ಗೊರೂರಿನ ಬಳಿ ಹೇಮಾವತಿ ನದಿಗೆ ಅಣೆಕಟ್ಟೆ ಕಟ್ಟಿದಾಗ ಮುಳುಗಡೆಯಾದ ಗ್ರಾಮ ಉಲಿವಾಲ. ಈ ಗ್ರಾಮದ ಲೇಖಕರು ಮೋಹನ್‌ಕುಮಾರ್ ತಮ್ಮ ಬಾಲ್ಯದ ನೆನಪುಗಳನ್ನು ಹೆಕ್ಕಿ ತೆಗದು ನಿರೂಪಿಸಿರುವ ‘ಮುಳುಗಿದ್ದೆಲ್ಲಾ ಕಥೆಯೆಲ್ಲ’ ಕೃತಿ ಸಹಜವಾಗಿಯೇ ನನ್ನ ಓದಿನ ಕುತೂಹಲ ಹೆಚ್ಚಿಸಿತ್ತು.
ನಾನು ಹುಟ್ಟಿ ಬೆಳೆದು ೪೫ ವರ್ಷ ಕಳೆದ ಊರು ಗೊರೂರು ಇದಕ್ಕೆ ಕಾರಣವಾಗಿತ್ತು. ಉಲಿವಾಲ ಅರಕಲಗೂಡು ತಾಲ್ಲೂಕಿಗೆ ಸೇರಿದ ಗ್ರಾಮ. ಇದು ಹೇಮಾವತಿ ಡ್ಯಾಂಗೆ ಮುಳುಗಡೆಯಾಗಿದೆ. ಮುಳುಗಡೆಗೂ ಮೊದಲು ೧೫೦ ಕುಟುಂಬಗಳು ಇಲ್ಲಿ ವಾಸವಿದ್ದವು. ಊರು ಮುಳುಗಡೆಯಾದ ಸಂದರ್ಭ ಸ್ಮರಿಸುತ್ತಾ ಲೇಖಕರು ಹೇಮಾವತಿ ಡ್ಯಾಂ ನಿರ್ಮಾಣಗೊಂಡು ಜಲಾಶಯಕ್ಕೆ ನೀರು ಹರಿವಿನ ಪ್ರಮಾಣ ಜಾಸ್ತಿಯಾಗಿತ್ತು. ಪ್ರಥಮ ಬಾರಿಗೆ ಅಣೆಕಟ್ಟೆಗೆ ನೀರು ತುಂಬಿಸತೊಡಗಿದರು. ಪ್ರತಿದಿನ ನೀರು ಶೇಖರಣೆಗೊಳ್ಳುತ್ತಾ ಬರುತ್ತಿತ್ತು. ಅಷ್ಟೊತ್ತಿಗಾಗಲೇ ನಾವು ವಾಸವಿದ್ದ ಊರು ಹಾಳು ಗೋಡೆಗಳನ್ನು ಹೊಂದಿತ್ತು. ಅಲ್ಲೇ ಅಲ್ಪ ಸ್ವಲ್ಪ ಜಮೀನು ಮುಳುಗಡೆಯಾಗದೆ ಉಳಿದವರು ಊರಿನಿಂದ ಮೇಲೆ ಬಂದು ಮನೆ ಕಟ್ಟಿಕೊಂಡು ವಾಸವಿದ್ದ ೨೦ ಕುಟುಂಬಗಳು ನಮ್ಮದು ಒಂದು. ನಾವು ಕಾಣಕಾಣುತ್ತಿದ್ದಂತೆ ಪ್ರಥಮ ಬಾರಿಗೆ ಉಲಿವಾಲದ ಊರಿನೊಳಗೆ ಬರಲಾರಂಭಿಸಿತು. ತಗ್ಗು ಪ್ರದೇಶದಲ್ಲಿದ್ದ ಮನೆಗಳು ಮುಳುಗತೊಡಗಿದರೆ ಊರ ಮೇಲ್ಬಾಗದಲ್ಲಿದ್ದ ನಮ್ಮ ಮನೆಗಳ ಮಣ್ಣಿನ ಗೋಡೆಗಳು ನೆನೆಯತೊಡಗಿದವು. ನೋಡನೋಡುತ್ತಲೇ ನಾವು ವಾಸವಿದ್ದ ಮನೆಗಳು ನೀರಿನಲ್ಲಿ ಮಾಯವಾದವು.
