Homeಲೇಖನಹೊಸ ಪುಸ್ತಕ ಓದು: ಶತಮಾನದ ಶಿವಯೋಗಿಯ ಸಮಗ್ರ ಜೀವನ ದರ್ಶನ

ಹೊಸ ಪುಸ್ತಕ ಓದು: ಶತಮಾನದ ಶಿವಯೋಗಿಯ ಸಮಗ್ರ ಜೀವನ ದರ್ಶನ

ಶತಮಾನದ ಶಿವಯೋಗಿಯ ಸಮಗ್ರ ಜೀವನ ದರ್ಶನ

  • ಪುಸ್ತಕದ ಹೆಸರು: ಶಿವಯೋಗಿ (ಪೂಜ್ಯ ಶ್ರೀ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳವರ ಕುರಿತ ಲೇಖನ ಸಂಗ್ರಹ)
  • ಪ್ರಧಾನ ಸಂಪಾದಕರು: ಶೈಲಜ ಸೋಮಣ್ಣ
  • ಸಂಪಾದಕರು: ಸಂತೋಷ ಹಾನಗಲ್ಲ ಮತ್ತು ಪಾಲನೇತ್ರ
  • ಪ್ರಕಾಶಕರು: ಶ್ರೀ ವಿ. ಸೋಮಣ್ಣ ಪ್ರತಿಷ್ಠಾನ, ಬೆಂಗಳೂರು
  • ಮುದ್ರಣ: ೨೦೨೨ ಪು. ೨೨೮
  • ಬೆಲೆ: ರೂ. ೨೦೦
  • ಸಂಪರ್ಕವಾಣಿ: ೯೧೧೩೦೬೪೬೦೭, ೯೬೦೬೬೬೬೮೪

ನಮ್ಮ ನಾಡಿನ ಅನುಭಾವಿ ಕವಿ ಮಧುರಚೆನ್ನರು ತಮ್ಮ ‘ನನ್ನ ನಲ್ಲ’ ಕವನ ಸಂಕಲನದ ಕೊನೆಯಲ್ಲಿ ಹೀಗೆ ಹೇಳುತ್ತಾರೆ-

ಅನ್ನಬಹುದೇನಯ್ಯ ಹಾಡು ಮುಗಿಯಿತ್ತೆಂದು
ಜನ್ಮದಾಕಾಶದಲ್ಲದರ ಬೇರು
‘ಕನ್ನಡಿಯೊಳೆಷ್ಟು ಹಿಡಿಸೀತು ಕನಕಾಚಲವು
ಕೊಡಕೆ ಹಿಡಿಸೀತೆಷ್ಟು ಕಡಲ ನೀರು.’

ಕನಕಾಚಲದಷ್ಟು ವಿಸ್ತಾರ, ಕಡಲಿನಷ್ಟು ವಿಶಾಲವಾಗಿರುವ ಪೂಜ್ಯ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳವರನ್ನು ಕುರಿತು ಎಷ್ಟು ಬರೆದರೂ ಕಡಿಮೆಯೇ ಎನ್ನುವುದಕ್ಕೆ ನೂತನವಾಗಿ ಪ್ರಕಟವಾಗಿರುವ ಪ್ರಸ್ತುತ ‘ಶಿವಯೋಗಿ’ ಕೃತಿ ಸಾಕ್ಷಿಯಾಗಿದೆ.

ಕರ್ನಾಟಕ ರತ್ನ, ನಡೆದಾಡುವ ದೇವರು, ಸುಳಿದಾಡುವ ಧರ್ಮ, ಯುಗದ ಚೇತನ, ತ್ರಿವಿಧ ದಾಸೋಹಿ, ಈ ಶತಮಾನದ ಅಚ್ಚರಿ, ಕಾರುಣ್ಯ ನಿಧಿ, ಲೋಕಜಂಗಮ ಮೊದಲಾದ ಶಬ್ದಗಳನ್ನು ಮೀರಿ ನಿಂತ ಮಹಾಚೇತನ ಸಿದ್ಧಗಂಗೆಯ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳವರು ಲಿಂಗೈಕ್ಯರಾದ ನಂತರ ನಮ್ಮ ನಾಡಿನ ಅನೇಕ ಚಿಂತಕರು, ವಿದ್ವಾಂಸರು, ಶ್ರೀಗಳನ್ನು ಹತ್ತಿರದಿಂದ ಕಂಡವರು ಬರೆದ ಬರಹಗಳನ್ನು ‘ಶಿವಯೋಗಿ’ ಎಂಬ ಈ ಕೃತಿಯಲ್ಲಿ ಸಂಪಾದಿಸಿ ಪ್ರಕಟಿಸಿದ್ದು ತುಂಬ ಔಚಿತ್ಯಪೂರ್ಣವಾಗಿದೆ.

