ಲೇಖನ : ಗೆಲುವಿಗೆ ಶತ್ರುಗಳಿವೆ. . . . ಎಚ್ಚರಿಕೆ‼

Must Read

ನನ್ನಲ್ಲಿರುವ ಚೂರು ಪಾರು ಆತ್ಮವಿಶ್ವಾಸವನ್ನು ಒಗ್ಗೂಡಿಸಿ ಏನನ್ನೇ ಮಾಡಲು ಹೊರಟರೂ ಉತ್ಸಾಹಕ್ಕೆ ತಣ್ಣೀರೆರುಚುವವರು ಸುತ್ತಲೂ ಸುತ್ತುವರೆದಂತೆ ಇರುತ್ತಾರೆ. ಅಷ್ಟೇ ಅಲ್ಲ ಮನದಲ್ಲಿ ಉಕ್ಕುತ್ತಿರುವ ಹಂಬಲವನ್ನು ಚಿವುಟಿ ಚಿಂದಿ ಮಾಡುತ್ತಾರೆ.ಎಷ್ಟೋ ಸಲ ನನ್ನಿಂದ ಏನೂ ಆಗುವುದಿಲ್ಲ ಅನ್ನುವ ಭಾವವನ್ನು ಮೂಡಿಸುವವರೂ ಇದ್ದಾರೆ. ಅವರಿವರ ಇಂಥ ಗಿರಕಿಯೊಳಗೆ ಸಿಕ್ಕಿ ಬಿದ್ದರೆ ನನ್ನ ಕಥೆ ಮುಗಿದೇ ಹೋಗುತ್ತದೆ ಅಂತ ಅನ್ನಿಸಿದರೂ ಅದರಿಂದಾಚೆ ಬರಲು ಆಗುತ್ತಿಲ್ಲ.

‘ಏನಾದರೂ ಆಗಲಿ ಮುನ್ನುಗ್ಗು ಎಂಥ ಸೋಲೇ ಎದುರಾದರೂ ಎದೆಗುಂದಬೇಡ ಧೈರ್ಯದಿಂದ ಹೆಜ್ಜೆ ಹಾಕು. ‘ಛಲವೇ ಗೆಲುವಿನ ಬಲ.’ ಎಂದು ಗುರುಗಳು ಹೇಳಿದ ಮಾತುಗಳನ್ನು ನೆನೆದಾಗಲೊಮ್ಮೆ “ಗೆಲ್ಲುವುದು ಕಷ್ಟವಲ್ಲ ಗೆಲ್ಲಲೇಬೇಕೆಂದು ಮನಸ್ಸು ಮಾಡುವುದು ಕಷ್ಟ. ದೃಢ ಸಂಕಲ್ಪ ತೊಡುವುದು ಇನ್ನೂ ಕಷ್ಟ..”ಎಂದೆನಿಸುತ್ತದೆ. ಇದು ಬಹುತೇಕ ಯುವ ಸ್ಪರ್ಧಾರ್ಥಿಗಳ ಮತ್ತು ವಿದ್ಯಾರ್ಥಿಗಳ ಸ್ವಗತವಾಗಿದೆ.

