‘ನಾನು ಹೆಣ್ಣಾಗಿ ಹುಟ್ಟಿದ್ದಕ್ಕೆ ಈ ಎಲ್ಲ ಸಮಸ್ಯೆಗಳನ್ನು ಎದುರಿಸಬೇಕಾಗಿದೆ.’ ಎಂದು ಮೇಲಿಂದ ಮೇಲೆ ಗೊಣಗುವ ಹೆಣ್ಣು ಧ್ವನಿಯನ್ನು ಆಲಿಸುತ್ತೇವೆ. ತಮ್ಮ ಲಿಂಗದ ಕಾರಣದಿಂದಾಗಿ ವಿವಿಧ ಸಮಸ್ಯೆಗಳಿಗೆ ಈಡಾಗುವ ಪರಿಸ್ಥಿತಿ ಎಂದಿನಿಂದಲೂ ಇದೆ. ಇತ್ತೀಚಿನ ಸಾಮಾಜಿಕ ಆರ್ಥಿಕ ರಾಜಕೀಯ ಬದಲಾವಣೆಗಳು ಮಹಿಳೆಯ ಜೀವನಶೈಲಿಯನ್ನು ಬಹಳಷ್ಟು ಬದಲಾಯಿಸಿವೆ ಎಂಬ ಅಂಶ ಮೇಲ್ನೋಟಕ್ಕೆ ಕಂಡು ಬರುತ್ತದೆ. ಮಹಿಳೆಯರಿಗೆ ಉತ್ತಮ ರಾಜಕೀಯ ಹಕ್ಕುಗಳು ಮತ್ತು ಉದ್ಯೋಗಾವಕಾಶಗಳನ್ನು ಒದಗಿಸುವಲ್ಲಿ ಕೆಲಸ ಮಾಡಲಾಗುತ್ತಿದೆ. ಆದರೂ ಹಿಂದೆಂದಿಗಿಂತಲೂ ಇಂದು ಮಹಿಳೆಯರ ಜೀವನದ ದಿಕ್ಕು ಬದಲಾದಂತೆ ಕಾಣುತ್ತಿದ್ದರೂ ಅವಳ ಮನದಾಳದ ತೊಳಲಾಟಗಳು ಕಡಿಮೆಯಾಗಿಲ್ಲ. ಬಾಲ್ಯವಿವಾಹವನ್ನು ನಿಷೇಧಿಸಲು ಜಾರಿಗೆ ತಂದ ಕಾನೂನುಗಳು ಸಮಾನತೆಯ ಹಕ್ಕುಗಳು ಮಹಿಳೆಯರನ್ನು ಗೆದ್ದಿವೆ. ಹೀಗಿದ್ದಾಗ್ಯೂ ಭಾರತೀಯ ಮಹಿಳೆಯರು ಇನ್ನೂ ತಮ್ಮ ಯೋಗಕ್ಷೇಮ ಮತ್ತು ಉಳಿವಿಗಾಗಿ ಹೋರಾಡಬೇಕಾಗಿದೆ ಎಂಬುದು ಸುಳ್ಳಲ್ಲ.
