ಮಹಿಳೆಯರ ಅಬಲೆಯರ ಅನಾಥರ ಆಶಾಕಿರಣ ಎಸ್. ಜಿ. ಸುಶೀಲಮ್ಮ

Must Read

ವರ್ಗ ವರ್ಣ ಲಿಂಗ ಭೇದ ಆಶ್ರಮ ರಹಿತ ಸಾಂಸ್ಥಿಕರಣವಲ್ಲದ ಸಮಸಮಾಜವನ್ನು ಕಟ್ಟ ಬಯಸಿದ ಅಣ್ಣ ಬಸವಣ್ಣನವರ ಆದರ್ಶ ವ್ಯಕ್ತಿತ್ವಗಳಿಗೆ ಮಾರು ಹೋಗಿ ತಮ್ಮ ಬದುಕಿನ ಆರು ದಶಕದ ಜೀವನವನ್ನು ಸಮಾಜಕ್ಕಾಗಿ ಮಹಿಳೆಯರ ಅಬಲೆಯರ ಅನಾಥರ ಆಶಾಕಿರಣವಾಗಿ ಬದುಕಿದ ತ್ಯಾಗಮಯಿ ಶರಣೆ ಎಸ್ ಜಿ ಸುಶೀಲಮ್ಮ. ಸುಮಂಗಲಿ ಸೇವಾಶ್ರಮವನ್ನು ಹುಟ್ಟು ಹಾಕಿ ತನ್ಮೂಲಕ ಅಬಲೆಯರನ್ನು ಅನಾಥರನ್ನು ಸಂಘಟಿಸಿ ಅವರಲ್ಲಿ ಆತ್ಮ ವಿಶ್ವಾಸ ನೀಡಿ ಸ್ವಾವಲಂಬನೆಯ ಬದುಕನ್ನು ಕಲ್ಪಿಸಿ ಕೊಟ್ಟ ಮಹಾ ಚೇತನ.

ಎಸ್. ಜಿ. ಸುಶೀಲಮ್ಮ ಬೆಂಗಳೂರಿನ ಸುಮಂಗಲಿ ಸೇವಾಶ್ರಮದ ಮೂಲಕ ಅಪಾರ ಸಮಾಜಸೇವೆಗೆ ಹೆಸರಾದವರು. ಎಸ್.ಜಿ. ಸುಶೀಲಮ್ಮ ಅವರು 1939ರ ಮೇ 24ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಎಸ್.ಗಣೇಶಪ್ಪ. ತಾಯಿ ಚೆನ್ನಮ್ಮ.

ಪದವಿಪೂರ್ವ ಶಿಕ್ಷಣವನ್ನು ಪಡೆದ ಎಸ್.ಜಿ. ಸುಶೀಲಮ್ಮನವರು ಬಾಲ್ಯದಿಂದಲೂ ಸಮಾಜ ಸೇವೆಗೆ ತಮ್ಮನ್ನು ತೊಡಗಿಸಿಕೊಳ್ಳಬೇಕೆಂಬ ಹಂಬಲವನ್ನು ಹೊಂದಿದ್ದರು. ತಮ್ಮ ಪಿಯುಸಿ ಪರೀಕ್ಷೆ ಪಾಸಾದ ಮೇಲೆ ಮನೆಯಲ್ಲಿ ಕುಳಿತು ಕೊಳ್ಳದೆ 1959ರಿಂದ 1967ರ ವರೆಗೆ ರೆಂಕೋ ಕಾರ್ಖಾನೆಯಲ್ಲಿ (ಬಿಎಚ್.ಇ.ಎಲ್) 15 ವರ್ಷ ಸೇವೆ ಸಲ್ಲಿಸಿ, 1967ರಲ್ಲಿ ವೃತ್ತಿ ಜೀವನಕ್ಕೆ ರಾಜೀನಾಮೆ ನೀಡಿ ಸಂಪೂರ್ಣವಾಗಿ ಅವರು ಸಮಾಜಸೇವೆಯಲ್ಲಿ ತೊಡಗಿದರು.

