ಪ್ರಾಥಮಿಕ ಶಿಕ್ಷಣ ಮಾತ್ರ ಪಡೆದು ಒಂದು ವಿಶ್ವವಿದ್ಯಾಲಯ ಮಾಡುವಷ್ಟು ಕೆಲಸವನ್ನು ಒಬ್ಬ ಹಲಸಂಗಿಯ ರೇವಪ್ಪ ಕಾಪಸೆ ಮಾಡಿದರು. ಹಲಸಂಗಿ ಗೆಳೆಯರ ಗುಂಪು ಇದರಲ್ಲಿ ಮಧುರ ಚೆನ್ನರು ಧೂಲಾ ಸಾಹೇಬ ಸಿಂಪಿ ಲಿಂಗಣ್ಣ ಮತ್ತು ರೇವಪ್ಪ ಕಾಪಸೆ ಅವರು. ಈ ಹಲಸಂಗಿಯ ಗೆಳೆಯರ ಗುಂಪು ಬೇಂದ್ರೆಯವರಿಗೆ ಧಾರವಾಡದ ಗೆಳೆಯರ ಗುಂಪು ಹುಟ್ಟು ಹಾಕಲು ಪ್ರೇರಣೆ ನೀಡಿದೆ.
ಹಲಸಂಗಿ ಗೆಳೆಯರಲ್ಲಿ ಎಲ್ಲರಿಗಿಂತ ಕಿರಿಯರು ಕಾಪಸೆ ರೇವಪ್ಪ. ಬಾಲ್ಯದಿಂದಲೇ ಕವಿತೆ ಬರೆಯಲು ಆರಂಭಿಸಿದ್ದ ಅವರು, ಮಧುರಚನ್ನರ ಕಾವ್ಯ ಅಭಿಮಾನಿಯಾಗಿದ್ದರು. ಅನಂತರ ಅವರು ಜಾನಪದದಂಥ ಕ್ಷೇತ್ರದಲ್ಲಿ ಮಾಡಿದ ಕೆಲಸ ದೊಡ್ಡದು.
*ಸಾಹಿತ್ಯ ಕೊಡುಗೆ*
ನಂದನವನ, ಮಲ್ಲಿಗೆ ದಂಡೆ, ಸನ್ಯಾಸಿ ಅವರ ಪ್ರಮುಖ ಕೃತಿಗಳು..
ಜಾನಪದ ಹಾಡುಗಳ ಸಂಗ್ರಹ ಹಲಸಂಗಿ ಗೆಳೆಯರಲ್ಲಿ ಒಬ್ಬರಾಗಿದ್ದ ಕಾಪಸೆ ರೇವಪ್ಪ ಅವರು ಸಂಪಾದಿಸಿದ ಕೃತಿ ಇದು. ಮಧುರಚನ್ನರ ಮುನ್ನುಡಿಯೊಂದಿಗೆ ಇರುವುದು ವಿಶೇಷ. ಈ ಹಾಡುಗಳನ್ನು ಸಂಗ್ರಹಿಸಿ ಕೃತಿಯನ್ನು ರೂಪಿಸುವಲ್ಲಿ ಕಾಪಸೆ ರೇವಪ್ಪನವರ ಶ್ರಮದ ಬಗ್ಗೆ ಮಧುರಚನ್ನರು ವಿಶೇಷವಾಗಿ ಪ್ರಸ್ತಾಪಿಸಿದ್ದಾರೆ ತಮ್ಮ ಮುನ್ನುಡಿಯಲ್ಲಿ. ಇದೊಂದು ಅಪರೂಪದ ಜಾನಪದ ಹಾಡುಗಳ ಸಂಗ್ರಹವೆಂಬುದರಲ್ಲಿ ಎರಡು ಮಾತಿಲ್ಲ.
ರೇವಪ್ಪ ಕಾಪಸೆ (ಕಾಪಸೆ ರೇವಪ್ಪ) ಅವರು ಕನ್ನಡ ಸಾಹಿತ್ಯದ ಪ್ರಸಿದ್ಧ ‘ಹಲಸಂಗಿ ಗೆಳೆಯರ’ ಗುಂಪಿನಲ್ಲಿದ್ದ ಕಿರಿಯ ಕವಿ ಮತ್ತು ಜನಪದ ವಿಶೇಷ ಕೊಡುಗೆ ನೀಡಿದ್ದಾರೆ.
ಗೆಳೆಯರಲ್ಲಿ ಒಬ್ಬರು, ಕವಿ ಮತ್ತು ಜನಪದ ಸಾಹಿತ್ಯದ ಸಂಶೋಧಕ.ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಶ್ರೇಷ್ಠ ಜಾನಪದ ತಜ್ಞ ಕವಿ ರೇವಪ್ಪ ಕಾಪಸೆ. ಅವರು ಬರೆದಿರುವ ಒಂದು ಕವನವನ್ನು ಇಲ್ಲಿ ಸಾದರ ಪಡಿಸುತ್ತೇನೆ.
