spot_img
spot_img

ಕಯ್ಯಾರ ಕಿಞ್ಞಣ್ಣ ರೈ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು

Must Read

spot_img
- Advertisement -

*ಕಯ್ಯಾರ ಕಿಞ್ಞಣ್ಣ ರೈ,ಕನ್ನಡ ಹೋರಾಟಗಾರರು ಮತ್ತು ಹಿರಿಯ ಸಾಹಿತಿಗಳು ಇವರಿಗೆ ಹುಟ್ಟು ಹಬ್ಬದ ಶುಭಾಶಯಗಳು.*

ಗಡಿನಾಡಿನ ಕವಿ ಕಯ್ಯಾರ ಕಿಞ್ಞಣ್ಣ ರೈ 

(ಜೂನ್ ೮, ೧೯೧೫ – ಆಗಸ್ಟ್ ೯, ೨೦೧೫)

ಅಖಿಲ ಕರ್ನಾಟಕದ ಮಹಾಕವಿಯಾಗಿ, ಹಿರಿಯ ಸಾಹಿತಿಯಾಗಿ, ಬಹುಭಾಷಾ ವಿದ್ವಾಂಸರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಮುಂಚೂಣಿಯ ನಾಯಕರಾಗಿ, ಕಾಸರಗೋಡು ವಿಲೀನೀಕರಣದ ರೂವಾರಿಯಾಗಿದ್ದ ಕಯ್ಯಾರ ಕಿಞ್ಞಣ್ಣ ರೈ ಯವರ ಜನ್ಮದಿನವಿಂದು.

- Advertisement -

ಕಯ್ಯಾರ ಕಿಞ್ಞಣ್ಣ ರೈ ಕೇರಳ ರಾಜ್ಯದಲ್ಲಿರುವ ಕಾಸರಗೋಡು ತಾಲೂಕಿನ ಪೆರಡಾಲ ಗ್ರಾಮದಲ್ಲಿ ೧೯೧೫ ಜೂನ ೮ ರಂದು ಜನಿಸಿದರು. ತಂದೆ ದುಗ್ಗಪ್ಪ ರೈ, ತಾಯಿ ದೈಯಕ್ಕೆ. ಕಯ್ಯಾರರು ಉಞ್ಞಕ್ಕ ಅವರನ್ನು ಬಾಳಸಂಗಾತಿಯಾಗಿ ಪಡೆದರು. ರೈಗಳ ಮನೆಮಾತು ತುಳು. ರೈಗಳು ಹಲವು ತುಳು ಕವನಗಳನ್ನು, ಲೇಖನಗಳನ್ನು ಬರೆದಿದ್ದಾರೆ. ‘ಪರಿವು ಕಟ್ಟುಜಿ, ರಡ್ಡ್ ಕಣ್ಣ್‌ಡ್’ ‘ಸಾರೊ ಎಸಳ್ದ ತಾಮರೆ’ ‘ಲೆಪ್ಪುನ್ಯೇರ್?’ ‘ಬತ್ತನೊ ಈ ಬರ್ಪನೊ’ – ರೈಗಳ ಕೆಲವು ತುಳು ಕವನಗಳು. ರೈಗಳ ಕನ್ನಡ ಕವಿತೆಗಳಲ್ಲಿ ಹೆಚ್ಚಾಗಿ ಕಾಣಸಿಗದ ಪ್ರಾದೇಶಿಕ ರಂಗು, ಜಾನಪದ ಲೋಕ ಅವರ ತುಳು ಕವಿತೆಗಳಲ್ಲಿ ಅರಳಿಕೊಳ್ಳುತ್ತದೆ.‌‌ ‘ಕನ್ನಡಾಂತರ್ಗತವಾದ ತುಳು ಬದುಕ’ನ್ನು ಒಪ್ಪಿದ ಕವಿ ತುಳು ಭಾಷೆಯ ಸ್ಥಿತಿಗತಿಯ ಬಗ್ಗೆ ವ್ಯಥೆಪಡುತ್ತಾರೆ.

