ಲೇಖನ : ಕುಂದಾಪುರ ಕುಂದೇಶ್ವರ

Must Read

ಉಡುಪಿ ಜಿಲ್ಲೆಯ ತಾಲೂಕು ಕೇಂದ್ರವಾದ ಕುಂದಾಪುರವು ಉಡುಪಿಯಿಂದ ೩೫ ಕಿಲೋ ಮೀಟರ್ ದೂರದಲ್ಲಿದೆ. ಸುಮಾರು ೪೫ ಕಿ.ಮೀ. ಸಮುದ್ರದ ಅಂಚನ್ನೂ ಹೊಂದಿದ್ದು ಸಮುದ್ರ ಮಟ್ಟದಿಂದ ೨೬ ಅಡಿ ಎತ್ತರದಲ್ಲಿದ್ದು ತತ್ಸಂಬಂಧಿತ ನಿಸರ್ಗ ಸೌಂದರ್ಯವನ್ನೂ ಹೊಂದಿರುವ ತಾಲೂಕು ಕುಂದಾಪುರ. ಇದರ ಸಮತಟ್ಟಾದ ಒಳಪ್ರದೇಶದಲ್ಲಿ ಕೆಲವು ಕಾಡು ಪ್ರಾಣಿಗಳನ್ನು ಹೊಂದಿರುವ ದಟ್ಟವಾದ ಅರಣ್ಯ ಪ್ರದೇಶವೂ ಉಂಟು. ಇಲ್ಲಿನ ಯಕ್ಷಗಾನ, ಕುಣಿತ, ನಾಟಕ ಹಾಗೂ ಇತ್ತೀಚಿನ ವರ್ಷಗಳಲ್ಲಿ ಇಡೀ ದೇಶದ ಗಮನವನ್ನೇ ಸೆಳೆಯುತ್ತಿರುವ ಕಂಬಳ ಹಾಗೂ ಕೋಳಿ ಅಂಕ ಪ್ರವಾಸಿಗರನ್ನು ಆಕರ್ಷಿಸುವ ಅಂಶಗಳು.

ತಾಲೂಕ ಕೇಂದ್ರವಾದ ಕುಂದಾಪುರ ಒಂದು ಬಂದರು ಹಾಗೂ ಜಿಲ್ಲೆಯ ಪ್ರಮುಖ ವ್ಯಾಪಾರಿ ಕೇಂದ್ರ. ಈ ಊರಿನ ಬಳಿಯಲ್ಲಿಯೇ ೫ ನದಿಗಳ ಸಂಗಮ (ಪಂಚ ಗಂಗಾವಳಿ) ದಿಂದುಟಾದ ಗಂಗೊಳ್ಳಿ ನದಿ ಇದೆ. ಇತಿಹಾಸವನ್ನು ಅವಲೋಕಿಸಿದಾಗ ವಿಜಯನಗರದ ಅರಸರ ಅನಂತರ ಬಂದ ಬೈಂದೂರು ಅರಸರಿಗೆ ಕುಂದಾಪುರ ಒಂದು ವಾಣಿಜ್ಯ ಕೇಂದ್ರವಾಗಿತ್ತು ಅಷ್ಟೇ ಅಲ್ಲ ೧೬ ನೇ ಶತಮಾನದಲ್ಲಿ ಪೋರ್ಚುಗೀಸರಿಗೆ ಮತ್ತು ಕ್ರೃಸ್ತ ಮಿಷನರಿಗಳಿಗೆ ಆಶ್ರಯ ನೀಡಿದ ತಾಣವಾಗಿತ್ತು.ಕುಂದವರ್ಮನೆಂಬ ಅರಸ ಪಂಚಗಂಗಾವಳಿಯ ಹತ್ತಿರ ಕುಂದೇಶ್ವರ ದೇವಾಲಯವನ್ನು ಕಟ್ಟಿಸಿದ್ದರಿಂದ ಈ ಪ್ರದೇಶಕ್ಕೆ ಕುಂದಾಪುರವೆಂಬ ಹೆಸರು ಬಂತೆಂಬ ಪ್ರತೀತಿ ಇದೆ. ಈ ಗುಡಿಯಲ್ಲಿ ಆಳುಪರ ಕಾಲದ ಶಿಲಾಶಾಸನಗಳಿವೆ. ಪೋರ್ಚುಗೀಸರು ಕಟ್ಟಿದ ಕೋಟೆಯ ಅವಶೇಷಗಳಿವೆ.

