ಹೌದು, ಅವರು ಕ್ಷತ್ರಿಯರು. ಅವರ ಹಿರಿಯರು ಮೈಸೂರು ಮಹಾರಾಜರ ಸೇನೆಯಲ್ಲಿ ಸೇನಾಧಿಕಾರಿಗಳಾಗಿದ್ದವರು.
ವೃತ್ತಿಯಿಂದ ಎಂಜಿನಿಯರ್, ಕಂಟ್ರಾಕ್ಟರ್. ಆದರೆ, ಅರ್ಧ ಶತಮಾನಕ್ಕಿಂತಲೂ ಹೆಚ್ಚು ಕಾಲ ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರಾಗಿ ವಿಶೇಷವಾದ ಮತ್ತು ಅತಿ-ವಿಶಿಷ್ಟವಾದ ರೀತಿಯಲ್ಲಿ ಸಮಾಜದ ಸೇವೆ ಸಲ್ಲಿಸಿದರು.
ರಾಮಕೃಷ್ಣ ರಾವ್ ತುಂಬ ಓದುತ್ತಿದ್ದರು, ಓದಿಸುತ್ತಿದ್ದರು. ಮೂರು ದಶಕಗಳ ಹಿಂದೆಯೇ, ಸೀತಾರಾಮ ಗೋಯಲ್ ಅವರ “ವಾಯ್ಸ್ ಆಫ್ ಇಂಡಿಯಾ ಸರಣಿ”ಯ ಮಹತ್ತ್ವದ ಕೃತಿಗಳನ್ನು, ನಿಜ-ಇತಿಹಾಸಕ್ಕೆ ಸಂಬಂಧಿಸಿದ ಇನ್ನೂ ಅನೇಕ ಅಪರೂಪದ ಗ್ರಂಥಗಳನ್ನು ನೂರಾರು ಸಂಖ್ಯೆಯಲ್ಲಿ ತರಿಸಿ ನಮ್ಮ ಸಮಾಜದ ನೂರಾರು ಜನ ಲೇಖಕರಿಗೆ, ಕಾರ್ಯಕರ್ತರಿಗೆ, ರಾಜಕಾರಣಿಗಳಿಗೆ,ಅಧಿಕಾರಿಗಳಿಗೆ, ಸ್ವಾಮಿಗಳಿಗೆ,ಮಠಾಧೀಶರಿಗೆ,ನ್ಯಾಯಾಧೀಶರಿಗೆ, ನ್ಯಾಯವಾದಿಗಳಿಗೆ, ಕೊಟ್ಟು ಓದಿಸುವ ಮಹತ್ಕಾರ್ಯ ಮಾಡಿದರು.
ಅಪರಿಮಿತ ಪರಿಶ್ರಮದಿಂದ ದುಡಿದ, ತಮ್ಮ ಸ್ವಂತ ಹಣದಲ್ಲಿ ಅನೇಕ ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿ ಇಷ್ಟೆಲ್ಲಾ ಮಾಡಿದರು.ವಿಶ್ವ ಹಿಂದೂ ಪರಿಷತ್ತಿನ ಕಛೇರಿಯಲ್ಲಿ ದೊಡ್ಡದೊಂದು ಗ್ರಂಥಾಲಯವನ್ನೇ ನಿರ್ಮಿಸಿದರು, ಬೆಳೆಸಿದರು.ವಿಶ್ವ ಹಿಂದೂ ಪರಿಷತ್ತಿನ ವಿವಿಧ ಯೋಜನೆ, ಚಳವಳಿಗಳಲ್ಲಿ ಅವರ ಕೊಡುಗೆ ಅಸೀಮ, ಅನುಪಮ.
