ನಾವು ಒಬ್ಬಂಟಿಯಾಗಿರಲು ಬಯಸುವುದು ತುಂಬಾ ವಿರಳ. ಕುಟುಂಬದ ಜೊತೆ ಇರಲು ಇಚ್ಛಿಸುತ್ತೇವೆ. ಮೇಲಿಂದ ಮೇಲೆ ಸ್ನೇಹಿತರ ಜೊತೆ ಸಮಯ ಕಳೆಯಲು ನಮ್ಮ ಮನಸ್ಸು ಹಾತೊರೆಯುತ್ತದೆ. ಏಕೆಂದರೆ ಮನುಷ್ಯ ಮೂಲತಃ ಸಂಘಜೀವಿ. ಜನರು ತಾವು ಇಷ್ಟಪಡುವ ಜನರೊಂದಿಗೆ ವ್ಯವಹರಿಸಲು ಇಷ್ಟಪಡುತ್ತಾರೆ. ಸಂಬಂಧಗಳನ್ನು ಇನ್ನಷ್ಟು ಮತ್ತಷ್ಟು ಮಧುರವಾಗಿಸಿಕೊಳ್ಳಲು ಇಚ್ಛಿಸುತ್ತಾರೆ. ಇದೆಲ್ಲ ಸರಿಯೇ ಹಾಗಂತ ಗುಂಪಿನಲ್ಲಿ ಗೋವಿಂದ ಆಗುವ ದಾರಿಯಲ್ಲಿ ಮುನ್ನುಗ್ಗಿದರೆ ಆಗುವ ಹಾನಿ ಅಷ್ಟಿಷ್ಟಲ್ಲ.
ಸಮೂಹ ಸನ್ನಿ
ಒಂದು ಕುರಿ ಬ್ಯಾ ಅಂದ ತಕ್ಷಣ ಉಳಿದೆಲ್ಲ ಕುರಿಗಳು ಬ್ಯಾ ಅನ್ನುವಂತೆ ಜನರ ಗುಂಪಿನಲ್ಲಿ ಸೇರಿದಾಗ ಗುಂಪು ಏನು ಮಾಡುತ್ತದೆಯೋ ಅದನ್ನೇ ಪ್ರತಿ ವ್ಯಕ್ತಿ ಮಾಡುತ್ತಾನೆ. ಆಗ ವೈಯಕ್ತಿಕವಾಗಿ ಆಲೋಚಿಸುವುದೇ ಇಲ್ಲ. ಒಬ್ಬರು ಕಲ್ಲು ಎಸೆದರೆ ಉಳಿದವರು ಕಲ್ಲು ಎಸೆಯಲು ಶುರು ಹಚ್ಚಿಕೊಳ್ಳುತ್ತಾರೆ. ಒಬ್ಬರು ಅಸಹ್ಯ ಪದಗಳನ್ನು ಬಳಸಿದರೆ ಉಳಿದವರೂ ಅದೇ ದಾರಿಯಲ್ಲಿ ಹೆಜ್ಜೆ ಇಡುತ್ತಾರೆ. ಅದರಂತೆ ಒಬ್ಬರು ಜೈಕಾರ ಕೂಗಿದರೆ ಉಳಿದವರೂ ಹಿಂಬಾಲಿಸುತ್ತಾರೆ.ಕಸ ಹಾಕಲೆಂದು ಇಟ್ಟ ಡಬ್ಬಿಗಳಲ್ಲಿ ಕಸ ಒಗೆಯದೇ ಎಲ್ಲೆಂದರಲ್ಲಿ ಕಸ ಚೆಲ್ಲುತ್ತಾರೆ. ನಾನೊಬ್ಬನೇ ಡಬ್ಬಿಯಲ್ಲಿ ಹಾಕಿದರೆ ಸುಧಾರಣೆಯಾಗುವುದೇ ಎಂಬ ಬೇಜವಾಬ್ದಾರಿತನದ ಉದಾಸೀನ ಮಾತು ಬೇರೆ. ಇದೊಂದು ತರಹ ಸಮೂಹ ಸನ್ನಿ.