ಅಜ್ಜಿ “ಅಯ್ಯೋ ನಮ್ಮ ಕಣ್ಮುಂದೇನೆ ಬಾಳಿ ಬದುಕಿದ ಮನೆಗಳು ನೀರಲ್ಲಿ ಮುಳುಗಿಹೋಗ್ತಾವಲ್ಲ. ನಾವು ಇಲ್ಲಿ ಓಡಾಡುತ್ತಿದ್ದೆವು. ಇಲ್ಲಿ ಮಲಗುತ್ತಿದ್ದೆವು. ಇಲ್ಲಿ ಒಳಕಲ್ಲಿತ್ತು. ಇಲ್ಲಿ ಬಚ್ಚಲು ಮನೆಯಿತ್ತು. ನಮ್ಮ ಕಣ್ಣೆದುರಿಗೆ ನುಂಗಿ ನೀರು ಕುಡಿಯುತ್ತಿದೆಯಲ್ಲೇ ತಾಯಿ..
ಯಾಕಜ್ಜಿ ಅಳ್ತಿ ಎಂದು ಮೊಮ್ಮಗ ಮೋನ ಕೇಳಿದರೆ ಈ ಮನೆಯಲ್ಲಿ ನಿಮ್ಮ ಮುತ್ತಾತ, ತಾತ, ನಿಮ್ಮಪ್ಪ, ಚಿಕ್ಕಪ್ಪಂದಿರು ಹುಟ್ಟಿ ಬದುಕು ನಡೆಸಿದ ಜಾಗ. ಇಡೀ ನಮ್ಮ ವಂಶ ಬೆಳೆದಾಡಿದ ಜಾಗ ಮುಳುಗುತ್ತಿದೆ. ನಮ್ಮ ಬದುಕನ್ನೆಲ್ಲಾ ಮುಳುಗಿಸುತ್ತಿದೆ.. ಎಂದು ಪುಟ್ಟಜ್ಜಿಯ ಬಾಯಿಂದ ನೋವು ಹೇಳಿಸುವ ಕತೆಗಾರರು ಪುಟ್ಟಜ್ಜಿಯ ಪಾತ್ರವನ್ನು ಕೇಂದ್ರವಾಗಿ ತಮ್ಮ ಬಾಲ್ಯದ ಕತೆ ನಿರೂಪಿಸಿದ್ದಾರೆ. ಜೇನುಗಿರಿ ಪತ್ರಿಕೆಗೆ ಬರೆದ ಅಂಕಣ ನನ್ನ ಅಜ್ಜಿ ಪುಟ್ಟಜ್ಜಿಯ ಪ್ರೇರಣೆ. ಆ ಕಾಲಘಟ್ಟದಲ್ಲಿ ಹೇಮಾವತಿ ನದಿಗೆ ಅಣೆಕಟ್ಟು ಪ್ರಾರಂಭವಾಗಿ ಮುಳುಗಡೆಯಾಗುತ್ತಿದ್ದ ಊರಿನ ಸಂಕಟ ಆನಂದಗಳನ್ನು ಹೇಳುತ್ತಿದ್ದ ಅಜ್ಜಿ ಈಗಿಲ್ಲ. ಆದರೆ ಅಜ್ಜಿಯ ಮನದೊಳಗಿನ ಅಂತಃಕರಣ ಎದೆಗಾರಿಕೆ ಅವಳ ನಿಲುವುಗಳ ಕಾಲು ಭಾಗವನ್ನು ಮಾತ್ರ ಇಲ್ಲಿ ಬರೆಯಲು ಸಾಧ್ಯವಾಗಿದೆ ಎನ್ನುತ್ತಾರೆ.