ಮಹಿಳೆಯರಿಗೆ ದೇವತೆಯ ಸ್ಥಾನವನ್ನು ನೀಡುವ ದೇಶ ನಮ್ಮದಾಗಿದ್ದರೂ ಅವರು ಎದುರಿಸುವ ಸಮಸ್ಯೆಗಳು ಪರಿಕಲ್ಪನೆಗೆ ವಿರುದ್ಧವಾಗಿ ತೋರುತ್ತವೆ. ಒಂದು ಕಡೆ ಅವರನ್ನು ದೇವರನ್ನಾಗಿ ಪೂಜಿಸುತ್ತಾರೆ ಮತ್ತೊಂದೆಡೆ ಅವರನ್ನು ಕೀಳಾಗಿ ಪರಿಗಣಿಸುತ್ತಾರೆ. ತೀವ್ರವಾದ ಕಳವಳವೆಂದರೆ ಮಹಿಳೆಯರಿಗೆ ಅದೇ ಗೌರವ ಮತ್ತು ಸಮಾನ ಸ್ಥಾನಮಾನ ಸಿಗುತ್ತಿಲ್ಲ. ಆರಂಭದ ದಿನಗಳಲ್ಲಿ ಸತಿ ಪದ್ಧತಿ, ದೇವದಾಸಿ ಪದ್ಧತಿ ವಿಧವಾ ಪುರ್ನವಿವಾಹ ಮತ್ತಿತರ ತೀವ್ರ ಸಮಸ್ಯೆಗಳಿದ್ದವು. ಅವುಗಳಲ್ಲಿ ಹೆಚ್ಚಿನವು ಈಗ ಪ್ರಚಲಿತವಾಗಿಲ್ಲದಿದ್ದರೂ, ಆಕೆ ಎದುರಿಸುವ ಅನೇಕ ಹೊಸ ಸಮಸ್ಯೆಗಳಿವೆ. ಆಕೆಯ ಸಮಸ್ಯೆಗಳು ಕೇವಲ ಸಾಮಾಜಿಕ ಹಕ್ಕುಗಳಿಗೆ ಸೀಮಿತವಾಗಿಲ್ಲ. ಮನೆ ಕಛೇರಿ ಕೆಲಸದ ಸ್ಥಳ ಹೀಗೆ ಎಲ್ಲೆಲ್ಲಿಯೂ ವ್ಯಾಪಕವಾಗಿವೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ.ಅವುಗಳಲ್ಲಿ ಪ್ರಮುಖವಾದ ಕೆಲವನ್ನು ಇಲ್ಲಿ ನೋಡೋಣ ಬನ್ನಿ.
ದೌರ್ಜನ್ಯ:
ಇಂದು ಭಾರತೀಯ ಮಹಿಳೆಯರು ಎದುರಿಸುತ್ತಿರುವ ದೊಡ್ಡ ಮತ್ತು ಅಪಾಯಕಾರಿ ಸಮಸ್ಯೆ ಎಂದರೆ ಅವರ ಮೇಲಿನ ದೌರ್ಜನ್ಯ ಅಧ್ಯಯನವೊಂದರ ಪ್ರಕಾರ ಸುಮಾರು 1000 ಮಹಿಳೆಯರ ಮೇಲೆ 26 ಪ್ರತಿಶತದಷ್ಟು ಜನರು ತಮ್ಮ ಜೀವಿತಾವಧಿಯಲ್ಲಿ ಸಂಗಾತಿಯಿಂದ ದೈಹಿಕ ಹಿಂಸೆಯನ್ನು ಅನುಭವಿಸಿದ್ದಾರೆಂದು ವರದಿ ಮಾಡಿದೆ. ವಾಸ್ತವದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ವಿಶೇಷವಾಗಿ ಕೌಟುಂಬಿಕ ಹಿಂಸಾಚಾರವು ಸಾಮಾನ್ಯವಾಗಿ ವರದಿಯಾಗುವುದಿಲ್ಲ. ದೌರ್ಜನ್ಯವು ಮಹಿಳೆಯರ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದಲ್ಲದೆ,ಮಾನಸಿಕ ಆರೋಗ್ಯದ ಮೇಲೂ ಹಾನಿಕಾರಕ ಪರಿಣಾಮಗಳನ್ನು ಬೀರುತ್ತದೆ. ಖಿನ್ನತೆ ಆತ್ಮಹತ್ಯೆಗಳು ಮಹಿಳೆಯರ ಮೇಲಿನ ಅತಿರೇಕದ ಹಿಂಸಾಚಾರವನ್ನು ಉಂಟುಮಾಡುವ ಕೆಲವು ಮಾನಸಿಕ ಪರಿಣಾಮಗಳಾಗಿವೆ.