ಇಂದು ಗುಬ್ಬಿ ಸಂರಕ್ಷಣಾ ದಿನ; ಗುಬ್ಬಚ್ಚಿ ಕವಿತೆಗಳು

Must Read

ಗುಬ್ಬಚ್ಚಿ ಕವಿತೆಗಳು

ಕಾಣೆಯಾಗಿದೆ ಕವಿತೆಯ ಮೆರೆಸಿದ್ದ ಹಕ್ಕಿ
ಕರುಣೆ ಪ್ರೀತಿಭಾವನೆಗಳ ಬೆರೆಸಿದ್ದ ಹಕ್ಕಿ

ಚೀಂವ್ ಚೀಂವ್ ಗೆ ಕುಣಿದಾಡದೇ ಮನ
ಚೆಲುವಿನೊಳಗೆ ಎಳೆಯುತ ತೆರೆಸಿದ್ದ ಹಕ್ಕಿ

ಪುರ್ ಪುರ್ ಹಾರುವ ಸದ್ದಿಗೆಷ್ಟು ಹರುಷವು
ಒಲವಿನಲಿ ಇಳಿಸಿ ನೋವನು ಒರೆಸಿದ್ದ ಹಕ್ಕಿ

ಕೂಳಿಗೆ ಕಾಳುಗಳ ಹೆಕ್ಕುವ ಸೊಗಸೇ ಹಬ್ಬ
ಬಾಳಿಗೆ ಪಟಹಿಂದೆ ಮನೆಮಾಡಿ ಕರೆಸಿದ್ದ ಹಕ್ಕಿ

ಸಂತತಿ ಅಳಿದವೇ ಸಂಶಯವು ಪ್ರಸಾದನಿಗೆ
ಗುಬ್ಬಿ ಸಂರಕ್ಷಣೆಗೆಂದೇ ಕೂಗುತ ಬರೆಸಿದ್ದ ಹಕ್ಕಿ

ಗಣೇಶ ಪ್ರಸಾದ ಪಾಂಡೇಲು


ಗುಬ್ಬಚ್ಚಿ

ಪುಟ್ಟ ಗೂಡಿನ ಚಿಕ್ಕ ಗುಬ್ಬಚ್ಚಿ
ಕಾಳನು ಕೊಡುವೆ ಬಾ ಪಾಪಚ್ಚಿ

ಜೋಡಿ ಹಕ್ಕಿ ಜೊತೆಗೆ ಹಾರುವೆ
ಮೋಡಿ ಮಾಡುವಂತೆ ಕೂಗುವೆ

ಚಿಂವ್ ಚಿಂವ್ ಚಿಲಿ ಪಿಲಿ
ಅಂಗಳ ತುಂಬಾ ಗಲಿಬಿಲಿ

ಮೊಟ್ಟೆ ಇಟ್ಟು ಮರಿಯನು ಮಾಡಿ
ಕಾಳನು ತಂದು ಗುಟುಕನು ನೀಡಿ

ಹಾರಲು ಕಲಿಸುವೆ ಹಾಯಾಗಿ
ಹಾರುತ ಹೋಯಿತು ಮರಿ ಹಾಯಾಗಿ

ನೀಲಮ್ಮ ಎಸ್ ಸಾಲಿಮಠ ಕಲಬುರ್ಗಿ


ಗುಬ್ಬಚ್ಚಿ

ಗುಬ್ಬಿ ಗುಬ್ಬಿ ಚಿಂವ್ ಚಿಂವ್
ಎಂದು ಹಾರುವೆ ನೀನೆಲ್ಲಿ?

ಮೇಲೆ ಕೆಳಗೆ ನೋಡುತ
ನೀನು ಹುಡುಕುವೆ ಏನಲ್ಲಿ?

ಕಾಳು ಕೊಟ್ಟು ನೀರು ಕುಡಿಸಿ
ಆಶ್ರಯ ನೀಡುವೆ ಬಾ ಇಲ್ಲಿ

ಹಿಡಿಯಲು ಹೋದರೆ ಪುರ್ ಪುರ್
ಎಂದು ಹೋಗುವೆ ನೀನೆಲ್ಲಿ?

ನಿನ್ನಯ ರಾಗ ಕೇಳಲು ಚೆಂದ
ನಿನ್ನಯ ನೋಟ ನೋಡಲು ಚೆಂದ

ಗುಬ್ಬಿ ಗುಬ್ಬಿ ನನ್ನಯ ಜೊತೆಗೆ
ನೀನು ಆಡಲು ಬಾ ಇಲ್ಲಿ

ಅಶ್ವಿನಿ.ಎಂ.ಪಾಟೀಲ


ಗುಬ್ಬಿ

ಚಿಂವ್ ಚಿಂವ್ ಎನುತಾ ಅಂಗಳದಿ
ಕುಣಿಯುತ ಬರುವೆ ಸಡಗರದಿ
ಕಾಳನು ತಿಂದು ಕೈಗೆ ಸಿಗದೆ
ಹಾರಿ ಹೋಗುವೆ ಫುರ್ ಎಂದು

ಹಾರುತ ಬರುವೆ ಫುರ್ ಎಂದು
ಜಂತಿಯಲಿ ಹುಡುಕುತಲಿ
ಗೂಡನು ಕಟ್ಟಲು ಸಿದ್ದತೆ
ಮಾಡುವೆ ಹರುಷದಲಿ

ಎಳೆಎಳೆ ಹಲ್ಲನು ಎಳೆತಂದು
ಗೂಡನು ಕಟ್ಟುವೆ ಕುಶಲದಲಿ
ಮೆಚುವತೆರದಿ ಆಹೆಣ್ಣ ಗುಬ್ಬಿ
ಮೊಟ್ಟೆ ಇಡಲು ಗೂಡಿನಲಿ

