Homeಲೇಖನವಿವಿಧ ಕ್ಷೇತ್ರದ ಸಾಧಕರ ಪರಿಚಯಿಸುವ 'ಸುಂದರ ನವಿಲಿಗೆ ಚೆಂದದ ಗರಿ'

ವಿವಿಧ ಕ್ಷೇತ್ರದ ಸಾಧಕರ ಪರಿಚಯಿಸುವ ‘ಸುಂದರ ನವಿಲಿಗೆ ಚೆಂದದ ಗರಿ’

spot_img

ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದು ನಿವೃತ್ತಿ ಹೊಂದಿ ಪ್ರವೃತಿಯಲ್ಲಿ ಹವ್ಯಾಸಿ ಲೇಖಕಿಯಾಗಿ ಹಾಸನದ ಸಾಹಿತ್ಯ ಲೋಕದಲ್ಲಿ ಇತ್ತೀಚಿನ ದಿನಗಳಲ್ಲಿ ಕಾಣಬರುತ್ತಿರುವ ಹೆಸರು ಸಾವಿತ್ರಮ್ಮ ಓಂಕಾರ್. ಶಿಶುಗೀತೆ, ಕಥೆ, ಕವನ, ಗಜಲ್, ವ್ಯಕ್ತಿ ಚಿತ್ರಗಳ ಬರವಣಿಗೆಯ ಜೊತೆಗೆ ರೇಖಾಚಿತ್ರಗಳ ರಚನೆಯಲ್ಲಿ ತೊಡಗಿಸಿಕೊಂಡವರು. ಪ್ರಸ್ತುತ ಇವರ ಸುಂದರ ನವಿಲಿಗೆ ಚೆಂದದ ಗರಿ ವ್ಯಕ್ತಿಚಿತ್ರಣಗಳ ಕೃತಿ.

ಸಾಹಿತ್ಯ, ರಂಗಭೂಮಿ, ಜನಪದ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ, ಮಾಡುತ್ತಿರುವ, ಎಲೆಮರೆ ಕಾಯಿಗಳಂತೆ ಪ್ರಚಾರ ಪ್ರಸಿದ್ಧಿಗೆ ಹಾತೊರೆಯದ ಸಾಧಕರನ್ನು ಗುರುತಿಸಿ ಅವರ ಜೀವನ ಅನುಭವಗಳನ್ನು ನವಿಲಿನ ಚೆಂದದ ಗರಿಗಳಾಗಿ ತೆರೆದಿಟ್ಟಿದ್ದಾರೆ. ಮಾಜಿ ಜಿಲ್ಲಾ ಕ.ಸಾ.ಪ.ಅಧ್ಯಕ್ಷರು ಉದಯರವಿ ಬರೆದಂತೆ ತಮ್ಮ ಆತ್ಮರತಿಯೇ ಶ್ರೇಷ್ಠವೆಂದು ಭಾವಿಸುವ, ಭ್ರಮಿಸುವ ಇಂದಿನ ದಿನಮಾನಗಳಲ್ಲಿ ಬೇರೆಯವರ ಕುರಿತು ಬರೆಯುವ ಔದಾರ್ಯ ಒಬ್ಬ ಬರಹಗಾರನಿಗೆ ಇದ್ದರೆ ಅವರೊಳಗೆ ಮಾನವೀಯ ಮಿಡಿತ ಇರುತ್ತದೆ.. ಸಾವಿತ್ರಮ್ಮ ಓಂಕಾರ್ ರವರ ತಾಯ್ತನದ ಒಡಲೊಳಗೆ ಮನುಷ್ಯತ್ವದ ಮಿಡಿತವಿದೆ..

ಸುಶೀಲ ಸೋಮಶೇಖರ ಬರೆಯುತ್ತಾರೆ ನಾನೊಬ್ಬ ಸುಖಿಸಿದರೇನುಂಟು ಜಗದಲಿ ಅನ್ಯರ ಸಖ್ಯದಲ್ಲೂ ಭಾಗಿಯಾಗಬೇಕು.. ಸಾವಿತ್ರಮ್ಮ ಓಂಕಾರ್ ಅವರು ಆರಿಸಿಕೊಂಡಿರುವುದು ಕೇವಲ ಕಲ್ಪನಾ ವಿಲಾಸದ ಅಥವಾ ಮನೋರಂಜಕ ವಿಷಯಗಳನ್ನು ಅಲ್ಲ. ಸಾಹಿತ್ಯ, ಕಲೆ, ಸಂಶೋಧನೆ, ಸಮಾಜಸೇವೆ, ರಂಗಭೂಮಿ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರ ಸೃಜನಶೀಲ ಕ್ರಿಯಾ ವಿಶೇಷತೆಗಳ ಒಳನೋಟಗಳನ್ನು ತಮ್ಮ ಲೇಖನದಲ್ಲಿ ಪ್ರಾಮಾಣಿಕವಾಗಿ ಹಿಡಿದಿಟ್ಟಿದ್ದಾರೆ.