ಈ ದೇವಾಲಯವು ಈಗ ಜೀರ್ಣೋದ್ಧಾರ ಹೊಂದಿದ್ದರೂ ಕೆಲವು ಅವಶೇಷಗಳ ಆಧಾರದಿಂದ ಈ ದೇಗುಲದ ಮೂಲ ರಚನೆ ಹೊಯ್ಸಳರ ಕಾಲದ ಮಧ್ಯಭಾಗಕ್ಕಂತೂ ನಿಸ್ಸಂದೇಹವಾಗಿ ಅನ್ವಯಿಸುತ್ತದೆ ಎಂದು ಹೇಳಬಹುದು. ಸಮುದ್ರ ತೀರದಿಂದ ಪೂರ್ವಕ್ಕೆ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಸಾಕಷ್ಟು ವಿಶಾಲವಾದ ಹೊರಪ್ರಾಕಾರ; ಮಹಾದ್ವಾರಕ್ಕೆ ಎದುರಾಗಿ ಬಲಿಪೀಠ; ಒಳ ಪ್ರಾಕಾರದಲ್ಲಿ ಒಂದು ನಂದಿ ಮಂಟಪ ಮತ್ತು ಪ್ರದಕ್ಷಿಣಾಪಥದ ಸುತ್ತಲೂ ಚಂದ್ರಶಾಲೆ(ಒಳಪೌಳಿ); ಒಳ ಪ್ರಾಕಾರದ ನಡುವೆ ಗರ್ಭಗೃಹ. ಇವು ದೇವಾಲಯದ ಮುಖ್ಯ ಅಂಗಗಳು.

ಗರ್ಭಗೃಹದ ಒಳಗೆ ನೆಲಕ್ಕೆ ಕಗ್ಗಲ್ಲ ಚಪ್ಪಡಿಗಳನ್ನು ಹಾಸಿ ಸದೃಢಗೊಳಿಸಲಾಗಿದೆ. ಇಲ್ಲಿ ಸ್ಥಳಾವಕಾಶ ತೀರ ಕಡಿಮೆ. ಇದರ ಕೇಂದ್ರ ಭಾಗದಲ್ಲಿ ಸರಳ ರೀತಿಯಲ್ಲಿ ಕೆತ್ತಲ್ಪಟ್ಟ ಕಲ್ಲಿನ ದೊಡ್ಡ ಪಾಣಿಪೀಠ. ತೀರ್ಥ ಹರಿದು ಹೋಗಲು ಇರುವ ಸೋಮಸೂತ್ರದ ಭಾಗವೂ ಸರಳವಾಗಿದ್ದು ನೇರವಾಗಿ ಕತ್ತರಿಸಲ್ಪಟ್ಟ ಮೂತಿಯನ್ನು ಹೊಂದಿದೆ. ಪಾಣೀಪೀಠದಲ್ಲಿ ಶ್ರೀ ಕುಂದೇಶ್ವರನ ಪ್ರತಿಷ್ಠೆ. ಈ ಶಿವಲಿಂಗವನ್ನು ರುದ್ರಾಕ್ಷ ಶಿಲೆಯಿಂದ ಮಾಡಿದ್ದು, ಇದರ ಹೊರಮೈ ತುಂಬ ಸೊಗಸಾಗಿದೆ. ಇದರ ಶಿರೋಭಾಗ ಅಡ್ಡಕ್ಕೆ ತುಂಡರಿಸಲ್ಪಟ್ಟ ಕಂಬದಂತೆ ಚಪ್ಪಟೆಯಾಗಿದೆ. ಹಾಗಾಗಿ ಇದೊಂದು ಅಪೂರ್ವ ಶಿವಲಿಂಗ.