ನಾವೆಲ್ಲರೂ ಒಂದೇ ಬಟ್ಟೆಯ ಚೂರುಗಳು ಅದೇ ಮೂಳೆಮಾಂಸದ ತಡಿಕೆಗಳು ಅಲ್ಲವೇ? ಅಷ್ಟಕ್ಕೂ ನಮಗೇ ಗೊತ್ತಿಲ್ಲದಂತೆ ನಾವು ನಾವಾಗಿಯೇ ಇರುವುದಿಲ್ಲ. ಗುಂಪಿನಲ್ಲಿರುವಾಗ ಭೂತ ಮೆತ್ತಿದವರಿಂತೆ ಆಡುತ್ತೇವೆ. ಅದೇ ವೈಯಕ್ತಿಕವಾಗಿ ಒಬ್ಬರೇ ಹಾಗೆ ಆಡಲು ಭಯಪಡುತ್ತೇವೆ. ಗುಂಪಿನಲ್ಲಿ ಭಯ ಕಾಡದು. ಇದೇ ಸಮೂಹ ಸನ್ನಿ.
ಲಗಾಮು
ಜೀವನದಲ್ಲಿ ಅಥವಾ ವೃತ್ತಿಯಲ್ಲಿ ಅದ್ಭುತವಾದುದನ್ನು ಸಾಧಿಸುವ ವ್ಯಕ್ತಿಗಳೆಲ್ಲ ಸಮೂಹ ಸನ್ನಿಗೆ ಒಳಗಾಗಲು ಇಷ್ಟಪಡುವುದಿಲ್ಲ. ಉಳಿದವರಂತೆ ತಾವೂ ಆ ರೀತಿ ಮಾಡುವುದಿಲ್ಲ. ಬದಲಾಗಿ ವಿಭಿನ್ನವಾಗಿ ವಿಚಾರ ಮಾಡುತ್ತಾನೆ. ಪ್ರತಿಭಟನೆಗಳಲ್ಲಿ ಮುಷ್ಕರಗಳಲ್ಲಿ ಗದ್ದಲವನ್ನು ತಹಬಂದಿಗೆ ತರಲು ಯೋಚಿಸುತ್ತಾನೆ. ಸಾರ್ವಜನಿಕ ಆಸ್ತಿಗೆ ಹಾನಿಯಾಗದಂತೆ ತಡೆಯಲು ಯತ್ನಿಸುತ್ತಾನೆ. ಅದು ನಿಜವಾದ ವಿವೇಕ. ಗುಂಪಿನಲ್ಲಿರುವಾಗ ಬಹುತೇಕರು ಭಾವನಾತ್ಮಕ ನಿಯಂತ್ರಣವನ್ನು ಕಳೆದುಕೊಂಡು ಬಿಡುತ್ತಾರೆ. ಆವೇಶದಲ್ಲಿ ಮನಸ್ಸಿಗೆ ಲಗಾಮು ಹಾಕದೇ ನಡೆದುಕೊಳ್ಳುತ್ತಾರೆ.
ಮಾದರಿ
ಆದರ್ಶದ ಮಾದರಿಗಳಾದವರು ಗುಂಪನ್ನು ಸೇರುವ ಯೋಚನೆಯನ್ನು ಮಾಡುವುದೇ ಇಲ್ಲ. ನನಗೇಕೆ ಬೇಕು ಎಂದು ಬಿಡುವುದೂ ಇಲ್ಲ. ಜೀವನದಲ್ಲಿ ಅತ್ಯುನ್ನತಿ ಸಾಧಿಸಲು ಶ್ರಮಿಸುತ್ತ ತನ್ಮೂಲಕ ಇತರರಿಗೆ ಮಾದರಿಯಾದ ನೂರಾರು ವ್ಯಕ್ತಿಗಳು ನಮಗೆ ಕಾಣಸಿಗುತ್ತಾರೆ.
