ತುಮಕೂರು – ಇಲ್ಲಿಗೆ ಸಮೀಪದ ಜಿಂಕೆ ವನದಲ್ಲಿ ನಾಮದ ಚಿಲುಮೆ ಎಂಬ ಸತತ ಜಲಧಾರೆಯೊಂದು ಅಚ್ಚರಿ ಮೂಡಿಸಿದ್ದು ಶ್ರೀ ರಾಮನ ಮಹಿಮೆಯನ್ನು ಸಾರುತ್ತಿದೆ.
ನಾಮದ ಚಿಲುಮೆ ಎಂಬ ಹೆಸರಿನ ಈ ಜಲಧಾರೆ ತುಮಕೂರಿನಿಂದ ಸುಮಾರು ೧೦ ಕಿ ಮೀ ದೂರದಲ್ಲಿದ್ದು ಗುಡ್ಡಗಾಡಿನಲ್ಲಿ ಹಗಲಿರುಳೂ ನೀರು ಎಲ್ಲಿಂದ ಬರುತ್ತದೆಯೆಂಬುದೇ ಒಂದು ರಹಸ್ಯವಾಗಿದೆ.
ಒಂದು ಪೌರಾಣಿಕ ಕಥೆಯ ಪ್ರಕಾರ ಶ್ರೀ ರಾಮನು ಸೀತೆ ಲಕ್ಷ್ಮಣರೊಡನೆ ವನವಾಸಕ್ಕೆ ಬಂದಾಗ ಒಂದು ಸಂದರ್ಭದಲ್ಲಿ ಹಣೆಗೆ ತಿಲಕವಿಡುವ ಪ್ರಸಂಗ ಬರುತ್ತದೆ ಅತ್ತಿತ್ತ ನೋಡಿದಾಗ ಎಲ್ಲೂ ನೀರು ಕಂಡು ಬರುವುದಿಲ್ಲ ಆಗ ಶ್ರೀರಾಮನು ಬಾಣ ಬಿಟ್ಟಾಗ ನೀರಿನ ಬುಗ್ಗೆ ಎದ್ದು ಬಂದು ಅದರಿಂದ ರಾಮ ಹಣೆಗೆ ತಿಲಕವಿಟ್ಟುಕೊಂಡಿದ್ದರಿಂದ ಈ ಸ್ಥಳಕ್ಕೆ ನಾಮದ ಚಿಲುಮೆ ಎಂಬ ಹೆಸರು ಬಂತೆಂಬ ಪ್ರತೀತಿ ಇದೆ. ಅಂದಿನಿಂದ ಇಂದಿನವರೆಗೂ ಇಲ್ಲಿ ಈಗಲೂ ಕೂಡ ಬಂಡೆಯೊಳಗಿನಿಂದ ಸತತವಾಗಿ ನೀರು ಒಸರುವುದನ್ನು ನಾವು ನೋಡಬಹುದು.
ನೀರು ಒಸರುವ ಜಾಗವನ್ನು ಅರಣ್ಯ ಇಲಾಖೆಯವರು ಕಟಾಂಜನದಿಂದ ಸುರಕ್ಷಿತವಾಗಿರಿಸಿದ್ದಾರೆ. ಇಲ್ಲಿ ಜಿಂಕೆಗಳ ತಾಣವೂ ಇದೆ. ಶಾಂತ ಸುಂದರ ತಾಣದಲ್ಲಿ ಸುಂದರ ಜಿಂಕೆಗಳು ನಲಿದಾಡುತ್ತವೆ. ನಗರ ಜೀವನದಿಂದ ಬೇಸತ್ತವರು ಇಲ್ಲಿ ಬಂದಯ ರಿಲ್ಯಾಕ್ಸ್ ಆಗುತ್ತಾರೆ. ಅತ್ಯಂತ ಶಾಂತ ವಾತಾವರಣ ಮನಸಿಗೆ ಮುದನೀಡುತ್ತದೆ. ನಾಮದ ಚಿಲುಮೆಯ ತಂಪಾದ ನೀರು ಕುಡಿದಾಗ ಹೃದಯ ತಂಪಾಗುತ್ತದೆ.
ಉಮೇಶ ಬೆಳಕೂಡ, ಮೂಡಲಗಿ