ಸುಂದರ ಕಂಗಳ ಚೆಲುವೆ
ನೋಡಿದೊಡನೆ ನಗು ಬೀರುವೆ
ದಂತ ಪಂಕ್ತಿಯೋ ದಾಳಿಂಬೆ ಹಣ್ಣು
ಕವನ ಬರೆಸುವ ಆತ್ಮೀಯತೆಯ ಹೆಣ್ಣು..
ವ್ಯಕ್ತಿ ಚಿತ್ರಗಳನ್ನು ನೀಡುವಾಗ ಸ್ವತ: ಕವಿಯಾಗಿ ಕೆಲವೇ ಸಾಲುಗಳಲ್ಲಿ ವ್ಯಕ್ತಿತ್ವವನ್ನು ಕಟ್ಟಿಕೊಡಲು ಪ್ರಯತ್ನಿಸುತ್ತಾರೆ. ಮೇಡಂ ಅವರ ಮನದ ಮಾತು ಭಾವುಕತೆಯಲ್ಲಿ ಅಭಿವ್ಯಕ್ತಗೊಂಡಿದೆ.
ಪ್ರಭುA ಪ್ರಾಣನಾಥಂ ವಿಭುಂ ವಿಶ್ವನಾಥಂ
ಜಗನ್ನಾಥ ನಾಥಂ ಸದಾನಂದ ಭಾಜಮ್
ಭವದ್ಭವ್ಯಭೂತೇಶ್ವರಂ ಭೂತನಾತಮ್
ಶಿವಂ ಶಂಕರಮ್ ಶಂಭು ಮೇಶಾನಮೆಡೆ…
ಶಿವನ ಆರಾಧನೆಯಲ್ಲಿ ಜೀವನ ಜೀವವನ್ನು ಗಂಧದAತೆ ತೇಯ್ದ ಶಿವಾಲಯದಲ್ಲಿ ಸತತ ೪೫ ವರ್ಷ ಸೇವೆಗೈದ ತಮ್ಮ ತಂದೆ ವೆ.ಗುರುನಂಜಯ್ಯ ಮತ್ತು ತಾಯಿ ಗಂಗಮ್ಮ ಇವರ ಜೀವನವನ್ನು ಕಣ್ಣಾರೆ ಕಂಡ ತಮಗೆ ಹತ್ತು ಹಲವು ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗಿದೆ ಎನ್ನುತ್ತಾರೆ. ಪ್ರತಿದಿನ ರುದ್ರಾಭಿಷೇಕ, ಅಷ್ಟೋತ್ತರ ನೋಡಿ ಬೆಳೆದಿದ್ದಾಗಿ ಹೇಳಿದ್ದಾರೆ. ಬಹುಶ: ಈ ದಿಶೆಯಲ್ಲಿ ಇವರ ಹೆಸರಿನ ಮುಂದೆ ಓಂಕಾರ್ ಇರಬಹುದೇನೋ ಎನಿಸುತ್ತದೆ. ಮೇಡಂ ಎಷ್ಟು ಭಾವುಕರಾಗಿ ಮಾಲೆ ರೀತಿ ಲೇಖನ ಸಿದ್ದಪಡಿಸಿ ಭಕ್ತಿಯಿಂದ ದೇವರಿಗೆ ಅರ್ಪಿಸಿದ್ದಾಗಿ ಹೇಳುತ್ತಾರೆಂದರೆ ಭಗವಾನ್ ಸ್ವರೂಪಿ ಸಾಹಿತ್ಯಕ್ಕೆ ಬಗೆಬಗೆಯ ಸಾಧಕರೆಂಬ ಪತ್ರೆ ಪುಷ್ಟಗಳಿಂದ ಮಾಲೆಯನ್ನು ಮಾಡಿ ಓಂ ಶಿವಾಯ ನಮ: ಎಂದಾಗ ಸೋಮನಾಥ ಎನ್ನುವ ಬಿಲ್ವಪತ್ರೆ, ಓಂ ಕೃಷ್ಣಾಯನಮ: ಎಂದಾಗ ಗೋವಿಂದಭಟ್ ಎನ್ನುವ ಪಾರಿಜಾತ, ಓಂ ಮಹಾಲಕ್ಷಿö್ಮಯೇ ನಮ: ಎಂದಾಗ ಪದ್ಮಮೂರ್ತಿ ಎನ್ನುವ ಗುಲಾಬಿಯನ್ನು, ಓಂ ಅನ್ನಪೂಣೇಶ್ವರಿಯೇ ನಮ: ಎಂದಾಗ ಕಾತ್ಯಾಯಿನಿ ಹಿರೇಮಠ ಎನ್ನುವ ಮಲ್ಲಿಗೆ, ಓಂ ಪಾರ್ವತಿಯೇ ನಮ: ಎಂದಾಗ ಮಾಲಾ ಚೆಲುವನಹಳ್ಳಿ ಎನ್ನುವ ಸೇವಂತಿಗೆಯ ಅರ್ಪಿಸಿ ಸಹಸ್ರಾರು ದೇವಾನುದೇವತೆಗಳಿಗೆ ಇಲ್ಲಿರುವ ಸುಂದರ ನವಿಲುಗಳ ಹೆಸರಲ್ಲಿ ಅರ್ಪಿಸಿರುವೆ ಎಂದು ಹೆಮ್ಮೆ ಪಡುತ್ತಾರೆ. ಕೃತಿಯಲ್ಲಿ ೭೪ ಚೆಂದದ ನವಿಲುಗರಿಗಳು ಮೇಡಂ ಲೇಖನಿಯಲ್ಲಿ ಗರಿಬಿಚ್ಚಿ ನಲಿದಿವೆ.

