spot_img
spot_img

ಕುಡಿಯೂದ ಬಿಡಬೇಕು, ಆದ್ರೆ ಆಗ್ತಾ ಇಲ್ಲ…

Must Read

spot_img
- Advertisement -

ಹೀಗೆಂದು ಎಷ್ಟು ಸಲ ಅಂದುಕೊಂಡಿರುತ್ತಾರೆ ಕುಡಿಯುವವರು. ಎಷ್ಟು ಸಲ ಏನು ಪ್ರತಿ ದಿನವೂ ಅಂದುಕೊಂಡೇ ಇರುತ್ತಾರೆ. ಬೆಳಗಿನಿಂದ ಸಂಜೆಯವರೆಗೂ ಅವರ ತಲೆಯಲ್ಲಿ ಇವತ್ತಿನಿಂದ ಕುಡಿಯಬಾರದು ಎಂಬ ಯೋಚನೆಯೇ ಇರುತ್ತದೆ. ಸಂಜೆಯ ಹೊತ್ತಿಗೆ ಸ್ವಲ್ಪ ಎಡ ಮಿದುಳು ಒಂದು ಕ್ಷಣ ಕೆಲಸ ನಿಲ್ಲಿಸಿ ಮತ್ತೆ ಮುಂದುವರೆಸುತ್ತದೆ. ಮತ್ತದೇ ಲೋಕ ; ಬಾಟ್ಲು, ಗ್ಲಾಸು, ಸಾರಾಯಿ ಘಾಟು…..

ಇದು ಸೆರೆ ಕುಡಿಯುವವರ ಬಹುದೊಡ್ಡ ಸಮಸ್ಯೆ. ತಾವು ಸೆರೆ ಕುಡಿಯವವುದರಿಂದ ಕುಟುಂಬಕ್ಕೂ ಸಮಾಜಕ್ಕೂ ಕಂಟಕಪ್ರಾಯವಾಗಿರುವುದೇನೋ ಕಟು ಸತ್ಯ. ತಾವು ಕಾಲಿಟ್ಟಲ್ಲಿ ಸಾಮಾಜಿಕ ಅನಾರೋಗ್ಯ,ಅಶಾಂತಿಗಳೇ ತುಂಬಿಕೊಂಡು ಎಲ್ಲರ ತಿರಸ್ಕಾರಕ್ಕೆ ತಾವು ಒಳಗಾಗಿರುವುದು ಮನಸನ್ನು ಕಾಡುತ್ತದೆ. ಹೃದಯ ಚುಚ್ಚುತ್ತದೆ. ನಾಚಿಕೆಯಿಂದ ಮನ ಮುದುಡುತ್ತದೆ. ತಾನು ಸೆರೆ ಕುಡಿದು ಬಂದು ನೆನ್ನೆ ರಾತ್ರಿ ಮಾಡಿದ ಅನುಚಿತ ವರ್ತನೆಯಿಂದ ಇಡೀ ಕುಟುಂಬವೇ ನೆರೆಹೊರೆಯವರ ಎದುರು ತಲೆ ತಗ್ಗಿಸುವಂತಾದುದು ಮನಸಿಗೆ ಕಾಡುತ್ತದೆ. ಇದೇ ಕೊನೆ. ಈ ಸಾರಾಯಿಯಿಂದಾಗಿ ತಾನೆ ಈ ಎಲ್ಲ ಅಪಸವ್ಯಗಳಾಗುವುದು ? ಇನ್ನು ಮೇಲೆ ಸಾರಾಯಿ ಮುಟ್ಟಬಾರದು. ಬಿಟ್ಟೇ ಬಿಡಬೇಕು. ನಾಳೆಯಿಂದ ಹೊಸ ಜೀವನ ಆರಂಭಿಸಬೇಕು.

ಹೆಂಡತಿ ಮುನಿಸಿಕೊಂಡಿದ್ದಾಳೆ. ತನ್ನಿಂದಾಗಿ ಸೊರಗಿ ಕಡ್ಡಿಯಂತಾಗಿದ್ದಾಳೆ. ಮಕ್ಕಳು, ಪಾಪ ಇನ್ನೂ ಚಿಕ್ಕವು. ರಾತ್ರಿಯ ಭಯವಿನ್ನೂ ಅವುಗಳ ಕಣ್ಣಿಂದ ಹೋಗಿಲ್ಲ. ತನ್ನ ಸಮೀಪ ಬರಲು ಕೂಡ ಅನುಮಾನಿಸುತ್ತಿವೆ. ತನ್ನನ್ನು ನೋಡಿ ಅವುಗಳ ಮನಸಿನಲ್ಲಿ ಏನೇನು ಓಡುತ್ತಿದೆಯೋ….ಅಕ್ಕಪಕ್ಕದವರು ಯಾರೂ ಮಾತಾಡುತ್ತಿಲ್ಲ.ಒಂಥರ ನೋಡುತ್ತ ವ್ಯಂಗ್ಯವಾಗಿ ನಗುತ್ತಿದ್ದಾರೆ….ಛೆ! ಇದೆಂಥ ಜೀವನ ತನ್ನದು ? ಬೇಡ ಬೇಡವೇ ಬೇಡ…..ಇವತ್ತು ಕುಡಿಯಬಾರದು…..