ಗೆಲುವು. . . .
ಗೆಲುವು ಯಾರಿಗೆ ಬೇಡ ಹೇಳಿ? ಪ್ರತಿಯೊಬ್ಬರೂ ಗೆಲ್ಲಲು ಬಯಸುತ್ತಾರೆ.ಕನಸುಗಳು ಬೇರೆ ಬೇರೆ ಬಣ್ಣ ಸುರಿದು ಕೈ ಬೀಸಿ ಕರೆಯುತ್ತವೆ. ಇನ್ನೇನು ಗೆಲುವು ಕೈಯಲ್ಲಿ ಸಿಕ್ಕಿತು ಎನ್ನುವಷ್ಟರಲ್ಲಿ ಕೈ ಜಾರಿದ ಕಹಿ ಅನುಭವವನ್ನು ಮರೆಯುವದಾದರೂ ಹೇಗೆ? ಗೆಲುವಿನ ವಿಷಯವಾಗಿ ಅನೇಕ ಸಲ ಮನಸ್ಸಿಗೆ ಮತ್ತು ಬುದ್ಧಿಗೆ ಚಕಮಕಿ ನಡೆದಿರುತ್ತದೆ. ಕೆಲವೊಮ್ಮೆ ಗುರಿಯ ಕುರಿತು ಬಲು ಶಿಸ್ತಿನ ವ್ಯಕ್ತಿಯಾದರೂ ಗೆಲುವು ಮರೀಚಿಕೆ ಆಗುವುದುಂಟು. ಯಶಸ್ಸಿನ ವಿಷಯದಲ್ಲಿ ಅಸಮಾಧಾನದಲ್ಲಿ ಇರುವುದನ್ನು ಕಾಣುತ್ತೇವೆ.ನನ್ನ ಜೀವನ ಈಗ ಯಾವ ಘಟ್ಟದಲ್ಲಿದೆ ಅದನ್ನು ಎಲ್ಲಿಗೆ ಕೊಂಡೊಯ್ಯಬೇಕು? ಗೆಲುವಿನತ್ತ ಹೆಜ್ಜೆ ಹಾಕುವುದು ಹೇಗೆ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ಹೊರಟಾಗ ಜೀವನ ಧ್ಯೇಯವನ್ನು ಕಂಡುಕೊಂಡು ಆ ಗುರಿಯತ್ತ ದಿಟ್ಟ ಹೆಜ್ಜೆ ಹಾಕುವಾಗ ಏಕಾಂಗಿಯಾಗಿ ಉಳಿಯುವ ಮಾತಿಲ್ಲ. ‘ ರೈತ ಬಿತ್ತಿದ ತಕ್ಷಣ ಫಲ ಬರುವುದಿಲ್ಲ. ನೀರು ಗೊಬ್ಬರ ಸಕಾಲಕ್ಕೆ ಹಾಕಿದ ಮೇಲೆ ಅಲ್ಲವೇ ಬೆಳೆ ಬರುವುದು.’ ಹಾಗೆಯೇ ಗೆಲುವೂ ಸಹ. ಮನಸ್ಸಿನಲ್ಲಿ ಗೆಲ್ಲಬೇಕೆನ್ನುವ ಬಯಕೆ ಮೂಡಿದರೆ ಸಾಲದು ಅದಕ್ಕೆ ಪೂರಕ ಅಂಶಗಳನ್ನು ಪೂರೈಸಿದಾಗ ಮಾತ್ರ ಫಲಿಸುವುದು. ಸ್ವಯಂ ಪ್ರೀತಿ ಇಲ್ಲದಿರುವುದು ಗೆಲುವಿನ ಗಿಡಕ್ಕೆ ಕಾಡುವ ಕ್ರಿಮಿ ಇದ್ದಂತೆ. ರೋಲೋ ಮೇ ಹೇಳುವಂತೆ ‘ಸ್ವಯಂ-ಪ್ರೀತಿ ಅವಶ್ಯಕ ಮತ್ತು ಒಳ್ಳೆಯದು ಮಾತ್ರವಲ್ಲ ಅದು ಇತರರನ್ನು ಪ್ರೀತಿಸಲು ಸಹ ಒಂದು ಪೂರ್ವಭಾವಿ ಅಗತ್ಯವಾಗಿರುತ್ತದೆ.’