ದೌರ್ಜನ್ಯವು ಮಹಿಳೆಯರು ಎದುರಿಸುತ್ತಿರುವ ಅತ್ಯಂತ ಗಂಭೀರ ಸಮಸ್ಯೆಯಾಗಿದೆ. ಇದು ಬಹುತೇಕ ಪ್ರತಿದಿನ ವಿವಿಧ ರೂಪಗಳಲ್ಲಿ ನಡೆಯುತ್ತಿದೆ. ಮನೆಯಲ್ಲಿ ಕೆಲಸದ ಸ್ಥಳಗಳಲ್ಲಿ ಸಾರ್ವಜನಿಕ ಸಾರಿಗೆಗಳಲ್ಲಿ ರಸ್ತೆಗಳಲ್ಲಿ ರಾತ್ರಿಗಳಲ್ಲಿ ವೈಯಕ್ತಿಕ ಸಂಬಂಧಗಳಲ್ಲಿ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತದೆ. ಆದ್ದರಿಂದ ಈ ಎಲ್ಲಾ ಹಂತಗಳಲ್ಲಿ ದೌರ್ಜನ್ಯ ನಡೆಯದಂತೆ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಬೇಕು. ಮಹಿಳೆಯರನ್ನು ರಕ್ಷಿಸಲು ಕಾನೂನುಗಳನ್ನು ಜಾರಿಗೊಳಿಸುವುದು ಅಗತ್ಯವಾಗಿದೆ. ಆಕೆಯ ಬಟ್ಟೆ ನಡವಳಿಕೆ ಆಕೆಗೆ ಸಂಬಂಧಿಸಿದ ಎಲ್ಲವನ್ನೂ ಇತರರು ನಿರ್ಣಯಿಸುತ್ತಾರೆ. ಇದು ಸಾಲದೆಂಬಂತೆ ಯಂತ್ರ ಮಟ್ಟದ ಪರಿಣಿತಿಯನ್ನು ನಿರೀಕ್ಷಿಸುತ್ತಾರೆ. ಬಾಲಕಿಯರು ಬಾಲ್ಯದಿಂದಲೂ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ನಿಂದನೀಯ ನಡವಳಿಕೆಯನ್ನು ಅನುಭವಿಸುತ್ತಾರೆ. ವೈಯಕ್ತಿಕ ಬೆಳವಣಿಗೆಯನ್ನಂತೂ ಪ್ರೋತ್ಸಾಹಿಸುವುದೇ ಇಲ್ಲ. ಆಕೆಯ ಸಹಾನುಭೂತಿಯನ್ನು ದೌರ್ಬಲ್ಯದ ಸಂಕೇತವೆಂದು ಪರಿಗಣಿಸಿ ಆಕೆಯ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ದೌರ್ಜನ್ಯ ಎಸಗುವವರ ವಿರುದ್ಧ ಹೋರಾಡಲು ಎಲ್ಲರೂ ಸಾಮೂಹಿಕವಾಗಿ ಪ್ರಯತ್ನಿಸಬೇಕಾಗಿದೆ.
ಲಿಂಗ ತಾರತಮ್ಯ:
