Homeಸಂಪಾದಕೀಯಚಿಪ್ಪು ಕಳಚಿದ ಆಮೆಯಂತಾಗದಿರಲಿ ಬದುಕು

ಚಿಪ್ಪು ಕಳಚಿದ ಆಮೆಯಂತಾಗದಿರಲಿ ಬದುಕು

ನಮ್ಮ ಪುರಸಭೆಯ ಆರೋಗ್ಯಾಧಿಕಾರಿಗಳು ವಾಟ್ಸಪ್ ನಲ್ಲಿ ಚಿತ್ರವೊಂದನ್ನು ಹಂಚಿಕೊಂಡಿದ್ದರು. ಆಮೆಯು ತನ್ನ ಚಿಪ್ಪನ್ನು ಕಳಚಿಕೊಂಡು ಅದರ ಮೇಲೆ ಹತ್ತಿ ನಿಂತು ಬೀಗುತ್ತಿರುವ ಚಿತ್ರ. ಅದನ್ನು ಅವರಿಗೆ ಯಾರು ಕಳಿಸಿದ್ದರೋ ಗೊತ್ತಿಲ್ಲ ಅವರು ಮಾತ್ರ ತಮ್ಮ ಕರ್ತವ್ಯ ಮಾಡಿದ್ದಾರೆ ಎಲ್ಲರಿಗೂ ಅದನ್ನು ಹಂಚಿ ಎಚ್ಚರಿಸುವ ಮೂಲಕ.

ಚಿಪ್ಪು ಕಳಚಿಕೊಂಡು ತಾನೇನೋ ಸ್ವಾತಂತ್ರ್ಯ ಗಳಿಸಿಕೊಂಡಂತೆ ಆಮೆ ಭಾವಿಸಿದರೆ ಹಾನಿ ಯಾರಿಗೆ ? ಆಮೆಗೇ ತಾನೆ ? ಅದರ ಬೆನ್ನ ಮೇಲಿರುವ ಗಟ್ಟಿಯಾದ ಚಿಪ್ಪೇ ರಕ್ಷಣಾ ಕವಚ. ಯಾವ ಪ್ರಾಣಿಗಳಾದರೂ ಆಮೆಯನ್ನು ಸಂಹರಿಸಬೇಕಾದರೆ ಮೊದಲು ಈ ಚಿಪ್ಪನ್ನು ಒಡೆಯಬೇಕು. ಆದರೆ ತುಂಬಾ ಗಟ್ಟಿಯಾದ ಆಮೆಯ ಚಿಪ್ಪು ಅಷ್ಟು ಬೇಗ ಒಡೆಯಲಾರದು. ಹೀಗಾಗಿ ಚಿಪ್ಪಿನೊಳಗೆ ಇದ್ದಷ್ಟೂ ಆಮೆ ಸುರಕ್ಷಿತ.

 

ಅದೇ ಆಮೆ ಚಿಪ್ಪು ತ್ಯಜಿಸಿ ಹೊರಬಂದರೆ ತಕ್ಷಣವೇ ಹೊರ ದಾಳಿಗೆ ತುತ್ತಾಗುತ್ತದೆ. ಅದೇ ರೀತಿ ನಾವು ಕೂಡಾ.

ಕೊರೋನಾ ಹಾವಳಿಯ ಈ ದಿನಗಳಲ್ಲಿ ಮನೆಯಲ್ಲಿ ಅಥವಾ ಸುರಕ್ಷಿತ ಕವಚದಲ್ಲಿದ್ದಷ್ಟು ದಿನ ಕೊರೋನಾ ಹಾವಳಿಯಿಂದ ಸುರಕ್ಷಿತ. ಮಾಸ್ಕ್ ಹಾಕಿಕೊಂಡು, ಮನೆಯ ಆಹಾರ ಸೇವಿಸಿಕೊಂಡು, ಅನವಶ್ಯಕವಾಗಿ ತಿರುಗಾಡದೇ ಮನೆಯಲ್ಲಿದ್ದರೆ ಕೊರೋನಾ ನಮ್ಮನ್ನು ಏನೂ ಮಾಡಲಾರದು.

ಮೊದಮೊದಲು ಕೊರೋನಾ ಸಲುವಾಗಿ ಸರ್ಕಾರ ನಮಗೆ ಮನೆಯಲ್ಲಿಯೇ ಇರಲು ಹೇಳಿತು. ಸುಮಾರು ಒಂದೂವರೆ ತಿಂಗಳ ಲಾಕ್ ಡೌನ್ ವಿಧಿಸಿದ್ದರಿಂದ ಎಷ್ಟೋ ಜನರಿಗೆ ಎಷ್ಟೋ ರೀತಿಯ ತೊಂದರೆಗಳಾದವು. ವ್ಯಾಪಾರ ವಹಿವಾಟು ಬಂದ್ ಆದವು, ಆಹಾರ ಸಿಗದೇ ತೊಂದರೆಯಾಯಿತು, ಆಪ್ತರನ್ನು, ಸಂಬಂಧಿಕರನ್ನು ನೋಡಲಾಗದೇ ಹಳಹಳಿಯಾಯಿತು, ಉದ್ಯೋಗ ತಪ್ಪಿ ಸಂಬಳವಿಲ್ಲದೆ ಕಷ್ಟ ಅನುಭವಿಸುವಂತಾಯಿತು, ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿ ದುಡ್ಡು ಖಾಲಿಯಾಯಿತು, ಮದುವೆ ಮುಂಜಿಗಳಿಗೆ ಯಾರನ್ನೂ ಕರೆಯದಂತಾಯಿತು, ಸತ್ತವರನ್ನು ಹೂಳಲು ಕೂಡ ಹೋಗದ ಪರಿಸ್ಥಿತಿಯುಂಟಾಯಿತು……ಹೀಗೆ ಹಲವಾರು ರೀತಿಯಲ್ಲಿ ಕೊರೋನಾ ಮಹಾಮಾರಿ ನಮ್ಮ ಬದುಕನ್ನು ಹೈರಾಣವಾಗಿಸಿತು.