ಬೆಳೆಯನ್ನು ಕಾಡುವ ಕ್ರಿಮಿಗಳಿಗೆ ಕೀಟನಾಶಕ ಸಿಂಪಡಿಸಿ ನಿಯಂತ್ರಿಸಿದಂತೆ ಗೆಲುವಿನ ಶತ್ರುಗಳಾವವು? ಅವುಗಳನ್ನು ನಿಯಂತ್ರಿಸುವುದು ಹೇಗೆ ಎಂಬುದನ್ನು ತಿಳಿಯಬೇಕೇ? ಹಾಗಾದರೆ ಮುಂದಕ್ಕೆ ಓದಿ.. . .

ಸ್ಪಷ್ಟ ಗುರಿ
ಬಹುತೇಕರು ಎಡುವುವುದೇ ಇಲ್ಲಿ. ಗುರಿಯ ನಿರ್ಧಾರವಿಲ್ಲದಿದ್ದರೆ ಹೋಗುವುದಾದರೂ ಎಲ್ಲಿಗೆ? ಗಾಳಿಯಲ್ಲಿ ಹೊರಟ ಕರುವಿನಂತೆ ಆಗುತ್ತದೆ ಬದುಕು. ಕಡಲಯಾನಿಗಳಿಗೆ ಬೇಕಾದ ಪ್ರಮುಖ ವಸ್ತು ಎಂದರೆ ದಿಕ್ಸೂಚಿ. ಹೋಗುವ ದಿಕ್ಕು ಗೊತ್ತಿಲ್ಲದೇ ಮುನ್ನಡೆದರೆ ಆಪತ್ತು ಕಟ್ಟಿಟ್ಟ ಬುತ್ತಿ. ಎಲ್ಲವೂ ಇದ್ದು ಏನೂ ಇಲ್ಲದವರ ತರಹ ಹಲಬುವುದು ಗೋಳಾಡುವುದೇ ಜೀವನವಾಗಬಾರದು. ಸ್ಪಷ್ಟ ಗುರಿ ಇಲ್ಲದಿರುವುದು ಗೆಲುವಿಗೆ ದೊಡ್ಡ ಶತ್ರು. ಗುರಿಯನ್ನೇ ಗುರುತಿಸದಿರುವುದು. ಗುರಿ ನಿರ್ಧಾರವು ಒಂದು ಸಾಹಸ ಸಂಕೇತ. ಗುರಿ ನಿರ್ಧರಿಸುವುದು ಮತ್ತು ಅದನ್ನು ಎಡೆಬಿಡದೇ ಅನುಸರಿಸುವುದು ಅನಿವಾರ್ಯ. ಯೋಜನೆಗಳನ್ನು ಹಾಕದಿರುವುದು. ಯೋಜನೆಗಳು ನಕ್ಷತ್ರಗಳಂತೆ ಗುರಿಯತ್ತ ಚಲಿಸುವಾಗ ಅವುಗಳನ್ನು ಮಾರ್ಗ ಸೂಚಿಗಳಂತೆ ಆಯ್ಕೆ ಮಾಡಿಕೊಳ್ಳಬೇಕು.ಆ ದಾರಿಗುಂಟ ಗಮ್ಯ ಸ್ಥಾನವನ್ನು ತಲುಪಬಲ್ಲೆವು. ಬದ್ಧತೆಗಳು ನಂಬಿಕೆಗಳು ಸಮಾನವಾಗಿರದಿದ್ದರೆ ಜೀವನದಲ್ಲಿ ಸುಖದಿಂದ ಇರಲು ಸಾಧ್ಯವಿಲ್ಲ ಅಂತೇಯೇ ಗುರಿ ಇಲ್ಲದ ಜೀವನ ಗೆಲುವಿನ ದಡ ಸೇರಲು ಸಾಧವಿಲ್ಲ.. ಗುರಿ ನಮ್ಮ ಮನಸ್ಸಿಗೆ ಸ್ಪೂರ್ತಿ ನೀಡುತ್ತದೆ. ಬರೆದಿಟ್ಟ ಗುರಿಯತ್ತ ದಿಟ್ಟ ಹೆಜ್ಜೆ ಇಡುವಂತೆ ಮಾಡುತ್ತದೆ. ’ಸ್ಪಷ್ಟ ಗುರಿ ಎಂದರೆ ಸಾಮಾನ್ಯನಾಗಿಯೇ ಇರಲು ನಿರಾಕರಿಸುವುದು.. ಅಸಾಮಾನ್ಯನಾಗುವ ನಿರ್ಧಾರ ಕೈಗೊಂಡಂತೆ.’ ಮುಂದಿನ ಜೀವನದ ದಿಟ್ಟ ಪ್ರಯತ್ನ. ಏಕೆಂದರೆ ಅದು ನಿಮ್ಮಲ್ಲಿ ಅಡಗಿರುವ ಸೂಪ್ತ ಶಕ್ತಿಗಳನ್ನು ಸಾಧ್ಯತೆಗಳನ್ನು ಹೊರಗೆಳೆಯುವ ಚೈತ್ರ ಕಾಲ.