ಗಂಡ ಹೆಂಡತಿಯರ ಮಧ್ಯದ ಸಂಭಾಷಣೆ ಸಂವಾದವನ್ನು ಜನಪದ ಗತ್ತಿನಲ್ಲಿ ಹೆಚ್ಚು ಹೆಚ್ಚು ಪರಿಣಾಮಕಾರಿಯಾಗಿ ಕಾವ್ಯದ ರೂಪಕ್ಕೆ ಇಳಿಸಿದ ಕವಿ ರೇವಪ್ಪ ಕಾಪಸೆ.
ನೂಲೊಲ್ಲ್ಯಾಕ ಚೆನ್ನೀ?
ಗಂಡ:
ನೂಲಲ್ಯಾಕ ಚೆನ್ನೀ!
ನೂಲಲ್ಯಾಕ ಚೆನ್ನೀ!
ಹೆಂಡತಿ:
ರಾಟಲಿಲ್ಲೋ ಜಾಣಾ!
ರಾಟಲಿಲ್ಲೋ ಜಾಣಾ!
ಕತೆಗಾರ:
ಮನಿಯಾನ ಬಂಡೀ ಮುರಿಸಿ
ಮನಿಯಾನ ಬಂಡೀ ಮುರಿಸಿ
ರಾಟೀ ಮಾಡಿಸಿ ಕೊಟ್ಟಾ
ರಾಟೀ ಮಾಡಿಸಿ ಕೊಟ್ಟಾ
ಗಂಡ:
ನೂಲಲ್ಯಾಕ ಚೆನ್ನೀ!
ನೂಲಲ್ಯಾಕ ಚೆನ್ನೀ!
ಹೆಂಡತಿ:
ಕದರಿಲ್ಲೊ ಜಾಣಾ!
ಕದರಿಲ್ಲೊ ಜಾಣಾ!
ಕತೆಗಾರ:
ಕೈಯಾನ ಗುದ್ದಲಿ ಮುರಿಸಿ
ಕೈಯಾನ ಗುದ್ದೆಲಿ ಮುರಿಸಿ
ಕದರ ಮಡಿಸಿ ಕೊಟ್ಟಾ
ಕದರ ಮಾಡಿಸಿ ಕೊಟ್ಟಾ
ಗಂಡ:
ನೂಲಲ್ಯಾಕ ಚೆನ್ನೀ!
ನೂಲಲ್ಯಾಕ ಚೆನ್ನೀ!
ಹೆಂಡತಿ:
ಚಿಲ್ಲಿಲ್ಲೊ ಜಾಣಾ!
ಚಿಲ್ಲಿಲ್ಲೊ ಜಾಣಾ!
ಕತೆಗಾರ:
ಮನಿಯಾನ ಕೋಣವು ಕಡಿಸಿ
ಮನಿಯಾನ ಕೋಣವು ಕಡಿಸಿ
ಚಿಲ್ಲು ಮಾಡಿಸಿಕೊಟ್ಟಾ
ಚಿಲ್ಲು ಮಾಡಿಸಿಕೊಟ್ಟಾ
ಗಂಡ:
ನೂಲಲ್ಯಾಕ ಚೆನ್ನೀ!
ನೂಲಲ್ಯಾಕ ಚೆನ್ನೀ!
ಹೆಂಡತಿ:
ಹಮ್ಮಿಗಿಲ್ಲಲೊ ಜಾಣಾ!
ಹಮ್ಮಿಗಿಲ್ಲಲೊ ಜಾಣಾ!
ಕತೆಗಾರ:
ನಡುವಿನ ಉಡದಾರ ಕಡಿದು
ನಡುವಿನ ಉಡದಾರ ಕಡಿದು
ಹಮ್ಮಿಗಿ ಮಾಡಿಸಿಕೊಟ್ಟಾ
ಹಮ್ಮಿಗಿ ಮಾಡಿಸಿಕೊಟ್ಟಾ
ಗಂಡ:
ನೂಲಲ್ಯಾಕ ಚೆನ್ನೀ!
ನೂಲಲ್ಯಾಕ ಚೆನ್ನೀ!
ಹೆಂಡತಿ:
ಕಟ್ಟಿ ಇಲ್ಲಲೊ ಜಾಣಾ
ಕಟ್ಟಿ ಇಲ್ಲಲೊ ಜಾಣಾ
ಕತೆಗಾರ:
ಊರಾನ ವಡ್ಡರ ಕರಿಸಿ
ಊರಾನ ವಡ್ಡರ ಕರಿಸಿ
ಕಟ್ಟಿ ಕಟ್ಟಿಸಿಕೊಟ್ಟಾ
ಕಟ್ಟಿ ಕಟ್ಟಸಿಕೊಟ್ಟಾ
ಗಂಡ:
ನೊಲಲ್ಯಾಕ ಚೆನ್ನೀ!
ನೂಲಲ್ಯಾಕ ಚಿನ್ನೀ!
ಹೆಂಡತಿ:
ಗೆಳತ್ಯಾರಿಲ್ಲೊ ಜಾಣಾ!
ಗೆಳತ್ಯಾರಿಲ್ಲೊ ಜಾಣಾ!