ಎಂತಹ ಕಡು ಕಷ್ಟದಲ್ಲೂ ಧೈರ್ಯದಿಂದ ಕಾರ್ಯನಿರತವಾಗುವ ಊರಿನ ಯಾರೇ ಆಗಿರಲಿ ತಪ್ಪು ಹಾದಿಯಲ್ಲಿದ್ದರೆ ಗದರಿಸಿ ತಿದ್ದಿ ಸರಿದಾರಿಗೆ ತರುವ ಮಕ್ಕಳಿಗೆ ಜನಪದ ಕಥೆಗಳನ್ನು ಹೇಳುತ್ತಾ ಕುಟುಂಬಕ್ಕಷ್ಟೇ ಅಲ್ಲ ಊರಿಗೆಲ್ಲಾ ಜೀವಂತಿಕೆ ತುಂಬುವ ಪುಟ್ಟಜ್ಜಿಯ ಪಾತ್ರದೊಂದಿಗೆ ಮಿಳಿತವಾಗುವ ಮಿಡಿಚಲು, ದನಕರುಗಳೊಂದಿಗೆ ಸಂಭ್ರಮಿಸುವ ದೀಪಾವಳಿ, ಬಂಡಿ ಹಬ್ಬ, ಜನಪದರ ಹಾಡು ಪಾಡು ಹೀಗೆ ಬದುಕಿನ ಎಲ್ಲವೂ ಇಲ್ಲಿ ಹಾಸುಹೊಕ್ಕಾಗಿವೆ. ನಮ್ಮ ಅಜ್ಜಿ ಪುಟ್ಟಮ್ಮನವರ ತಂದೆ ರಂಗೇಗೌಡರು. ಅವರನ್ನು ಹೆಚ್ಚಾಗಿ ಊರಿನವರು ತೋಟದ ರಂಗಪ್ಪ ಅಂತಲೇ ಕರೀತಿದ್ರು. ಪೊನ್ನಾಥಪುರ ದಾಖ್ಲೆ ದಾಸೇಗೌಡನ ಕೊಪ್ಪಲು ಇವರ ಸ್ವಗ್ರಾಮ. ಇವರ ಹೆಂಡತಿ ಕಳ್ಳಿಕೊಪ್ಪಲು ರಂಗಮ್ಮ. ಇವರಿಗೆ ಏಳು ಗಂಡು ಮೂರು ಹೆಣ್ಣು. ಇವರ ಪೈಕಿ ಹೆಚ್ಚು ಓದಿದವರೆಂದರೆ ಸ್ವಾಮಿಗೌಡರು. ಕನ್ನಡ ಪಂಡಿತ ಸ್ವಾಮಿಗೌಡರೆಂದೇ ಖ್ಯಾತಿ. ಇವರು (ಗೊರೂರು ಅನಂತರಾಜು) ನನಗೆ ಪರಿಚಿತ ಹಿರಿಯ ಸಾಹಿತಿಗಳಾಗಿದ್ದು ಇವರ ಕತ್ತರಿಘಟ್ಟ ಹರಿಸೇವೆ ಕೃತಿಯಲ್ಲಿ ೨೮ ಮುಳುಗಡೆ ಗ್ರಾಮಗಳು ಸೇರಿ ಆಚರಿಸುತ್ತಿದ್ದ ಜಾತ್ರೆ ವೈಶಿಷ್ಟತೆ ಇದೆ). ರಂಗೇಗೌಡರದು ನಾಯಕ ಗುಣದ ವ್ಯಕ್ತಿತ್ವ. ಅಡಿಕೆ, ತೆಂಗು, ವೀಳೆದೆಲೆ, ಕಾಫಿ, ಏಲಕ್ಕಿ, ಮೆಣಸು, ಶ್ರೀಗಂಧ ಮುಂತಾದ ಬೆಳೆಗಳನ್ನು ಊರಿಗೆ ಪರಿಚಯಿಸಿದವರು. ಹಸು, ಹೋರಿ, ನಾಯಿ, ಕುದುರೆಗಳನ್ನು ಸಾಕುವ ಹವ್ಯಾಸವೂ ಇತ್ತು. ಮುಖ್ಯವಾಗಿ ಉಳುಕು ತೆಗೆದು ಮಂತ್ರಹಾಕಿ ನೋವು ನಿವಾರಿಸುವುದನ್ನು ಕರಗತ ಮಾಡಿಕೊಂಡಿದ್ದರು.
