹಾಸದಿಂದ ತಿಳಿಯಬಹುದು.

೧೫೭೫ರಲ್ಲಿ ಅರಕಲಗೊಡು ಕೃಷ್ಣಪ್ಪನಾಯಕನ ಅಧೀನಕ್ಕೆ ಗೊರೂರು ಒಳಪಟ್ಟಿತ್ತು. ಕೃಷ್ಣಪ್ಪನಾಯಕನು ಗೊರೂರಿನ ಶ್ರೀ ಯೋಗಾನರಸಿಂಹಸ್ವಾಮಿ ವಿಗ್ರಹವನ್ನು ಪೀಠದಲ್ಲಿ ಪ್ರತಿಷ್ಠಾಪಿಸಿ ಗರ್ಭಗುಡಿಯನ್ನು ಮತ್ತು ಸುತ್ತ ಕಲ್ಲಿನ ಗೋಡೆಯನ್ನು ನಿರ್ಮಿಸಿದನೆಂದು ಉಲ್ಲೇಖವಿದೆ.
ಕೋಟೆಯ ಈಶಾನ್ಯ ಬದಿಯಲ್ಲಿ ಎರಡು ಈಶ್ವರ ದೇವಸ್ಥಾನಗಳು ಇವೆ. ಈ ದೇವಾಲಯವು ಹೊಯ್ಸಳರ ೧ನೇ ನರಸಿಂಹ ಕಾಲದಲ್ಲಿ ೨-೩-೧೧೬೭ರಲ್ಲಿ ಶತರುದ್ರಿಯಪುರ ಗೊರವೂರಲ್ಲಿ ಸುರಿಗೆಯ ವಿಜಯಾದಿತ್ಯ ಹೆಗ್ಗಡೆ ತ್ರಿಕೂಟ ಲಿಂಗ ಪ್ರತಿಷ್ಠೆ ಮಾಡಿಸಿದ್ದಾಗಿ ಶಾಸನವು ತಿಳಿಸುತ್ತದೆ.

ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಮನೆಯ ಪಕ್ಕದಲ್ಲೇ ಪರವಾಸು ದೇವರ ದೇವಸ್ಥಾನವಿದೆ. ಈ ಗುಡಿಗೆ ಹೊಂದಿಕೊಂಡು ತೇರಿನ ಹಂಚಿನ ಮನೆ ಇತ್ತು. ಈಗ ಇದರ ಪಕ್ಕ ಹಳೆಯ ತೇರು ಶಿಥಿಲವಾಗಿ ನಿಂತಿದೆ. ಹೊಸ ತೇರಿಗೆ ಎತ್ತರದ ಮನೆ ಕಟ್ಟಲಾಗಿದೆ. ಇದಕ್ಕೆ ಹೊಂದಿಕೊಂಡಂತೆ ತೇರಿನ ಮೇಲಕ್ಕೆ ಉತ್ಸವ ಮೂರ್ತಿಯನ್ನು ಏರಿಸಲು ಕಟ್ಟಿಸಿದ ಮಂಟಪವಿದೆ. ಇಲ್ಲೊಂದು ಇತಿಹಾಸದ ಕೊಂಡಿಯಾಗಿ ಪೂರ್ಣಯ್ಯನ ಛತ್ರ ಇದರ ಪಕ್ಕ ಪುರಾತನ ದೇವಾಲಯವಿತ್ತು. ಇಲ್ಲಿಯೇ ಸಹಕಾರ ಸಂಘದ ಕಲ್ಲು ಕಟ್ಟಡ ಇದೆ. ಇದರ ಹಿಂದೆ ಶೃಂಗಾರ ತೋಟವಿತ್ತು. ಇಲ್ಲಿ ಹೂಗಳನ್ನು ಬೆಳೆಸಿ ದೇವರಿಗೆ ಅರ್ಪಿಸಲಾಗುತ್ತಿತ್ತಂತೆ. ಇಲ್ಲಿ ಈಗ ಜೆಎಸ್‌ಎಸ್ ಬೀಜ ಸಂಸ್ಕರಣ ಘಟಕದ ಕಟ್ಟಡವಿದೆ.