ಬರುವುದು ಹೆಣ್ಗುಬ್ಬಿಗಳಾ ಹಿಂಡು
ಗೂಡನು ಪರೀಕ್ಷೀಸಲು ಕಂಡು
ಗೂಡನು ಮೆಚ್ಚದೆ ಸಮ್ಮತಿ ನೀಡದೆ
ಹಾರಿಹೋಗುವವು ಫುರ್ ಎಂದು

ಒಪ್ಪಿಗೆ ಕೊಟ್ಟಿತು ಒಂದ್ಗುಬ್ಬಿ
ಒಟ್ಟಿಗೆ ಬಾಳಲು ಅದು ಹಿಗ್ಗಿ
ಮೊಟ್ಟೆ ಯ ಇಟ್ಟವು ಕಾವನು
ಕೊಟ್ಟವು ಗೂಡಲಿ ಹಾಡನು ಕೇಳುವ ತವಕದಲಿ

ಹಾವು ಹದ್ದು ಬೆಕ್ಕುಗಳಿಂದ
ಜತನವ ಮೊಟ್ಟೆಗಳೊಡೆದು
ಚಿಲಿಪಿಲಿ ಎನ್ನಲು ಹರುಷದಲಿ
ಕುಣಿಕುಣಿದಾಡಿ ಸಂಭ್ರಮ ಪಟ್ಟವು
ಅಪ್ಪ ಅಮ್ಮ ಹರುಷದಲಿ

ಕಾಳನು ತಂದು ಗುಟುಕು ನೀಡುತ
ಕಾವಲಿಗಿದ್ದರು ಗೂಡಿನಲಿ
ಶತ್ರುಗಳೆಲ್ಲಾ ಸಂಚುರೂಪಿಸಿ ಹೊಂಚು ಹಾಕುತಿದ್ದರು ದೂರದಲಿ

ಮುದ್ದಿನ ಮರಿಗಳ ಮುದ್ದಿಸುತಾ
ಗುಟಿಕಿನ ದಾರಿ ಕಾಯುತ
ಬರದೆ ಇರಲು ಗಂಡ್ಗುಬ್ಬಿ
ಗೂಡನುಬಿಟ್ಟಿತು ಹೆಣ್ಣಗುಬ್ಬಿ

ಗುಟುಕನು ಹಿಡಿದು ಸಂತಸದಿ
ಮರಳಿತು ಗೂಡಿಗೆ ಕ್ಷಣದಲ್ಲಿ
ಕೆದರಿದ ಗೂಡಲಿ ಮರಿಗಳ ಕಾಣದೆ
ರೋದಿಸತೊಡಗಿತು ದುಃಖದಲಿ

ಹಾರಲು ಕಲಿಸುವೆ
ಜಿಗಿಯಲು ಕಲಿಸುವೆ ಆಹಾರವನ್ನ ಕಲಿಸುವೆನೆನ್ನತ
ಕನಸನು ಹೊತ್ತು ಗಂಡ್ಗುಬ್ಬಿ
ಹಾರುತ ಸಾಗಿತು ದೂರದಲಿ

ಗೂಡಲಿ ಕೇಳಿದ ಅಳುಕಂಡು
ಗಾಬರಿಗೊಂಡಿತು ಹೆದರಿಕೊಂಡು
ಕನಸಿನಗೋಪುರ ಕುಸಿಯಿತು ಕ್ಷಣದೆ
ಕೆದರಿದ ಗೂಡಕಂಡು

ಮರಿಗಳ ಇಲ್ಲದ ಗೂಡನು ತೊರೆದು ಭಾರದ ಹೃದಯದಿ
ದೂರಕೆ ಹಾರಿತು ಹೆಣ್ಗುಬ್ಬಿ
ಚಿಂವ್ ಚಿಂವ್ ಎಂದು ಹಲುಬುತ
ಗೂಡಿನ ಮುಂದೆ ಗೋಳಿಡುತಿತ್ತು
ಗಂಡಗುಬ್ಬಿ

ಡಾ.ನಿರ್ಮಲಾ ಬಟ್ಟಲ

Latest News

ಮಕ್ಕಳಲ್ಲಿ ಸಂಸ್ಕಾರದ ಗುಣಗಳು ಕಡಿಮೆಯಾಗುತ್ತಿರುವುದು ವಿಷಾದನೀಯ – ಕಲಶೆಟ್ಟಿ

ಸಿಂದಗಿ-ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಮಾನವೀಯ ಸಂಬಂಧಗಳನ್ನು ಬೆಳೆಸಿಕೊಳ್ಳಬೇಕು ಇಂದು ಸಂಸ್ಕಾರದ ಗುಣಗಳು ಮಕ್ಕಳಲ್ಲಿ ಕಡಿಮೆಯಾಗುತ್ತಿರುವುದು ವಿಷಾದನೀಯ ಎಂದು ನಿವೃತ್ತ ಉಪನ್ಯಾಸಕ ಎಸ್.ಎಸ್.ಕಲಶೆಟ್ಟಿ ಹೇಳಿದರು.ಅವರು ಪಟ್ಟಣದ ಶ್ರೀ ಸಾತವೀರೇಶ್ವರ...

More Articles Like This

error: Content is protected !!
Join WhatsApp Group