ಹುಲುಸಾದ ಭತ್ತದ ಬೆಳೆ, ಇನ್ನೇನು ಕಟಾವಿಗೆ ತಯಾರಾಗಿದ್ದಾರೆ ಟೆರ್ರೇಸ್ ನಲ್ಲಿ ಬತ್ತ ಬೆಳೆದ ಮಂಗಳೂರಿನ ಕೃಷಿಕ ಶ್ರೀಯುತ ಪಡ್ದ0ಬೈಲು ಕೃಷ್ಣಪ್ಪ ಗೌಡ ದಂಪತಿಗಳು.
ಮರೋಳಿ ಸೂರ್ಯನಾರಾಯಣ ದೇಗುಲದ ಸನಿಹದ ಲಾಲ್ ಬಹಾದ್ದೂರ್ ಶಾಸ್ತ್ರಿ ಬಡಾವಣೆಯ ನಿವಾಸಿ ನಿವೃತ್ತ ಸರಕಾರಿ ನೌಕರ ಇವರು. ಇರುವುದು ಪುಟ್ಟ 5 ಸೆಂಟ್ಸ್ ಗೂ ಕಡಿಮೆ ಜಮೀನಿನಲ್ಲಿ ಒಂದು ಸಣ್ಣ ಟೆರ್ರೇಸ್ ಮನೆ 800 ಚದರ ಅಡಿ ವಿಸ್ತೀರ್ಣ ಕೂಡ ಇಲ್ಲದ ತಾರಸಿಯಲ್ಲಿ ಅವರು ಅದ್ಭುತ ಹಸಿರು ಕ್ರಾಂತಿ ಮಾಡಿದ್ದಾರೆ.
ಅವರು ತಮ್ಮ ತಾರಸಿ ಗದ್ದೆಯಲ್ಲಿ ಸರಿ ಸುಮಾರು 50 ಕೆಜಿ ಬತ್ತ ಬೆಳೆದು ದಾಖಲೆ ಮಾಡಿದ್ದಾರೆ ಅಂದರೆ ನೀವು ನಂಬಲೆ ಬೇಕು. ವರ್ಷದಲ್ಲಿ ಒಂದು ಬಾರಿ ಮಾತ್ರ ತಾರಸಿಯಲ್ಲಿ ಬತ್ತ ಬೆಳೆಯುವ ಇವರ ಪುಟ್ಟ ತೋಟದಲ್ಲಿ ಏನು ತರಕಾರಿ,ಹಣ್ಣುಗಳು ಇಲ್ಲ ಅಂತ ಕೇಳಬೇಡಿ. ಅಂತಹ ಹಸಿರು ಬೆರಳಿನ ಮಾಂತ್ರಿಕ ಇವರು. ಅನೇಕ ಪ್ರಶಸ್ತಿಗೆ ಭಾಜನರಾದ ಗೌಡರಿಗೆ ದಿನದ ತುಂಬೆಲ್ಲ ತಾನು ನೆಟ್ಟು ಬೆಳೆಸಿದ ಗಿಡಗಳ ಆರೈಕೆ.
ಈಗ ಬೆಳೆದ ಬತ್ತ ತನ್ನ ನೆರೆಕೆರೆಯ ಮಂದಿಗೆ ‘ಹೊಸತು’ ಆಚರಿಸಲು ಪುಗಸಟ್ಟೆ ನೀಡಿ ಸಂತಸ ಪಡುತ್ತಾರೆ. ಮಾತ್ರವಲ್ಲ ಇವರು ಬೆಳೆಯುವ ವಿವಿಧ ತರಕಾರಿ,ಹಣ್ಣು ಇತ್ಯಾದಿ ನೆರೆಮನೆಯವರ ಜತೆ ಸುಸ್ತಾಗಿ ಹಂಚಿ ತಿನ್ನುತ್ತಾರೆ.ಅವರು ಇಷ್ಟರಲ್ಲೇ ಮುದ್ರಣ,ದ್ರಶ್ಯ ಮಾಧ್ಯಮಗಳಲ್ಲಿ ಅವರು ಜನಜನಿತರಾಗಿ ಬಿಟ್ಟಿದ್ದಾರೆ. ಸಂದರ್ಶಕರ ದಂಡೇ ಅವರ ತೋಟಕ್ಕೆ ದಿನವೂ ಲಗ್ಗೆ ಇಡುತ್ತದೆ.
ಬಂದವರಿಗೆಲ್ಲ ಗೌಡರು ಸಂತೋಷದಿಂದ ಬರಮಾಡಿ ತನ್ನ ತಾರಸಿ ತೋಟದ ಬಗ್ಗೆ ಮಾಹಿತಿ ನೀಡಿ ಮಾರ್ಗ ದರ್ಶನ ಮಾಡುತ್ತಾರೆ.ಹಲವರಿಗೆ ಅವರ ತೋಟ ಸ್ಫೂರ್ತಿ ನೀಡಿದೆ. ಇವರ ಸ್ಫೂರ್ತಿಯಿಂದಾಗಿ ಅದೆಷ್ಟೋ ಮಂದಿ ತಮ್ಮ ಮನೆಯ ತಾರಸಿಯಲ್ಲಿ ತರಕಾರಿ, ಹಣ್ಣು ಬೆಳೆಯಲು ಶುರುವಿಟ್ಟು ಕೊಂಡಿದ್ದಾರೆ.
ಸಂಪರ್ಕ: 9342990975
ಬಿ ನರಸಿಂಗ ರಾವ್ ,ಕಾಸರಗೋಡು