ತೇರು ಮನೆಗೆ ಸ್ವಲ್ಪ ಮುಂದೆ ಕೋಟೆಯ ಬಾಗಿಲು ಇತ್ತು. ಅದರೊಳಗೆ ಪ್ರವೇಶಿಸಿ ಕೋಟೆಯೊಳಗೆ ಹೋಗಲು ಬಹಳ ಇಕ್ಕಟ್ಟಾದ ಕೊಂಡಿ ಬಿಡಲಾಗಿತ್ತೆಂದೂ ಒಂದು ಗಾಡಿಯೂ ಕಷ್ಟದಿಂದಲೇ ಒಳಗೆ ಹೋಗ ಬೇಕಾಗಿತ್ತೆಂದೂ ಗೊರೂರು ಸೋಮಶೇಖರ್ ತಮ್ಮ ಗೊರೂರು ನೆನಪುಗಳು ಕೃತಿಯಲ್ಲಿ ಹೇಳುತ್ತಾರೆ. ಈಗ ಅಲ್ಲೆಲ್ಲಾ ಕೋಟೆ ಇತ್ತು ಎಂದು ನಂಬಲಾಗದಷ್ಟು ಬಯಲಾಗಿದೆ. ಕೋಟೆ ಬಾಗಿಲಿನ ಸಮೀಪದಲ್ಲೇ ಆಂಜನೇಯನ ಗುಡಿ ಇದೆ. ಈ ಮಾರಮ್ಮ ಹನುಮಂತ ಗುಡಿಗೆ ಎದುರು ಬಲಿ ಕಂಬಗಳಿವೆ. ಇಲ್ಲಿ ಮಾರಿ ಜಾತ್ರೆ ಮಾಡಿ ಪ್ರಾಣಿಗಳನ್ನು ಬಲಿ ಕೊಡುತ್ತಿದ್ದರು. ಮುಂದೆ ಸ್ವಾತಂತ್ರ್ಯ ಚಳವಳಿಯ ಕಾಲಕ್ಕೆ ಈ ಪದ್ಧತಿಯನ್ನು ನಿಲ್ಲಿಸಲಾಯಿತು. ಈ ಗುಡಿಗಳ ಎದುರಿಗೆ ಸ್ವಲ್ಪ ದೂರದಲ್ಲೇ ಒಂದು ಭಾರಿ ಅರಳಿ ಮರವಿದ್ದು ಅದಕ್ಕೆ ಕಟ್ಟೆ ಕಟ್ಟಿದ್ದಾರೆ. ಇದರ ಸಮೀಪದಲ್ಲೇ ಒಂದು ದೊಡ್ಡ ಕಲ್ಯಾಣಿ ಇತ್ತಂತೆ. ಅಲ್ಲೇ ಗೊರೂರಿನ ಚರಿತ್ರೆಯ ಭಾಗವಾಗಿ ಹಳೆಯ ಕಾಲದ ಜುಮ್ಮಾ ಮಸೀದಿ ಇದೆ. ಈಗ ಇದು ಅಭಿವೃದ್ಧಿಯಾಗಿದೆ. ಇಲ್ಲೇ ಗ್ರಾಮೀಣ ಸಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಇದೆ. ಆದರೆ ಸಂತೆ ಅಲ್ಲೇ ಬಸ್ ಸ್ಟ್ಯಾಂಡ್ ಪಕ್ಕವೇ ನಡೆಯುತ್ತಿದೆ. ಅರಳಿಮರದ ಪಕ್ಕದಲ್ಲಿ ಗ್ರಾಮಠಾಣದಿಂದ ಗೋಮಾಳಕ್ಕೆ ದನಕರುಗಳು ಮೇಯಲು ಹೋಗಿ ಬರುವ ತುರುಮಂದೆ ಇತ್ತು. ಈ ಗೋಮಾಳಕ್ಕೆ ಹೋಗುವ ದಾರಿಯ ಪಕ್ಕದಲ್ಲಿ ಕೋಟೆಯ ಅವಶೇಷ ಕೋಟೆಯ ಸುತ್ತ ಕಂದಕದ ಗುರುತು ಸಹ ಕಾಣಬಹುದಿತ್ತು. ಈಗ ಏನೂ ಇಲ್ಲ. ನದಿಯ ಆಚೆ ಬದಿಯಲ್ಲಿ ಸೇತುವೆಯ ಪಕ್ಕ ಆಂಜನೇಯನ ಗುಡಿ ಇದೆ. ಇಲ್ಲಿ ವರ್ಷಕ್ಕೊಮ್ಮೆ ಕತ್ತರಿ ಘಟ್ಟ ಜಾತ್ರೆ ನಡೆಯುತ್ತದೆ. ಗೊರೂರು ಬಳಿ ೧೯೩೭ರಲ್ಲಿ ಹೇಮಾವತಿ ನದಿಗೆ ಸೇತುವೆಯಾದ ನಂತರ ಅರಕಲಗೊಡು ಹಾಸನ ರಸ್ತೆಯನ್ನು ಈ ಸೇತುವೆಯ ನೇರಕ್ಕೆ ನಿರ್ಮಿಸಲಾಯಿತು. ಈಗ ಇದರ ಪಕ್ಕ ಹೊಸ ಸೇತುವೆ ನಿರ್ಮಿಸಲಾಗಿದೆ. ಹಾಸನ ಅರಕಲಗೊಡು ಮುಖ್ಯ ರಸ್ತೆ ಗ್ರಾಮಠಾಣಕ್ಕೆ ಅರ್ಧ ಕಿ.ಮೀ. ದೂರದಲ್ಲೇ ಇತ್ತು. ಇದಕ್ಕೂ ಊರಿಗೂ ನಾಲೆಯ ಬದಿಯಲ್ಲೇ ಸಂಪರ್ಕ ರಸ್ತೆ ಇತ್ತು. ಇವುಗಳು ಕೂಡುವ ಜಾಗದಲ್ಲಿ ಸೇತುವೆ ಕಟ್ಟುವಾಗ ಪ್ರಾರಂಭವಾದ ಲೋಕೋಪಯೋಗಿ ಇಲಾಖೆ ಐ.ಬಿ.