- Advertisement -
ಸೋಲದಿರಲಿ
______________________
ಬಯಲಾಗಲಿದೆ ಇನ್ನು ಕೆಲವೆ
ಕ್ಷಣಗಳಲ್ಲಿ ಸತ್ಯವೊ ಸುಳ್ಳೋ
ಪಟ್ಟ ಕಟ್ಟುವರು
ಪ್ರಜಾಪ್ರಭುತ್ವಕೊ
ಅಥವಾ ಸರ್ವಾಧಿಕಾರಿಗೊ
ಹೊರ ಬೀಳಲಿದೆ ಭರವಸೆಯೊ
ಭ್ರಮೆಯೊ
ಇತ್ಯರ್ಥಕ್ಕೆ ಸಮಯ
ಸಮತೆಯೊ ಸಂಘರ್ಷವೊ
ಗೆಲ್ಲುವುದು ಪ್ರೀತಿಯೋ ದ್ವೇಷವೊ
ನ್ಯಾಯವೊ ಅನ್ಯಾಯವೊ
ಗಟ್ಟಿಗೊಳ್ಳುವುದೆ ನಂಬಿಕೆ
ಇಲ್ಲಾ ಮುಂದುವರೆಯುವುದೆ ಮೋಸ
ಎಲ್ಲೆಡೆ ಮೊಳಗುವುದು
ಶಾಂತಿಯೋ ಗಲಭೆಯೊ
ಮುಗಿಯಿತು ನಲವತ್ತೈದು ದಿನಗಳ
ಜಾತ್ರೆ ಹಬ್ಬ
ಚಿಗುರುವುವೆ ಕನಸೋ
ಇಲ್ಲಾ ಕಮರುವವೊ
ಆಸ್ಪತ್ರೆಯಲ್ಲಿನ ದಲಿತ ಬಡ
ಅಲ್ಪ ಸಂಖ್ಯಾತ ಬಾಣ0ತಿಯರ ಭೀತಿ
ಹೆರಿಗೆಯಾಗದ ಭ್ರೂಣಗಳ ಚಿಂತೆ
ಹೊರಗೆ ರಕ್ಕಸರ ಕೂಟ
ಬದಲಿಸುವರು ಸಂವಿಧಾನ
ದಶಕದ ಕರಾಳ ಕ್ಷಣಗಳು ಕೊನೆಯಾಗಲಿ
ಸೋಲದಿರಲಿ ಬುದ್ಧ ಬಸವ ಬಾಪು
ಕೆಲವೇ ಕ್ಷಣಗಳಲ್ಲಿ
ಅನಾವರಣಗೊಳ್ಳಲಿ ನೆಮ್ಮದಿ
ಇಲ್ಲ ಮತ್ತೆ ಸಜ್ಜುಗೊಳ್ಳಲಿ ಸಮರ
_________________________
ಡಾ ಶಶಿಕಾಂತ ಪಟ್ಟಣ ರಾಮದುರ್ಗ