ನಮ್ಮಲ್ಲಿ ಮಹಿಳೆಯರನ್ನು ಪುರುಷರಿಗೆ ಸಮಾನವಾಗಿ ಪರಿಗಣಿಸಲಾಗುವುದಿಲ್ಲ. ಕೆಲಸದ ಸ್ಥಳದಲ್ಲಾಗಲಿ ಮನೆಯಲ್ಲಾಗಲಿ ಪ್ರತಿಯೊಂದು ಸ್ಥಳದಲ್ಲೂ ಅವರು ತಾರತಮ್ಯವನ್ನು ಅನುಭವಿಸುತ್ತಾರೆ.ಲಿಂಗ ತಾರತಮ್ಯವು ಭಾರತದಲ್ಲಿ ಪರಿಹರಿಸಬೇಕಾದ ಮತ್ತೊಂದು ಪ್ರಮುಖ ಸವಾಲಾಗಿದೆ. ಲಿಂಗ ತಾರತಮ್ಯಕ್ಕೆ ಸಂಬಂಧಿಸಿದ ನಿರ್ಲಕ್ಷ್ಯದಿಂದಾಗಿ ಭಾರತದಲ್ಲಿ ಪ್ರತಿ ವರ್ಷ ಐದು ವರ್ಷದೊಳಗಿನ ಅಂದಾಜು 239,000 ಹುಡುಗಿಯರು ಸಾಯುತ್ತಾರೆ. ಭಾರತೀಯ ಸಮಾಜದಲ್ಲಿ ಗಂಡು ಮಕ್ಕಳಿಗೆ ಪ್ರಾಶಸ್ತ್ಯವಿರುವುದರಿಂದ ಹೆಣ್ಣುಮಕ್ಕಳು ಸಾವುಗಳ ಭಾಗವಾಗುತ್ತಾರೆ. ಹೆಣ್ಣುಮಕ್ಕಳಿಗೆ ಸರಿಯಾದ ಆರೋಗ್ಯ ಪೋಷಣೆ ಮತ್ತು ಲಸಿಕೆಗಳ ಕೊರತೆಯೂ ಕಂಡು ಬರುತ್ತದೆ. ಈ ಎಲ್ಲ ಕೊರತೆಗಳು ನಿರ್ಲಕ್ಷ್ಯದ ದೊಡ್ಡ ಭಾಗವಾಗಿದೆ. ಹುಡುಗಿಯರು ಪ್ರೌಢಾವಸ್ಥೆಯನ್ನು ತಲುಪುವ ಮುನ್ನವೇ ಸಾಯುವ ಸಾಂಸ್ಕøತಿಕ ಮತ್ತು ಸಾಮಾಜಿಕ ಮಾನದಂಡಗಳ ವಿರುದ್ಧ ಹೋರಾಡುವ ಕಡೆಗೆ ಹೆಚ್ಚಿನ ಗಮನವನ್ನು ಸೆಳೆಯುವ ಅಗತ್ಯವಿದೆ. ಹೆಣ್ಣೆಂಬ ಕಾರಣಕ್ಕೆ ಕೌಟುಂಬಿಕ ಹಿಂಸೆಯು ನಾವು ನೀವು ಯೋಚಿಸುವುದಕ್ಕಿಂತ ಹೆಚ್ಚಾಗಿ ಸಂಭವಿಸುತ್ತದೆ. ಇದಲ್ಲದೆ, ವರದಕ್ಷಿಣೆ-ಸಂಬಂಧಿತ ಕಿರುಕುಳ, ವೈವಾಹಿಕ ಅತ್ಯಾಚಾರಗಳು ನಡೆಯುತ್ತವೆ. ಈ ತಾರತಮ್ಯಕ್ಕೆ ಚಿಕ್ಕ ಹುಡುಗಿಯರೂ ಬಲಿಯಾಗುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಕೇವಲ ಹೆಣ್ಣು ಎಂಬ ಕಾರಣಕ್ಕೆ ಶಿಕ್ಷಣ ನಿರಾಕರಿಸಲಾಗುತ್ತಿದೆ. ಉತ್ತಮ ಭವಿಷ್ಯಕ್ಕಾಗಿ ಪ್ರತಿ ಹೆಣ್ಣುಮಗುವಿಗೆ ಶಿಕ್ಷಣ ನೀಡುವುದನ್ನು ಕಡ್ಡಾಯಗೊಳಿಸಬೇಕು. ಶಿಕ್ಷಣವು ಶಕ್ತಿಯುತ ಮತ್ತು ಸ್ವತಂತ್ರ ಮಹಿಳೆಯರನ್ನು ಸೃಷ್ಟಿಸುತ್ತದೆ. ಲಿಂಗದ ಹೆಸರಿನಲ್ಲಿ ತಾರತಮ್ಯವನ್ನು ಎದುರಿಸುವುದನ್ನು ತಪ್ಪಿಸಬೇಕೆಂದರೆ ಅವಳ ಸಬಲೀಕರಣಕ್ಕಾಗಿ ನಾವು ಒಗ್ಗೂಡಬೇಕು. ಸಮಾನ ಶೈಕ್ಷಣಿಕ ಅವಕಾಶಗಳನ್ನು ನೀಡಬೇಕು. ಅತೃಪ್ತಿ ಮತ್ತು ಅಸುರಕ್ಷಿತ ಜಾಗದಲ್ಲಿದ್ದರೂ ಆಕೆ ಯಾವಾಗಲೂ ರಾಜಿ ಮಾಡಿಕೊಳ್ಳಬೇಕು.