ಸರ್ಕಾರ ಕೂಡ ಎಷ್ಟು ಅಂತ ಹಣ, ಆಹಾರ ಕೊಡಲು ಸಾಧ್ಯ? ಬಡವರಿಗೆ ಅಂತ ಹಣ ಬಿಡುಗಡೆ ಮಾಡಿದರೆ ಮಧ್ಯೆ ಲೂಟಿಕೋರರ ಕಾಟ ಬೇರೆ. ಒಬ್ಬರಿಗೆ ಸಿಕ್ಕರೆ ಇನ್ನೊಬ್ಬರ ಹಣ ಯಾವನೋ ಇದ್ದುಳ್ಳವನು ತಿಂದು ಹಾಕಿದ. ಬಡವರ ಕಷ್ಟಗಳೇ ತೀರಲಿಲ್ಲ. ಹಸಿವಿನಿಂದ ಕಂಗಾಲಾದವರು ಸಿಟ್ಟಿನಿಂದ ಶಾಪ ಹಾಕಿದರು. ಅಂಥವರಿಗೆ ವಿರೋಧಿಗಳು ಕುಮ್ಮಕ್ಕು ಕೊಟ್ಟರು. ಮನೆಗೆ ಬೆಂಕಿ ಹತ್ತಿದಾಗ ಬೀಡಿ ಹಚ್ಚಿಕೊಂಡರು.

ಇಂಥ ಅನೇಕ ಸನ್ನಿವೇಶಗಳು ಎಲ್ಲರ ಮನ ಕಲಕಿದವು. ಆದರೆ ಕಾಲನಿಗೆ ಕನಿಕರವಿಲ್ಲವೆಂಬಂತೆ ಕೊರೋನಾ ಹಾವಳಿಗೆ ತುತ್ತಾಗುವವರ ಸಂಖ್ಯೆ ಜಾಸ್ತಿಯಾಗುತ್ತಲೇ ಹೋಯಿತು.
ಮೊದಲು ಲಾಕ್ ಡೌನ್ ಬಿಗಿಯಾಗಿಸಿದ್ದ ಸರ್ಕಾರ ಬರುಬರುತ್ತ ಸಡಿಲಗೊಳಿಸಿದಂತೆ ಜನ ಓಡಾಡುವುದು ಹೆಚ್ಚಾಗಿದೆ. ಅದು ಸಹಜ. ಆದರೆ ಹೆಜ್ಜೆ ಹೆಜ್ಜೆಗೂ ಹುಷಾರಾಗಿರಬೇಕಾದ ಜನರು ಈಗ ಮೈಮರೆತು ಓಡಾಡ ತೊಡಗಿದ್ದಾರೆ. ಕೊರೋನಾ ವಿಷಯದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಯ ಕ್ರಮಗಳನ್ನು ಗಾಳಿಗೆ ತೂರಲಾಗಿದೆ. ಜನ ಸ್ವಾತಂತ್ರ್ಯ ಸಿಕ್ಕಂತೆ ಸಂಭ್ರಮಿಸುತ್ತಿದ್ದಾರೆ. ತಮ್ಮ ರಕ್ಷಣಾ ಕವಚದಿಂದ ಹೊರಬಂದಿದ್ದಾರೆ. ಆದರೆ ಕೊರೋನಾ ಎಂಬ ಮಾರಿ ಯಾವಾಗ ದಾಳಿ ಮಾಡುವುದೋ ಗೊತ್ತಿಲ್ಲ. ಆದ್ದರಿಂದ ನಮ್ಮ ರಕ್ಷಣೆ ನಾವೇ ಮಾಡಿಕೊಳ್ಳಬೇಕಾಗಿದೆ.

ಲಾಕ್ ಡೌನ್ ಸಡಿಲವಾದ ನಂತರ ಕೊರೋನಾವನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಪ್ರತಿದಿನದ ಕೊರೋನಾ ಅಂಕಿಅಂಶಗಳ ಕಡೆಗೆ ಯಾರ ಗಮನವೂ ಇಲ್ಲ.ಯಾರೋ ಕೊರೋನಾದಿಂದ ಸತ್ತರೆ ಯಾರಿಗೂ ಏನೂ ಅನಿಸುತ್ತಿಲ್ಲ. ಈ ಪಯಣ ಎಲ್ಲಿಗೆ ಮುಟ್ಟುವುದೋ ಯಾರಿಗೂ ತಿಳಿಯುತ್ತಿಲ್ಲ. ಕಾದು ನೋಡಬೇಕು.

ಉಮೇಶ ಬೆಳಕೂಡ, ಮೂಡಲಗಿ

RELATED ARTICLES

Most Popular

error: Content is protected !!
Join WhatsApp Group