ಇತ್ತು. ಇದಕ್ಕೆ ಪಕ್ಕದಲ್ಲಿ ಮಾಧ್ಯಮಿಕ ಶಾಲೆ ಇದರ ಪಕ್ಕದಲ್ಲೇ ಆಸ್ಪತ್ರೆ ಇದೆ. ಹಳೇ ಊರ ಮುಂದೆ ಗ್ರಾಮ ಪಂಚಾಯ್ತಿ ಕಟ್ಟಡ ಇತ್ತು. ಅದೀಗ ಬಳಕೆಯಾಗದೆ ನಾಶವಾಗುತ್ತಿದೆ. ಇದರ ಪಕ್ಕ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಚಾಲ್ತಿಯಲ್ಲಿದೆ. ಈಗ ಹಾಸನ ಅರಕಲಗೊಡು ರಸ್ತೆಯಲ್ಲಿ ಹಳೇ ಊರಿನ ದಾರಿಯ ಪ್ರವೇಶದಲ್ಲಿ ಹೊಸದಾಗಿ ಗ್ರಾಮ ಪಂಚಾಯ್ತಿ ಕಟ್ಟಡ ನಿರ್ಮಿಸಲಾಗಿದೆ. ತೇರಿನ ಮನೆಗೆ ಹೊಂದಿಕೊAಡAತೆ ಇದ್ದ ಗ್ರಾಮೋದ್ಯೋಗ ಭವನ ಹೈಸ್ಕೂಲು ಆಗಿ ನಂತರ ಎ.ಎನ್.ವಿ. ಪ್ರಥಮ ದರ್ಜೆ ಸ್ಥಾಪನೆಯಾಗಿ ಈಗ ಕಾಲೇಜು ಊರಿಂದ ಮೇಲ್ಬಾಗ ಅರಳಿಕಟ್ಟೆ ಬಳಿ ಅಭಿವೃದ್ಧಿಯಾಗಿದೆ. ಈಗ ಹಳೆಯ ಕಟ್ಟಡ ಪಕ್ಕ ಮಂಜುನಾಥ ಕಲ್ಯಾಣ ಮಂಟಪವಾಗಿದೆ.
ಜಿಲ್ಲಾ ಕೇಂದ್ರ ಹಾಸನ ತಾಲ್ಲೂಕು ಕೇಂದ್ರ ಅರಕಲಗೊಡು ನಡುವೆ ಬಸ್ಸು ಸಂಚಾರ ಪ್ರಾರಂಭವಾಗಿ ಮುಂದೆ ಪ್ರಗತಿಯಾದಂತೆ ಮೈಸೂರು ಮಡಿಕೇರಿ ಮುಂತಾದ ಕಡೆಗೆ ವಿಸ್ತಾರಗೊಂಡಿತು. ಬಸ್ಸು ಐ.ಬಿ.ಬಳಿ ನಿಂತು ಪ್ರಯಾಣಿಕರನ್ನು ಇಳಿಸಿ ಏರಿಸಿಕೊಳ್ಳುತ್ತಿತ್ತು. ಕ್ರಮೇಣ ಖಾಸಗಿ ಬಸ್ಸುಗಳು ನಂಜುAಡೇಶ್ವರ, ಸ್ಟಾರ್, ಎಸ್‌ಆರ್‌ಎಂಎಸ್ ಮೊದಲಾದವು ಬಂದು ಆ ಜಾಗ ಬಸ್ ನಿಲ್ದಾಣ ಎನಿಸಿಕೊಂಡಿತು. ಬಸ್ಸಿಗೆ ಕಾಯುವವರು ಅಲ್ಲಿದ್ದ ರಸ್ತೆಯ ಬದಿಯ ಸೇತುವೆ ಕಟ್ಟಿದಾಗ ನೆಟ್ಟಿದ್ದು ಚೆನ್ನಾಗಿ ಬೆಳೆದಿದ್ದ ಮಾವು ನೇರಳೆ ಅತ್ತಿ ಮರಗಳ ನೆರಳಿನಲ್ಲಿ ಕುಳಿತು ಹರಟುತ್ತಿದ್ದರು. ಹಳೆಯ ಬಸ್‌ಸ್ಟಾö್ಯಂಡ್‌ನಲ್ಲಿದ್ದ ಹೋಟೆಲ್ ಅಂಗಡಿಗಳನ್ನು ಎಮರ್‌ಜೆನ್ಸಿ ಕಾಲದಲ್ಲಿ ಕೆಡವಲಾಯಿತು. ಈಗ ಸ್ವಲ್ಪ ಮೇಲಕ್ಕೆ ರಸ್ತೆ ಸಾರಿಗೆ ಸಂಸ್ಢೆಯ ಬಸ್ ಸ್ಟಾö್ಯಂಡ್ ಬಂದಿದೆ. ಪೊಲೀಸ್ ಸ್ಟೇಷನ್ ಅಲ್ಲಿಯೇ ಸ್ಥಾಪನೆಯಾಗಿದೆ. ಅಂಗಡಿಗಳು ರಸ್ತೆಯುದ್ದಕ್ಕೂ ಬೆಳೆದಿವೆ.
ಗೊರೂರಿನ ಪ್ರಾಥಮಿಕ ಶಾಲೆ ಮೊದಲು ಕೋಟೆಯ ಹಳೆಯ ಮನೆಯ ಕಟ್ಟಡದಲ್ಲಿದ್ದು ಮುಂದೆ ಪೇಟೆ ಮುಂದಿನ ಕಟ್ಟಡಕ್ಕೆ ಬದಲಾಯಿತು. ಅದು ಈಗ ನಾಶವಾಗಿದೆ. ಆಗ ಶನಿವಾರ ದಿನ ಸಂತೆ. ಸುತ್ತಲಿನ ಹಳ್ಳಿಯವರೂ ಸೇರಿದಂತೆ ಜನರಿಗೆ ಅಂದು ಸಂತೆ ರಜಾ. ಸಂತೆ ಮೊದಲು ತುರುಮಂದೆಯ ಪಕ್ಕದಲ್ಲಿ ನಡೆಯುತ್ತಿತ್ತು. ಮುಂದೆ ಮಾಧ್ಯಮಿಕ ಶಾಲೆ ಮೈದಾನದ ಮೇಲ್ಬಾಗಕ್ಕೆ ಸ್ಥಳಾಂತರವಾಯಿತು. ಹೇಮಾವತಿ ಪ್ರಾಜೆಕ್ಟ್ ಪ್ರಾರಂಭಗೊAಡು ಭಾನುವಾರದ ಸಂತೆ ಆಯಿತು. ಇಂದು ಭಾನುವಾರ ಸಂತೆ ರಥಸಪ್ತಮಿ ತೇರು ಒಟ್ಟಿಗೆ ಬಂದಿದೆ.