ಪೊನ್ನಾಥಪುರ ಹೇಮಾವತಿ ಡ್ಯಾಂನಿಂದ ಮುಳುಗಡೆಯಾದ ಗ್ರಾಮ. ಆಗ ಗೊರೂರಿನಲ್ಲಿ ಸರ್ಕಾರಿ ಆಸ್ಪತ್ರೆ ಇರಲಿಲ್ಲ ಪೊನ್ನಾಥಪುರದಲ್ಲಿ ಇತ್ತಂತೆ. ಗೊರೂರಿನ ಸಾಹುಕಾರ ಶೆಲ್ವಪಿಳ್ಳೆ ಅಯ್ಯಂಗಾರ್ ಅವರಿಗೆ ಸೊಂಟದ ನೋವು ಕಾಣಿಸಿಕೊಂಡಿದೆ. ಆ ವೇಳೆ ಪೊನ್ನಾಥಪುರದ ವೈದ್ಯರು ಸಾಹುಕಾರರೇ ನೀವು ಎಲ್ಲಾ ಆಸ್ಪತ್ರೆಗಳಲ್ಲೂ ತೋರ್ಸಿದ್ದೀರಿ. ಆದರೂ ನೋವು ವಾಸಿಯಾಗಿಲ್ಲ. ನಾನು ವೈದ್ಯನೆ. ನನಗೆ ಗೊತ್ತಿರುವವರೊಬ್ಬರು ಉಳುಕು ಬಂದವರಿಗೆ ಮಂತ್ರಹಾಕಿ ಉಳುಕು ತೆಗೆದು ವಾಸಿ ಮಾಡುವುದನ್ನು ನೋಡಿದ್ದೇನೆ ಅವರಿಗೊಮ್ಮೆ ತೋರಿಸೋಣ ಎಂದು ತೋಟದ ರಂಗಪ್ಪನವರಿಂದ ಚಿಕಿತ್ಸೆ ಕೊಡಿಸಿ ಸೊಂಟದ ನೋವು ವಾಸಿಯಾಗಿ ಸಂತೋಷದಿಂದ ಅಯ್ಯ ರಂಗೇಗೌಡ ಈ ಮಂತ್ರವನ್ನು ಯಾವಾಗ ಕಲಿತೆ, ಯಾರಿಂದ ಕಲಿತೆ, ಹೇಗೆ ಕಲಿತೆ, ನಿನ್ನ ಈ ಶಕ್ತಿಯನ್ನು ನೋಡಿ ನನಗೆ ಆಶ್ಚರ್ಯವೂ, ಸಂತೋಷವೂ ಆಯಿತು ಎಂದಾಗ ರಂಗೇಗೌಡರು ಆಗ ಕೂಲಿ ಮಠ ಸಾರ್, ಬರ್ತವಳ್ಳಿ ಗೋವಿಂದಯ್ಯನವರು ನನಗೆ ಈ ವಿದ್ಯೆ ಕಲಿಸಿಕೊಟ್ಟರು. ಮಂತ್ರ ಹಾಕಿದಾಗ ಅವರುಗಳಿಂದ ಪ್ರತಿಫಲಗಳನ್ನು ತಗೋಬಾರ್ದು ಅಂತ ಹೇಳಿದ್ದರು ಎಂದು ಅಯ್ಯಂಗಾರರು ಕೊಟ್ಟ ನೂರು ರೂ. ಕಾಣಿಕೆಯನ್ನು ಹಿಂದಿರುಗಿಸುತ್ತಾರೆ. ರಂಗಪ್ಪನವರಿಗೆ ಉದಾರತೆ, ನಿಶ್ಮಲ್ಮಶ ಮನಸ್ಸು ಇತ್ತಾಗಿ ಹತ್ತು ಹಳ್ಳಿಯ ಮುಖ್ಯಸ್ಥರಾಗಿ ಹರಿಗೆ ದೇವರನ್ನು ಹಿಡಿದು ಕುಣಿಯತೊಡಗಿದರೆಂದರೆ ನಿರಂತರವಾಗಿ ಗಂಟೆಗಳಿಗೂ ಹೆಚ್ಚು ಕಾಲ ಕುಣಿದು ಕುಪ್ಪಳಿಸುತ್ತಿದ್ದರು ಎಂಬುದಾಗಿ ತಮ್ಮ ತಾತನ ಕಾಲದ ಜೀವನಚಿತ್ರಣವನ್ನು ನೀಡುತ್ತಾರೆ.
ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ತಮ್ಮ ಪ್ರಬಂಧಗಳಲ್ಲಿ ಚಿತ್ರಿಸಿದಂತೆ ಹೇಮಾವತಿ ನದಿಯೊಂದಿಗಿನ ಪುಟ್ಟಜ್ಜಿ ಮತ್ತು ತಮ್ಮ ಒಡನಾಟ ಎರೆಹುಳು ಹಿಡಿದು ಮೀನಿನ ಬೇಟೆಯಾಡುವುದು, ಕೆರೆಯಲ್ಲಿ ಬಾತುಕೋಳಿ ಮೊಟ್ಟೆ ಎಗರಿಸುವುದು, ನದಿಯ ತೇಲಿ ಬರುವ ಸೌದೆ ಹಿಡಿಯುವುದು (ಸೌದೆ ಎಂದು ರಾತ್ರಿ ಒಂದು ಹೆಣನ ಎಳೆದು ಹಾಕಿ ಬೆಳಿಗ್ಗೆ ಹೋಗಿ ಹೆಣ ನೋಡಿ ಹೌಹಾರಿ ಬೇಸ್ತು ಬಿದ್ದ ಪ್ರಸಂಗವು ಇದೆ) ಪುಟ್ಟಜ್ಜಿ ರಾತ್ರಿ ಮಕ್ಕಳಿಗೆ ಹೇಳಿದ ಕಥೆ ನಾವು ಕೇಳಿದ್ದವು. ‘ಈ ಹೇಮಾವತಿ ಯಗಚಿ ನದಿಗಳವಲ್ಲಾ ಅವು ಗೊರೂರಿನ ಬಳಿ ಸೇರ್ಕೊತವೆ. ಹೇಮಾವತಿ ಹೊಳೆಗೆ ಯಗಚಿ ಹೊಳೆ ಹೇಳ್ತಂತೆ ನಾನು ಹೆಣ ತರ್ತೀನಿ, ನೀನು ಕೊಂಡು (ಸೌದೆ) ತಗೊಂಡು ಬಾ. ನಾವಿಬ್ರು ಸೇರ್ಕೊಂಡು ರಾತ್ರಿ ಇಲ್ಲೇ ಹೆಣ ಬೇಯ್ಸಿಕೊಂಡು ತಿನ್ನೋಣ.. ಮಳೆಗಾಲದಲ್ಲಿ ಸಕಲೇಶಪುರದ ದಟ್ಟ ಕಾಡುಗಳಿಂದ ಮರಗಳು ಹೇಮಾವತಿ ನದಿಯಲ್ಲಿ ತೇಲಿ ಬರುವುದು ಸಹಜವಾಗಿತ್ತು. ಗೊರೂರಿನಲ್ಲಿ ನದಿಯ ದಡದಲ್ಲಿ ಹೆಣಗಳನ್ನು ಸುಡುತ್ತಿದ್ದರು ಮತ್ತು ಹೂಳುತ್ತಿದ್ದರು. ಹೀಗಾಗಿ ನಾವು ಮಕ್ಕಳು ಹೊಳೆಯ ಕಡೆ ಹೋಗಬಾರದೆಂದು ಹಿರಿಯರು ಹೀಗೆ ಕಥೆ ಕಟ್ಟಿರಬಹುದೇನೋ..? ಗೊರೂರು ಡ್ಯಾಂ ಪ್ರಾರಂಭವಾಯಿತು. ಸಣ್ಣಸಣ್ಣ ಗುಡ್ಡಗಳು, ಕಲ್ಲು ಬಂಡೆಗಳು ಚೂರಾಗ ತೊಡಗಿದವು. ಸದಾ ನಿಶ್ಯಬ್ದವಾಗಿದ್ದ ಉಲಿವಾಲ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಲಾರಿಗಳು, ಬುಲ್ಡೋಜರ್‌ಗಳು, ಬಂಡೆ ತೂತು ಕೊರೆಯುವ ಯಂತ್ರಗಳ ಶಬ್ದಗಳು ಪ್ರಾರಂಭವಾದವು. ಊರ ಜನ ಆ ಶಬ್ಧವನ್ನು ಮಾತ್ರವಲ್ಲ ಅವುಗಳ ಕೆಲಸಗಳನ್ನು ನೋಡಿ ಮೂಕವಿಸ್ಮಿತ ರಾಗುತ್ತಿದ್ದರು. ಕಾಣ ಕಾಣುತ್ತಿದ್ದಂತೆ ನಮ್ಮ ಭೂಮಿಗಳಲ್ಲಿದ್ದ ಕಲ್ಲು, ಮಣ್ಣುಗಳೆಲ್ಲವೂ ಡ್ಯಾಮಿನೊಳಗೆ ಸೇರುತ್ತಾ ಮಾಯವಾಗುತ್ತಿದ್ದರೆ, ಬರುಬರುತ್ತಾ ನಮ್ಮ ಕಾವಲುಗದ್ದೆ, ಅಮ್ಮನಗುಡಿ ಕಾವಲು ನಂತರ ಉಲಿವಾಲದ ಹತ್ತಿರ ಬಂದು ನಮ್ಮ ಜಾಗದ ಮಣ್ಣನ್ನು ಬುಲ್ದೋಜರ್‌ಗಳು ಅಗೆಯುವಾಗ ಪುಟ್ಟಜ್ಜಿ “ಅಯ್ಯೋ ನಮ್ಮ ಬದುಕನ್ನೆಲ್ಲಾ ಅಗೆದು ಡ್ಯಾಮಿಗೆ ಸೇರಿಸ್ತರಲ್ಲಪ್ಪ ಅಂತ ತನ್ನ ದೇಹದ ಅಂಗ ಒಂದನ್ನು ಕತ್ತರಿಸುತ್ತಿದ್ದಾರೇನೋ ಎಂಬಂತೆ ನೋವನ್ನು ಅನುಭವಿಸುತ್ತಿತ್ತು..ಎನ್ನುತ್ತಾರೆ.