ಗರ್ಭಗುಡಿ ಎದುರಿಗೆ ಪ್ರತ್ಯೇಕವಾದ ನಂದಿ ಮಂಟಪ; ಎತ್ತರವಾದ ಜಗುಲಿ; ಇದರ ಮೇಲೆ ನಾಲ್ಕು ಕಂಬಗಳು. ಇವುಗಳ ಮೇಲೆ ಮಂಟಪದ ಮಾಡು. ಕರಿಶಿಲೆಯಲ್ಲಿ ಕಡಿದಿರುವ ನಂದಿ ಚಿಕ್ಕದಾದರೂ ಸುಂದರವಾಗಿದೆ. ಹಿತ-ಮಿತವಾದ ಆಭರಣ. ನಡುವಿನಲ್ಲಿ ದೇಹ ಸುತ್ತಿ ಬಳಸಿರುವ ಒಂದು ವಸ್ತೃದ ಪಟ್ಟಿ. ಈ ಮಂಟಪಕ್ಕೀಗ ಹೊಸ ರೂಪ ಬಂದಿದೆ.

ದೇವಸ್ಥಾನದಲ್ಲಿ ನಡೆಯುವ ಪೂಜಾ ಕಾರ್ಯಕ್ರಮಗಳು ಮತ್ತು ಉತ್ಸವಗಳು
ನಿತ್ಯ ನಡೆಯುವ ಕಾರ್ಯಗಳು
೧. ತ್ರಿಕಾಲ ಪೂಜೆ
ಬೆಳಗ್ಗೆ : ಶ್ರೀ ಕುಂದೇಶ್ವರ ಮತ್ತು ಪರಿವಾರದೇವತೆಗಳಿಗೆ ಅಭಿಷೇಕ, ಪೂಜೆ, ಮಂಗಳಾರತಿ
ಮಧ್ಯಾಹ್ನ : ಶ್ರೀ ಕುಂದೇಶ್ವರ ದೇವರಿಗೆ ಪಂಚಾಮೃತಾಭಿಷೇಕ, ರುದ್ರಾಭಿಷೇಕ, ಅರ್ಚನೆ, ಮಹಾನೈವೇದ್ಯ ಮತ್ತು ಮಹಾಮಂಗಳಾರತಿ, ಪರಿವಾರದೇವತೆಗಳಿಗೆ ಪೂಜೆ, ನೈವೇದ್ಯ ಮತ್ತು ಮಂಗಳಾರತಿ.
ರಾತ್ರಿ : ಎಲ್ಲ ದೇವರಿಗೂ ಪೂಜೆ, ಮಂಗಳಾರತಿ
೨. ವಿಶೇಷೋತ್ಸವಗಳು
೧. ಯುಗಾದಿ ಆಚರಣೆ
ಪ್ರತಿವರ್ಷ ಮೇಷ ಸಂಕ್ರಾಂತಿಯಂದು ಸೌರ ಯುಗಾದಿ ಆಚರಣೆ. ವಿಶೇಷ ಪೂಜೆ, ಸಂಜೆ ಪಂಚಾಂಗ ಶ್ರವಣ.
೨. ಶ್ರೀ ಶಂಕರ ಜಯಂತಿ
ವೈಶಾಖ ಶುದ್ಧ ಪಂಚಮಿಯಂದು ಶ್ರೀ ಶಂಕರ ಭಗವತ್ಪಾದರ ಸನ್ನಿಧಿಯಲ್ಲಿ ಹೋಮ-ಹವನ, ಧಾರ್ಮಿಕ ಪ್ರವಚನ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ ಇತ್ಯಾದಿ
೩. ಆಯರ್ಕೊಡ ಅಭಿಷೇಕ
ಜ್ಯೇಷ್ಠ ಬಹುಳ ಅಮವಾಸ್ಯೆಯಂದು ಶ್ರೀ ಕುಂದೇಶ್ವರ ದೇವರ ಸನ್ನಿಧಿಯಲ್ಲಿ ಆಯರ್ಕೊಡ ಅಭಿಷೇಕ, ಹರಿವಾಣ ನೈವೇದ್ಯ, ಮಹಾಪೂಜೆ ಮತ್ತು ಪ್ರಾರ್ಥನೆ.
೪. ಸೋಣೆ ಆರತಿ
ಸಿಂಹಮಾಸದ ಎಲ್ಲ ದಿನಗಳ ಸಂಜೆ ಶ್ರೀ ಕುಂದೇಶ್ವರ ದೇವರ ಸನ್ನಿಧಿಯಲ್ಲಿ ಸೋಣೆ ಆರತಿ. ವಿಶೇಷ ಪೂಜೆ ಮತ್ತು ಪ್ರಸಾದ ವಿನಿಯೋಗ
