HomeUncategorizedಅಪೂರ್ವ ಹೃದಯಸ್ಪರ್ಶಿ ಸಮಾರಂಭ ; ಅಕ್ಷರಕಾರುಣ್ಯದ ಆತ್ಮೀಯ ಪ್ರಶಸ್ತಿ

ಅಪೂರ್ವ ಹೃದಯಸ್ಪರ್ಶಿ ಸಮಾರಂಭ ; ಅಕ್ಷರಕಾರುಣ್ಯದ ಆತ್ಮೀಯ ಪ್ರಶಸ್ತಿ

ಭಾನುವಾರ ದಿ.18 ರಂದು ಧಾರವಾಡದಲ್ಲಿ ಕರುನಾಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗ(ರಿ) ಇವರು ಶ್ರೀ ಆಲೂರು ವೆಂಕಟರಾವ್ ಭವನದಲ್ಲಿ ಆಯೋಜಿಸಿದ್ದ ಅದ್ದೂರಿ ರಾಜ್ಯಮಟ್ಟದ ಪ್ರಥಮ ಸಾಹಿತ್ಯ ಸಮ್ಮೇಳನ ಅತ್ಯಂತ ಅಭೂತಪೂರ್ವ ಯಶಸ್ಸಿನೊಂದಿಗೆ ಸಂಪನ್ನಗೊಂಡಿತು.

ಈ ಅದ್ವಿತೀಯ ಸಮಾರಂಭದಲ್ಲಿ ಪವಿತ್ರ ಸಂತ ಶಿಶುನಾಳ ಷರೀಫ ವೇದಿಕೆಯಲ್ಲಿ, ಸಾಹಿತ್ಯಲೋಕದ ದಿಗ್ಗಜರ ಅಮೃತಹಸ್ತಗಳಿಂದ ಪ್ರತಿಷ್ಠಿತ ರಾಜ್ಯಮಟ್ಟದ “ಕರುನಾಡ ಸಾಹಿತ್ಯ ರತ್ನ” ಸ್ವೀಕರಿಸಿದ ಅವಿಸ್ಮರಣೀಯ ಕ್ಷಣ, ಹೃನ್ಮನಗಳು ಪುಳಕಿತವಾಗಿ ಎದೆತುಂಬಿ ಬಂತು.

ಪ್ರಶಸ್ತಿಗಳು ಮಾರಾಟದ ದಂಧೆಯಾಗಿರುವ ಈ ದಿನಮಾನದಲ್ಲಿ, ಕೈಗಾದ ಕಾನನದಲ್ಲಿರುವ ನನ್ನ ಅಕ್ಷರಪ್ರಣತೆಗಳನ್ನು ಗುರುತಿಸಿ, ಧಾರವಾಡದ ಭವ್ಯವೇದಿಕೆಯಲ್ಲಿ ಕುಳ್ಳಿರಿಸಿ, ಆತ್ಮೀಯವಾಗಿ ಸತ್ಕರಿಸಿ, ಆಕರ್ಷಕ ಸ್ಮರಣಿಕೆ, ಪದಕ, ಹಾರ, ಪೇಟ, ತುರಾಯಿಗಳಿಂದ ಸನ್ಮಾನಿಸಿ, ಮಡಿಲು ತುಂಬ ಅಮೂಲ್ಯ ಕಾಣಿಕೆಗಳಿಟ್ಟು ಪುರಸ್ಕರಿಸಿದ ಎಸ್.ಮುಡ್ಡೆಣ್ಣವರ ಹಾಗೂ ಸಮಸ್ತ ಆಯೋಜಕರಿಗೆ ನಾನು ಅಕ್ಷರಶಃ ಆಭಾರಿ.

ನಿಜಕ್ಕೂ ಅಪ್ರತಿಮ ಸಮ್ಮೇಳನ. ಅಸಂಖ್ಯ ಅತಿರಥರ ಸಮ್ಮಿಲನ. ಸಜ್ಜನ ಹಾಗೂ ಸುಸಂಸ್ಕೃತ ರಾಜಕಾರಣಿ ವಿಧಾನ ಪರಿಷತ್ತಿನ ಮಾನ್ಯ ಸಭಾಪತಿಗಳಾದ ಬಸವರಾಜ ಹೊರಟ್ಟಿಯವರಿಂದ ಉದ್ಘಾಟನೆ ಮತ್ತು ಔಚಿತ್ಯಪೂರ್ಣ ನುಡಿಗಳು. ಅತ್ಯಂತ ಸಂವೇದನಾಶೀಲ ಹಾಗೂ ಸೌಜನ್ಯತೆಯ ಸಾಹಿತಿ ಪ್ರೊ.ಶಶಿಧರ ತೋಡಕರರ ಸರ್ವಾಧ್ಯಕ್ಷತೆ ಮತ್ತು ವಿದ್ವತ್ಪೂರ್ಣ ಹಾಗೂ ವಿನಮ್ರಪೂರ್ಣ ಅಧ್ಯಕ್ಷೀಯ ನುಡಿಗಳು.