ಆಲಸ್ಯತನ
ಆಲಸ್ಯ ನಮ್ಮ ಶರೀರದೊಳಗೇ ಇರುವ ದೊಡ್ಡ ಶತ್ರು. ಇದನ್ನು ಹೊರ ಓಡಿಸಲು ಮನಸ್ಸು ಮಾಡದಿದ್ದರೆ ಜೀವನವನ್ನು ನುಂಗಿ ಹಾಕಿ ಬಿಡುತ್ತದೆ. ಬಣ್ಣದ ಮಾತುಗಳನ್ನು ಹೇಳುತ್ತ ಕುಳಿತರೆ ಬದುಕು ಉದ್ದಾರವಾಗುವುದಿಲ್ಲ ಎಂಬುದು ಕಟು ಸತ್ಯ. ‘ನಾವು ಪಡೆದುಕೊಳ್ಳುವ ವಸ್ತುಗಳಲ್ಲೆಲ್ಲಾ ಬಹು ಬೇಸರದಿಂದ ಪಡೆದುಕೊಳ್ಳುವುದು ಬುದ್ಧಿವಾದ.’ ಎನ್ನುವ ಸಂಗತಿ ಎಲ್ಲರಿಗೂ ಗೊತ್ತಿರುವುದೇ. ಗುರು ಹಿರಿಯರು ಹೇಳುವ ಬುದ್ಧಿವಾದವನ್ನು ಕಿವಿಗೆ ಹಾಕಿಕೊಳ್ಳದೇ ಆಲಸ್ಯತನವನ್ನೇ ಸಮರ್ಥಿಸಿಕೊಳ್ಳುವುದನ್ನು ರೂಢಿಸಿಕೊಂಡಿರುವುದು ಶೋಚನೀಯ ವಿಚಾರ. ‘ಸಮರ್ಥತೆ ಇರಲಾರದೇ ಆರ್ಥಿಕತೆ ಇರಲಾರದು.’ಎಂಬುದು ಬಲ್ಲವರ ಮಾತು. ಅಂತೆಯೇ ‘ಶ್ರಮವಿರಲಾರದೇ ಗೆಲುವು ಇರಲಾರದು.’ ಎಂಬ ನುಡಿಯನ್ನು ಅದಕ್ಕೆ ಜೋಡಿಸಬಹುದು. ಇದು ಸಾರ್ವಕಾಲಿಕ ಸತ್ಯ ಕೂಡ. ಕಷ್ಟ ನಷ್ಟಗಳ ನಡುವೆ ಫೀನಿಕ್ಸ್ ಪಕ್ಷಿಯಂತೆ ಮೈ ಕೊಡವಿ ಎದ್ದು ನಿಂತು ಬದುಕಿ ಬಾಳುವವರ ಚಿತ್ರಣಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡುತ್ತಿರುತ್ತವೆ. ಅಂಥವುಗಳನ್ನೆಲ್ಲ ನೋಡಿದಾಗೊಮ್ಮೆ ನಾನೂ ಹಾಗೆ ಆಗಬೇಕೆಂದುಕೊಂಡರೂ ಮನಸ್ಸು ಮಾತ್ರ ಚೇತನ ಆವಸ್ಥೆಗೆ ಬರುವುದೇ ಇಲ್ಲ. ಅದಕ್ಕೆ ಎಲ್ಲ ಕಾರಣ ದೃಢ ಸಂಕಲ್ಪದ ಅಭಾವ. ‘ಅಚಲ ಸಂಕಲ್ಪವೇ ಆಲಸ್ಯತನಕ್ಕೆ ಮದ್ದು.’ ಶ್ರದ್ಧೆಯ ದುಡಿಮೆಗೆ ಮೋಸವಿಲ್ಲವೆಂದು ಗುರಿಯ ದಾರಿಯಲ್ಲಿ ಹೆಜ್ಜೆ ಹಾಕಬೇಕು.ಸೋಮಾರಿತನದ ಗೂಡಾದ ಮೆದುಳು ತಾರ್ಕಿಕವಾಗಿ ಏನನ್ನೂ ಯೋಚಿಸದು. ಆದ್ದರಿಂದ ಸೋಮಾರಿತನದ ಬೇರನ್ನು ಕಿತ್ತೊಗೆಯುವುದೊಂದೇ ದಾರಿ.

