ನಾವಿಂದು ಸರಕಾರಿ ಶಾಲೆಗಳಲ್ಲಿ ಕಲಿತವರು ಬಹುತೇಕ ತಮ್ಮ ವೃತ್ತಿ ಬದುಕಿನಲ್ಲಿ ಯಶಸ್ವಿಯಾಗಿರುವ ಜೀವನ ಕಾಣುತ್ತೇವೆ. ಸರಕಾರ ಬಹುತೇಕ ಅನುಕೂಲಕರ ವಾತಾವರಣ ಸರಕಾರೀ ಶಾಲೆಗಳಲ್ಲಿ ಇರಬೇಕೆಂದು ಬಯಸುತ್ತದೆ. ಇರುವ ವಾತಾವರಣದಲ್ಲಿ ಬಹಳಷ್ಟು ಪರಿಶ್ರಮದಿಂದ ಶಾಲೆಗಳ ಒಳಗೂ ಹೊರಗೂ ವಿಭಿನ್ನವಾದ ಕ್ರಿಯಾತ್ಮಕ ಪರಿಸರ ನಿರ್ಮಾಣ ಆಗಿರುವಂತೆ ಹಲವು ಜನ ಮಾಡಿರುತ್ತಾರೆ. ಅಂತಹ ಹಲವರಲ್ಲಿ ಮುಗಳಿಹಾಳ ಸಮೀಪದ ತೋಟದ ಬಸವನಗುಡಿ ಎಂಬ ಶಾಲೆ ತನ್ನದೇ ಆದ ಪರಿಸರ ನಿರ್ಮಾಣ ದಿಂದ ಗಮನ ಸೆಳೆಯುತ್ತದೆ.
ಈ ಶಾಲೆಗೆ ತಲುಪಬೇಕಾದರೆ ಕನಿಷ್ಠ ಎರಡರಿಂದ ಮೂರು ಕಿಲೋಮೀಟರ್ ಕಚ್ಚಾ ರಸ್ತೆಯ ಮೂಲಕ ಹೋಗಬೇಕು. ಆದರೆ ನಾವು ಕ್ರಮಿಸುವ ಕಚ್ಚಾ ರಸ್ತೆಯ ಆಯಾಸ ಎಲ್ಲವೂ ಈ ಶಾಲೆ ತಲುಪಿದಾಗ ಹೊರಟು ಹೋಗಿರುತ್ತದೆ.ಏಕೆಂದರೆ ಇಲ್ಲಿ ಈಗ ತಾನೇ ಬೆಳೆಯುತ್ತಿರುವ ಬಾಳೆ. ವಿವಿಧ ತರಕಾರಿ ಗಳು ಕುಡಿಯುವ ನೀರಿನ ವ್ಯವಸ್ಥೆ ಶಾಲಾ ಕೊಠಡಿಗಳು. ಮಕ್ಕಳ ಪ್ರತಿಕ್ರಿಯೆ ಹೀಗೆ ಹಲವು ವೈಶಿಷ್ಟ್ಯವನ್ನು ನೋಡಿದಾಗ ಬಹಳ ಸಂತಸವೆನಿಸುತ್ತದೆ.
1 ರಿಂದ 5 ತರಗತಿ ಹೊಂದಿರುವ ಸುತ್ತಲೂ ತೋಟಗಳಿಂದ ಬರುವ ಮಕ್ಕಳ ಉತ್ಸಾಹ ಅವರ ಪ್ರತಿಕ್ರಿಯೆ ಗಮನ ಸೆಳೆದಿದೆಯಲ್ಲದೆ ಇದಕ್ಕೆ ಕಾರಣ ವಾಗಿರುವ ಅಲ್ಲಿನ ಶಾಲಾಭಿವೃದ್ಧಿ ಸಮಿತಿ ಹಾಗೂ ಮುಖ್ಯ ಶಿಕ್ಷಕ ವಿಜಯ ಮೆಳವಂಕಿಯವರ ಪರಿಶ್ರಮ ನಿಜಕ್ಕೂ ಅಭಿಮಾನ ಪಡುವಂತಹ ಸಂಗತಿ.
ಬಾಳೆ ತೆಂಗು ನುಗ್ಗೆಕಾಯಿ ಟೊಮೇಟೋ ವಿವಿಧ ಬಗೆಯ ತರಕಾರಿಗಳನ್ನು ಈ ಆವರಣದಲ್ಲಿ ಬೆಳೆದು ಅಕ್ಷರದಾಸೋಹ ಕಾರ್ಯ ಯಶಸ್ವಿಯಾಗಿ ಜರುಗಲು ಕಾರಣಕರ್ತರಾದ ವಿಜಯ ಮೆಳವಂಕಿಯವರ ಪರಿಶ್ರಮ ತರಗತಿ ಕೋಣೆಯಲ್ಲಿ ಕೂಡ ಕಂಡು ಬರುತ್ತದೆ. ನಲಿಕಲಿ ತರಗತಿಯ ಜೊತೆಗೆ 4 ಮತ್ತು 5 ನೇ ತರಗತಿ ವಿದ್ಯಾರ್ಥಿ ಗಳ ಕಲಿಕಾ ಚಟುವಟಿಕೆಗಳನ್ನು ಗಮನಿಸಿದಾಗ ನಮ್ಮ ಸರಕಾರಿ ಶಾಲೆ ನಮ್ಮ ಹೆಮ್ಮೆ ಎಂಬ ಮಾತು ಅಕ್ಷರಶಃ ಸತ್ಯ ಎಂದು ಹೆಮ್ಮೆ ಆಗುತ್ತದೆ.
