ಊರ ಜಾತ್ರೆಯಲ್ಲೂ ರಿಪೇರಿಯಾಗದ ಮೂಡಲಗಿ ಸೇತುವೆ

Must Read

ಜಾತ್ರೆಗೆ ಬಂದವರ ಛೀ… ಥೂ… ಗಳೇ ಪುರಸಭೆಗೆ ಬೆಂಡು ಬತ್ತಾಸು !!

ಮೂಡಲಗಿ: ಮೂಡಲಗಿಯ ಪುರಸಭೆಯ ಕಾರ್ಯವೈಖರಿ ಎಷ್ಟೊಂದು ಜಡ್ಡುಗಟ್ಟಿದೆಯೆಂಬುದಕ್ಕೆ ಒಂದೆ ಒಂದು ಉದಾಹರಣೆ ಎಂದರೆ ಊರ ಮಧ್ಯದಲ್ಲಿಯೇ ಇರುವ ಹಳ್ಳದ ಸಣ್ಣ ಸೇತುವೆ !

ಈ ಸೇತುವೆ ಪಾಪ ಏನು ಪಾಪ ಮಾಡಿದೆಯೋ ಏನೋ ರಿಪೇರಿ ಭಾಗ್ಯ ಇದಕ್ಕೆ ಇಲ್ಲ. ಪುರಸಭೆಯಿಂದ ಹಿಡಿದು ಶಾಸಕರ ತನಕ ಈ ಸೇತುವೆಯ ರಿಪೇರಿ ಬಗ್ಗೆ ಮನವಿಗಳು ಹೋದರೂ ಏನೂ ಪ್ರಯೋಜನವಿಲ್ಲದಾಯಿತು. ಅದು ಹೋಗಲಿ ಈಗ ಆ ಶಿವಬೋಧರಂಗನ ಜಾತ್ರೆಗೆ ಇಡೀ ಊರೇ ಶಿಂಗಾರಗೊಂಡಿದ್ದರೂ ಈ ಪೂಲ್ ಮಾತ್ರ ತಗ್ಗು ದಿನ್ನೆಗಳಿಂದ ತುಂಬಿಕೊಂಡು, ಮಳೆ ನೀರಿನಿಂದ ತುಂಬಿಕೊಂಡು ಗಬ್ಬುನಾರುತ್ತಿದೆ. ಪುರಸಭೆ ಅಧಿಕಾರಿಗಳಿಗೆ ಮಾತ್ರ ಇದರ ವಾಸನೆ ಬಡಿಯುತ್ತಿಲ್ಲ. ಕನಿಷ್ಟ ಪಕ್ಷ ಅದರಲ್ಲಿನ ತಗ್ಗುಗಳನ್ನು ಕೂಡ ಮುಚ್ಚುವ ಯೋಗ್ಯತೆಯಿಲ್ಲವಾಯಿತೆ ಮೂಡಲಗಿ ಮುನ್ಸಿಪಾಲಿಟಿಗೆ ? ಇದು ಸ್ವಚ್ಛ ಭಾರತ ಅಭಿಯಾನದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ !! ಅಬ್ಬಾ !!

ಶ್ರೀ ಶಿವಬೋಧ ರಂಗನ ಜಾತ್ರೆಯ ನಿಮಿತ್ತ ಊರ ತುಂಬೆಲ್ಲ ರಸ್ತೆಗಳಿಗೆ ನೀರು ಹಾಕಲಾಗುತ್ತಿದೆ. ಈ ಪೂಲ್ ಮೇಲೆ ಮಾತ್ರ ಈಗಾಗಲೇ ನೀರು ನಿಂತು ಕೊಳಚೆಯಂತಾಗಿದೆ ! ಪರ ಊರುಗಳಿಂದ ಜಾತ್ರೆಗೆಂದು ಬಂದ ಬೀಗರು ಬಿಜ್ಜರು ಈ ಸೇತುವೆಯನ್ನು ಕಂಡು ಮೂಡಲಗಿಯ ವೈಭವವನ್ನು ಹಾಡಿ ಹೊಗಳುತ್ತಾರೆ. ಬೇರೆ ಊರುಗಳಲ್ಲಿ ನೌಕರಿಗೆಂದು ಹೋಗಿರುವವರು ಊರ ಜಾತ್ರೆಗೆ ಬರುತ್ತಾರೆ, ಅರೆ, ಈ ಪೂಲು ಇನ್ನೂ ರಿಪೇರಿ ಆಗೇ ಇಲ್ಲವಾ ! ನಾನು ಚಿಕ್ಕವನಿದ್ದಾಗಿನಿಂದಲೂ ಹೀಗೆಯೇ ಇದೆ,  ಧನ್ಯ ಧನ್ಯ ಮೂಡಲಗಿ ಪುರವಾಸಿಗಳು ! ಎಂದು ಹಾಡು ಹಾಡುತ್ತಾರೆ. ಆ ಹಾಡುಗಳಲ್ಲಿ ವ್ಯಂಗ್ಯವಾಗಿ ಮಿಶ್ರಿತವಾಗಿರುವ ಛೀ….ಥೂ…ಎಂಬುದನ್ನು ನಾವು ವಿಧಿಯಿಲ್ಲದೆ ಸ್ವೀಕಾರ ಮಾಡಬೇಕಾಗುತ್ತದೆ. ಯಾಕೆಂದರೆ, ಅಂಥ ಪುರಸಭೆಯ ಆಡಳಿತ ಮಂಡಳಿ, ಅಧಿಕಾರಿ ವರ್ಗವನ್ನು ನಾವು ಹೊಂದಿದ್ದೇವೆ ಅದಕ್ಕಾಗಿ ನಮ್ಮ ಬೆನ್ನು ನಾವೇ ತಟ್ಟಿಕೊಳ್ಳಬೇಕು ಅಲ್ಲವೆ ? 

ಒಂದು ಪೂಲ್ ರಿಪೇರಿ ಮಾಡದ ಪುರಸಭೆ ಊರು ಸುಧಾರಣೆ ಮಾಡುತ್ತದೆಯೆಂಬ ತಿರುಕನ ಕನಸಿನಲ್ಲಿ ಮೂಡಲಗಿ ನಾಗರಿಕರಿದ್ದಾರೆ. ಹಲವು ಬಾರಿ ಹಲವು ಪತ್ರಿಕೆಗಳಲ್ಲಿ ಬರೆದರೂ, ಸ್ವತಃ ಪುರಸಭೆಗೇ ಅಹವಾಲು ಸಲ್ಲಿಸಿದರೂ, ಶಾಸಕರ ಕಚೇರಿಗೂ ತಿಳಿಸಿದ್ದರೂ ಈ ಸೇತುವೆಗೆ ರಿಪೇರಿ ಭಾಗ್ಯ ಬಂದಿಲ್ಲವೆಂದರೆ ಈ ಆಡಳಿತದ ಚರ್ಮ ಎಷ್ಟು ದಪ್ಪ ಇರಬೇಕು ಎಂಬುದೇ ತಿಳಿಯದಾಗಿದೆ. ಈ ಸಲವಾದರೂ ಆ ಶಿವಬೋಧರಂಗ ಕಣ್ಣು ತೆರೆದು ನೋಡುತ್ತಾನೋ ಇಲ್ಲವೋ ನೋಡಬೇಕು.


ಉಮೇಶ ಬೆಳಕೂಡ, ಮೂಡಲಗಿ

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group