- Advertisement -

ತಕ್ಷಣವೇ ಎದೆ ಹೊಡೆದುಕೊಳ್ಳತೊಡಗುತ್ತದೆ. ಕೈ ನಡುಗತೊಡಗುತ್ತದೆ. ಈಗ ಮನಸಿನಲ್ಲಿ ಬಂದಿರುವುದು ಸಿಟ್ಟೋ, ಸೆಡವೋ, ಅಸಹಾಯಕತೆಯೋ….ಕೆಲಸ ಏನು ಮಾಡಬೇಕು. ಇವತ್ತಿನಿಂದಲೇ ಕುಡಿಯುವುದನ್ನು ಬಿಟ್ಟರೆ…..ಬಿಟ್ಟರೆ ಎಷ್ಟು ಹಣ ಉಳಿಯುತ್ತದೆ ? ಅದು ಆ ಕೆಲಸಕ್ಕೆ ಉಪಯೋಗ. ಹೌದು, ಹಣದ ಜೊತೆಗೆ ವೇಳೆಯೂ ಉಳಿಯುತ್ತದೆ. ಜೊತೆಗೆ ಮಾನ ಮರ್ಯಾದೆಯೂ ಉಳಿಯುತ್ತದೆ. ಎಲ್ಲರಂತೆ ತಾನೂ ತಲೆಯೆತ್ತಿ ಬಾಳಬಹುದು.

ಹೌದು. ಹಣ ಉಳಿಸಿ ಏನು ಮಾಡಬೇಕು ನಾನು? ದೊಡ್ಡ ದೊಡ್ಡ ಜನರು ಎಷ್ಟು ಎಂಜಾಯ್ ಮಾಡುತ್ತಾರೆ ತಾನೇಕೆ ಮಾಡಬಾರದು? ಮದ್ಯಕ್ಕೆ ತಾನು ಸೋಲಬೇಕೆ ? ಊಹುಂ, ತಾನೇ ಅದನ್ನು ಸೋಲಿಸುತ್ತೇನೆ. ಅದು ನನ್ನ ಅಡಿಯಾಳು. ನಾನು ಹೇಳಿದಂತೆ ಕೇಳಬೇಕು. ಅಷ್ಟಕ್ಕೂ ತಾನೇನು ಮಹಾ ದೊಡ್ಡ ಕುಡುಕ ? ಹಾಗೆ ನೋಡಿದರೆ ತನಗಿಂತ ದೊಡ್ಡ ಕುಡುಕರಿದ್ದಾರೆ. ಯಾವಾಗಲೂ ಗಟರ್ ನಲ್ಲಿಯೇ ಇರುತ್ತಾರೆ. ತಾನು ಹಾಗೆ ಇಲ್ಲ. ಏನೋ ಮನೆಯಲ್ಲಿ ಸ್ವಲ್ಪ ಆವಾಜ್ ಹಾಕುತ್ತೇನೆ. ಹೆಂಡತಿ, ಮಕ್ಕಳನ್ನು ಹದ್ದು ಬಸ್ತಿನಲ್ಲಿ ಇಟ್ಕೋಬೇಕು ತಾನೆ ? ಅದಕ್ಕೇ ತಾನು ಕುಡಿಯೋದು.

ಕುಡಿಯದೇ ಅವರನ್ನು ಹದ್ದುಬಸ್ತಿನಲ್ಲಿ ಇಟ್ಕೋಬಹುದು ಆದರೆ ಸ್ವಲ್ಪ ಕುಡಿದುಬಂದರೆ ಅದರ ಖದರ್ರೇ ಬೇರೆ. ನಾನು ಗದರಿಸಿದರೆ ಸಾಕು ಬಾಲ ಮುದುರಿಕೊಂದು ಬಿದ್ದಿರಬೇಕು ಅವಳು. ಮಕ್ಕಳು ಗಡಗಡ ನಡುಗಬೇಕು. ಏನಂತ ತಿಳ್ಕೊಂಡಿದ್ದಾರೆ ?

- Advertisement -

ಆದರೂ….ಬಿಡಬೇಕು. ಮನಸಿನ ಮೂಲೆಯಲ್ಲೊಂದು ವಿಚಾರ….. ಇಂದು ಒಂದೇ ದಿನ ನಾಳೆಯಿಂದ ಬಿಟ್ಟೇ ಬಿಡಬೇಕು.
ಮತ್ತೆ ಹೊರಟಿತು ಸವಾರಿ.