ಸರಳ ಸಂಗತಿ
ಒಂದು ಪ್ರಮುಖ ಸಂಗತಿಯೆಂದರೆ, ಗುಂಪಿನಲ್ಲಿರುವ ಜನರು ಒಬ್ಬಂಟಿಯಾಗಿ ಸೌಜನ್ಯ, ವಿನಯ, ವಿಶ್ವಾಸಾರ್ಹವುಳ್ಳ ವ್ಯಕ್ತಿಯಾಗಿರಲು ಬಯಸುತ್ತಾರೆ. ಅದರಂತೆ ಉಳಿದವರು ನೀವೆಂಥ ಮನುಷ್ಯನೆಂದು ಕಣ್ಣಲ್ಲಿ ಕಣ್ಣಿಟ್ಟು ನೋಡಿ, ತಿಳಿಯಲು ಬಯಸುತ್ತಾರೆ.. ನೀವು ಎಂಥ ಅಭಿರುಚಿಯ ವ್ಯಕ್ತಿ ಮತ್ತು ಅಪ್ಪಟ ಉತ್ತಮ ವ್ಯಕ್ತಿ ಎಂದು ಮನದಟ್ಟಾದಾಗ ವ್ಯವಹಾರ ಮಾಡಲು ತೆರೆದುಕೊಳ್ಳುತ್ತಾರೆ. ನೀವು ಒಳ್ಳೆಯವರಾದರೆ ಅವರು ಒಳ್ಳೆಯವರಾಗುತ್ತಾರೆ. ಅವರ ಹಿತಾಸಕ್ತಿಗಳ ಬಗ್ಗೆ ನಿಮಗೆ ನಿಜವಾದ ಹಿತಾಸಕ್ತಿಯಿದೆ ಎಂದು ತಿಳಿದಾಗ ಮಾತ್ರ ನಿಮ್ಮ ಹಿತಾಸಕ್ತಿಗಳ ಬಗ್ಗೆ ಆಸ್ಥೆ ವಹಿಸುತ್ತಾರೆ. ಇದು ಎಲ್ಲರಿಗೂ ತಿಳಿದಿರುವ ಸರಳ ಸಂಗತಿ. ಆದರೆ ಬಹುತೇಕರು ಈ ಮೂಲ ಸತ್ಯವನ್ನು ತಿಳಿಯುವ, ಅರ್ಥಮಾಡಿಕೊಳ್ಳುವ ಗೋಜಿಗೇ ಹೋಗುವುದಿಲ್ಲ.
ಪ್ರಾಮಾಣಿಕನಾಗಿರು
‘ನಿನಗೆ ನೀನು ಪ್ರಾಮಾಣಿಕವಾಗಿರು,’ ಎಂದು ಹೇಳಿದ್ದಾನೆ ಶೇಕ್ಸ್ಪಿಯರ್. ಬಹಳಷ್ಟು ಸಂದರ್ಭಗಳಲ್ಲಿ ಸಮೂಹ ಸನ್ನಿಗೆ ಒಳಗಾಗಿ ನಾವು ನಾವಾಗಿಯೇ ಉಳಿಯುವುದಿಲ್ಲ. ಅನೇಕ ಸಂಗತಿಗಳಲ್ಲಿ ಗುಂಪಿನಲ್ಲಿ ಗೋವಿಂದ ಆಗಿರದಿದ್ದರೆ ಈ ಸಮಾಜ ಈಗಿರುವುದಕ್ಕಿಂತ ತುಂಬಾ ಚೆನ್ನಾಗಿರುತ್ತಿತ್ತು. ಬಹಳಷ್ಟು ವಿಷಯಗಳಲ್ಲಿ ಸಮಾಜವನ್ನು ಬೈಯುವ ನಾವು, ನಾವೂ ಸಹ ಅದರ ಭಾಗವೇ ಎಂಬುದನ್ನು ಮರೆತುಬಿಡುತ್ತೇವೆ. ಯಾರೋ ನಮ್ಮನ್ನು ನೋಡುತ್ತಿದ್ದಾರೆ ಎಂದಾಗ ಮಾತ್ರ ನಾವು ಪ್ರಾಮಾಣಿಕವಾಗಿರುತ್ತೇವೆ. ಇಲ್ಲದಿದ್ದರೆ ಬೇಕಾಬಿಟ್ಟಿ ನಡೆದುಕೊಳ್ಳುತ್ತೇವೆ. ಆದ್ದರಿಂದ ಶೇಕ್ಸ್ಪಿಯರ್ ಹೇಳಿದ ಮಾತು ಸೂಕ್ತವೆನಿಸುತ್ತದೆ. ಬೇರೆಯವರಿಗೆ ತೋರಿಸಲು ಪ್ರಾಮಾಣಿಕನಾಗಲು ಹೋಗಬೇಡ ಬದಲಾಗಿ ನಿನಗೆ ನೀ ಪ್ರಾಮಾಣಿಕನಾಗಿರು.