ಅನ್ನದಾಸೋಹದ ಮೂಲಕ ಲಕ್ಷಾಂತರ ಬಡಮಕ್ಕಳ ಬಾಳಿಗೆ ಬೆಳಕು ನೀಡಿದ ಶ್ರೀ ಶಿವಕುಮಾರ ಮಹಾಸ್ವಾಮಿಗಳವರು ೧೧೧ ವರ್ಷಗಳ ಕಾಲ ಲಿಂಗವಿಡಿದ ಲಿಂಗಸಿದ್ಧಿಯ ಬದುಕನ್ನು ಬದುಕಿದವರು. ಅವರ ಜೀವನವೆಲ್ಲವೂ ಯೋಗಮಯವಾಗಿತ್ತು. ಅರವಿಂದರು ಹೇಳುವಂತೆ “ಆಲ್ ಲೈಫ್ ಇಸ್ ಯೋಗ” ಬದುಕೆಲ್ಲವೂ ಯೋಗವಾಗಿತ್ತು. ಅಂತೆಯೇ ಅವರು ಶಿವಯೋಗಿ ಎಂಬ ಅಭಿಧಾನಕ್ಕೆ  ಪಾತ್ರರಾದವರು.

ಪ್ರಧಾನ ಸಂಪಾದಕರಾದ ಶೈಲಜ ಶಿವಣ್ಣ ಅವರು ಮತ್ತು ಫಾಲನೇತ್ರ ಅವರು ಈ ಎಲ್ಲ ಲೇಖನಗಳನ್ನು ಅತ್ಯಂತ ವ್ಯವಸ್ಥಿತವಾಗಿ ಸಂಗ್ರಹಿಸಿ ಸಂಪಾದಿಸಿ ಕೊಟ್ಟಿದ್ದಾರೆ. ಒಟ್ಟು ೫೦ ಲೇಖನಗಳು ಇಲ್ಲಿವೆ. ಈ ಕೃತಿಯ ಪ್ರಕಟಣೆಯ ಸಂದರ್ಭವನ್ನು ಶೈಲಜ ಸೋಮಣ್ಣ ಅವರು ಹೀಗೆ ಸ್ಮರಿಸಿಕೊಳ್ಳುತ್ತಾರೆ- “ಶ್ರೀ ಸಿದ್ಧಗಂಗಾ ಮಠ ಮತ್ತು ಪರಮಪೂಜ್ಯ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳವರೊಂದಿಗೆ ನಮ್ಮ ಕುಟುಂಬ ಭಕ್ತಿ ಗೌರವವನ್ನಿಟ್ಟುಕೊಂಡು ಬಂದಿದೆ. ನಮ್ಮ ಪತಿಯವರಾ ವಿ. ಸೋಮಣ್ಣ ಅವರ ಸಾರ್ವಜನಿಕ ಕ್ಷೇತ್ರದಲ್ಲಿ ಒಂದಿಷ್ಟು ಸೇವೆ ಸಲ್ಲಿಸಲು ಅವರು ನೀಡಿದ ಮಾರ್ಗದರ್ಶನ ಮತ್ತು ಸಲಹೆಗಳನ್ನು ಮರೆಯುವಂತಿಲ್ಲ. ಸೋಮಣ್ಣನವರ ಸಂಕಷ್ಟ ಸಮಯದಲ್ಲಿ ಧೈರ್ಯ ತುಂಬಿದ್ದಾರೆ. ಸೇವಾ ಕಾರ್ಯಗಳಿಗೆ ಬೆನ್ನು ತಟ್ಟಿ ಆಶೀರ್ವದಿಸಿದ್ದಾರೆ. ಶ್ರೀಮಠದಲ್ಲಿನ ಸೇವಾ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ. ಇದು ನಮ್ಮ ಕುಟುಂಬದ ಪುಣ್ಯವೆಂದು ಭಾವಿಸಿದ್ದೇನೆ. ಪೂಜ್ಯ ಶ್ರೀಗಳವರ ೧೧೫ನೇ ಜಯಂತಿ ಶುಭ ಸಂದರ್ಭದಲ್ಲಿ ವಿ. ಸೋಮಣ್ಣ ಪ್ರತಿಷ್ಠಾನದ ವತಿಯಿಂದ ಪೂಜ್ಯರ ನೆನಪಿನಲ್ಲಿ ‘ಶಿವಯೋಗಿ’ ಕೃತಿಯೊಂದನ್ನು ಹೊರತರಬೇಕೆಂದು ನಿರ್ಧರಿಸಿದಾಗ ನಾಡಿನ ಕನ್ನಡ ದಿನಪತ್ರಿಕೆಗಳಲ್ಲಿ ಮತ್ತು ವಿಶೇಷ ಸಂದರ್ಭದಲ್ಲಿ ಪ್ರಕಟವಾದ ಲೇಖನಗಳನ್ನು ಒಳಗೊಂಡ ‘ಶಿವಯೋಗ’ ಕೃತಿಗೆ ಲೇಖನಗಳನ್ನು ಬಳಸಿಕೊಂಡಿದ್ದೇವೆ”.