ಐದು ಕೃತಿಗಳನ್ನು ಪ್ರಕಟಿಸಿರುವ ಅರಸೀಕೆರೆ ಪದ್ಮಮೂರ್ತಿ, ಮೂರು ಕಥಾ ಸಂಕಲನ ಪ್ರಕಟಿಸಿರುವ ಡಾ.ಕೋಳ್ಚಪ್ಪೆ ಗೋವಿಂದಭಟ್, ಕೃಷಿ ಚಟುವಟಿಕೆಯೊಂದಿಗೆ ಕಾವ್ಯ ಕೃಷಿಯಲ್ಲಿ ಮೂರು ಕವನ ಸಂಕಲನ ಪ್ರಕಟಿಸಿರುವ ಮಾಲಾ ಚೆಲುವನಹಳ್ಳಿ ಇವರುಗಳದು ಸಾಹಿತ್ಯ ಕೃಷಿಯಾದರೆ ಅರಸೀಕೆರೆ ತಾ. ಮುರುಂಡಿ ಸರ್ಕಾರಿ ಪ್ರೌಢಶಾಲೆಯ ಆಂಗ್ಲಭಾಷಾ ಶಿಕ್ಷಕಿ ಕಾತ್ಯಾಯಿನಿ ತೆವರಿಮಠ್ ಚಿತ್ರಕಲೆಯಲ್ಲಿ ಹೈಯರ್ ಗ್ರೇಡ್ ಪಾಸ್, ಕವಿ ಕೊಟ್ರೇಶ ಉಪ್ಪಾರ ಹಿಂದಿ ಶಿಕ್ಷಕರು ಕನ್ನಡಕ್ಕೆ ೭೦ ಕೃತಿ ಕೊಟ್ಟವರು, ದ.ಕ. ಜಿಲ್ಲೆಯ ಮುಲ್ಕಿಯಲ್ಲಿ ಸೇವೆ ಸಲ್ಲಿಸುತ್ತಿರುವ ಕಾಮೇಶ್ವರಿ ಭಟ್ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪಡೆದ ಇವರ ಪರಿಚಯ ಮಾಡಿದ್ದಾರೆ. ವಿದ್ಯುತ್ ಇಲಾಖೆಯ ಉದ್ಯೋಗಿ ಚಂದ್ರು ಬಾಣಾವರ ಹವ್ಯಾಸಿ ಬರಹಗಾರ, ಸ್ಥಳೀಯ ಇತಿಹಾಸದ ಬಗ್ಗೆ ಸಂಶೋಧನೆ ನಡೆಸಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುತ್ತಿರುವ ಡಾ.ಹರೀಶ್ ಕುಮಾರ್ ಡಾಕ್ಟರೇಟ್ ಪಡೆದವರು, ಅರಸೀಕೆರೆ ರಾಯಲ್ ಪದವಿ ಕಾಲೇಜು ಪ್ರಾಂಶುಪಾಲರು ಕೆ.ಎಸ್.ಮಂಜುನಾಥ್ ಕನ್ನಡ ಸಾಹಿತ್ಯ ಕ್ಷೇತ್ರದ ಸಂಘಟನೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರು. ಹಾಸ್ಯ ಬರಹ ಬರೆಯುತ್ತಿರುವ ಅರಸೀಕರೆ ಬಿ.ಪರಮೇಶ್ ಉತ್ತಮ ನಿರೂಪಕರು. ಜನ ಮೆಚ್ಚಿದ ಶಿಕ್ಷಕಿ ಪ್ರಶಸ್ತಿ ಪಡೆದ ಶಫೀತಾ ಬೇಗಂ ಸ್ಕೌಟ್ ಅಂಡ್ ಗೈಡ್ಸ್ನಲ್ಲಿ ೧೫೦ ಮಕ್ಕಳಿಗೆ ರಾಜ್ಯ ಪುರಸ್ಕಾರ ೫ ಮಕ್ಕಳಿಗೆ ರಾಷ್ಟ್ರಪತಿ ಪದಕ ಪಡೆಯಲು ತರಬೇತಿಯನ್ನು ನೀಡಿದವರು.