ಗೊರೂರಿನ ಮಾಧ್ಯಮಿಕ ಶಾಲೆಗೆ ಸುತ್ತಮುತ್ತಲಿನ ಗ್ರಾಮಗಳಲ್ಲದೆ ಅರಕಲಗೊಡು ಆಲೂರು ತಾಲ್ಲೂಕಿನವರು ನದಿ ದಾಟಿ ಬರುತ್ತಿದ್ದರು. ಮಳೆಗಾಲದಲ್ಲಿ ಹರಿಗೋಲಿಯಲ್ಲಿ ಬರುತ್ತಿದ್ದರು. ಮಳೆಗಾಲದಲ್ಲಿ ಪರ‍್ಯಾಯ ದ್ವೀಪಗಳಾಗುತ್ತಿದ್ದ ಪೊನ್ನಾಥಪುರ, ಹೇಮಾವತಿ ನದಿಯ ದಕ್ಷಿಣಕ್ಕಿದ್ದ ಹೆಬ್ಬಾಲೆ ಗ್ರಾಮದಿಂದ ಈ ಶಾಲೆಗೆ ಓದಲು ಬರುತ್ತಿದ್ದರು. ಸುಂದರ ಕಟ್ಟಡ ಇದ್ದು ಮರಗಿಡಗಳ ಮೆರಗಿನೊಂದಿಗೆ ಶಾಲೆ ಆಕರ್ಷಿಸುತ್ತಿತ್ತು. ಇದೇ ಕಾಲಕ್ಕೆ ಗೊರೂರು ಮಾದರಿ ಗ್ರಾಮ ಎಂದು ಕರೆಸಿಕೊಂಡಿತು. ಸ್ವಾತಂತ್ರ್ಯ ಚಳವಳಿ ಪ್ರೇರಿತರಾಗಿ ಗ್ರಾಮೋದ್ಯೋಗ ಭವನ ಕಟ್ಟಿಕೊಂಡು ಸಣ್ಣ ಪುಟ್ಟ ಕೆಲಸಗಳನ್ನು ಮಾಡಲು ಊರವರು ಉಪಕ್ರಮಿಸಿದರು. ಸ್ವತಂತ್ರ ಬಂದ ಸನಿಹದಲ್ಲೇ ಗೊರೂರಿಗೆ ಕರ್ನಾಟಕದಲ್ಲೇ ಪ್ರಪ್ರಥಮ ಜಿಲ್ಲಾ ಬೋರ್ಡ್ ಹೈಸ್ಕೂಲ್ ಪ್ರಾರಂಭವಾಯಿತು. ಸರ್ಕಾರಿ ಕಟ್ಟಡವಿಲ್ಲದ ಹಳ್ಳಿಯೊಂದರಲ್ಲಿ ಪ್ರೌಢಶಾಲೆ ಪ್ರಾರಂಭವಾಗಲು ಸಾಧ್ಯವಾದುದು ಹೇಗೆಂದರೆ ಸ್ವಾತಂತ್ರ್ಯ ಪೂರ್ವ ದಿನಗಳಲ್ಲಿ ಗ್ರಾಮೋದ್ಯೋಗ ಭವನ ಚೆನ್ನಾಗಿ ನಡೆದು ನಿಂತುಹೋಗಿತ್ತು. ಇದರ ಖಾಲಿ ಕಟ್ಟಡ ಸಾಹುಕಾರ್ ಶೆಲ್ವ ಪಿಳ್ಳಯ್ಯಂಗಾರ್‌ರ ಉಸ್ತುವಾರಿಯಲ್ಲಿ ಇತ್ತು. ಇಲ್ಲೇ ಶಾಲೆ ಪ್ರಾರಂಭವಾಯಿತು. ಊರಿನ ಮುಖಂಡರು ಊರೂರು ಸುತ್ತಿ ಹಣ ಸಂಗ್ರಹಿಸಿ ಜಿಲ್ಲಾ ಬೋರ್ಡಿಗೆ ಕಟ್ಟಿದರು. ಸಾಹುಕಾರ್ ಕುಟುಂಬ ಶ್ರೀನಿವಾಸಮೂರ್ತಿ ಹೆಸರಿನಲ್ಲಿ ಸರ್ಕಾರಿ ದನಗಳ ಆಸ್ಪತ್ರೆಗೆ ಕಟ್ಟಡವನ್ನು ಕಟ್ಟಿಸಿಕೊಟ್ಟರು. ಈಗ ಇದು ಬಳಕೆಯಾಗದೆ ಇದರ ಪಕ್ಕದಲ್ಲಿ ಹೊಸದಾಗಿ ಪಶು ಚಿಕಿತ್ಸಾಲಯ ನಿರ್ಮಿಸಲಾಗಿದೆ.

