ಸಿಂದಗಿ: ನಮ್ಮ ಜೀವನದ ಗುರಿ ಸಾಧನೆಗೆ ಯೋಗ್ಯ ಗುರುಗಳ ಅವಶ್ಯವಿದೆ. ಗುರುಗಳ ಸೂಕ್ತ ಮಾರ್ಗದರ್ಶನದಲ್ಲಿ ನಾವು ಗುರಿ ಮುಟ್ಟಲು ಸಾಧ್ಯವೆಂದು ವಿಜಯಪುರದ ಆರೋಗ್ಯ ಧಾಮದ ಹೃದಯ ರೋಗ ತಜ್ಞ ಡಾ. ಗೌತಮ್ ವಗ್ಗರ್ ಹೇಳಿದರು.
ಅವರು ಬಂದಾಳ ರಸ್ತೆಯಲ್ಲಿರುವ ವಿವೇಕ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ನಡೆದ ‘ವಿವೇಕ ಸಿರಿ ಸಂಭ್ರಮ‘ದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ, ವಿದ್ಯಾರ್ಥಿಗಳು ಗುರಿಯ ಕಡೆಗೆ ಗಮನ ಕೊಟ್ಟು ಗುರುವಿನ ಮಾರ್ಗದರ್ಶನದಲ್ಲಿ ಸಾಧನೆ ಮಾಡಿ ಸಾಧಕರಾಗಬೇಕೆಂದರು.
ಸಮಾರಂಭದ ಅತಿಥಿಗಳಾದ ಕಿಡ್ನಿ ತಜ್ಞೆ ಡಾ. ಮೋನಿಕಾ ಅವರು ಸ್ವಾಮಿ ವಿವೇಕಾನಂದರ ಹೆಸರನ್ನಿಟ್ಟುಕೊಂಡ ವಿವೇಕ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಅವರ ಆದರ್ಶಗಳನ್ನು ಮಕ್ಕಳಲ್ಲಿ ಮೈಗೂಡಿಸಬೇಕೆಂದರು.
ಇನ್ನೋರ್ವ ಅತಿಥಿಗಳಾಗಿದ್ದ ಮೇಕರ್ ಸುಧೀರ್ ಕೃಷ ಪೂಜಾರಿಯವರು ಮಾತನಾಡುತ್ತಾ ಸಿಂದಗಿಯ ವಿವೇಕ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಗುಣಾತ್ಮಕ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದರು.
ಪ್ರಾಂಶುಪಾಲರಾದ ಶ್ರೀಮತಿ ಶಾಹಿಮೋಲ್ ರಾಬಿನ್ ಅವರು ವಾರ್ಷಿಕ ವರದಿ ವಾಚನ ಮಾಡಿದರು. ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ನೀಲಮ್ಮ ಹೆಗ್ಗನದೊಡ್ಡಿ, ಆಡಳಿತಾಧಿಕಾರಿ ಟೆನಿ ರಾಬಿನ್, ಸಂಸ್ಥಾಪಕ ಎ. ಆರ್. ಹೆಗ್ಗನದೊಡ್ಡಿ ವೇದಿಕೆಯ ಮೇಲಿದ್ದರು. ಸಾಂಸ್ಕೃತಿಕ ಸ್ಪರ್ಧೆ ಮತ್ತು ಕ್ರೀಡಾ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಶಿವನಗೌಡ ಬಿರಾದರ್, ಪತ್ರಕರ್ತ ಆನಂದ ಶಾಬಾದಿ, ರಾಯಣ್ಣ ಇವಣಗಿ, ರಾ.ಶಿ. ವಾಡೇದ್, ಸಿ.ಎಸ್.ಪೂಜಾರಿಯವರನ್ನು ಸನ್ಮಾನಿಸಲಾಯಿತು.
ಮಕ್ಕಳಿಂದ ಆಕರ್ಷಕ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಿಕ್ಷಕಿ ಪ್ರಿಯದರ್ಶಿನಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಸಂಸತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಕುಮಾರ್ ಸಂಪ್ರೀತ ಚೌದ್ರಿ ಮತ್ತು ಕುಮಾರಿ ಶ್ರೀನಿಧಿ ಕುಲಕರ್ಣಿ ವಂದಿಸಿದರು.