ಶ್ರೀಮತಿ ಶೈಲಜ ಶಿವಣ್ಣ ಅವರು ‘ಶಿವಯೋಗಿ’ ಎಂಬ ಹೆಸರನ್ನು ಕೃತಿಗೆ ಇಟ್ಟದ್ದು ತುಂಬ ಔಚಿತ್ಯಪೂರ್ಣವಾಗಿದೆ. ಯಾಕೆಂದರೆ ಶಿವಯೋಗಿಯ ಸಕಲ ಸಲ್ಲಕ್ಷಣಗಳು ಶ್ರೀಗಳವರಲ್ಲಿದ್ದವು. ಬಾಲಲೀಲಾ ಮಹಾಂತ ಶಿವಯೋಗಿಗಳು ಒಂದು ಪದ್ಯದಲ್ಲಿ ಶಿವಯೋಗಿಯ ಪರಿಪೂರ್ಣ ಲಕ್ಷಣಗಳನ್ನು ಹೀಗೆ ಹೇಳುತ್ತಾರೆ-

ಶಿವಯೋಗಿ ಸಾಕ್ಷಾತ್ ಶಿವನಾದ ಕಾರಣದಿ
ಅವನಿಭೋಗಗಳವಗೆ  ತೃಣಗಾಂಬುವು  ಪ
ಏನು ಮೆರೆಸಿದರೇನು ಏನು ಹೊದಿಸಿದರೇನು
ಮಾನವರಿಗಾಪುಣ್ಯ ಫಲಗಳೆಂದು
ತಾನು ತಾನಾದ ಶಿವಜ್ಞಾನಿಯಾನಂದದಿಂ
ಮೌನನಾಗಿರುತಿಹನು ಮರ್ತ್ಯದೊಳಗೆ  ೧
ಲಿಂಗಭೋಗಗಳ ಶಿವಲಿಂಗಕೆ ಸಮರ್ಪಿಸುವ
ಹಂಗಿನ ಭೋಗಗಳ ಶಿವಗೆ ಕೊಡೆನು
ಮಂಗಳಾತ್ಮಕವಾಗಿ ಭೃಂಗಕುಸುಮನ್ಯಾಯ
ಹ್ಯಾಂಗೊ ಹಾಂಗೆ ಜಗದಿ ಸುಲಭನಾಗಿರುವ  ೨
ಬಡ ಭಕ್ತಜನರಿಗೆ ಬಡವನಾಗಿರುತಿಹನು
ಕಡು ಧನಿಕರುಗಳಿಗೆ ಧನಿಕನಹನು
ಪೊಡವಿ ಭಕ್ತರ ಭೋಗದೊಡನಿರ್ದು ಇಲ್ದಂತೆ
ಮೃಡ ಮಹಂತಲಿಂಗ ತಾ ಕಡೆಗಿರುವನು  ೩

ಮೇಲಿನ ತತ್ವಪದದ ಆಶಯಕ್ಕೆ ತಕ್ಕಂತೆ ತಮ್ಮ ಸಮಸ್ತ ಬದುಕನ್ನು ಸಾಗಿಸಿದವರು ಶ್ರೀ ಶಿವಕುಮಾರ ಮಹಾಸ್ವಾಮಿಗಳವರು. ಇಂಥ ಶಿವಕುಮಾರ ಶಿವಯೋಗಿಗಳವರ ಕುರಿತು ಒಂದು ಚರಿತ್ರಾರ್ಹವಾದ ಕೃತಿಯೊಂದನ್ನು ಪ್ರಕಟಿಸಿದ್ದು ಅತ್ಯಂತ ಸಂತಸದ ಸಂಗತಿಯಾಗಿದೆ. ಶ್ರೀಮತಿ ಶೈಲಜ ಶಿವಣ್ಣ ಅವರು ಶ್ರೀಗಳ ಮೇಲೆ ಇಟ್ಟ ಭಕ್ತಿ ಕಾರಣವಾಗಿ ಇಂಥದೊಂದು ಚಿರಕಾಲ ಉಳಿಯುವ ಕೃತಿ ರೂಪುಗೊಂಡಿದೆ.