ಊರಿನ ಗ್ರಾಮೋದ್ಯೋಗ ಕಟ್ಟಡದ ಪಕ್ಕದಲ್ಲೇ ಸರ್ಕಾರದ ಗ್ರಾಮ ಕೈಗಾರಿಕೆ ಯೋಜನೆಯಡಿ ಸೋಪಿನ ಕಾರ್ಖನೆ ಪ್ರಾರಂಭವಾಗಿ ಸ್ವಲ್ಪ ದಿನ ನಡೆದು ನಂತರ ಮುಚ್ಚಿಹೋಯಿತು. ನಾನು ಮೂರನೇ ತರಗತಿಯವರೆಗೆ ಯಾವ ಶಾಲೆಯಲ್ಲಿ ಓದಿದ್ದು ನೆನಪಿಲ್ಲ. ೪ನೇ ತರಗತಿ ಓದಿದ್ದು ತೇರು ಮನೆಯ ಪಕ್ಕದ ಶಾಲೆಯಲ್ಲಿ. ೫ ರಿಂದ ೭ ಊರಿನ ಮಾದರಿ ಮಾಧ್ಯಮಿಕ ಶಾಲೆಯಲ್ಲಿ ಮತ್ತು ಪ್ರೌಢಶಾಲೆ ಈಗಿನ ಸರ್ಕಾರಿ ಶಾಲೆಯಲ್ಲಿ. ತೇರು ನೋಡಲು ಮತ್ತೇ ಊರಿಗೆ ಹೋಗಿ ಊರಿನ ದೋಸ್ತಾ ಯಾಕೂಬ್ ಸಿಕ್ಕಿ ಹೀಗೆ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಮತ್ತೇ ಬಸ್ಸು ಹತ್ತಿ ಹಾಸನಕ್ಕೆ ವಾಪಸ್ಸಾದೆ.