ರೈಯವರು ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ವಿದ್ವಾನ್ ಪದವಿ ಪಡೆದ ಬಳಿಕ ಬಿ.ಎ.ಪದವಿಯನ್ನು ಪಡೆದು ಅಧ್ಯಾಪಕ ತರಬೇತಿಯನ್ನು ಪೂರೈಸಿದರು.ಆನಂತರ ಎಂ.ಎ. ಸ್ನಾತಕೋತ್ತರ ಪದವೀಧರರೂ ಆದರು.ಕಾಸರಗೋಡಿನ ಬಳಿಯ ಪೆರಡಾಲ ಗ್ರಾಮದ ನವಜೀವನ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.

ಕಯ್ಯಾರ ಕಿಞ್ಞಣ್ಣ ರೈಯವರು ಸ್ವಾತಂತ್ರ್ಯಸಂಗ್ರಾಮದಲ್ಲಿ ಹೋರಾಡಿದ್ದಾರೆ. ಹರಿಜನ ಸೇವಕ ಸಂಘಟನೆಯಲ್ಲಿ ದುಡಿದಿದ್ದಾರೆ. ಸ್ಥಳೀಯ ಪಂಚಾಯತಿಯ ಅಧ್ಯಕ್ಷ ಪದವಿಯನ್ನೂ ಅಲಂಕರಿಸಿದ್ದರು. ಕೇರಳ ಸಂಗೀತ ನಾಟಕ ಆಕಾಡೆಮಿಯ ಸದಸ್ಯರೂ ಆಗಿದ್ದರು. ಅಲ್ಲದೆ ಕಾಸರಗೋಡು ತಾಲೂಕನ್ನು ಕರ್ನಾಟಕ ರಾಜ್ಯಕ್ಕೆ ಸೇರಿಸಲು ಸಹ ಹೋರಾಟ ಮಾಡಿದವರು.

- Advertisement -

ಕಯ್ಯಾರ ಕಿಞ್ಞಣ್ಣ ರೈ’ಯವರು ಶ್ರೀಮುಖ, ಐಕ್ಯಗಾನ, ಪುನರ್ನವ, ಚೇತನ, ಕೊರಗ, ಶತಮಾನದ ಗಾನ, ಗಂಧವತಿ, ಪ್ರತಿಭಾ ಪಯಸ್ವಿನಿ, ಮೊದಲಾದ ಕನ್ನಡ ಕವನ ಸಂಕಲನಗಳನ್ನಲ್ಲದೆ ಒಂದು ತುಳು ಕವನ ಸಂಕಲನವನ್ನೂ ಹೊರ ತಂದಿದ್ದಾರೆ.ಕಾರ್ನಾಡ ಸದಾಶಿವರಾವ, ರತ್ನರಾಜಿ, ಏ.ಬಿ.ಶೆಟ್ಟಿ ಮೊದಲಾದವರ ಜೀವನಚರಿತ್ರೆಗಳನ್ನು ಹಾಗು ಕಥಾಸಂಗ್ರಹಗಳನ್ನು ಬರೆದು ಪ್ರಕಟಿಸಿದ್ದಾರೆ. ರಾಷ್ಟ್ರಕವಿ ಗೋವಿಂದ ಪೈಯವರ ಬಗೆಗೆ ಮೂರು ಗ್ರಂಥಗಳನ್ನು ಬರೆದಿದ್ದಾರೆ.ಪಂಚಮಿ ಮತ್ತು ಆಶಾನ್‍ರ ಖಂಡಕಾವ್ಯಗಳು ಎನ್ನುವ ಎರಡು ಅನುವಾದ ಕೃತಿಗಳನ್ನು ರಚಿಸಿದ್ದಾರೆ.