ಗಟ್ಟಿ ಬಂಡೆಯಂತೆ
ಸಾಮಾಜಿಕ ನಿಷ್ಠೆ ಬದ್ಧತೆ ಜೊತೆಗೂಡಿದಾಗ ಎಂಥ ಅದ್ಭುತ ಸಾಧಿಸಬಹುದೆಂಬುದನ್ನು ಅನೇಕ ಮಹನೀಯರು ಈಗಾಗಲೇ ಸಾಧಿಸಿ ತೋರಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಂದಾಳತ್ವವನ್ನು ವಹಿಸಿದ ಮಹಾತ್ಮ ಗಾಂಧೀಜಿ, ನೆಲ್ಸನ್ ಮಂಡೆಲಾ, ಸರ್ ಎಮ್ ವಿಶ್ವೇಶ್ವರಯ್ಯ ಇನ್ನೂ ಅನೇಕ ಅಪ್ರತಿಮ ಸಾಧಕರು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಮೆರೆದುದಕ್ಕೆ ಎಂದೆಂದಿಗೂ ಮಾದರಿಗಳಾಗಿ ಉಳಿಯುತ್ತಾರೆ. ಅವರೆಲ್ಲ ಎಂಥ ಕಠೋರ ಪರಿಸ್ಥಿತಿಯಲ್ಲೂ ಗಟ್ಟಿಯಾಗಿ ಬಂಡೆಯಂತೆ ನಿಂತಿದ್ದನ್ನು ಸ್ಪಷ್ಟವಾಗಿ ಕಾಣಬಹುದು.
ಕೊನೆ ಹನಿ
ಬೀಚಿಯವರು ಹೇಳಿದಂತೆ
ನಿನ್ನಂತೆ ನೀನಾಗು ನಿನ್ನ ನೀ ಅರಿ ಮೊದಲು
ಚೆನ್ನೆಂದು ದೊಡ್ಡವರ ಅನುಕರಿಸಬೇಡ
ಏನಾಯ್ತು ಮರಿ ಕತ್ತೆ? ಚೆಲುವಿತ್ತು ಮುದ್ದಿತ್ತು
ತನ್ನಪ್ಪನಂತಾಗಿ ಹಾಳಾಯ್ತೊ ತಿಂಮ
ಗುಂಪಿನಲ್ಲಿ ಗೋವಿಂದ ಆದರೆ ಈಗಾಗಲೇ ಸವೆದ ದಾರಿಯಲ್ಲಿಯೇ ನಡೆದಂತೆ. ಹೊಸ ದೃಷ್ಟಿಕೋನಗಳನ್ನು ಹೊಸ ಸಾಧ್ಯತೆಗಳನ್ನು ತಿಳಿಯಲು ಅಭಿಲಾಷೆ ತೋರದಿದ್ದರೆ ಪ್ರಗತಿ ಕುಂಠಿತವಾಗುತ್ತದೆ. ಕ್ರಮೇಣ ಅಧೋಗತಿಯ ಬಾಗಿಲು ತೆರೆಯಲು ಆರಂಭವಾಗುತ್ತದೆ. ಅಧೋಗತಿಯ ಬಾಗಿಲು ತೆರೆಯುವ ಮೊದಲೇ ಪ್ರಗತಿಯ ಕಿಟಕಿಯಿಂದ ಹೊನ್ನ ಕಿರಣಗಳು ಹೊರಸೂಸಲಿ ಅಲ್ಲವೇ?
====================================
ಜಯಶ್ರೀ.ಜೆ.ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ ೯೪೪೯೨೩೪೧೪೨