ಗೊರೂರು ಅನಂತರಾಜು, ಹಾಸನ.
ಮೊ:೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

LEAVE A REPLY

Please enter your comment!
Please enter your name here

Latest News

ಕವನ : ಸಮಾನತೆಯ ಬೆಳದಿಂಗಳ ಪಲ್ಲವಿ

ಸಮಾನತೆಯ ಬೆಳದಿಂಗಳ ಪಲ್ಲವಿಭಾರತಾಂಬೆಗೆ ಹೊನ್ನ ಕಿರೀಟವಿದು ಸರಳ ಸಂವಿಧಾನ ನಮ್ಮ ಸಂವಿಧಾನಪೀಠಿಕೆಯ ಪರಿಧಿಯಲಿ ಜಾತ್ಯತೀತ,ಬ್ರಾತೃತ್ವ, ಸಮಾಜವಾದಿ ಸಾರ್ವಭೌಮತೆ,ಗಣತಂತ್ರ ನ್ಯಾಯ, ಸಮಾನತೆ ಸ್ವಾತಂತ್ರ್ಯದ ದುಂದುಭಿ ಜೀವದಾಯಿನಿ ಇದು ಭಾರತದ ಪಾಲಿಗೆ ಮುಕ್ತಿದಾಯಿನಿ ಇದು ದಾಸ್ಯದ ಸಂಕೋಲೆಗೆ ನಮ್ಮ ಸಂವಿಧಾನ ನಮಗೆ ಸುವಿಧಾನಲಿಖಿತವೂ ಧೀರ್ಘವೂ ಭಾರತಕ್ಕಿದು ಮಾರ್ಗವು ಅಸಮಾನತೆಯ...

More Articles Like This

error: Content is protected !!
Join WhatsApp Group