೫. ನಾಗಪಂಚಮಿ
ಶ್ರಾವಣಶುದ್ಧ ಪಂಚಮಿಯಂದು ಶ್ರೀ ನಾಗದೇವರ ಸನ್ನಿಧಿಯಲ್ಲಿ ತನು ಎರೆಯುವುದು ಮತ್ತು ವಿಶೇಷ ಪೂಜೆ
೬. ಋಗುಪಾಕರ್ಮ
ಸಿಂಹಮಾಸದ ಶ್ರವಣ ನಕ್ಷತ್ರದಂದು ಸೌರ ಋಗುಪಾಕರ್ಮ , ಹೋಮ-ಹವನ, ನೂತನ ಯಜ್ಞೋಪವೀತಧಾರಣೆ ಮತ್ತು ಶ್ರೀ ಕುಂದೇಶ್ವರ ಸನ್ನಿಧಿಯಲ್ಲಿ ಮಹಾಮಂಗಳಾರತಿ
೭. ಗಣೇಶೋತ್ಸವ
ಭಾದ್ರಪದ ಶುದ್ಧ ಚತುರ್ಥಿಯಿಂದ ನಾಲ್ಕು ದಿನ ಸಾರ್ವಜನಿಕ ಗಣೇಶೋತ್ಸವ, ಗಣಪತಿ ಪ್ರತಿಷ್ಠೆ, ಪ್ರತಿದಿನ ಪೂಜೆ, ಗಣಹೋಮ, ಮಂಗಳಾರತಿ, ಸಂಜೆ ರಂಗಪೂಜೆ, ಮಂಗಳಾರತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು, ಕೊನೆಯ ದಿನ ಮೆರವಣಿಗೆ ಮತ್ತು ವಿಸರ್ಜನೆ.
೮. ಶರನ್ನವರಾತ್ರಿ
ಆಶ್ವಯುಜ ಶುದ್ಧ ಪ್ರತಿಪದೆಯಿಂದ ದಶಮಿವರೆಗೆ ಅಮ್ಮನವರ ಸನ್ನಿಧಿಯಲ್ಲಿ ವಿಶೇಷಪೂಜೆ; ಕುಂಕುಮಾರ್ಚನೆ; ಮಂಗಳಾರತಿ.
೯. ಕದಿರು ಹಬ್ಬ ಆಚರಣೆ
ಆಶ್ವಯುಜ ಶುದ್ಧ ಬಿದಿಗೆ ಎರಡನೆ ನವರಾತ್ರಿಯಂದು ಕದಿರು ಹಬ್ಬ; ಹೊಸತು ಆಚರಣೆ
೧೦. ದೀಪೋತ್ಸವ
ಕಾರ್ತಿಕ ಬಹುಳ ಅಮಾವಾಸ್ಯೆಯಂದು ಶ್ರೀ ಕುಂದೇಶ್ವರ ದೇವರ ಸನ್ನಿಧಿಯಲ್ಲಿ ಲಕ್ಷದೀಪೋತ್ಸವ. ಮಧ್ಯಾಹ್ನ ಪಂಚಾಮೃತಾಭಿಷೇಕ; ಶತರುದ್ರಾಭಿಷೇಕ; ಹರಿವಾಣ ನೈವೇದ್ಯ; ಮಹಾಪೂಜೆ; ಮಹಾಮಂಗಳಾರತಿ; ಅನ್ನಸಂತರ್ಪಣೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು, ರಾತ್ರಿ ಶ್ರೀ ಕುಂದೇಶ್ವರ ದೇವರ ಸನ್ನಿಧಿಯಲ್ಲಿ ರಂಗಪೂಜೆ; ಮಹಾಮಂಗಳಾರತಿ; ಶ್ರೀ ದೇವರ ಬೀದಿ ಮೆರವಣಿಗೆ; ಲಕ್ಷದೀಪೋತ್ಸವ; ಕುಂದೇಶ್ವರ ಕೆರೆಯಲ್ಲಿ ತಪ್ಪೋತ್ಸವ.       ೧೧. ಅಯ್ಯಪ್ಪಸ್ವಾಮಿ ಪೂಜೆ