ಮಹಿಳೆಯರ ಅಬಲೆಯರ ಅನಾಥರ ಆಶಾಕಿರಣ

ಎಸ್ ಜಿ ಸುಶೀಲಮ್ಮ ಅವರು 1974ರಿಂದ 1978ರ ವರೆಗೆ ಭುವನೇಶ್ವರಿ ಮಹಿಳಾ ಮಂಡಳಿಯಲ್ಲಿ ವಾರ್ಡನ್ ಆಗಿ ಕಾರ್ಯನಿರ್ವಹಿಸಿದರು. 1975ರಲ್ಲಿ ಬೆಂಗಳೂರಿನ ಹೆಬ್ಬಾಳದ ನೆರೆಯಲ್ಲಿರುವ ಚೋಳನಾಯಕನಹಳ್ಳಿಯಲ್ಲಿ ಸುಮಂಗಲಿ ಸೇವಾಶ್ರಮ ಎಂಬ ಸಂಸ್ಥೆಯನ್ನು ಬಡವರು, ಅನಾಥರು, ನಿರಾಶ್ರಿತ ಮಕ್ಕಳು ಮತ್ತು ಮಹಿಳೆಯರ ಸೇವೆಗಾಗಿ ಈ ಸಂಸ್ಥೆ ಪ್ರಾರಂಭಿಸಿದರು. 1976ರಲ್ಲಿ ಬಸವಾನಂದ ನರ್ಸರಿ, 1979ರಲ್ಲಿ ಸುಮಂಗಲಿ ಯುವತಿ ಮಂಡಳಿಯನ್ನು ಸ್ಥಾಪಿಸಿದರು. 1985ರಲ್ಲಿ ಚೋಳನಾಯಕನಹಳ್ಳಿಯಲ್ಲಿ ಬಸವಾನಂದ ಹಿರಿಯ ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸಿದರು. ಇದಲ್ಲದೆ ಮಹಿಳೆಯರಿಗೆ ಸ್ವಯಂ ಉದ್ಯೋಗ ವ್ಯವಸ್ಥೆ ಹಾಗೂ ಮಹಿಳಾ ಒಕ್ಕೂಟಗಳ ರಚನೆ ಮಾಡಿದರು. ಶಿಶು ಸಂರಕ್ಷಣಾ ಕೇಂದ್ರವನ್ನು ಸ್ಥಾಪನೆ ಮಾಡುವವರಿಗೆ ತರಬೇತಿ ನೀಡುವ ವ್ಯವಸ್ಥೆಯನ್ನೂ ಮಾಡಿದರು.

ಸಾಮಾಜಿಕ ಸೇವೆ
ಪ್ರಾರಂಭದಿಂದ ಸುಮಂಗಲಿ ಸೇವಾಶ್ರಮದ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿರುವ ಎಸ್.ಜಿ.ಸುಶೀಲಮ್ಮನವರು 1987ರಲ್ಲಿ ಬೆಂಗಳೂರು ಉತ್ತರ ತಾಲ್ಲೂಕಿನ ಮಹಿಳಾ ಮಂಡಲದ ಒಕ್ಕೂಟದ ಅಧ್ಯಕ್ಷರಾಗಿ ಮತ್ತು ಜಾಲಹಳ್ಳಿಯ ಸಮೂಹ ಸಾಮಾಜಿಕ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ, 1989ರಲ್ಲಿ ಬೆಂಗಳೂರು ನಗರ ಜಿಲ್ಲಾ ಮಹಿಳಾ ಮಹಾಮಂಡಲದ ಸಂಸ್ಥಾಪಕ ಅಧ್ಯಕ್ಷರಾಗಿ, 1990ರಲ್ಲಿ ದೊಡ್ಡಬಳ್ಳಾಪುರದ ಸದ್ಗುರು ಅಮರಜ್ಯೋತಿ ವಿಶ್ವಕುಂಡಲ ಯೋಗ ಆಶ್ರಮದ ಅಧ್ಯಕ್ಷರಾಗಿ ಮತ್ತು ಬೆಂಗಳೂರು ನಗರ ಜಿಲ್ಲೆಯ ಬಹೋಪಯೋಗಿ ಸಹಕಾರ ಸಂಘದ ಅಧ್ಯಕ್ಷರಾಗಿ ಹಾಗೂ ಅನೇಕ ಸಂಘ-ಸಂಸ್ಥೆಗಳಿಗೆ ಪದಾಧಿಕಾರಿಗಳಾಗಿ, ಸಲಹೆಗಾರರಾಗಿ ಸೇವೆ ಸಲ್ಲಿಸುತ್ತ ಬಂದಿದ್ದಾರೆ.