ಇಲ್ಲಿಯ ಎಲ್ಲ ಲೇಖನಗಳಲ್ಲಿ ಶ್ರೀಗಳ ಘನ ವ್ಯಕ್ತಿತ್ವ ಅತ್ಯಂತ ಹೃದಯಸ್ಪರ್ಶಿಯಾಗಿ ಮೂಡಿಬಂದಿದೆ. ಶ್ರೀಗಳೊಂದಿಗೆ ತಮ್ಮ ಆತ್ಮೀಯ ಒಡನಾಟದ ಕ್ಷಣಗಳನ್ನು ಎಲ್ಲರೂ ತುಂಬ ಆಪ್ತವಾಗಿ ಹಂಚಿಕೊಂಡಿದ್ದಾರೆ. ಸಿರಿಗೆರೆ ತರಳಬಾಳು ಜಗದ್ಗುರುಗಳು ‘ಕಾಯಕದ ಕರ್ಮಯೋಗಿ’ ಎಂದು ಕರೆದರೆ, ಆದಿಚುಂಚನಗಿರಿ ಶ್ರೀಗಳು ‘ನಾಡು ಸದಾ ನೆನಪಿಡುವ ನಿಷ್ಕಾಮ ಯೋಗಿ’ ಎಂದು ಭಾವಿಸಿದ್ದಾರೆ. ಮುಂಡರಗಿ, ಭಾಲ್ಕಿ, ನಿಡುಮಾಮಿಡಿ, ಸಾಣೇಹಳ್ಳಿ, ಇಳಕಲ್ಲ ಶ್ರೀಗಳು ಬರೆದ ಲೇಖನಗಳು ತುಂಬ ಮೌಲಿಕವಾಗಿವೆ.

ನಮ್ಮ ನಾಡಿನ ವಿದ್ವಜ್ಜನರಾದ ಜಿ. ಎಸ್. ಶಿವರುದ್ರಪ್ಪ, ಗೊ.ರು.ಚನ್ನಬಸಪ್ಪ, ಮಲ್ಲೇಪುರಂ ಜಿ. ವೆಂಕಟೇಶ, ಪಾಟೀಲ ಪುಟಪ್ಪ, ಸಾ. ಶಿ. ಮರುಳಯ್ಯ, ದಲಿತ ಕವಿ ಸಿದ್ಧಲಿಂಗಯ್ಯ, ಎಸ್. ವಿದ್ಯಾಶಂಕರ, ಸಿ. ಸೋಮಶೇಖರ, ಎಸ್. ಷಡಕ್ಷರಿ ಮೊದಲಾದವರು ಬರೆದ ಲೇಖನಗಳು ಶ್ರೀಗಳ ಲೋಕಕಲ್ಯಾಣ ಕಾರ‍್ಯಗಳ ಸಮಗ್ರ ಚಿತ್ರಣವನ್ನು ನೀಡುತ್ತವೆ. ರಾಜಕೀಯ ಮುತ್ಸದ್ಧಿಗಳಾದ ಎಸ್. ನಿಜಲಿಂಗಪ್ಪ, ನ್ಯಾಯವಾದಿಗಳಾದ ಶಿವರಾಜ ಪಾಟೀಲ ಮೊದಲಾದ ಹಿರಿಯರ ಲೇಖನಗಳು ಶ್ರೀಗಳ ಬಹುಮುಖ ವ್ಯಕ್ತಿತ್ವವನ್ನು ನಿರೂಪಿಸುತ್ತವೆ.