ಸಮಯ ನಿರ್ವಹಣೆ
ಬಹುತೇಕ ಪ್ರಾಜ್ಞರ ಪ್ರಕಾರ ‘ಜೀವನವೆಂದರೆ ಸಮಯ.’ ಸಮಯ ನಿರ್ವಹಣೆಯಲ್ಲಿಯೇ ಜೀವನದ ನೋವು ನಲಿವು ಸೋಲು ಗೆಲುವು ಎಲ್ಲವೂ ಅಡಗಿವೆ. ಮಾಡುವ ಕೆಲಸಗಳ ಬಗೆಗೆ ಸರಿಯಾದ ಚಿತ್ರಣ ಇರದಿದ್ದರೆ ಸಿಕ್ಕ ಸಿಕ್ಕ ಕೆಲಸಗಳನ್ನು ಮಾಡಿ ಸಮಯ ಪೋಲು ಮಾಡಿ ಬಿಡುತ್ತೇವೆ. ಅಷ್ಟೇ ಅಲ್ಲ ಮಾಡಬೇಕಾದ ಸಮಯದೊಳಗೆ ಕೆಲಸವನ್ನು ಮುಗಿಸಲು ಆಗುವುದಿಲ್ಲ ಮುಖ್ಯವಾದ ಕೆಲಸಗಳಿಗೆ ಸಮಯವೇ ಇಲ್ಲದಂತಾಗುತ್ತದೆ.ಕೆಲಸಗಳ ಪ್ರಾಮುಖ್ಯತೆಯ ಅರಿವಿಲ್ಲದೇ ಕಷ್ಟ ಪಟ್ಟು ಕೆಲಸ ಮಾಡಿದರೂ ಸರಿಯಾದ ಫಲಿತಾಂಶ ದೊರೆಯುವುದಿಲ್ಲ.ಆದ್ದರಿಂದ ಪ್ರತಿನಿತ್ಯ ಮಾಡಬೇಕಾದ ಕೆಲಸಗಳ ಪಟ್ಟಿಯನ್ನು ಹಿಂದಿನ ದಿನ ರಾತ್ರಿ ಇಲ್ಲವೇ ಬೆಳಿಗ್ಗೆ ತಯಾರಿಸಿಕೊಳ್ಳುವುದು ಸೂಕ್ತ. ಮುಖ್ಯವಾದ ಕೆಲಸಗಳಲ್ಲಿ ತೊಡಗಿರುವಾಗ ಇತರರಿಗೆ ‘ಇಲ್ಲ ಆಗುವುದಿಲ್ಲ ಎಂದು ಹೇಳುವುದನ್ನು ಕಲಿಯಲೇಬೇಕು. ಇಲ್ಲದಿದ್ದರೆ ಮನಸ್ಸಿನ ಮೇಲೆ ಹಲವಾರು ಕೆಲಸಗಳನ್ನು ಹೇರಿದಂತಾಗಿ ಯಾವ ಕೆಲಸವನ್ನೂ ಸರಿಯಾಗಿ ಮಾಡಲಾಗುವುದು.’ಯಾವ ವ್ಯಕ್ತಿಗೆ ಸಮಯ ನಿರ್ವಹಣೆ ಗೊತ್ತಿದೆಯೋ ಅವನು ಯಶಸ್ವಿ ವ್ಯಕ್ತಿಯಾಗುವನು.’ ನಿರ್ವಹಣೆ ಗೊತ್ತಿಲ್ಲದವನು ಸಮಯದ ಅಭಾವದ ಕುರಿತು ದೂರುವನು.