ಒಂದೆಡೆ ಕಂಪ್ಯೂಟರ್ ಪ್ರಿಂಟರ್ ಮತ್ತೊಂದೆಡೆ ಹೈಟೆಕ್ ಶೌಚಾಲಯ ಕೂಡ ಗಮನ ಸೆಳೆಯುತ್ತದೆ. ಸುತ್ತಲೂ ತಡೆಗೋಡೆ ಇನ್ನೂ ಪೂರ್ಣಗೊಂಡಿಲ್ಲವಾದರೂ ಇಲ್ಲಿನ ಸೌಂದರ್ಯ ಯಾರೂ ಹಾಳುಮಾಡಲು ಷಡ್ಯಂತ್ರ ಮಾಡದಿರುವುದು ಇಲ್ಲಿನ ಪಾಲಕರ ಕಾಳಜಿಯನ್ನು ಎತ್ತಿ ತೋರುತ್ತದೆ.
ನಾನು ಈ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ರಾಮದುರ್ಗ ತಾಲೂಕಿನ ಸೀಮಾ ಹಿರೇಮಠ ಎಂಬ ಮಹಿಳೆ ಸಾಮಾಜಿಕ ಲೆಕ್ಕ ಪರಿಶೋಧನೆ ಮಾಡುತ್ತಿದ್ದರು. ಇತ್ತೀಚೆಗೆ ಸರಕಾರಿ ಶಾಲೆಗಳಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನೆ ಮೂರು ದಿನಗಳ ಕಾಲ ಜರುಗುತ್ತಿರುವುದು ಸರಕಾರ ಜರುಗಿಸುತ್ತಿರುವುದು ಶಾಲೆಗಳ ಕಾರ್ಯ ವೈಖರಿಯನ್ನು ಗಮನಿಸುತ್ತಿರುವುದು. ಆ ಮಹಿಳೆಯ ಅಭಿಪ್ರಾಯ ಕೂಡ ನಾನು ಕೇಳಿದಾಗ ತುಂಬಾ ಖುಷಿ ಪಟ್ಟು ನಾನು ಕೂಡ ಹಲವು ತಾಲೂಕಿನ ಶಾಲೆಗಳ ಸಾಮಾಜಿಕ ಲೆಕ್ಕ ಪರಿಶೋಧನೆ ಮಾಡಲು ಹೋಗಿರುವೆ. ಅಂಥವುಗಳಲ್ಲಿ ಇದು ವಿಶಿಷ್ಟ ವಾಗಿರುವುದು ಎಂಬ ಸಂಗತಿಯನ್ನು ಹೇಳಿದರು. ನನ್ನ ಜೊತೆ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ಡಿ ಎಲ್ ಭಜಂತ್ರಿ ಇದ್ದರು.
ಶಾಲೆ ತಲುಪುವ ರಸ್ತೆ ಇಕ್ಕಟ್ಟಿನಲ್ಲಿ ಇದ್ದರೂ ಕೂಡ ಮಲೆನಾಡಿನ ಪ್ರಕೃತಿ ಈ ಶಾಲೆ ತಲುಪಿದಾಗ ಗಮನ ಸೆಳೆಯುತ್ತದೆ. ಇಲ್ಲಿನ ಶಾಲಾ ಅಡುಗೆಯವರ ಬಗ್ಗೆ ಕೂಡ ಹೆಮ್ಮೆ ಅನಿಸುತ್ತದೆ. ಮಕ್ಕಳ ಊಟಕ್ಕೆ ರುಚಿಕರವಾದ ಅಡುಗೆ ಮಾಡಿ ಬಡಿಸುವ ಇವರ ಕಾರ್ಯ ಕೂಡ ಮಹತ್ವದ್ದು. ಅಂದ ಹಾಗೆ ಈ ಶಾಲೆ ಆರಂಭವಾಗಿದ್ದು 1997 ರಲ್ಲಿ ಈ ಹಿಂದೆ ಇಲ್ಲಿ ಯರಗಣವಿ ಹಾಗೂ ಎಚ್. ಎಲ್. ನದಾಫ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ ನಂತರ 2006 ರಿಂದ ವಿಜಯ ಮೆಳವಂಕಿಯವರು ಸೇವೆ ಸಲ್ಲಿಸುತ್ತಿರುವರು. ವಿದ್ಯುತ್ ಸಂಪರ್ಕ ಹಾಗೂ ವಿದ್ಯುತ್ ಪರಿಕರಗಳನ್ನು ವ್ಯವಸ್ಥಿತವಾಗಿ ಮಾಡುವಲ್ಲಿ ಕೂಡ ಇವರು ನಿಪುಣರು. ಶಿಕ್ಷಕ ವೃತ್ತಿ ಜೊತೆಗೆ ಕಂಪ್ಯೂಟರ್ ಕೂಡ ದುರಸ್ತಿ ಮಾಡುವ ಜೊತೆಗೆ ಕಂಪ್ಯೂಟರ್ ಕಾರ್ಯ ಕೂಡ ಮಾಡುವರು. ಹೀಗಾಗಿ ಸ್ವತಃ ತಮ್ಮ ಕಾರ್ಯ ದಿಂದ ಶಾಲೆಯ ಪರಿಸರವನ್ನು ಅಂದಗೊಳಿಸಲು ಕಾರಣಕರ್ತರಾಗಿರುವರು.