ಹೌದು, ಕುಡಿಯುವವರಿಗೆ ಸಾಮಾನ್ಯವಾಗಿ ಹೀಗೆ ಅನ್ನಿಸುತ್ತದೆ. ಮತ್ತೆ ‘ ಅದು ‘ ಎಳೆಯುತ್ತದೆ. ಅಲ್ಲಿ ‘ ಅಹಂ ‘ ಕೆಲಸ ಮಾಡುತ್ತದೆ. ಅದರ ಜೊತೆಗೇ ಮನೆಯಲ್ಲಿ ಇದ್ದಿರಬಹುದಾದ ಟೆನ್ಷನ್, ವ್ಯವಹಾರದ ಸೋಲು, ಎದುರಾಳಿಯ ಗೆಲುವು, ಅನೈತಿಕ ಸಂಬಂಧದಲ್ಲಿನ ಜಟಿಲತೆ, ಮಾಡಿಕೊಂಡ ಸಾಲ, ಮಕ್ಕಳು ಮಾತು ಕೇಳದಿರುವುದು, ಸಾಮಾಜಿಕ ಅವಹೇಳನಕ್ಕೆ ಗುರಿಯಾಗಿರುವುದು, ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿರುವುದು…..ಹೀಗೆ ಹಲವಾರು ಕಾರಣಗಳಿವೆ, ಸಾರಾಯಿ ಕುಡಿಯಲು. ಆದರೆ “ತಿಳಿವಳಿಕೆ “ಇದ್ದವರು ಮಾತ್ರ ಇದರಿಂದ ಹೊರಬರಬಹುದು.

ಹೌದು. ತನಗಿರುವ ಸಮಸ್ಯೆಯ ಆಳಗಲ ತಿಳಿದವನು, ಅದನ್ನು ಎದುರಿಸುವ ಛಾತಿ ಇದ್ದವನು ಮಾತ್ರ ಈ ಸಾರಾಯಿ ಎಂಬ ವಿಷವರ್ತುಲದಿಂದ ಹೊರಬರಬಹುದು. ಸ್ವಯಂ ವಿಚಾರಶಕ್ತಿ ಇಲ್ಲಿ ಬಹಳ ಮುಖ್ಯ. ಕೆಲವೊಮ್ಮೆ ಚಟ ತ್ಯಜಿಸುವ ಇಚ್ಛೆ ಇದ್ದರೂ ಆಗಲಿಲ್ಲವೆಂದರೆ ಅದಕ್ಕಾಗಿ ಕೆಲವು ಆಸ್ಪತ್ರೆಗಳು, ಚಾರಿಟಿ ಸಂಸ್ಥೆಗಳು ಇರುತ್ತವೆ ಅವುಗಳ ನೆರವು ಪಡೆಯಬೇಕು.

ಮುಖ್ಯವಾಗಿ ತಾನು, ತನ್ನ ಹೆಂಡತಿ ಮಕ್ಕಳು, ತಂದೆ ತಾಯಿ ಮುಂತಾದವರನ್ನು ಪ್ರೀತಿಸುವವನು, ಅವರ ಹಿತ ಬಯಸುವವನು ಸಾರಾಯೊ ಬಿಟ್ಟೇ ಬಿಡುತ್ತಾನೆ. ಆದರೆ ಒಂದು ಕ್ಷಣದ ” ಈಗೋ ” ಕ್ಕೆ ಬಲಿಯಾಗುವವನು ಅದರಿಂದಲೇ ಹಾಳಾಗುತ್ತಾನೆ.ಸಮಾಜದ ಸ್ವಾಸ್ಥ್ಯವನ್ನೂ ಹಾಳು ಮಾಡುತ್ತಾನೆ.ಜೊತೆಗೆ ತನ್ನ ಹಾಗೂ ಎಲ್ಲರ ಮನಶ್ಯಾಂತಿಯನ್ನೂ ಹಾಳು ಮಾಡುತ್ತಾನೆ.

ತನಗೆ ಯಾವುದು ಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ಶಾಂತಿ ನೆಮ್ಮದಿಯನ್ನು ಆಯ್ಕೆಮಾಡಿಕೊಳ್ಳುವವ ಮಾತ್ರ ಜೀವನದ ಈ ಪರೀಕ್ಷೆಯಲ್ಲಿ ಪಾಸಾಗಿ ಹೊರಬರುತ್ತಾನೆ. ಪಾಸಾಗುವವರಿಗೆ ಶುಭ ಹಾರೈಕೆಗಳು.

ಉಮೇಶ ಬೆಳಕೂಡ, ಮೂಡಲಗಿ
( ‘ಹೊಸ ದಿಗಂತ’ ಪತ್ರಿಕೆಯಲ್ಲಿ ಪ್ರಕಟಿತ )

- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group