ಉತ್ಸಾಹ
ಹೊಸ ಹುರುಪು ಸ್ಪಷ್ಟ ಚಿಂತನೆಗಳು ಇರದಿದ್ದರೆ ಯಾವುದರಲ್ಲಿಯೂ ಮುನ್ನಡೆಯುವುದು ಕಷ್ಟ. ಉತ್ಸಾಹದಿಂದ ವಿಶ್ವಾಸ ವೃದ್ಧಿಯಾಗುವುದು.ನೀವು ಏನನ್ನೇ ಮಾಡಲು ಮುಂದಾದರೂ ನಿಮ್ಮ ಉತ್ಸಾಹಕ್ಕೆ ತಣ್ಣೀರೆರಚುವವರು ಮತ್ತು ವಿಪತ್ತುಗಳು ಸಂಕಷ್ಟಗಳು ಇದ್ದೇ ಇರುತ್ತವೆ.ನೀವು ಈಗ ನದಿ ಹರಿಯುವ ದಿಕ್ಕಿನಲ್ಲಿ ದೋಣಿಯನ್ನು ನಡೆಸುತ್ತಿರುವವರು ನಿಮಗೀಗ ಮುಂದೆ ಹೋಗುವುದನ್ನು ಬಿಟ್ಟು ಬೇರೆ ದಾರಿ ಇಲ್ಲ.ಅಥವಾ ಹಿಂದೆ ಹೋಗಬೇಕು.ಖ್ಯಾತ ಸಾಹಿತಿ ಮಾಕ್ ð ಟ್ವೇನ್ ಹೇಳುವಂತೆ “ಪ್ರತಿಯೊಬ್ಬರೂ ತಾನಿರುವ ಸ್ಥಿತಿಯಲ್ಲಿ ಉಳಿದರೆ ಪ್ರಪಂಚದಲ್ಲಿ ಹೀರೋಗಳೇ ಇರುವುದಿಲ್ಲ.”ದುರ್ಬಲ ಹೃದಯದವರಾಗಿ ನಿನ್ನೆ ಅನ್ನುವ ಕಳೆದು ಹೋಗಿರುವ ಇತಿಹಾಸದಲ್ಲಿ ಉಳಿದು ಬಿಟ್ಟರೆ ತೊಂದರೆ ಖಚಿತ.“ಉತ್ಸಾಹ ಎನ್ನುವುದು ಕಲ್ಲಿದ್ದಲಿನೊಳಗಿನ ಕಾವು ಆಗಬೇಕೇ ಹೊರತು ಹುಲ್ಲು ಮೆತ್ತೆಗೆ ಹತ್ತಿದ ಬೆಂಕಿ ಆಗಬಾರದು.”ಎಷ್ಟೋ ಸಲ ಗೆಲುವಿನ ಹತ್ತಿರವೇ ಇದ್ದರೂ ಗಡಿಬಿಡಿಯಲ್ಲಿ ಸೋಲಿನತ್ತ ಹೊರಳುತ್ತೇವೆ.