ಸಾವಿತ್ರಮ್ಮ ಓಂಕಾರ್ ಅವರು ಸ್ವತ: ಶಿಕ್ಷಕಿ ಲೇಖಕಿಯಾಗಿ ಶಿಕ್ಷಣ ಕ್ಷೇತ್ರದಲ್ಲಿ ಸಮಾಜಮುಖಿ ಕರ‍್ಯ ನಿರ್ವಹಿಸುತ್ತಿರುವ ಶಿಕ್ಷಕ ವೃಂದ ಸೇವೆಯನ್ನು ಗುರುತಿಸಲು ಪ್ರಯತ್ನಿಸಿದ್ದಾರೆ. ಪ್ರಚಲಿತ ದಿನಗಳಲ್ಲಿ ದಿನಪತ್ರಿಕೆಗಳಲ್ಲಿ ಒಂದಲ್ಲ ಒಂದು ಕವನಗಳನ್ನು ಪ್ರಕಟಿಸುತ್ತಿರುವ ಮಧುಮಾಲತಿ ಬೇಲೂರು, ಬೋರೇಗೌಡ ಎ.ಹೆಚ್. ಹಾಗೂ ಹೆಚ್.ಎಸ್.ಪ್ರತಿಮಾ ಹಾಸನ್ ರವರ ಕವಿ ಕಾವ್ಯ ಕಿರುಪರಿಚಯ ಮಾಡಿದ್ದಾರೆ. ನನ್ನ (ಗೊರೂರು ಅನಂತರಾಜು) ಕಿರು ಸಾಹಿತ್ಯ ಪರಿಚಯವನ್ನು ಕೂಡ ಮೇಡಂ ಮಾಡಿದ್ದಾರೆ. ನನ್ನ ಹಲವಾರು ಪುಸ್ತಕಗಳನ್ನು ಓದಿ ಪತ್ರಿಕೆಗಳಿಗೆ ವಿಮರ್ಶೆ ಬರೆದಿದ್ದಾರೆ. ಒಟ್ಟಾರೆ ಈ ಕೃತಿಯಲ್ಲಿನ ೭೪ ವಿವಿಧ ಕ್ಷೇತ್ರದ ಸಾಧಕರ ಪರಿಚಯ ಮಾಲಿಕೆ ಈಗಾಗಲೇ ದಿನಪತ್ರಿಕೆಯಲ್ಲಿ ಸುಂದರ ನವಿಲಿಗೆ ಚೆಂದದ ಗರಿ ಶೀರ್ಷಿಕೆಯಡಿ ಬರೆದಿದ್ದು ಅದನ್ನೆಲ್ಲಾ ಕ್ರೂಢೀಕರಿಸಿ ಸರಿಸುಮಾರು ೩೦೦ ಪುಟಗಳ ಪುಸ್ತಕವನ್ನಾಗಿಸಿ ಇದೇ ತಿಂಗಳು (ಅಕ್ಟೋಬರ್) ಶನಿವಾರ ೧೧ನೇ ತಾರೀಖು ಅರಸೀಕೆರೆಯಲ್ಲಿ ಕೃತಿಯನ್ನು ಲೋಕಾರ್ಪಣೆ ಮಾಡುತ್ತಿದ್ದಾರೆ.

ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ೩ನೇ ಕ್ರಾಸ್, ಹಾಸನ.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group