ಪರಮಪೂಜ್ಯ ಶ್ರೀಗಳು, ಶರಣರು ಹಾಗೂ ಸಂತರ ದಿವ್ಯಸಾನ್ನಿಧ್ಯ. ವೇದಿಕೆಯ ಮೇಲಿನ ಗಣ್ಯರ ಸಮಯೋಚಿತ ನುಡಿಗಳು, ಅರ್ಥಪೂರ್ಣ ವಿಚಾರ ಸಂಕಿರಣ ಹಾಗೂ ಲಾಸ್ಯ ಲಹರಿಯ ಕವಿಗೋಷ್ಠಿ ಸಮಾರಂಭವನ್ನು ಹೃದಯಸ್ಪರ್ಶಿಯಾಗಿಸಿದವು.

ಸಭಿಕರಲ್ಲಿ ರಂಜನೆ ಮತ್ತು ಚಿಂತನೆಗಳ ಸಂಚಲನವನ್ನು ಮೂಡಿಸಿ, ನಗೆಯ ಮಿಂಚು ಹರಿಸಿದ ಹನಿಗವನ ಮತ್ತು ಶಾಯಿರಿಗಳ ಗೋಷ್ಠಿಯಲ್ಲಿ ಭಾಗಿಯಾಗಿದ್ದು ತನು-ಮನ ಪುಳಕಿಸಿತು. ಆಶಯ ನುಡಿಗಳನ್ನಾಡಿದ ಪ್ರಾಂಶುಪಾಲೆ ಡಾ. ಶರಣಮ್ಮ ಗೋರಿಬಾಳರ ವಾಗ್ಲಹರಿಯಲ್ಲಿ ನನ್ನ ಹಲವಾರು ಹನಿಗವಿತೆಗಳು ಹರಿದಾಡಿದಾಗ, ಸಭೆಯನ್ನು ಸಮ್ಮೋಹನಗೊಳಿಸಿ ನಗೆಯ ಲಾಸ್ಯ ಹರಡಿದಾಗ, ಅದೆಂತಹ ರೋಮಾಂಚನ ! ಬರೆದದ್ದು ಸಾರ್ಥಕವಾಯಿತು ಎಂಬ ಧನ್ಯಾನುಭೂತಿ.

ಇಂತಹ ಅವಿಸ್ಮರಣೀಯ ಸಮಾರಂಭಕ್ಕೆ ಸಾಕ್ಷಿಯಾಗಲು, ಅನನ್ಯ ಕ್ಷಣಗಳನ್ನು ಹೃದಯ ತುಂಬಿಕೊಳ್ಳಲು ಕಾರಣರಾದ ಕ್ರಿಯಾಶೀಲ ಸಂಘಟನೆಯ ಸೃಜನಶೀಲ ಮುಡ್ಡೆಣ್ಣನವರ ಅವರು ಹಾಗೂ ಸಕಲ ಪಧಾಧಿಕಾರಿಗಳಿಗೂ ನಾನು ಚಿರಋಣಿ.

ರಾಜಧಾನಿಯಿಂದ 600 ಕಿಲೋಮೀಟರುಗಳ ದೂರದ ಕಾಡಿನಿಂದ, ನಾಡಿನ ಉದ್ದಗಲಕ್ಕೂ ಈ ಗುಬ್ಬಿ ಹಾರಾಡಲು, ಅಕ್ಷರಲೋಕದ ಸಿಹಿ ಸವಿಯಲು ಕಾರಣ ಮತ್ತು ಪ್ರೇರಣ ನಿತ್ಯ ಬರೆಸುತ್ತಿರುವ ಅಕ್ಷರಬಂಧುಗಳಾದ ನೀವು. ಹಾಗಾಗಿ ನನ್ನೆಲ್ಲ ಸಂಭ್ರಮದ ಕ್ಷಣಗಳ ದೃಶ್ಯಗುಚ್ಚವನ್ನು ನಿಮಗರ್ಪಿಸುತ್ತಿದ್ದೇನೆ. ನೋಡಿ ಹರಸಿ ಹಾರೈಸಿ.” –

ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.

RELATED ARTICLES

LEAVE A REPLY

Please enter your comment!
Please enter your name here

Most Popular

close
error: Content is protected !!
Join WhatsApp Group