ಕತೆಗಾರ:
ಓಣ್ಯಾಗಿನವರ ಕರಿಸಿ
ಓಣ್ಯಾಗಿನವರ ಕರಿಸಿ
ಗೆಳತ್ಯಾರ ಕೂಡಿಸಿಕೊಟ್ಟಾ
ಗೆಳತ್ಯಾರ ಕೂಡಿಸಿಕೊಟ್ಟಾ
ಗಂಡ:
ನೂಲಲ್ಯಾಕ ಚೆನ್ನೀ!
ನೂಲಲ್ಯಾಕ ಚೆನ್ನೀ!
ಹೆಂಡತಿ:
ಗುಗ್ಗರಿಲ್ಲೊ ಜಾಣಾ!
ಗುಗ್ಗರಿಲ್ಲೊ ಜಾಣಾ! ,
ಕತೆಗಾರ:
ಗೋದಿ ಕಡ್ಲಿ ತರಿಸಿ
ಗೋದಿ ಕಡ್ಲಿ ತರಿಸಿ
ಗುಗ್ಗರಿ ಹಾಕಿಸಿಕೊಟ್ಟಾ
ಗುಗ್ಗರಿ ಹಾಕಿಸಿಕೊಟ್ಟಾ
ಗಂಡ:
ನೂಲಲ್ಯಾಕ ಚೆನ್ನೀ!
ನೂಲಲ್ಯಾಕ ಚೆನ್ಸೀ!
ಹೆಂಡತಿ:
ನನಗ ಬರೂದಿಲ್ಲೋ ಜಾಣಾ!
ನನಗ ಬರೂದಿಲ್ಲೋ ಜಾಣಾ!
_________________________
ಹಾಸ್ಯದ ಹಾಡುಗಳು
ಮದುವೆಯ ಕಾಲದಲ್ಲಿ ಉಪಯೋಗಿಸುವ ಬೀಗರ ಹಾಡುಗಳು ಕೂಡ ಹಾಸ್ಯದವೇ. ಆದರೆ ಅವುಗಳಲ್ಲಿರುವುದು ಅಪಹಾಸ್ಯ. ಈ ವಿಭಾಗದಲ್ಲಿರುವವು ಅಂತಹವಲ್ಲ. ಇವು ನಕ್ಕು ನಗಿಸುವಂತಹವು. ಎರಡನೆಯ ವಿಭಾಗದೊಳಗಿನ ಹಾಡುಗಳಲ್ಲಿಯೂ ಒಂದು ಬಗೆಯ ಹಾಸ್ಯವಿದ್ದದ್ದು ನಿಜ. ಅದರೆ ಅದೂ ಇಂತಹದಲ್ಲ. ಅದಕ್ಕೆ ಸರಸವೆಂದು ಹೇಳಬಹುದು. ಆ ಪರಿಹಾಸ ಅಪಹಾಸಗಳಿಗಿಂತ ಭಿನ್ನವಾದ ಅಟ್ಟಹಾಸವು ಈ ವಿಭಾಗದಲ್ಲಿ ನಿರೂಪಿತವಾಗಿದೆ.
ನೂಲೊಲ್ಲ್ಯಾಕ ಚೆನ್ನಿ ಈ ಹಾಡಿನ ಭಾವ ಸರಳವಿದೆ.
ಶಬ್ದಪ್ರಯೋಗಗಳು:- ಚಿಲ್ಲ=ಕದರುಹಾಕುವ ಕಿವಿ (ಚರ್ಮದ್ದು). ಹಮ್ಮಿಗಿ=ಚಕ್ರಕ್ಕೆ ಸುತ್ತುವ ದಾರ. ನಡುವಿನ=ಸೊಂಟದಲ್ಲಿರುವ. ಗುಗ್ಗರಿ=ತಿನ್ನುವುದಕ್ಕೆಂದು ಕುದಿಸಿದ ಕಾಳುಗಳು.
ಹೀಗೆ ಬೀಗರ ಹಾಡುಗಳು ಮದುವೆಯ ಸಂದರ್ಭದಲ್ಲಿ ಹುಟ್ಟಿಕೊಂಡ ಹಾಸ್ಯ ಮಿಶ್ರಿತ ಜಾನಪದ ಪದಗಳು ಹೀಗೆ ಗ್ರಾಮೀಣ ಭಾಗದ ದೇಸೀಯ ಸೊಗಡನ್ನು ಕನ್ನಡ ಸಾಹಿತ್ಯ ಭಾಷೆಯಲ್ಲಿ ದಾಖಲಿಸುವಲ್ಲಿ ರೇವಪ್ಪ ಕಾಪಸೆ ಯಶಸ್ವಿ ಕಂಡವರು. ಸಣ್ಣ ವಯಸ್ಸಿನಲ್ಲಿಯೇ ವಿದಾಯ ಹೇಳಿದ ಶ್ರೇಷ್ಠ ಜಾನಪದ ಕವಿ ರೇವಪ್ಪ ಕಾಪಸೆ ಅವರು. ಇವರಿಗೆ ನೂರು ನೂರು ನಮನಗಳು.
__________________________
ಡಾ.ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