ಯಾವುದೇ ಕಿರುಕುಳದ ವಿರುದ್ಧ ಆಕೆ ಮಾತನಾಡಿದರೆ ಸೇಡಿನ ಕ್ರಮವಾಗಿ ಕಿರುಕುಳ ನೀಡುವುದು, ಸಾರ್ವಜನಿಕ ಸ್ಥಳಗಳಲ್ಲಿ ಬೆದರಿಸುವುದು, ಅಸಭ್ಯವಾಗಿ ಟೀಕಿಸುವುದು, ಆ್ಯಸಿಡ್‍ಎರಚುವುದು ಅಚ್ಚರಿಯಾದರೂ ಸತ್ಯವೆಂದು ಬೇರೆ ಹೇಳಬೇಕಾಗಿಲ್ಲ. ಕೆಲಸದ ಸ್ಥಳಗಳಲ್ಲಿ ಲೈಂಗಿಕ ಶೋಷಣೆಯು ಕಳವಳಕಾರಿಯಾಗಿದೆ. ಮಿ-ಟೂ ಚಳವಳಿಯು ಪ್ರತಿ ಸ್ತರದಲ್ಲಿಯೂ ಸಂಭವಿಸಿದೆ ಎಂದು ಸಾಬೀತುಪಡಿಸಿದೆ.
ವೇತನದ ಅಂತರ:
ಮಾರ್ಚ್ 2019 ರಲ್ಲಿ ಪ್ರಕಟವಾದ ಮಾಸ್ಟರ್ ಸ್ಯಾಲರಿ ಇಂಡೆಕ್ಸ್ ಪ್ರಕಾರ ಭಾರತದಲ್ಲಿ ಮಹಿಳೆಯರು ಪುರುಷರಿಗಿಂತ 19% ಕಡಿಮೆ ಗಳಿಸುತ್ತಾರೆ. 2018 ರಲ್ಲಿ ಭಾರತದಲ್ಲಿ ಪುರುಷರ ಸರಾಸರಿ ಒಟ್ಟು ಗಂಟೆಯ ವೇತನವು ರೂ 242,49 ಮತ್ತು ಮಹಿಳೆಯರಿಗೆ ಕೇವಲ ರೂ 196,3 ಎಂದು ಸಮೀಕ್ಷೆಯು ಬಹಿರಂಗಪಡಿಸಿದೆ. ಅಂದರೆ ಪುರುಷರು ಸರಾಸರಿ ರೂ 46.19 ಹೆಚ್ಚು ಗಳಿಸಿದ್ದಾರೆ. ಮಹಿಳೆಯರು ಒಂದೇ ರೀತಿಯ ಉದ್ಯೋಗಗಳಿಗಾಗಿ ಪುರುಷರಿಗಿಂತ ಕಡಿಮೆ ಗಳಿಸುತ್ತಾರೆ. ಆದರೆ ಉದ್ಯೋಗ ತಾರತಮ್ಯ ಮತ್ತು ಪುರುಷರಂತೆ ಅದೇ ಶಿಕ್ಷಣದ ಪ್ರವೇಶದ ಕೊರತೆಯಿಂದಾಗಿ ಅವರು ಕಡಿಮೆ ಸಂಬಳದ ಉದ್ಯೋಗಗಳಲ್ಲಿ ಹೆಚ್ಚಾಗಿ ಕೆಲಸ ಮಾಡುತ್ತಾರೆ. ಆದ್ದರಿಂದ, ಶಿಕ್ಷಣಕ್ಕೆ ಮಹಿಳೆಯರ ಪ್ರವೇಶದ ವಿಸ್ತರಣೆ ಮತ್ತು ಬಲವಾದ ವೇತನ ಸಮಾನತೆಯ ಜಾರಿ ಮತ್ತು ಈ ಸಮಸ್ಯೆಯನ್ನು ಎದುರಿಸಲು ಸಹಾಯ ಮಾಡುವ ಕಾನೂನುಗಳನ್ನು ರಚಿಸುವ ಅಗತ್ಯವಿದೆ. ಮಹಿಳೆಯರ ಕೆಲಸಕ್ಕೆ ಸರಿಯಾದ ಮೌಲ್ಯ ನೀಡದಿರುವುದು ದೊಡ್ಡ ಸಮಸ್ಯೆ. ಯಾರೊಬ್ಬರ ಕೆಲಸದ ಮೆಚ್ಚುಗೆ ಲಿಂಗದ ಆಧಾರದ ಮೇಲೆ ಆಗಬಾರದು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು.ಮತ್ತು ಸಮಾನ ಅವಕಾಶಗಳನ್ನು ಹಿಂಜರಿಕೆಯಿಲ್ಲದೇ ಬಳಸಲು ಪ್ರೋತ್ಸಾಹಿಸಬೇಕು.