ಭಾರತದ ಮಹತ್ತ್ವದ ನಿಜ-ಇತಿಹಾಸಕಾರ ಸೀತಾರಾಮ ಗೋಯಲ್ ಅವರನ್ನು “ಬೌದ್ಧಿಕ ಕ್ಷತ್ರಿಯ” (Intellectual Kshatriya) ಎನ್ನಲಾಗುತ್ತದೆ.ಅಂತೆಯೇ, ಅವರಂತೆಯೇ, ರಾಮಕೃಷ್ಣ ರಾವ್ ಅವರು ನಿಜಾರ್ಥದಲ್ಲಿಯೂ ಹಿಂದೂ-ಯೋಧ, ನಿಜಾರ್ಥದಲ್ಲಿಯೂ ಕ್ಷತ್ರಿಯ. ಅವರೊಂದಿಗೆ ಎರಡು ನಿಮಿಷ ಮಾತನಾಡಿದರೆ ಸಾಕು, ಪ್ರೇರಣೆ ದೊರೆಯುತ್ತಿತ್ತು, ಕಾರ್ಯೋತ್ಸಾಹ ಚಿಮ್ಮುತ್ತಿತ್ತು.
ಹದಿನೈದು ವರ್ಷಗಳ ಹಿಂದೆ ಪ್ರಾರಂಭವಾದ ನನ್ನ – ನಮ್ಮ “ವಾಯ್ಸ್ ಆಫ್ ಇಂಡಿಯಾ ಕನ್ನಡ ಸರಣಿ”ಗೆ ಅಕ್ಷರಶಃ ನೂರಾರು ಆಧಾರ ಗ್ರಂಥಗಳನ್ನು, ಮಹತ್ತ್ವದ ಕೃತಿಗಳನ್ನು ನೀಡಿದರು, ಬೆಂಬಲಿಸಿದರು. ಇಷ್ಟೂ ವರ್ಷ ಕಾಲ, ಪ್ರತಿವಾರ ಫೋನ್ ಮಾಡಿ, ನಮ್ಮ ಯೋಜನೆಯ ಪ್ರಗತಿಯ ಬಗೆಗೆ ಕೇಳುತ್ತಿದ್ದರು.
ನವಂಬರ್ 2024ರಲ್ಲಿ, ಇತಿಹಾಸರಚನಶಾಸ್ತ್ರದ (Historiography) ಪರಿಕಲ್ಪನೆಗಳನ್ನು ಕನ್ನಡದಲ್ಲಿ ಪರಿಚಯಿಸುವ ನನ್ನ ಕೃತಿ “ಸರಿಯಾಗಿ ದಾಖಲಾಗಬೇಕಾದ ಭಾರತದ ನಿಜ-ಇತಿಹಾಸ” ಗ್ರಂಥದ ಲೋಕಾರ್ಪಣೆಯಾಯಿತು. ಆ ಕೃತಿ ರಚನೆಗೆ ಅವರೇ ಪ್ರೇರಣೆ.
ಅವರಿಗೇ ಆ ಕೃತಿಯನ್ನು ಅರ್ಪಿಸಿದ್ದೇನೆ. ಹಿಂದೂ ಸಮಾಜದ ವೀರಯೋಧರೊಬ್ಬರಿಗೆ, ಕೊಡುಗೈ ದಾನಿಗೆ, ಇದೊಂದು ಗೌರವಾರ್ಪಣೆ. ಇಂದು ಮುಂಜಾನೆ 7 ಘಂಟೆಗೆ ರಾಮಕೃಷ್ಣ ರಾವ್ ಅವರು ಭಾರತ ಮಾತೆಯ ಪಾದ ಸೇರಿದರು.
ಅವರಿಗೆ ಸದ್ಗತಿ ದೊರೆಯಲಿ.
ಮಂಜುನಾಥ ಅಜ್ಜಂಪುರ,
(WhatsApp 8762558050)
ಗೌರವ ಸಂಪಾದಕರು :
“ವಾಯ್ಸ್ ಆಫ್ ಇಂಡಿಯಾ” ಸಾಹಿತ್ಯ ಸರಣಿ