ಕೊನೆ ಹನಿ
ಗೆಲುವನ್ನು ನಮ್ಮದಾಗಿಸಿಕೊಳ್ಳಲು ಅಲ್ಪಾಸೆಗೆ ಒಳಗಾಗುತ್ತೇವೆ. ಶ್ರಮದ ಬದಲು ಅಡ್ಡ ದಾರಿ ಹಿಡಿಯುತ್ತೇವೆ. ‘ಗೆಲುವು ಎಂದರೆ ಭೂಮಿಯನ್ನು ಅಗೆದು, ಮರಳನ್ನು ಜಾಲಾಡಿಸಿ ಚಿನ್ನವನ್ನು ತೆಗೆಯುವ ಪ್ರಯತ್ನದಂತೆ.ಕಷ್ಟಪಟ್ಟು ಜಾಲಾಡಿದರೆ ಕೊನೆಗೊಂದು ದಿನ ಸಿಗುವುದು.. ಪ್ರಯತ್ನದಿಂದ ಗೆಲುವಿನ ಸಾಗರವೇ ನಮ್ಮದಾಗುವುದು. ತಾಳ್ಮೆ ಬೇಕಷ್ಟೇ.ಕ್ಷಣಿಕ ಕ್ಷುಲ್ಲಕ ಆಸೆಗಳನ್ನು ಬಿಟ್ಟು ಅಮೃತದಂಥ ಪ್ರಯತ್ನದ ಬೆನ್ನು ಹತ್ತಬೇಕು. ಹತ್ತು ಹಲವು ಕಡೆ ಹಾರುವ ಚಂಚಲ ಮನವನ್ನು ಗುರಿಯತ್ತ ನೆಲೆಯಾಗಿಸುವುದರಲ್ಲೇ ಗೆಲುವಿದೆ. ನಿರಂತರ ಪ್ರಯತ್ನಿಸುವವನಿಗೆ ಗೆಲುವು ತಾನಾಗಿಯೇ ಕೈ ಚಾಚಿ ಅಪ್ಪಿಕೊಳ್ಳುತ್ತದೆ. ಬದುಕಿನ ಹಸಿ ಗೋಡೆಯ ಮೇಲೆ ಗೆಲುವಿನ ಹೊಸ ಚಿತ್ತಾರ ಬರೆಯುತ್ತದೆ.
************

ಜಯಶ್ರೀ ಜೆ. ಅಬ್ಬಿಗೇರಿ, ಬೆಳಗಾವಿ

LEAVE A REPLY

Please enter your comment!
Please enter your name here

Latest News

ಮೂಡಲಗಿ : ಜಿಲ್ಲಾಮಟ್ಟದ ಬಾಲಕ ಹಾಗೂ ಬಾಲಕಿಯರ ಹ್ಯಾಂಡ್‌ಬಾಲ್ ಕ್ರೀಡಾಕೂಟ

ಮೂಡಲಗಿ - ಕ್ರೀಡೆ ಎಂಬುದನ್ನು ಗ್ರೀಕ್ ದೇಶದಲ್ಲಿ ಮನರಂಜನೆಗಾಗಿ ಬಳಸುತ್ತಿದ್ದರು ಆದರೆ ಈಗ ಮಕ್ಕಳು ಸದೃಢವಾದ ದೇಹವನ್ನು ಮತ್ತು ಜ್ಞಾನದ ಗ್ರಹಿಕೆಯು ಹೆಚ್ಚಾಗಬೇಕಾದರೆ ಮೊದಲು ಕ್ರೀಡೆಯಲ್ಲಿ...

More Articles Like This

error: Content is protected !!
Join WhatsApp Group