ಪ್ರತಿ ಕೊಠಡಿಯಲ್ಲಿ ಫ್ಯಾನ್, ವಿದ್ಯುತ್ ಬಲ್ಬ್ ಅಳವಡಿಸುವ ಜೊತೆಗೆ ಶಾಲೆಯಲ್ಲಿ ವಾಟರ್ ಫಿಲ್ಲರ್ ಅಳವಡಿಸಿ ಶುಚಿ ರುಚಿಯೊಂದಿಗೆ ಶೈಕ್ಷಣಿಕ ವಾತಾವರಣ ಕೂಡ ಗಮನ ಸೆಳೆಯುವಂತೆ ಮಾಡಿರುವಲ್ಲಿ ಇವರ ಪರಿಶ್ರಮ ಎದ್ದು ಕಾಣುತ್ತದೆ.
ಕೈ ತೋಟ ಹಾಗೂ ಕುಡಿಯುವ ನೀರಿನ ಸಲುವಾಗಿ ಬೋರವೆಲ್ ಕೂಡ ಈ ಶಾಲಾ ಆವರಣದಲ್ಲಿ ಇರುವುದು ಶಾಲಾ ಕೈತೋಟದ ಮೆರುಗನ್ನು ಹೆಚ್ಚಿಸಲು ಕಾರಣ. ಎರಡು ನೀರಿನ ಟ್ಯಾಂಕ್ ಗಳು ಕುಡಿಯುವ ನೀರಿನ ಸಲುವಾಗಿ ಹಾಗೂ ಕೈತೋಟದ ಸಲುವಾಗಿ ಹೊಂದಿರುವ ಕಾರಣ ನೀರಿನ ಹರವು ಅನುಕೂಲಕರ ವಾಗಿದೆ. 6 ಕಂಪ್ಯೂಟರ್ ಈ ಶಾಲೆಯಲ್ಲಿ ಇರುವುದು ಕೂಡ ಹೆಮ್ಮೆಯ ಸಂಗತಿ. ಪಪ್ಪಾಯಿ. ಮಾವು. ಬದಾಮ. ಸವತೆಕಾಯಿ. ಬದನೆಕಾಯಿ. ಟೊಮೇಟೋ ಎಲೆಕೋಸು ಕೊತಂಬರಿ ತರಕಾರಿಗಳನ್ನು ಇಲ್ಲಿನ ಕೈತೋಟ ಹೊಂದಿದೆ.
ಕೆಲವರು ಸುಂದರವಾದ ಸ್ಥಳಗಳನ್ನು ಅರಸಿಕೊಂಡು ಹೋಗುತ್ತಾರೆ. ಇನ್ನು ಕೆಲವರು ತಾವು ಇರುವ ಸ್ಥಳವನ್ನು ಸುಂದರವಾಗಿ ಮಾಡಲು ಪ್ರಯತ್ನ ಮಾಡುತ್ತಾರೆ ಹಾಗೂ ಆ ಸ್ಥಳಕ್ಕೆ ಬೇರೆಯವರು ಬರಲಿ ಎಂದು ಬಯಸುತ್ತಾರೆ ಹೀಗೆ ಬೇರೆಯವರು ನಮ್ಮ ಶಾಲೆಗೆ ಬರಲಿ ಎಂದು ಬಯಸುವ ಮನಸ್ಥಿತಿಯನ್ನು ಹೊಂದಿರುವ ವಿಜಯ ಮೆಳವಂಕಿಯವರ ಕಾರ್ಯ ತುಂಬಾ ಅಮೋಘ. ನಮ್ಮ ಸರಕಾರಿ ಶಾಲೆಗಳು ನಮ್ಮ ಹೆಮ್ಮೆ. ಈ ದಿಸೆಯಲ್ಲಿ ಈ ಶಿಕ್ಷಕರ ಕಾರ್ಯ ವನ್ನು ಅಭಿನಂದಿಸಿ ಶಾಲೆಯಿಂದ ಮರಳುವಾಗ ಅಲ್ಲಿನ ಪ್ರಕೃತಿ ಬಿಟ್ಟು ಹೋಗಲು ಮನಸ್ಸು ಬರದಂತೆ ಮಾಡಿತು.
ವೈ ಬಿ ಕಡಕೋಳ
ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ
ಕ್ಷೇತ್ರ ಸಂಪನ್ಮೂಲ ಕೇಂದ್ರ
ಸವದತ್ತಿ