ಮಾತೆ ಸುಶೀಲಮ್ಮ ಇವರಿಗೆ ಸಂದ ಗೌರವಗಳು

ಸುಶೀಲಮ್ಮ ಅವರಿಗೆ 1985ರಲ್ಲಿ ಕರ್ನಾಟಕ ರಾಜ್ಯದ ಮಕ್ಕಳ ಕಲ್ಯಾಣಕ್ಕಾಗಿ ರಾಜ್ಯ ಪ್ರಶಸ್ತಿ ಮತ್ತು ರಾಷ್ಟ್ರೀಯ ಮಕ್ಕಳ ಕಲ್ಯಾಣ ಪ್ರಶಸ್ತಿ,
1991ರಲ್ಲಿ ಕೌಟುಂಬಿಕ ಘಟಕದ ಉತ್ತಮ ಸೇವೆಗಾಗಿ ರಾಷ್ಟ್ರೀಯ ಪ್ರಶಸ್ತಿ,
1992ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯಿಂದ ಅತ್ಯುತ್ತಮ ಸಾಮಾಜಿಕ ಸೇವಾ ಪ್ರಶಸ್ತಿ ಮತ್ತು ಉತ್ತಮ ನಾಗರಿಕ ಪ್ರಶಸ್ತಿ,
1994ರಲ್ಲಿ ಅತ್ಯುತ್ತಮ ಗ್ರಾಮೀಣ ಸೇವೆ ಸಲ್ಲಿಸಿದ್ದಕ್ಕಾಗಿ ಜಾನಕಿದೇವಿ ಬಜಾಜ್ ಪುರಸ್ಕಾರ,
1995ರಲ್ಲಿ ಮೈಸೂರು
ದಸರಾ ಪ್ರಶಸ್ತಿ,
1998ರಲ್ಲಿ ರಾಜ್ಯ ಸರ್ಕಾರದ ರಾಣಿ ಕಿತ್ತೂರು ಚೆನ್ನಮ್ಮ ಪ್ರಶಸ್ತಿ, 2000ದಲ್ಲಿ ಸಮಾಜ ಸೇವೆಗಾಗಿ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, 2001ರಲ್ಲಿ ಮಾನವ ಹಕ್ಕುಗಳ ಪ್ರಶಸ್ತಿ ಹಾಗೂ ರಾಜೀವಗಾಂಧಿ ಶಿರೋಮಣಿ ಪ್ರಶಸ್ತಿ, ಭೀಮಕ್ಕ ಪ್ತಶಸ್ತಿ, ಬಸವಾತ್ಮಜೆ ಪ್ರಶಸ್ತಿ, ದೇವರಾಜ ಅರಸು ಪ್ರಶಸ್ತಿ, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಡಾಕ್ಟರೇಟ್, ಕರ್ನಾಟಕ ರಾಜ್ಯದ ರಾಷ್ಟ್ರೀಯ ಬಸವ ಪುರಸ್ಕಾರ, ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪ್ರದಾನ ಮಾಡಿದ ಡಾ. ದುರ್ಗಾಬಾಯಿ ದೇಶಮುಖ್ ರಾಷ್ಟ್ರೀಯ ಪ್ರಶಸ್ತಿ, ಪ್ರೈಡ್ ಆಫ್ ಇಂಡಿಯಾ ಪ್ರಶಸ್ತಿ
ಅಕ್ಕಂಶಣೆಯ ಅಲ್ಲಮ ಶೂನ್ಯ ಸಿರಿ ಪ್ರಶಸ್ತಿ ಹೀಗೆ
ಅನೇಕ ಗೌರವಗಳು ಸಂದಿವೆ.
ಈಗ 2026 ನೆಯ ಸಾಲಿನ ಪದ್ಮಶ್ರೀ ಪ್ರಶಸ್ತಿ ಇವರಿಗೆ ದೊರಕಿದ್ದು ಪ್ರಶಸ್ತಿ ಮೌಲ್ಯ ಹೆಚ್ಚಿದಂತಾಗಿದೆ.