ಸಾಹಿತ್ಯದೃಷ್ಟಿ ಎನ್ನುವ ಲೇಖನಸಂಕಲನ ಪ್ರಕಟಿಸಿದ್ದಾರೆ.ಮಕ್ಕಳ ಪದ್ಯಮಂಜರಿ ಎನ್ನುವ ಮಕ್ಕಳ ಕವನ ಸಂಕಲನ ರಚಿಸಿದ್ದಾರೆ. ಭಾರತ ಭಾರತಿ ಪುಸ್ತಕ ಸಂಪದಮಾಲೆಯಲ್ಲಿ ಮಕ್ಕಳಿಗಾಗಿ ‘ಪರಶುರಾಮ’ ಬರೆದುಕೊಟ್ಟಿದ್ದಾರೆ.ನವೋದಯ ವಾಚನ ಮಾಲೆ ಎನ್ನುವ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಎಂಟು ಪಠ್ಯಪುಸ್ತಕಗಳನ್ನು, ವ್ಯಾಕರಣ ಮತ್ತು ಪ್ರಬಂಧ ಎನ್ನುವ ನಾಲ್ಕು ಕೃತಿಗಳನ್ನು ಹೊರತಂದಿದ್ದಾರೆ.’ವಿರಾಗಿಣಿ’ ಎನ್ನುವುದು ಇವರು ಬರೆದ ನಾಟಕ. ದುಡಿತವೆ ನನ್ನ ದೇವರು’ ಎನ್ನುವದು ರೈಯವರ ಆತ್ಮಕಥನ.ಇದಲ್ಲದೆ ವಿವಿಧ ಪತ್ರಿಕೆಗಳಿಗೆ ಇವರು ಬರೆದ ಲೇಖನಗಳ ಸಂಖ್ಯೆಯೇ ಐದು ಸಾವಿರದಷ್ಟಾಗುತ್ತದೆ.

ಪ್ರಭಾತ, ರಾಷ್ಟ್ರಬಂಧು, ಸ್ವದೇಶಾಭಿಮಾನಿ ಎನ್ನುವ ಕನ್ನಡ ಪತ್ರಿಕೆಗಳಲ್ಲಿ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

೨೦೧೪ ರ, ಜೂನ್ ತಿಂಗಳ ೮ ನೇ ತಾರೀಖಿನ ಭಾನುವಾರ, ಜನ್ಮ ಶತಮಾನೋತ್ಸವ ಹಾಗೂ ೨೦೧೩ ನೆ ಸಾಲಿನ “ಪಂಪ ಪ್ರಶಸ್ತಿ” ಪ್ರದಾನ ಕವಿ ಮನೆ ಇರುವ “ಕವಿತಾ ಕುಟೀರ” , ಬದಿಯಡ್ಕದಲ್ಲಿ ನಡೆಯಿತು.

ಡಾ. ರೈ ಯವರಿಗೆ ದೊರೆತ ಪ್ರಶಸ್ತಿ/ಪುರಸ್ಕಾರಗಳು

  • ೧೯೬೯ ರಲ್ಲಿ ‘ಶ್ರೇಷ್ಠ ಅಧ್ಯಾಪಕ ರಾಷ್ಟ್ರಪ್ರಶಸ್ತಿ’
  • ೧೯೬೯ ರಲ್ಲಿ ‘ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ’
  • ೧೯೮೫ ರಲ್ಲಿ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’
  • ೧೯೯೭ರಲ್ಲಿ ಮಂಗಳೂರಿನಲ್ಲಿ ಜರುಗಿದ’ ೬೬ ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು’
  • ೨೦೦೫ ರಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ
  • ೨೦೦೬ ರಲ್ಲಿ ಹಂಪಿ ವಿಶ್ವವಿದ್ಯಾಲಯದ, ನಾಡೋಜ ಪ್ರಶಸ್ತಿ
  • ಕರ್ನಾಟಕ ಸರಕಾರದ ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ ಹಾಗೂ ಪಂಪ ಪ್ರಶಸ್ತಿ
  • ಅಖಂಡ ನೂರು ವರ್ಷಗಳ ಕಾಲ ಬದುಕಿದ್ದ ಗಡಿನಾಡಿನ ಕವಿ ತಮ್ಮ ನೂರನೇ ವಯಸಿನಲ್ಲಿ ತೀರಿಕೊಂಡರು.
- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group