ಮಕರ ಸಂಕ್ರಮಣದಂದು ಶ್ರೀ ಅಯ್ಯಪ್ಪಸ್ವಾಮಿ ಸನ್ನಿಧಿಯಲ್ಲಿ *ವಿಶೇಷ ಪೂಜೆ*;
ಭಜನೆ; ಮಹಾಮಂಗಳಾರತಿ
೧೨. ಮಹಾಶಿವರಾತ್ರಿ
ಮಾಘ ಬಹುಳ ತ್ರಯೋದಶಿಯಂದು ಮಹಾಶಿವರಾತ್ರಿ ಶ್ರೀ ಕುಂದೇಶ್ವರ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ; ರುದ್ರಾಭಿಷೇಕ; ರಾತ್ರಿ ರಂಗಪೂಜೆ; ಮಹಾಮಂಗಳಾರತಿ; *ಸಾಂಸ್ಕೃತಿಕ ಕಾರ್ಯಕ್ರಮಗಳು*.
ಈ ರೀತಿಯಲ್ಲಿ ಕುಂದೇಶ್ವರ ಹಾಗೂ ಸನ್ನಿಧಿಯಲ್ಲಿ ಬರುವ ಎಲ್ಲ ದೇವರುಗಳ ಪೂಜಾ ಕಾರ್ಯಗಳು ಉತ್ಸವಗಳು ಜರುಗುತ್ತವೆ. ವರ್ಷವಿಡೀ ಯಾವುದೇ ಮಾಸದಲ್ಲಿ ಕುಂದಾಪುರಕ್ಕೆ ಬರಬಹುದು. ಉತ್ಸವಗಳಂದು ಬಂದರೆ ಇಲ್ಲಿನ ಸಂಭ್ರಮದಲ್ಲಿ ಪಾಲ್ಗೊಳ್ಳಬಹುದು.

ಡಾ.ವೈ.ಬಿ.ಕಡಕೋಳ(ಶಿಕ್ಷಕರು)
ಮಾರುತಿ ಬಡಾವಣೆ.ಸಿಂದೋಗಿ ಕ್ರಾಸ್.
ಮುನವಳ್ಳಿ-೫೯೧೧೧೭
ತಾಲೂಕಃಸವದತ್ತಿ ಜಿಲ್ಲೆಃಬೆಳಗಾವಿ
೯೪೪೯೫೧೮೪೦೦

LEAVE A REPLY

Please enter your comment!
Please enter your name here

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group