ಕನ್ನಡ ನೆಲವು ಕಂಡ ಅಕ್ಕ ಮಹಾದೇವಿ ಜೀವನವನ್ನು ಪ್ರೇರಣೆ ಮಾಡಿಕೊಂಡು ಬದುಕಿನುದ್ದಕ್ಕೂ ಶ್ರೀಗಂಧದ ಕೊರಡಿನಂತೆ ತೇಯ್ದು ಬಡವರ ದಮನಿತರ ಶೋಷಿತರ ಅನಾಥರ ಬಾಳಿಗೆ ಆಶಾದೀಪವಾದ ಈ ಮಹಾ ಮಾತೆಗೆ ಕೇಂದ್ರ ಸರಕಾರವು ಇವರಿಗೆ 2026 ರಾ ಸಾಲಿನ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

87 ವರ್ಷಕ್ಕೆ ಕಾಲಿಟ್ಟ ಎಸ್ ಜಿ ಸುಶೀಲಮ್ಮ ಅವರನ್ನು ನಾನು 2023 ರಲ್ಲಿ ಅಕ್ಕನ ಮನೆ ಸಂಸ್ಥಾಪಕಿ ಹೇಮಲತಾ ಅವರ ಅಲ್ಲಮ ಸಿರಿ ಪ್ರಶಸ್ತಿ ಪ್ರದಾನ ಮಾಡುವ ಸಂದರ್ಭದಲ್ಲಿ ಬೆಂಗಳೂರಿನ ಕಲಾಗ್ರಾಮದಲ್ಲಿ ನಾನು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದು ನನ್ನ ಪುಣ್ಯ. ಎಸ್ ಜಿ ಸುಶೀಲಮ್ಮ ಅವರು ನೂರಾರು ವರ್ಷ ಬದುಕಿ ಬಾಳಿ ಬಸವಣ್ಣನವರ ಕಲ್ಯಾಣ ರಾಜ್ಯವನ್ನು ಮತ್ತೆ ಸ್ಥಾಪಿಸಲಿ.
ಇವರಿಗೆ ಶತಕೋಟಿ ನಮನಗಳು.
_________________________
ಡಾ. ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

LEAVE A REPLY

Please enter your comment!
Please enter your name here

Latest News

ಮುಗಳಖೋಡದಲ್ಲಿ ಗ್ರಾಮದೇವತಾ ಆರಾಧನೆ-ಜನಪದ ಸಂಸ್ಕೃತಿ ಸಂಭ್ರಮ

ಮುಧೋಳ - ತಾಲೂಕಿನ ಸುಕ್ಷೇತ್ರ ಮುಗಳಖೋಡದಲ್ಲಿ ಶ್ರೀ ಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ವಾರಾಚರಣೆ ನಿಮಿತ್ತ ಗ್ರಾಮದೇವತಾ...

More Articles Like This

error: Content is protected !!
Join WhatsApp Group