ಒಟ್ಟಾರೆ ಇಲ್ಲಿಯ ಎಲ್ಲ ಲೇಖನಗಳು ಪೂಜ್ಯ ಶ್ರೀಗಳವರ ಲೋಕಮಹಾಮಣಿಹದ ವಿಸ್ತಾರದ ಭಿತ್ತಿಯನ್ನು ಪರಿಚಯಿಸುತ್ತವೆ. ಸಂಪಾದಕರ ಶ್ರಮ-ಶ್ರದ್ಧೆಗಳು ಇಲ್ಲಿ ಸಾರ್ಥಕ್ಯಗೊಂಡಿವೆ. ಶ್ರೀಮತಿ ಶೈಲಜ ಸೋಮಣ್ಣ ಅವರು ಪತಿಯ ರಾಜಕೀಯ ಚಟುವಟಿಕೆಗಳಿಗೆ ಪೂರಕವಾಗಿ ಸಾಹಿತ್ಯ-ಸಂಸ್ಕೃತಿಗಳ ಪುನರುತ್ಥಾನಕ್ಕಾಗಿ  ವಿ. ಸೋಮಣ್ಣ ಪ್ರತಿಷ್ಠಾನದ ಮೂಲಕ ಸದಾಕಾಲ ಪರಿಶ್ರಮಿಸುತ್ತಿರುವುದು ಅವರ ಕ್ರಿಯಾಶೀಲ ವ್ಯಕ್ತಿತ್ವಕ್ಕೆ ನಿದರ್ಶನವಾಗಿದೆ. ಸಾಮಾನ್ಯರೊಂದಿಗೆ ಸಾಮಾನ್ಯರಾಗಿ ಜನಸೇವಾಕಾರ್ಯಗಳಲ್ಲಿ ತಮ್ಮನ್ನು ಸರ್ವಾರ್ಪಣ ಮನೋಭಾವದಿಂದ ಸಮರ್ಪಿಸಿಕೊಂಡು ದುಡಿಯುತ್ತಿರುವ ಶ್ರೀಮತಿ ಶೈಲಜ ಸೋಮಣ್ಣ ಅವರ ಕುಟುಂಬದ ಮೇಲೆ ಸಿದ್ಧಗಂಗೆಯ ಸಿದ್ಧಪುರುಷ ಶಿವಯೋಗಿ ಶಿವಕುಮಾರ ಮಹಾಸ್ವಾಮಿಗಳವರ ಕೃಪಾಶೀರ್ವಾದ ಸದಾಕಾಲ ಇರುತ್ತದೆಂದು ನಾನು ಭಾವಿಸಿದ್ದೇನೆ.

ಶ್ರೀಮತಿ ಶೈಲಜ ಸೋಮಣ್ಣ ಅವರೊಂದಿಗೆ ಈ ಲೇಖನಗಳನ್ನು ಸಂಗ್ರಹಿಸಿ, ಪರಿಷ್ಕರಿಸಿ, ಸಂಪಾದಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವರು ಶ್ರೀ ಪಾಲನೇತ್ರ ಅವರು. ಆತ್ಮೀಯರ ಪಾಲಿಗೆ ಪಾಲಣ್ಣ ಎಂದೇ ಖ್ಯಾತರಾಗಿರುವ ಅವರು ಕನ್ನಡ ಚಳುವಳಿ ಮೂಲಕ ಮಾಡುತ್ತಿರುವ ಸಾಹಿತ್ಯಿಕ-ಸಾಂಸ್ಕೃತಿಕ ಸೇವೆ ಅನನ್ಯವಾದುದು. ಶ್ರೀಗಳ ಪರಮಾಪ್ತರಲ್ಲಿ ಒಬ್ಬರಾಗಿದ್ದ ಪಾಲನೇತ್ರ ಅವರು ಈ ಕೃತಿ ಪ್ರಕಟನಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಸಂತೋಷದ ವಿಷಯ. ಇವರೊಂದಿಗೆ ಸಂತೋಷ ಹಾನಗಲ್ಲ ಅವರ ಸೇವೆಯೂ ಸೇರಿರುವುದು ಕೃತಿಯ ಸೌಂದರ್ಯಕ್ಕೆ ಮೆರಗು ಬಂದಂತಾಗಿದೆ.

ಒಟ್ಟಾರೆ, ಶ್ರೀಗಳ ಘನ ವ್ಯಕ್ತಿತ್ವವನ್ನು ನಾಡಿಗೆ ಪರಿಚಯಿಸುವ ‘ಶಿವಯೋಗಿ’ ಕೃತಿ ಒಂದು ಪವಿತ್ರ ಗ್ರಂಥವಾಗಿದೆ ಎಂದು ನಾನು ಭಾವಿಸಿದ್ದೇನೆ.


ಪ್ರಕಾಶ ಗಿರಿಮಲ್ಲನವರ
ಬೆಳಗಾವಿ
ಮೊ: ೯೯೦೨೧೩೦೦೪೧

RELATED ARTICLES

Most Popular

error: Content is protected !!
Join WhatsApp Group