ಕೋಟೆಕೊರದ ಹತ್ತಿರ ಬಾಲಾಜಿ ಕಂಪನಿ ತಲೆ ಎತ್ತಿತು. ನೂರಾರು ವಾಹನಗಳು ಬಂದು ನಿಂತವು. ಆಂದ್ರ ತಮಿಳುನಾಡಿನ ಕೂಲಿ ಕಾರ್ಮಿಕರಿಗೆ ಗುಡಿಸಲೋಪಾದಿಯ ಮನೆಗಳು ನಿರ್ಮಾಣವಾದವು.. ಸುಮಾರು ೩೦ ಅಡಿ ಯಷ್ಟು ಡ್ಯಾಂ ಆಗಿತ್ತು. ಕೆಳಭಾಗದಿಂದ ಮೇಲ್ಬಾಗಕ್ಕೆ ಹೋಗಲು ಸಾರ್ವೆ ಹಾಕಿಕೊಂಡಿದ್ದರು. ಎರಡು ಜನ ಮುಂದೆ ಒಬ್ಬ ಹಿಂದೆ ಒಬ್ಬ ಮದ್ಯದಲ್ಲಿ ನೊಗದಂತೆ ಬಡಿಹಾಕಿ ಅದರ ಮದ್ಯ ದಪ್ಪ ದಪ್ಪ ಹಗ್ಗದಿಂದ ದಪ್ಪ ದಪ್ಪದ ಕಲ್ಲುಗಳನ್ನು ಕಟ್ಟಿಕೊಂಡು ಹೊರುತ್ತಿದ್ದರು. ಬರೀ ಕಚ್ಚೆ ಪಂಚೆ. ಮೈಮೇಲೆ ಶರ್ಟ್ ಇರುತ್ತಿರಲಿಲ್ಲ. ಕಪ್ಪು ಸದೃಢ ದೇಹದವರು ಮೇಲ್ಭಾಗಕ್ಕೆ ಕಲ್ಲು ಹೊತ್ತು ಹೋಗುತ್ತಿದ್ದರು. ಬದುಕಿನ ಬಂಡಿ ನಡೆಸಲು ಅವರು ಪಡುತ್ತಿದ್ದ ಕಷ್ಟಗಳನ್ನು ನೋಡಿದರೆ ಕರುಳು ಚುರುಕ್ ಎನ್ನುತ್ತಿತ್ತು. ಇಂತಹ ದೃಶ್ಯಗಳನ್ನು ನಾವು ನೋಡಿದ್ದೆವು.
ಲೇಖಕರು ಬರೆದಂತೆ ಗೊರೂರು ಡ್ಯಾಂನಿಂದ ಮುಳುಗಡೆಯಾದ ಉಲಿವಾಲದ ಗ್ರಾಮದ ನೋವು ನಲಿವುಗಳೆಲ್ಲಾ ಇದೇ ಡ್ಯಾಂನಿಂದ ಮುಳುಗಡೆಯಾದ ಅನೇಕ ಗ್ರಾಮಗಳ ಜೀವನದ ಕಥೆಗಳೂ ಆಗಿದ್ದಿರಬಹುದು. ಮುಳುಗಡೆಯಿಂದ ಹಲವಾರು ಹಿರಿಯರ ನೆನಪುಗಳು, ತುಮುಲಗಳಾಚೆ ಗೊರೂರಿನಿಂದ ಹಾಸನ ಮಂಡ್ಯ ತುಮಕೂರು ಜಿಲ್ಲೆಗಳ ರೈತರ ಬದುಕು ಹಸಿರಾಗಿದೆ ಹೌದಷ್ಟೇ..!
ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