ಕೊನೆ ಹನಿ:
ಮಹಿಳೆಯರ ಜೀವನವನ್ನು ಸುಧಾರಿಸಲು ಯೋಜಿಸುವಲ್ಲಿ ಭಾರತವು ನಿಸ್ಸಂಶಯವಾಗಿ ಬಹಳ ದೂರ ಸಾಗಿದ್ದರೂ ಮಹಿಳೆಯರ ಸಮಾನತೆ ಮತ್ತು ಯೋಗಕ್ಷೇಮಕ್ಕಾಗಿ ಹೋರಾಟವು ದೂರದಲ್ಲಿದೆ. ಮಹಿಳೆಯರ ಮೇಲಿನ ಹಿಂಸಾಚಾರ, ಲಿಂಗ ತಾರತಮ್ಯ ಮತ್ತು ವೇತನದ ಅಂತರವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಇನ್ನೂ ಕೆಲಸ ಮಾಡಬೇಕಾಗಿದೆ. ಮಹಿಳೆಯರು ಸುರಕ್ಷಿತ ಮತ್ತು ಮೌಲ್ಯಯುತವಾಗಿರುವ ಸಮಾಜವನ್ನು ನಿರ್ಮಿಸಲು ಇನ್ನೂ ಹಲವಾರು ಯೋಜನೆಗಳ ಅನುಷ್ಠಾನದ ಅವಶ್ಯಕತೆಯಿದೆ. ನಾವು ಪ್ರತಿಯೊಬ್ಬರೂ ಮಹಿಳೆಯರನ್ನು ಸಮಾನ ಪ್ರತಿರೂಪಗಳಾಗಿ ಪರಿಗಣಿಸಲು ಸಿದ್ಧರಾಗಿರಬೇಕು. ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವರಿಗೆ ಅಧಿಕಾರ ನೀಡಬೇಕು. ಮಹಿಳೆಯರ ಮೇಲಿನ ಅಪರಾಧಗಳಿಗ ಕಾನೂನನ್ನು ಹೆಚ್ಚು ಕಠಿಣಗೊಳಿಸಬೇಕು. ಮಹಿಳೆ ಸಂವೇದನಾಶೀಲಳು ಆಕೆಯ ಜೀವನ, ಎದುರಿಸುತ್ತಿರುವ ಸಮಸ್ಯೆಗಳು ಅವಳ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳುವ ಮೂಲಕ ಸಮಾಜವನ್ನು ಸುಗಮವಾಗಿ ನಡೆಸುವ ಬಗ್ಗೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳೋಣ. ಜೀವ ನೀಡುವ ಜೀವಕ್ಕೆ ಜೀವ ತುಂಬೋಣ.
ಜಯಶ್ರೀ.ಜೆ. ಅಬ್ಬಿಗೇರಿ.
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ 9449234142
Z it possible to escape from society systems gossips ??? Never mam time il sayz which glass n which z diamond jus hv to skip junk …things agn hv to focus on our distributed work
Comments are closed.